ಪ್ರೇಮ ಸಂವೇದನೆ’

ಕವಿತೆ

ಪ್ರೇಮ ಸಂವೇದನೆ’

ವಸುಂಧರಾ ಕದಲೂರು

ಆ ಮರದ ಮರಿಹಕ್ಕಿಗಳು
ಹಾರಿ ಹೋಗಿವೆ.
ಹೊಸ ತಾವು ಹುಡುಕುತ್ತಾ,
ಸಂಗಾತಿ ಅರಸುತ್ತಾ…

… ಇಷ್ಟೇ ನಾವು ಕಟ್ಟುವ
ಕತೆಗಳು; ಹೇಳುವ ನೆವಗಳು.

ಮರವೇ ಹಕ್ಕಿ ಹಿಂಡು ಕಳಿಸಿ,
ಧ್ಯಾನಕ್ಕಿಳಿದ ಸುದ್ದಿ ನಮಗೆ
ಬಂದು ಮುಟ್ಟುವುದಿಲ್ಲ.

ಹಕ್ಕಿಗಳು ಚಲಿಸುವ
ಸೇತುವೆಗಳು! ಇಲ್ಲಿಂದಲ್ಲಿಗೆ
ಒಂದೇ ಹಾರಿಗೆ – ಜೋಡಿಸಿ,
ಬಂಧಿಸಿ ತಾವು ಸ್ವತಂತ್ರವಾಗುವ
ಮುಕ್ತ ವಾಹಕಗಳು.

ಮರದ ಏಕಾಂತ – ಆತಂಕ
ತೊಡೆಯಲು ಸದಾ ಚಡಪಡಿಕೆಯ
ಹಕ್ಕಿಗಳು ಸಾಂತ್ವಾನದ ಗೂಡು
ಕಟ್ಟುತ್ತವೆ; ಚಿಲಿಪಿಲಿ ಉಲಿದು,
ಮರಿ ಮಾಡುತ್ತವೆ.

ಮರವೂ ಹಕ್ಕಿದಂಪತಿಗಳನು,
ಆಗಾಗ್ಗೆ ಮರಿಗಳನೂ ತಬ್ಬಿ; ತಲೆ
ಸವರಿ ಹಿಗ್ಗಿ ಹಿರಿಯಮ್ಮನಾಗುತ್ತಾ
ನಗುತ್ತಾ ಬಾಳಿಕೊಂಡಿರುತ್ತದೆ.

ಇದು ಭ್ರಮೆಯಲ್ಲ, ಬದುಕೆನುತಾ,
ಹಕ್ಕಿಯ ಹಕ್ಕು ಕಸಿಯದೆ, ಎಲ್ಲೆ
ಮೀರದೆ, ಬಂದಳಿಕೆ ಹಬ್ಬಿಸಿ ಉಸಿರು
ಕಟ್ಟಿಸದೇ, ಹಕ್ಕಿ ಎದೆ ಉಲಿಯಲಿ
ಮರ ಅಮರವಾಗುವುದು.

ರೆಕ್ಕೆ ಬಲಿತ ಹಕ್ಕಿ ಹಾರಿಹೋಗಿ,
ಮತ್ತೊಂದು ಮರದ ಟೊಂಗೆಯಲಿ
ಗೂಡು ಕಟ್ಟಿ; ಈ ಮರದ ಏಕಾಂತ-
ವಿರಹವನು ಆ ಮರಕೆ ಹೇಳುತಾ..
ಆ ಮರದ ಎದೆ ಮೊರೆತ ತಾ
ಆಲಿಸುತಾ… ಬೆಸೆಯುವ
ಹವಣಿಕೆಯಲಿ..

ಹಾರಾಡುವಾಗ,
ಮರದ ಒಡಲು ಒಲವುಗೊಂಡು
ಬೀಸಿದ ತಂಗಾಳಿ, ಹಕ್ಕಿಗಳ ಪ್ರೇಮ
ಕಲರವ.. ಸೋಕಿ, ಎದೆ ಛಲ್ಲೆನುವಾಗ…

ಆಹಾ…!!

*???????????????

Leave a Reply

Back To Top