ನೀಳ್ಗಥೆ

ಗಿಳಿಯು ಪಂಜರದೊಳಿಲ್ಲ

ಭಾಗ—ನಾಲ್ಕು

ಟಿ. ಎಸ್. ಶ್ರವಣ ಕುಮಾರಿ

25 Different Types of Green Parrots (with Pictures)

: ವೆಂಕಟೇಶಯ್ಯನವರಿಗೂ ಪದ್ಮನನ್ನು ನೇರವಾಗಿ ಕೇಳುವಷ್ಟು ಧೈರ್ಯವಿಲ್ಲ. ಅವಳು ತಮ್ಮೊಳಗನ್ನು ಸೀದಾ ಬಯಲು ಮಾಡಿಬಿಟ್ಟರೆ… ರಾಮನನ್ನು ಸೀನಿಯ ಮಗನೆಂದು ಲೋಕದೆದುರು ಹೇಳಿ ಒಪ್ಪಿಕೊಂಡಾಗಿದೆ. ಈಗ ಈ ಹೊಸ ಸಮಸ್ಯೆ… ಇಂತಹ ಸನ್ನಿವೇಶಗಳು ಬರಬಾರದೆಂದು ತಾನೇ ಸೀನಿಯ ಆಪರೇಶನ್ನಿನ ಪ್ರಸಂಗವನ್ನು ಹುಟ್ಟುಹಾಕಿದ್ದು. ಆದರೆ ಅದು ತಾವೆಣಿಸಿದ ಹಾಗಾಗದೇ ಬೇರೆಯೇ ತಿರುವನ್ನು ಪಡೆದುಕೊಂಡಿದೆ. ಇದನ್ನು ಲೋಕದೆದುರು ಒಪ್ಪಿಕೊಳ್ಳುವುದು ಹೇಗೆ… ಬಿಡುವುದು ಹೇಗೆ… ಮನೆಯ ಮರ್ಯಾದೆಯ ಪ್ರಶ್ನೆ. ನಾಲ್ಕು ದಿನ ಮನದಲ್ಲೇ ಒದ್ದಾಡಿ ಪರಿಹಾರ ಕಾಣದೇ, ತಂಗಿ ಸುಂದರಮ್ಮನಿಗೆ ಫೋನ್‌ ಮಾಡಿ ಸೂಕ್ಷ್ಮವಾಗಿ ವಿಷಯ ತಿಳಿಸಿ ಪದ್ಮನ ತಂದೆ ತಾಯಿಯರನ್ನು ಕರೆದುಕೊಂಡು ತಕ್ಷಣವೇ ಬರುವಂತೆ ಹೇಳಿದರು. ಸುಂದರಮ್ಮನೂ ಇದೊಂದು ಹೊಸ ಸಮಸ್ಯೆ ಹುಟ್ಟಿಕೊಂಡಿತಲ್ಲ ಎಂದುಕೊಂಡು ʻನಾಡಿದ್ದು ಕರೆದುಕೊಂಡು ಬರುತ್ತೇನೆʼ ಎಂದು ಒಪ್ಪಿಕೊಂಡಳು.

*

ಹೇಳಿದ್ದಂತೆಯೇ ಎಲ್ಲರೂ ಆ ದಿನ ಬೆಳಗ್ಗೆಯೇ ಬಂದರು. ಇದರ ಸುಳಿವೂ ಇರದಿದ್ದ ಪದ್ಮನಿಗೆ ಎಲ್ಲರನ್ನೂ ಒಟ್ಟಿಗೆ ನೋಡಿ ಭಯವೇ ಆಯಿತು. ಯಾರು ಏನು ಕೇಳುತ್ತಾರೋ, ಹೇಳುತ್ತಾರೋ ಅದಕ್ಕೆ ತಾನು ಏನು ಉತ್ತರ ಕೊಡಬೇಕೋ….. ಅರಿವಾಗದೆ ಗಲಿಬಿಲಿಯಾಯಿತು. ಬಂದವರೆಲ್ಲಾ ಇನ್ನೂ ತಿಂಡಿಯನ್ನೂ ತಿಂದಿರುವುದಿಲ್ಲ ಎಂದು ಬೇಗಬೇಗನೇ ಉಪ್ಪಿಟ್ಟನ್ನು ಮಾಡಿ ಎಲ್ಲರಿಗೂ ಕೊಟ್ಟಳು. ಲೋಕಾಭಿರಾಮದ ಮಾತುಗಳಾಡುತ್ತಾ ಎಲ್ಲರೂ ತಿಂಡಿ ತಿಂದರು. ತಿಂಡಿ ಕಾಫಿಯ ಸಮಾರಾಧನೆಯಾದ ಮೇಲೆ ವೆಂಕಟೇಶಯ್ಯನವರು “ಈಗ ವಿಷಯಕ್ಕೆ ಬರೋಣ, ಪದ್ಮಾ… ತಿಂಡಿ ತಿಂದಾಗಿದ್ದರೆ ನೀನು ಇಲ್ಲೇ ಬಾ” ಎಂದು ಕರೆದರು. ತಿನ್ನಬೇಕೆನಿಸಲಿಲ್ಲ ಅವಳಿಗೆ… ಸುಮ್ಮನೇ ನಡುಮನೆಗೆ ಬಂದು ಮೂಲೆಯ ಕಂಬಕ್ಕೊರಗಿ ನಿಂತುಕೊಂಡಳು. “ನೋಡಿ… ಈ ವಿಷಯದಲ್ಲಿ ನಾನೊಬ್ನೇ ನಿರ್ಧಾರಕ್ಕೆ ‍ಬರ್ರ್ಬಾರ‍್ದೂಂತ ನಿಮ್ಮೆಲ್ರುನ್ನೂ ಕರೆಸಿಕೊಂಡಿದೀನಿ. ಈಗೇನು ಮಾಡ್ಬೇಕೂಂತ ನೀವುಗಳೇ ಹೇಳಿ” ಎಂದು ಪೀಠಿಕೆ ಹಾಕಿಕೊಂಡು “ನಿಮ್ಮ ಮಗಳನ್ನು ನಮ್ಮ ಮನೆಯಲ್ಲಿ ಹೇಗೆ ನಡೆಸಿಕೊಂಡಿದೀವಿ ಅನ್ನೋದನ್ನ ನೀವೇ ಹೇಳಿ” ಬೀಗರ ಕಡೆ ತಿರುಗಿ ಕೇಳಿದರು. “ಇದರಲ್ಲಿ ಹೇಳೋಕೇನಿದೆ, ಅವಳಿಲ್ಲಿ ರಾಣಿಯ ಹಾಗಿದಾಳೆ. ಹೋದ ಜನ್ಮದಲ್ಲಿ ಒಳ್ಳೇ ಹೂವಿಂದ ಗೌರಿ ಪೂಜೆ ಮಾಡಿದ್ಲೇನೋ, ಈ ಜನ್ಮದಲ್ಲಿ ಅರಮನೆಯಂತ ಮನೆಯ ಸೊಸೆಯಾಗಿದಾಳೆ. ಆದ್ರೆ ಈ ಪ್ರಶ್ನೆ ಇವಾಗ ಯಾಕ್ಬಂತು?” ರಮಣಮೂರ್ತಿಗಳು ಕೈಮುಗಿದುಕೊಂಡು ಹೇಳಿದರು. “ಹೇಳ್ತೀನಿ, ನೀವೇ ನೋಡಿದ ಹಾಗೆ ನಮ್ಮ ಸೀನ ಮ್ಯಾದಕಸ್ತ. ಒಳ್ಳೇದು, ಕೆಟ್ಟದ್ದು ಏನೂ ಗೊತ್ತಾಗಲ್ಲ. ಅವ್ನಿಗೆ ಮದ್ವೆಯಾಗಿ ಮೂರು ವರ್ಷವಾದ್ರೂ ಮಕ್ಕಳಾಗ್ದಿದ್ದಾಗ ತಿರುಪತಿಗೆ ಹರಕೆ ಹೇಳಿಕೊಂಡ್ವು. ದೇವರ ಅನುಗ್ರಹ! ಅದಾಗಿ ವರ್ಷದಲ್ಲೇ ಲಕ್ಷಣವಾದ ಗಂಡುಮಗೂನ ದಯಪಾಲಿಸ್ದ. ನಾನು ಪದ್ಮನ್ನ ಸೊಸೆ ಹಾಗಲ್ಲ, ಮಗಳ ಹಾಗೆ ನೋಡ್ಕೊಂಡಿದೀನಿ”. “ಅಷ್ಟಲ್ಲದೇ… ಅದರಲ್ಲಿ ಎರಡ್ನೇ ಮಾತಿಲ್ಲ” ಎಲ್ಲರೂ ತಲೆದೂಗಿದರು. “ಏನಮ್ಮಾ ನೀನೇನಂತೀಯಾ” ಪದ್ಮನ ಕಡೆ ತಿರುಗಿದರು. ಎಲ್ಲರೂ ಒಂದು ನಿಶ್ಚಿತ ಅಭಿಪ್ರಾಯಕ್ಕೆ ಬಂದಿರುವಾಗ ಈ ಪ್ರಶ್ನೆಗೆ ಏನು ಉತ್ತರಿಸಬೇಕೋ ಗೊತ್ತಾಗದೆ ಪದ್ಮ ತಲೆ ತಗ್ಗಿಸಿದಳು.

“ಅವ್ಳೇನಂತಾಳೆ… ನೀನು ತಲೆಮೇಲೆ ಕೂರಿಸ್ಕೊಂಡು ಮೆರೆಸಿದೀಯ. ಅದಕ್ಕೇ ಈಗ ನಿನ್ನ ತಲೇಗೇ ಮೆಣಸು ಅರೆದಿದಾಳೆ” ಸುಂದರಮ್ಮ ಕಹಿಯಾಗಿ ಹೇಳಿದರು. “ಈಗೇನಾಯ್ತು” ಲಲಿತಮ್ಮ ಆತಂಕದಿಂದ ಕೇಳಿದರು. “ನೋಡಿ… ಹೇಗೆ ಹೇಳ್ಬೇಕೋ ಗೊತ್ತಾಗ್ತಿಲ್ಲ… ಸುಂದರಾ ನೀನೇ ಹೇಳಮ್ಮ” ತಂಗಿಯ ಕಡೆ ತಿರುಗಿದರು. “ನೋಡಿ… ಇದು ತುಂಬಾ ಸೂಕ್ಷ್ಮವಾದ ವಿಚಾರ. ಸೀನಾ ಮೊದಲೇ ತುಂಬಾ ಭೋಳೆ ಸ್ವಭಾವದವ್ನು ನೋಡಿ… ಅದಕ್ಕೇ ಅಣ್ಣಾ ಮೊಮ್ಮಗ ಹುಟ್ಟಿದ್ಮೇಲೆ ಯೋಚ್ನೆ ಮಾಡ್ದ… ಗಂಡು ಮಗು ಹುಟ್ಟಿದೆ… ಅಷ್ಟು ಸಾಕು. ಇನ್ನೊಂದು ಅಕಸ್ಮಾತ್‌ ಹೆಣ್ಮಗು ಆದ್ರೆ ಸೀನನ ಕೈಲಿ ಜವಾಬ್ದಾರಿ ನಿಭಾಯ್ಸಕ್ಕೆ ಆಗಲ್ಲ. ಅದಕ್ಕೇ ಅವ್ನಿಗೆ ಮುಂದೆ ಮಕ್ಕಳಾಗ್ದ ಹಾಗೆ ಆಪರೇಶನ್‌ ಮಾಡ್ಸಿಬಿಡೋಣ ಅಂತ. ಹಾಗೇ ನಾಕು ತಿಂಗಳ ಹಿಂದೆ ಮಾಡಿಸ್ಕೊಂಡು ಬಂದ. ಈಗ ನೋಡಿದ್ರೆ…..” ಮಾತು ನಿಲ್ಲಿಸಿದರು. “ಈಗೇನಾಯ್ತು???” ಲಲಿತಮ್ಮ ಆತಂಕದಿಂದ ಕೇಳಿದರು. “ಈಗ… ಈಗ…… ಇವಳು ಮತ್ತೆ ಬಸುರಿಯಂತೆ…. ಏನು ಇದರ ಅರ್ಥ.. ನೀವೇ ಹೇಳಿ” ಸುಂದರಮ್ಮ ನೇರವಾಗಿ ಕೇಳಿದರು. “ಅಂದ್ರೆ… ಅಂದ್ರೆ…” ಲಲಿತಮ್ಮ ಅನುಮಾನದಿಂದ ಮಗಳ ಕಡೆ ನೋಡಿದರು. ಪದ್ಮ ತಲೆತಗ್ಗಿಸಿ ನಿಂತಿದ್ದಳು.

ರಮಣ ಮೂರ್ತಿಗಳು ಸೀದಾ ಎದ್ದು ಹೋಗಿ ಪಠಾರನೆ ಅವಳ ಕೆನ್ನೆಗೆ ಹೊಡೆದು “ಹೇಳೇ ರಂಡೆ… ಹೇಳು ಏನು ಮಾಡ್ಕೊಂಡೆ ನೀನು… ಯಾರವನು ನಿನ್ನ ಮಿಂಡ ಹೇಳು……” ಆವೇಶದಿಂದ ಅವಳ ಕತ್ತು ಬಗ್ಗಿಸಿ ಬೆನ್ನ ಮೇಲೆ ದಭದಭ ಗುದ್ದಿದರು. ಇದನ್ನು ನಿರೀಕ್ಷಿಸದಿದ್ದ ಪದ್ಮ ಕೆಳಗುರುಳಿದರು. ವೆಂಕಟೇಶಯ್ಯನವರು ಎದ್ದು ಬಂದು ರಮಣ ಮೂರ್ತಿಗಳನ್ನು ತಡೆದು ವಾಪಸ್ಸು ಕರೆದುಕೊಂಡು ಬಂದರು. “ನೋಡಿ ಇದು ಬೈದೂ, ಹೊಡೆದೂ ಮಾಡೋ ವಿಚಾರ ಅಲ್ಲ… ಸಮಾಧಾನವಾಗಿ ಮಾತಾಡೋಣ. ಮುಂದೆ ಏನ್ಮಾಡ್ಬೇಕು ಅನ್ನೋದನ್ನ ಯೋಚ್ನೆ ಮಾಡೋಣ. ಸ್ವಲ್ಪ ಕೂತ್ಕೊಳ್ಳಿ” ಬಲವಂತದಿಂದ ಅವರನ್ನು ಸೋಫಾದಲ್ಲಿ ಕೂರಿಸಿದರು. ಅಷ್ಟರಲ್ಲಿ ಲಲಿತಮ್ಮ ಎದ್ದು ಹೋಗಿ ಪದ್ಮನ್ನ ಎಬ್ಬಿಸಿ ಕೂರಿಸಿ “ಏನು ಮಾಡ್ಕೊಂಡೆ ಪದ್ಮಾ… ಏನಮ್ಮಾ ಇದು… ಯಾಕ್ಹೀಗೆ ಮಾಡ್ದೆ… ನಿನಗ್ಯಾಕೆ ಇಂತಾ ದುರ್ಬುದ್ದಿ ಬಂತು…” ಕೇಳುತ್ತಾ ಕೇಳುತ್ತಾ ಅಳತೊಡಗಿದರು.

“ನೋಡಿ ನಿಮಗೇ ಹೀಗನ್ನಿಸ್ತಿದ್ರೆ ಈ ಅಪ್ಪ ಮಕ್ಕಳ ಮನಸ್ಸಿಗೆ ಎಷ್ಟು ನೋವಾಗಿರ್ಬೋದು. ಅವ್ಳನ್ನ ದೇವತೆ ಹಾಗೆ ನೋಡ್ಕೊಂಡ್ರು. ಅವ್ಳು ಇಂಥ ನೀಚ ಬುದ್ದಿ ತೋರಿಸ್ಬೋದಾ… ಈಗೇನ್ಮಾಡ್ಬೇಕು ನೀವೇ ಹೇಳಿ” ಸಂದರ್ಭವನ್ನು ಕೈಗೆ ತೆಗೆದುಕೊಂಡು ಎಲ್ಲರ ಮುಖವನ್ನೂ ನೋಡುತ್ತಾ ಸುಂದರಮ್ಮ ಕೇಳಿದರು. ಸೀನ ತಲೆತಗ್ಗಿಸಿಕೊಂಡು ಮೂಲೆಯಲ್ಲಿ ಕೂತಿದ್ದ. “ಪಾಪ ಏನೂ ಅರೀದ ಅಮಾಯಕ ನಮ್ಮ ಸೀನು. ಅವ್ನಿಗೆ ಹೀಗೆ ಮೋಸವಾಗ್ಬಾರ್ದಿತ್ತು” ಸೆರಗಿನಿಂದ ಕಣ್ಣೊರಸಿಕೊಂಡರು. “ನೋಡಿ… ಎಲ್ರ ಎದುರ‍್ಗೇ ಮಾತಾಡಿ ತೀರ್ಮಾನ ಮಾಡ್ಬೇಕೂಂತ ನಾನು ಎಲ್ರನ್ನೂ ಕರ‍್ಸಿದ್ದು. ನನ್ನ ಮನಸ್ನಲ್ಲಿ ಹೀಗಿದೆ. ಪದ್ಮ ನಮ್ಮನೆಗೆ ಬಂದಾಗ್ನಿಂದ್ಲೂ ಹೊಂದ್ಕೊಂಡು ಈ ಮನೇನ ತುಂಬಾ ಚೆನ್ನಾಗಿ ನೋಡ್ಕೊಂಡಿದಾಳೆ. ನನ್ನ ಮಗಳ ಹಾಗೇ ಇದಾಳೆ. ಈಗೇನೋ ತಪ್ಪಾಗಿದೆ. ನಿಜ ಗೊತ್ತಿರೋದ್ರಿಂದ ಈ ಪರಿಸ್ಥಿತೀಲಿ ಅವ್ಳ ಹೊಟ್ಟೇಲಿರೋ ಮಗೂನ ಈ ಮನೆ ಮಗು ಅಂತ ಒಪ್ಕೊಳಕ್ಕಾಗಲ್ಲ. ಅವ್ಳು ಹೊಟ್ಟೇಲಿರೋ ಪಿಂಡಾನ ತೆಗುಸ್ಕೊಂಡು ಇನ್ಮುಂದೆ ಈ ರೀತಿ ಆಗ್ದೆ ಇರೋ ಹಾಗೆ ಇರ‍್ತೀನಿ ಅಂದ್ರೆ ಈಗ್ಲೂ ಅವ್ಳು ಈ ಮನೆ ಸೊಸೆಯಾಗಿ ಇರ‍್ಲಿ. ಹಾಗಲ್ದೆ ಹೊಟ್ಟೇಲಿರೋ ಮಗು ಬೇಕೇ ಬೇಕು ಅನ್ನೋದಾದ್ರೆ ನಮ್ಮ ಮಗೂನ ನಮಗೆ ಬಿಟ್ಟು ಅದರ ತಂದೆ ಹತ್ರಾನೆ ಹೋಗ್ಲಿ. ಯಾವ್ದುಕ್ಕೂ ಅವ್ಳೇ ನಿರ್ಧಾರ ತೊಗೊಳ್ಳಿ. ಇದು ನನ್ನ ವಿಚಾರ. ನೀವೇನು ಹೇಳ್ತೀರಾ ಹೇಳಿ” ವೆಂಕಟೇಶಯ್ಯನವರು ಎಲ್ಲರ ಮುಖವನ್ನೂ ನೋಡಿದರು. “ಅಣ್ಣಾ… ನೀನಿನ್ನೂ ಈ ರಂಡೇನ ಸೊಸೆಯಾಗಿ ಒಪ್ಕೊಳೋ ಮಾತಾಡ್ತಿದೀಯಲ್ಲ… ಎಷ್ಟು ದೊಡ್ಡ ಮನಸ್ಸೋ ನಿಂದು… ಅದವ್ಳಿಗೆ ಅರ್ಥವಾದ್ರೆ ಉದ್ದಾರವಾಗ್ತಾಳೆ. ಇಲ್ದಿದ್ರೆ ನಾಶವಾಗ್ತಾಳೋ ಅವ್ಳು” ಸುಂದರಮ್ಮ ಸೆರಗನ್ನು ಕಣ್ಣಿಗೆ ಹಚ್ಚಿಕೊಂಡರು…

ರಮಣ ಮೂರ್ತಿ ಮತ್ತೆ ಮೇಲೆದ್ದರು. ಕುಳಿತಿದ್ದ ಪದ್ಮನ ಕೂದಲನ್ನು ಹಿಡಿದುಕೊಂಡು ಅವಳನ್ನು ಮೇಲೆತ್ತಿದರು. ನೋವಿನಿಂದ ಕಿರುಚಿಕೊಂಡವಳ ಕೆನ್ನೆಗೆ ಬಾಸುಂಡೆ ಬರುವಂತೆ ಮತ್ತೆ ಬಾರಿಸಿದರು. “ಕೇಳಿದ್ಯೇನೇ ಬಿಕ್ನಾಸಿ. ನೀನು ಹಾದರ ಮಾಡಿದ್ರೂ ಒಪ್ಕೊಳೋ ಮಾತಾಡ್ತಿದಾರಲ್ಲೇ… ಇಂತವರು ಈ ಜಗತ್ತಿನಲ್ಲಿ ಮತ್ತೆ ಸಿಕ್ತಾರೇನೇ. ನಿನ್ನ ಈ ಮನೆಗೆ ಮದುವೆ ಮಾಡಿಕೊಟ್ಟಿದ್ದಕ್ಕೆ ನಮಗಿದ್ದ ಐದಾರು ಲಕ್ಷ ಸಾಲ ತೀರ‍್ಸಿ ನನ್ನ ಋಣಮುಕ್ತನ್ನ ಮಾಡಿದ್ರು. ತಾವೇ ಖರ್ಚು ಹಾಕಿ ಮದುವೆ ಮಾಡ್ಕೊಂಡ್ರು. ಆಮೇಲೂ ನಾನು ಯಾವಾಗ ಕಷ್ಟ ಅಂತ ಬಂದ್ರೂ ನನ್ನನ್ನ ಬರಿಗೈಲಿ ಕಳಿಸಿಲ್ಲ. ಅಂತಾ ಮಹಾನುಭಾವ ನಿನ್ನ ಮಾವನವ್ರು. ಅವ್ರಿಗೆ ಮೋಸ ಮಾಡೋ ಮನೆಹಾಳು ಬುದ್ಧಿ ನಿನಗ್ಯಾಕೆ ಬಂತೇ…” ಎನ್ನುತ್ತಾ ಮತ್ತೆರಡು ಬಾರಿಸಿದರು. ಅವರು ಹೇಳಿದ ಈ ಸತ್ಯದಿಂದ ಪದ್ಮನಿಗೆ ಹೊಡೆತಕ್ಕಿಂತ ಹೆಚ್ಚು ಆಘಾತವಾಯಿತು. ಇದುವರೆಗೆ ಅವಳಿಗೆ ಎರಡೂ ಕಡೆಯ ಖರ್ಚನ್ನು ಹಾಕಿ ಮದುವೆಮಾಡಿಕೊಂಡಿದ್ದು ಮಾತ್ರ ಗೊತ್ತಿತ್ತು. ತನ್ನನ್ನು ಹೀಗೆ ಬಂಗಾರದ ತತ್ತಿಯಿಡುವ ಕೋಳಿಯನ್ನಾಗಿ ಮಾಡಿಕೊಂಡಿದ್ದು ಗೊತ್ತಿರಲಿಲ್ಲ… ಹತಾಶಳಾಗಿ ಕಂಬಕ್ಕೆ ಒರಗಿ ಕಣ್ಮುಚ್ಚಿ ಕುಸಿದಳು.

ವೆಂಕಟೇಶಯ್ಯನವರು ಮತ್ತೆ ಬಂದು ರಮಣಮೂರ್ತಿಗಳನ್ನು ಕರೆದುಕೊಂಡು ಹೋದರು. “ಹೀಗ್ಬನ್ನಿ ಆ ಮಗು ಯೋಚ್ನೆ ಮಾಡೋಕೆ ಅವಕಾಶ ಕೊಡಿ” ಎನ್ನುತ್ತಾ ಅವರನ್ನು ಕೂರಿಸಿ “ನೋಡಮ್ಮಾ ಪದ್ಮ ನಾನು ಹೇಳೋದನ್ನ ಹೇಳಿದೀನಿ. ನಿನ್ನ ನಿರ್ಧಾರ ನಿಂದು. ಬೇಕಾದ್ರೆ ಒಂದೆರಡು ದಿನ ಸಮಯ ತೊಗೊಂಡು ಒಬ್ಳೇ ಕೂತ್ಕೊಂಡು ಯೋಚ್ನೆ ಮಾಡಿ ಹೇಳು. ಆಮೇಲೆ ನಿನ್ನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡ್ಬೇಡ. ಪದೇ ಪದೇ ಇಂತಾ ಪ್ರಸಂಗಗಳನ್ನ ಎದುರಿಸೋ ಶಕ್ತಿ ನಮಗಿಲ್ಲ” ಅಂದರು. “ಅವ್ಳೇನು ಯೋಚ್ನೆ ಮಾಡೋದು… ತೆಪ್ಪಗೆ ನೀವು ಹೇಳಿದ ಹಾಗೆ ಕೇಳ್ಕೊಂಡು ಬಿದ್ದಿರ‍್ಲಿ. ಅವಳಿಗ್ಯಾಕೆ ಅಷ್ಟೊಂದು ಸ್ವತಂತ್ರ ಕೊಡ್ತೀರಿ” ಲಲಿತಮ್ಮ ಕಿಡಿಕಾರಿದರು. ಸುಂದರಮ್ಮನೂ ಸುಮ್ಮನಿರಲಾಗದೆ “ವರ ಕೊಟ್ಟ ಹಾಗೆ ಕೊಡ್ತಿದೀಯ. ಇನ್ನೇನು ಗುನುಗು ಅವಳಿಗೆ. ನೀನು ಹೀಗೆ ತಲೆಮೇಲೆ ಕೂರಿಸ್ಕೊಂಡಿದ್ದಕ್ಕೇ ಅವ್ಳು ಹೀಗೆ ಹದಗೆಟ್ಟಿದ್ದು” ಸಿಡುಕಿದರು. ನಿಧಾನವಾಗಿ ಎದ್ದ ಪದ್ಮ ಏನೂ ಮಾತಾಡದೆ ತನ್ನ ಕೋಣೆಗೆ ಹೋಗಿ ಬಾಗಿಲು ಮುಚ್ಚಿದಳು. 

*

ಮುಂದುವರೆಯುವುದು…


2 thoughts on “

  1. ಮುಕ್ತಾಯ ಹೇಗೋ ನೋಡಬೇಕು. ಪದ್ಮಾ ಹರಕೆಯ ಕುರಿಯಾಗುತ್ತಾಳೋ?

  2. ಪದ್ಮ ಸಮಂಜಸ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾಳೆಂಬ ಭರವಸೆ ಇದೆ.

Leave a Reply

Back To Top