
ದಾರಾವಾಹಿ
ಆವರ್ತನ
ಅದ್ಯಾಯ-23

ಸುಮಿತ್ರಮ್ಮನ ಮನೆಯೊಳಗಿದ್ದ ನಾಗರಹಾವನ್ನು ಓಡಿಸಲು ಪಣತೊಟ್ಟು ಎರಡನೆಯ ಬಾರಿ ಒಳಗೆ ಪ್ರವೇಶಿಸಿದ ರಮೇಶ ಹಾವಿನ ಉಗ್ರರೂಪವನ್ನೂ ಅದರ ವರ್ತನೆಯನ್ನೂ ಕಂಡು ನಖಶಿಕಾಂತ ಭಯಪಟ್ಟ. ಅವನ ಕೊರಳ ನರಗಳು ಉಬ್ಬಿ, ಮೈಯ ರೋಮರೋಮಗಳು ನಿಮಿರಿ ನಿಂತು ಕಣ್ಣಗುಡ್ಡೆಗಳು ರಪ್ಪನೆ ತೇವಗೊಂಡವು. ಆದ್ದರಿಂದ ಕೆಲಕ್ಷಣ ಏನೂ ತೋಚದೆ ಮರಗಟ್ಟಿದ. ಆದರೆ ಸುಮಿತ್ರಮ್ಮನೆದುರು ವೀರಾವೇಶದಿಂದ ಕೊಚ್ಚಿ ಬಂದಿದ್ದ ಮಾತಿನ ನೆನಪಾಯಿತು. ಹಾಗಾಗಿ ಅದನ್ನು ಉಳಿಸಿಕೊಳ್ಳಲಾದರೂ ಈ ಹಾವನ್ನು ಹೊರಗೆ ಓಡಿಸಿಯೇ ಶುದ್ಧ! ಎಂದು ತನ್ನ ಹಠವನ್ನು ಎಚ್ಚರಿಸಿಕೊಂಡ. ಚದುರಿ ಹೋಗಿದ್ದ ಧೈರ್ಯವನ್ನು ಮತ್ತೆ ಒಗ್ಗೂಡಿಸಿದ. ಹೆಡೆಯೆತ್ತಿ ನಿಂತು ತರತರ ಕಂಪಿಸುತ್ತ ಬುಸುಗುಡುತ್ತಿದ್ದ ಹಾವಿನ ನಡು ಭಾಗಕ್ಕೆ ಕೋಲನ್ನು ತೂರಿಸಿ ಎತ್ತಿ ಬಚ್ಚಲುಕೋಣೆಯ ಬಾಗಿಲಿನಿಂದ ಹೊರಗೆ ತಳ್ಳುವುದೆಂದು ಯೋಚಿಸಿ ಇನ್ನಷ್ಟು ಅದರ ಸಮೀಪ ಹೋದ. ಆದರೆ ರಮೇಶನ ಚಲನೆಯನ್ನು ಕಂಡ ಹಾವು ಮತ್ತಷ್ಟು ಕೆರಳಿ ಹೆಡೆಯನ್ನು ರಪರಪನೇ ನೆಲಕ್ಕಪ್ಪಳಿಸುತ್ತ ಅವನನ್ನು ಹೆದರಿಸಿ ನೆಟ್ಟದೃಷ್ಟಿಯಿಂದ ದುರುಗುಟ್ಟುತ್ತ ಮಾರೆತ್ತರಕ್ಕೆ ಸೆಟೆದು ನಿಂತಿತು. ಹಾವಿನ ಆಗಿನ ವರ್ತನೆಯನ್ನು ಕಂಡ ರಮೇಶ ಅಲ್ಲೇ ತಲೆತಿರುಗಿ ಬೀಳುವುದೊಂದೇ ಬಾಕಿಯಿತ್ತು ಎಂಬಷ್ಟರಲ್ಲಿ ಒಂದೇ ಉಸಿರಿಗೆ ಅಂಗಳಕ್ಕೆ ಜಿಗಿದಿದ್ದ!
‘ಯಬ್ಬಾ ಸುಮಿತ್ರಮ್ಮ ಅದೆಂಥ ಸರ್ಪ ಮಾರಾಯ್ರೇ, ಭಾರಿ ದೊಡ್ಡದಿದೆ! ಅಂಥ ಹಾವನ್ನು ನನ್ನ ಜೀವಮಾನದಲ್ಲೇ ಕಂಡಿಲ್ಲ. ಅಬ್ಬಾ ದೇವರೇ…!’ ಎಂದು ಉದ್ಗರಿಸಿದವನು ಮರುಕ್ಷಣ ಪೆಚ್ಚಾಗಿ ನಕ್ಕ. ಅಷ್ಟರಲ್ಲಿ ಸುಮಿತ್ರಮ್ಮನೂ ತುಸು ಸುಧಾರಿಸಿಕೊಂಡಿದ್ದರು. ಹಾಗಾಗಿ ರಮೇಶನ ನೂರು ಮೀಟರ್ ದೂರ ಜಿಗಿತದ ಚಂದವನ್ನು ನೋಡಿವರಿಗೆ ತಾವೂ ಆ ಹಾವನ್ನೊಮ್ಮೆ ನೋಡಬೇಕೆಂಬ ಆಸೆ ಹುಟ್ಟಿತು. ‘ಹೌದಾ ಮಾರಾಯಾ… ಹಾಗಾದರೆ ಅವನು ಖಂಡಿತಾ ನಾಗದೇವನೇ ಇರಬೇಕು! ನಾನೂ ಸ್ವಲ್ಪ ನೋಡಬೇಕಲ್ಲವಾ ಅವನನ್ನು…?’ ಎಂದರು ಭಕ್ತಿಯಿಂದ.
ಆಗ ರಮೇಶನಿಗೆ ಮರಳಿ ಹುರುಪೆದ್ದಿತು. ‘ಓಹೋ, ಅದಕ್ಕೇನಂತೆ. ಬನ್ನಿ ಹೋಗುವ…’ ಎಂದ ಆಸಕ್ತಿಯಿಂದ. ಅಷ್ಟರಲ್ಲಿ ಅಲ್ಲಿ ಇನ್ನೊಂದು ತಮಾಷೆ ನಡೆಯಿತು. ಅಂದು ಭಾನುವಾರ. ಆದ್ದರಿಂದ ವಠಾರದ ಬಹುತೇಕರು ಆಹೊತ್ತು ಮನೆಯಲ್ಲಿದ್ದರು. ಅವರಲ್ಲಿ ಇವರಿಬ್ಬರ ರಾದ್ಧಾಂತವನ್ನು ಕೇಳಿಸಿಕೊಳ್ಳುತ್ತಿದ್ದ ಪಕ್ಕದ ಮನೆಯ ನಾರಾಯಣ ದಂಪತಿಯೂ, ಎದುರು ಮನೆಯ ಉಮೇಶಯ್ಯ ದಂಪತಿಯೂ, ಸ್ವಲ್ಪ ದೂರದ ರಾಜೇಶನ ಇಬ್ಬರು ಮಕ್ಕಳೊಂದಿಗಿನ ಸಣ್ಣ ಕುಟುಂಬವೂ, ಮರದ ವ್ಯಾಪಾರಿ ಸುಂದರಯ್ಯ ದಂಪತಿಯೂ ಮತ್ತು ಸುಕೇಶ ಹಾಗೂ ಜಗದೀಶ್ ಕುಮಾರ್‍ನ ಕುಟುಂಬವೂ ಒಟ್ಟೊಟ್ಟಿಗೆ ಕೂಡಿಕೊಂಡು ಬಂದು ಸುಮಿತ್ರಮ್ಮನ ಅಂಗಳದಲ್ಲಿ ಜಮಾಯಿಸಿಬಿಟ್ಟರು. ಅವರೆಲ್ಲರೂ ಸುಮಿತ್ರಮ್ಮನ ಮಡಿಮೈಲಿಗೆಯ ವಿಷಯವನ್ನು ಬಹಳ ಹಿಂದಿನಿಂದಲೂ ಕಾಣುತ್ತ ಬಂದು ರೋಸಿ ಹೋಗಿದ್ದವರು. ಮಾತ್ರವಲ್ಲದೇ ಕೆಲವು ಸಂದರ್ಭಗಳಲ್ಲಿ ಅವರ ಅಸ್ಪೃಶ್ಯತೆಯ ದೃಷ್ಟಿಗೆ ಬಿದ್ದು ಚೆನ್ನಾಗಿ ಉಗಿಸಿಕೊಂಡು ಅವಮಾನಿತರಾದವರೂ ಇದ್ದರು. ಆದರೂ ನೆರೆಕರೆಯ ಬಾಂಧವ್ಯ ಉಳಿಸಿಕೊಳ್ಳುವ ಒಂದೇ ಕಾರಣಕ್ಕಾಗಿ ಅವರಿಗೆ ಗೌರವ ಕೊಡುತ್ತ ಬಂದಿದ್ದರು.
ಅಂಥವರಿಗೆಲ್ಲ ಇಂದು ಸುಮಿತ್ರಮ್ಮನ ಮನೆಯೊಳಗೆ ಹಾವು ನುಸುಳಿದ್ದು ಹಾಲು ಕುಡಿದಷ್ಟು ಸಂತೋಷವಾದಂತಿತ್ತು. ಆದರೆ ಮಡಿಮೈಲಿಗೆ ಎಂಬ ವಿಧಿಯಾಚರಣೆಗಳನ್ನು ನಮ್ಮ ಪೂರ್ವಜರು ಅಂದು ತಮ್ಮ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದಲೇ ಚಾಲ್ತಿಗೆ ತಂದರು ಎಂಬ ತಿಳುವಳಿಕೆಯಿಲ್ಲದ ಅವರೆಲ್ಲ ಸುಮಿತ್ರಮ್ಮನ ನೇಮನಿಷ್ಠೆಯನ್ನು ಮಣ್ಣುಪಾಲು ಮಾಡಲು ಇದೇ ಸರಿಯಾದ ಸಮಯವೆಂದುಕೊಂಡವರು, ಮಾನವ ಸಮಾಜವಿಂದು ಜಾಗತೀಕವಾಗಿಯೂ ವೈಜ್ಞಾನಿಕವಾಗಿಯೂ ಇಷ್ಟೊಂದು ಮುಂದುವರೆದು ಜಾತಿ ಮತ ಧರ್ಮಗಳೆಂಬ ಭೇದಭಾವಗಳನ್ನು ತೊರೆದು ಮುನ್ನಡೆಯುತ್ತಿರುವಾಗ ಇವರು ಮಾತ್ರ ಇನ್ನೂ ತಮ್ಮ ಅಜ್ಜಿ ಪಿಜ್ಜಿ ಕಾಲದ ಹಳೆಯ ನಂಬಿಕೆ, ಸಂಪ್ರದಾಯಗಳಿಗ ಜೋತು ಬಿದ್ದಿರುವುದಲ್ಲದೇ ಆ ಮೂಲಕ ಇತರರನ್ನೂ ಶೋಷಿಸುತ್ತಿದ್ದಾರೆಂದರೆ ಅರ್ಥವೇನು? ಇವರಂತೆ ಮಡಿಮೈಲಿಗೆಯನ್ನು ಆಚರಿಸದವರು ಮನುಷ್ಯರಲ್ಲವಾ ಅಥವಾ ಇವರ ವಂಶದವರು ಮಾತ್ರವೇ ನೇರವಾಗಿ ದೇವಲೋಕದಿಂದ ಇಳಿದು ಬಂದವರಾ…? ಎಂದು ಯೋಚಿಸುತ್ತ ಒಳಗೊಳಗೇ ಹಲ್ಲು ಕಡಿದು ಒಬ್ಬರನ್ನೊಬ್ಬರು ಅರ್ಥಗರ್ಭಿತವಾಗಿ ದಿಟ್ಟಿಸುತ್ತ ನಕ್ಕವರು ಸುಮಿತ್ರಮ್ಮನ ಅನುಮತಿಗೆ ಸೊಪ್ಪು ಹಾಕದೆ, ಹಾವು ನೋಡುವ ನೆಪದಿಂದ ರಪರಪ್ಪನೆ ಒಳಗೆ ನುಗ್ಗಿಬಿಟ್ಟರು. ಆಗಲೂ ಸುಮಿತ್ರಮ್ಮನ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದಂಥ ವೇದನೆಯಾಯಿತು. ಆದರೂ ವಿಧಿಯಿಲ್ಲದೆ ಸಹಿಸಿಕೊಂಡರು.
ಅತ್ತ ವಠಾರದವರನ್ನೆಲ್ಲ ಒಟ್ಟಿಗೆ ಕಂಡ ರಮೇಶನ ಉಸಿರು ದುಪ್ಪಟ್ಟು ಬಲವಾಯಿತು. ‘ಓಹೋ ನಾರಾಯಣಣ್ಣ, ರಾಜೇಶಣ್ಣ ಬನ್ನಿ ಬನ್ನೀ. ಒಳಗೆ ಬನ್ನಿ. ಒಮ್ಮೆ ಹಾವನ್ನು ಓಡಿಸುವ ಮಾರಾಯ್ರೇ… ಸುಮಿತ್ರಮ್ಮ ಪಾಪ ತುಂಬಾ ಹೆದರಿಬಿಟ್ಟಿದ್ದಾರೆ!’ ಎಂದು ಅನುಕಂಪದಿಂದ ಅಂದವನು ‘ಛೇ, ಎಂಥ ದೊಡ್ಡ ಸರ್ಪ ಮಾರಾಯ್ರೇ! ನನ್ನ ಜನ್ಮದಲ್ಲಿ ಇಂಥ ಭಯಂಕರ ನಾಗನನ್ನು ನಾನು ನೋಡಿಯೇ ಇಲ್ಲ!’ ಎಂದ ವಿಸ್ಮಯದಿಂದ. ಅವನ ಮಾತು ಕೇಳಿದ ನಾರಾಯಣರಿಗೆ ನಗು ಬಂತು. ‘ಹೌದಾ ಮಾರಾಯಾ! ಹಾಗಾದರೆ ನೀನು ಇದಕ್ಕಿಂತ ಮೊದಲು ಅದೆಷ್ಟು ನಾಗರಹಾವುಗಳನ್ನು ನೋಡಿದ್ದಿ ಅಂತ ಹೇಳು ನೋಡುವ…?’ ಎಂದು ಹಾಸ್ಯ ಮಾಡಿದರು. ‘ಅಯ್ಯೋ, ಅದು ಹಾಗಲ್ಲ ನಾರಾಯಣಣ್ಣ. ನನ್ನ ಮಾತು ನಿಮಗೆ ಅರ್ಥವಾಗಲಿಲ್ಲ ಅಂತ ಕಾಣುತ್ತದೆ. ನಾನೂ ಈ ಹಿಂದೆ ಒಂದೆರಡು ಬಾರಿ ನಾಗರಹಾವುಗಳನ್ನು ಕಂಡವನೇ. ಆದರೆ ಇಷ್ಟು ದೊಡ್ಡ ಹಾವನ್ನಲ್ಲ. ಇದು ಭಾರೀ ಉದ್ದ ಮತ್ತು ಗಾತ್ರದ ಹಾವು ಮಾರಾಯ್ರೇ!’ ಎಂದು ಕಣ್ಣಗಲಿಸಿ ಅಂದವನಿಗೆ ತಟ್ಟನೆ ನಾಚಿಕೆಯಾಗಿ ನಕ್ಕ. ನಾರಾಯಣರೂ ತಮ್ಮ ನಗುವಿನಿಂದ ಡೊಳ್ಳು ಹೊಟ್ಟೆಯನ್ನು ಕುಣಿಸುತ್ತ ತಲೆದೂಗಿದವರು, ‘ಆಯ್ತು ಮಾರಾಯಾ, ಹಾಗಾದರೆ ಅಂಥ ಹಾವನ್ನು ನಾನೂ ಒಮ್ಮೆ ನೋಡಿ ಬಿಡುತ್ತೇನೆ. ನಡಿ, ನಡೀ…’ ಎನ್ನುತ್ತ ಎಲ್ಲರೊಂದಿಗೆ ಹಾವಿನ ಕೋಣೆಯತ್ತ ಹೊರಟರು.
ಅಲ್ಲಿ ಹೆದರಿ ಕಂಗಾಲಾಗಿದ್ದ ಆ ನಾಗರಹಾವು ಅತ್ತಿತ್ತ ಚಲಿಸಲು ಚೂರೂ ಧೈರ್ಯವಿಲ್ಲದೆ ಸೆಟೆದ ಎದೆಯನ್ನು ಹಾಗೆಯೇ ಸೆಟೆದು ನಿಂತುಕೊಂಡು ಕ್ಷೀಣವಾಗಿ ಬುಸುಗುಟ್ಟುತ್ತಿತ್ತು. ಅಷ್ಟೊತ್ತಿಗೆ ಅದಕ್ಕೆ ಮರಳಿ ಯಾವುದೋ ದೈತ್ಯಜೀವಿಗಳ ದಂಡೊಂದು ತನ್ನತ್ತ ಬರುತ್ತಿದ್ದುದು ಅವುಗಳ ಚಲನೆಯಿಂದಲೂ, ತನ್ನ ಮಸುಕು ಮಸುಕಾದ ದೃಷ್ಟಿಯಿಂದಲೂ ಗೋಚರಿಸಿತು. ಅದು ಕೂಡಲೇ ತನ್ನ ಸೀಳುನಾಲಗೆಯನ್ನು ಹೊರಗೆ ಚೆಲ್ಲಿ ತಾಳ್ಮೆಯಿಂದ ಗ್ರಹಿಸತೊಡಗಿತು. ಆಗ ಆ ಮನುಷ್ಯಜೀವಿಗಳಿಂದ ಹರಿದು ಬರುತ್ತಿದ್ದ ಭಯ, ಅನುಕಂಪ, ಸೌಂದರ್ಯಾಸ್ವಾದನೆ ಮತ್ತು ಕ್ರೌರ್ಯದ ಮನೋತರಂಗಗಳು ಒಂದೊಂದಾಗಿ ಬಂದು ಹಾವನ್ನಪ್ಪಳಿಸತೊಡಗಿದವು. ಜೊತೆಗೆ ತನ್ನನ್ನು ತಿವಿದು ಓಡಿಸಲು ಬಂದಿದ್ದ ರಮೇಶನ ರೋಷದ ಮುಖವೂ ಅದಕ್ಕೆ ಮಂದವಾಗಿ ಕಾಣಿಸಿದ್ದರಿಂದ ಹಾವು ಮತ್ತಷ್ಟು ಭಯಗೊಂಡಿದ್ದು, ‘ಹೇ…ಹುಷಾರ್…! ನನ್ನ ಹತ್ತಿರ ಯಾರೂ ಬರಬೇಡಿ!’ ಎಂಬಂಥ ಭಾವದಿಂದ ಜೋರಾಗಿ ಬುಸುಗುಟ್ಟುತ್ತ ಇನ್ನಷ್ಟು ಸೆಟೆದು ನಿಂತಿತು.
ಅಷ್ಟರಲ್ಲಿ ರಮೇಶ, ನಾರಾಯಣರು ಹಾಗೂ ಸುಮಿತ್ರಮ್ಮ ಬಂದು ಹಾವಿನ ಸ್ವಲ್ಪ ದೂರದಲ್ಲಿ ನಿಂತುಕೊಂಡು ವೀಕ್ಷಿಸತೊಡಗಿದರು. ಉಳಿದವರು ಅವರ ಹಿಂದೆ ನಿಂತು ಭಯ, ವಿಸ್ಮಯದಿಂದ ಹಾವನ್ನು ದಿಟ್ಟಿಸತೊಡಗಿದರು. ತನ್ನ ತೀರಾ ಸಮೀಪ ಬಂದು ಜಮಾಯಿಸಿದ ಜನರನ್ನು ಕಂಡ ಹಾವು ಎರಡು ಮೂರು ಬಾರಿ ಹೆಡೆಯನ್ನು ಬೀಸಿ ಬೀಸಿ ನೆಲನ್ನಪ್ಪಳಿಸಿ ಬೆದರಿಸಿತು. ಅಷ್ಟಕ್ಕೆ ಎಲ್ಲರೂ, ‘ಅಯ್ಯಯ್ಯಮ್ಮಾ…!’ ಎಂದರಚುತ್ತ ಒಬ್ಬರನ್ನೊಬ್ಬರು ನೂಕಿ, ತಳ್ಳಿಕೊಂಡು ಹಿಂದಿರುಗಿ ಓಡತೊಡಗಿದರು. ಅವರಲ್ಲಿ ಕೆಲವರು ಅಂಗಳಕ್ಕೂ ಇನ್ನು ಕೆಲವರು ಸುಮಿತ್ರಮ್ಮನ ಮಲಗುವ ಕೋಣೆಗೂ ಮತ್ತು ಕೆಲವರು ಅಡುಗೆ ಕೋಣೆಗೂ ನುಗ್ಗಿ ನಿಂತು ಸಂಭಾಳಿಸಿಕೊಂಡರು. ಆದರೆ ಅಷ್ಟೇ ಬೇಗ ಸುಧಾರಿಸಿಕೊಂಡವರು ಕೂಡಲೇ ಸಾಮೂಹಿಕ ಧೈರ್ಯವನ್ನು ಸಂಚಯಿಸಿಕೊಂಡು ಮರಳಿ ಬಂದು ಆಸಕ್ತಿಯಿಂದ ಹಾವನ್ನು ನೋಡತೊಡಗಿದರು. ಅವರಲ್ಲಿ ಕೆಲವರು ಹಾವಿನ ರುದ್ರ ವರ್ತನೆಯನ್ನು ನೋಡಿವರು, ‘ಈ ಹಾವಿಗೆ ಖಂಡಿತವಾಗಿಯೂ ಯಾರಿಂದಲೋ ತೊಂದರೆಯಾಗಿರಬೇಕು. ಅದಕ್ಕೇ ಹೀಗೆ ಉಗ್ರವಾಗಿದೆ!’ ಎಂದು ಗೊಣಗುತ್ತ ಆದಷ್ಟು ಹಿಂದೆ ಸರಿದು ನಿಂತರು. ಇನ್ನು ಕೆಲವು ಆಧುನಿಕರು ಮತ್ತು ಹಾವುಗಳ ಬಗ್ಗೆ ಮೃದು ಧೋರಣೆಯಿದ್ದವರು ಆ ಹಾವಿನ ರುದ್ರರಮಣೀಯ ಸೌಂದರ್ಯಕ್ಕೆ ಮನಸೋತು, ‘ಅಬ್ಬಬ್ಬಾ!…ಎಂತಹ ಮನೋಹರ ಜೀವಿ ಮಾರಾಯ್ರೇ ಇದು!’ ಎಂದು ರೋಮಾಂಚಿತರಾಗಿ ಉದ್ಗರಿಸಿದರು. ಆದರೆ ಅವರೆಲ್ಲರ ಮಧ್ಯೆ ಇದ್ದ ಕೆಲವು ಧಾರ್ಮಿಕರ ಯೋಚನೆ ಮತ್ತು ಲೆಕ್ಕಾಚಾರಗಳು ಬೇರೊಂದು ರೀತಿಯಲ್ಲಿ ಸಾಗುತ್ತಿದ್ದವು. ‘ಈ ನಾಗರಹಾವು ಸುಮಿತ್ರಮ್ಮನ ಮನೆಯೊಳಗೇ ಬರಲು ಕಾರಣವೇನು…?’ ಎಂದು ಅವರಲ್ಲೊಬ್ಬ ಗುಂಪಿನವರೊಡನೆ ಅನುಮಾನದಿಂದ ಕೇಳಿದ.
ಅದಕ್ಕೆ ಇನ್ನೊಬ್ಬ, ‘ಹೌದು ಹೌದು. ನನಗೂ ಅದೇ ಪ್ರಶ್ನೆ ಹುಟ್ಟಿದೆ ಮಾರಾಯಾ. ಜೊತೆಗೆ ಹಾವು ಹೆಡೆಯನ್ನು ಅಷ್ಟೊಂದು ಕೋಪದಿಂದ ನೆಲಕ್ಕೆ ಬಡಿಯುತ್ತಿರುವುದರ ಅರ್ಥವೇನು? ಅದನ್ನು ನೋಡಿದರೆ ಎಂಥವರ ಎದೆಯೂ ನಡುಗುತ್ತದೆ!’ ಎಂದ ಅಧೀರನಾಗಿ.
‘ನಾಗರಹಾವೊಂದು ಯಾರ ಮನೆಯೊಳಗಾದರೂ ಬಂದು ಹೀಗೆಲ್ಲ ವರ್ತಿಸಿತು ಎಂದರೆ ಆ ಮನೆಗೆ ಅಪಶಕುನವಂತೆ!’ ಎಂದು ಅಲ್ಲಿ ನಿಂತಿದ್ದವಳೊಬ್ಬಳು ಕಣ್ಣಗಲಿಸಿ ಅಂದಳು.
ಮತ್ತೊಬ್ಬಳು, ‘ಇದ್ದರೂ ಇರಬಹುದು ಮಾರಾಯ್ತೀ. ನಾನು ಕೇಳಿದ ಪ್ರಕಾರ ನಾಗದೋಷವಿದ್ದರೆ ಮಾತ್ರ ಇಂಥ ಸರ್ಪಗಳು ಕಾಣಿಸಿಕೊಳ್ಳುತ್ತವಂತೆ!’ ಎಂದು ಕಳವಳದಿಂದ ಹೇಳುತ್ತ ತಂತಮ್ಮೊಳಗಿನ ನಂಬಿಕೆ ಮತ್ತು ಪೂರ್ವಾಗ್ರಹಿಕೆಗಳಿಂದ ಹುಟ್ಟಿದ ಪ್ರಶ್ನೆಗಳಿಂದ ಸುಮಿತ್ರಮ್ಮನ್ನೂ, ಉಳಿದವರನ್ನೂ ಕಂಗೆಡಿಸಿಬಿಟ್ಟರು. ಆದರೆ ಅಷ್ಟರಲ್ಲಿ ಸುಂದರಯ್ಯ ಅವರೆಲ್ಲರ ತರ್ಕ ವಿತರ್ಕಗಳಿಗೆ ಹೊಸ ಆಯಾಮವನ್ನು ಕೊಡುವ ಮೂಲಕ ತಮ್ಮ ಹೆಚ್ಚುಗಾರಿಕೆಯನ್ನು ಪ್ರದರ್ಶಿಸಲು ಮುಂದಾದರು. ‘ಎಲ್ಲರೂ ಇತ್ತ ಗಮನಿಸಿ…!’ ಎಂಬಂತೆ ಅವರು ಒಮ್ಮೆ ಗಟ್ಟಿಯಾಗಿ ಕೆಮ್ಮಿದರು. ಆಗ ಉಳಿದವರ ಮಾತುಕಥೆಗಳಿಗೆ ಕಡಿವಾಣ ಬಿದ್ದು ಎಲ್ಲರೂ ಅವರನ್ನು ದಿಟ್ಟಿಸಿದರು. ಸುಂದರಯ್ಯ ತಮ್ಮ ಗೊಗ್ಗರು ಧ್ವನಿಯನ್ನು ಸರಿಪಡಿಸಿಕೊಂಡವರು, ‘ನೋಡಿ ಸುಮಿತ್ರಮ್ಮಾ, ನಾವೆಲ್ಲರೂ ಇರುವಾಗ ನೀವು ಭಯಪಡುವ ಅಗತ್ಯವಿಲ್ಲ. ಈ ಹಾವು ನಿಮ್ಮ ಮನೆಯೊಳಗೆಯೇ ಬಂದಿರುವುದಲ್ಲದೇ ಈಗ ಹೊರಗೆ ಹೋಗಲು ಕೇಳದೆ ಇಷ್ಟೊಂದು ರಂಪಾಟ ಮಾಡುವುದಕ್ಕೆ ಏನೋ ಪ್ರಬಲವಾದ ಕಾರಣವಿರಬೇಕು. ಬಹುಶಃ ಈ ನಾಗನಿಗೆ ನಿಮ್ಮಿಂದಲೋ ಅಥವಾ ವಠಾರದವರಿಂದಲೋ ಯಾವುದೋ ಅಶುದ್ಧ, ಅಪಚಾರ ನಡೆದಿರಬೇಕು. ಹಾಗಾಗಿ ಯಾವುದಕ್ಕೂ ನೀವೊಮ್ಮೆ ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸುವುದು ಒಳ್ಳೆಯದು…!’ ಎಂದು ಗಂಭೀರವಾಗಿ ಸಲಹೆ ನೀಡಿದರು. ಆಗ ಸುಮಿತ್ರಮ್ಮನಿಗೆ ಮರಳಿ ಗಂಡನ ನೆನಪಾಯಿತು. ‘ಓಹೋ, ಹೌದಲ್ಲವಾ ಸುಂದರಣ್ಣ…? ಆಯ್ತು ಆಯ್ತು!’ ಎಂದವರು ಕೂಡಲೇ ಅವರಿಗೆ ಕರೆ ಮಾಡಿದರು.
ಆಹೊತ್ತು ಲಕ್ಷ್ಮಣಯ್ಯ ಈಶ್ವರಪುರ ಪೇಟೆಯ ತಮ್ಮ ಸ್ನೇಹಿತರಾದ ಶ್ರೀಪತಿಯವರ ಮನೆಯಲ್ಲಿ ಕುಳಿತು ಕಾಫಿ ಹೀರುತ್ತ ಹರಟುತ್ತಿದ್ದರು. ಆದರೆ ಆ ರಸಗಳಿಗೆಯನ್ನು ಭಂಗಗೊಳಿಸಲೆಂದೇ ರಿಂಗಣಿಸಿದ ಹೆಂಡತಿಯ ಕರೆಯಿಂದ ಅವರಿಗೆ ಕಿರಿಕಿರಿ ಎನಿಸಿತು. ಆದರೂ ವಿಧಿಯಿಲ್ಲದೆ, ‘ಹಲೋ, ಏನು ಮಾರಾಯ್ತೀ…?’ ಎಂದರು ಬೇಸರದಿಂದ.
ಗಂಡನ ಅಸಡ್ಡೆಯ ಧ್ವನಿ ಕೇಳಿದ ಸುಮಿತ್ರಮ್ಮನಿಗೆ ರೋಸಿಬಿಟ್ಟಿತು. ‘ನೀವೊಬ್ಬರು ಇವತ್ತು ಆದಿತ್ಯವಾರವಾದರೂ ಎಲ್ಲಿ ಹಾಳಾಗಿ ಹೋಗಿದ್ದೀರಿ ಮಾರಾಯ್ರೇ…? ಇಲ್ಲಿ ಮನೆಯೊಳಗೊಂದು ನಾಗರಹಾವು ಬಂದು ಕೂತಿದೆ. ಸ್ವಲ್ಪ ಬೇಗ ಬನ್ರೀ…!’ ಎಂದು ಕೋಪದಿಂದ ಗುಡುಗಿದರು. ಹೆಂಡತಿಯ ಅಸಹನೆಗಿಂತಲೂ ‘ಹಾವು’ ಎಂದಾಕ್ಷಣ ಲಕ್ಷ್ಮಣಯ್ಯ ಕಂಗಾಲಾದರು. ‘ಏನೂ, ಹಾವಾ…? ಬಂದೆ ಬಂದೆ ಮಾರಾಯ್ತೀ…!’ ಎನ್ನುತ್ತ ಫೋನಿಟ್ಟವರು ಗೆಳೆಯನಿಗೆ ಗಡಿಬಿಡಿಯಿಂದ ವಿಷಯ ತಿಳಿಸಿ ಸ್ಕೂಟರ್ ಹತ್ತಿ ಮನೆಯತ್ತ ಧಾವಿಸಿದರು. ಮನೆಗೆ ಬಂದು ಹಾವನ್ನು ಕಂಡ ತಾವೂ ಹೌಹಾರಿಬಿಟ್ಟರು. ಆಗ ಸುಂದರಯ್ಯ ಅವರಿಗೂ ಧೈರ್ಯ ತುಂಬುವ ಹುರುಪಿನಿಂದ, ‘ಲಕ್ಷ್ಮಣಯ್ಯನವರೇ ಈಗ ಸದ್ಯ ಯಾರಾದರೂ ಹಾವು ಹಿಡಿಯುವವರನ್ನು ಕರೆಯಿಸಿ ಹಿಡಿಸಿ ಇಲ್ಲೇ ಸಮೀಪದ ಬನಕ್ಕೆ ಬಿಟ್ಟುಬಿಡುವ. ಈ ವಠಾರದೊಳಗೆ ಇಷ್ಟೆಲ್ಲ ಮಧುಮಾಂಸ ತಿನ್ನುವ ಮನೆಗಳಿರುವಾಗ ಈ ಹಾವು ನಿಮ್ಮ ಮನೆಯೊಳಗೆಯೇ ಯಾಕೆ ಬಂತು ಅಂತ ನಮಗೊಂದು ಅನುಮಾನ! ಈ ನಾಗನಿಗೆ ನಿಮ್ಮಿಂದಲೋ ಅಥವಾ ವಠಾರದವರಿಂದಲೋ ಅಪಚಾರವಾಗಿರಬೇಕು. ಹಾಗೇನಾದರೂ ಆಗಿದ್ದರೆ ಅದರ ನಿವಾರಣೆಗೆ ತನುವನ್ನೋ, ತಂಬಿಲವನ್ನೋ ಅಥವಾ ಬೇರೆ ಯಾವುದಾದರೂ ಸೇವೆಯನ್ನೋ ಕೊಟ್ಟು ನಾಗನನ್ನು ಶಾಂತಪಡಿಸುವ. ಆದರೂ ನಮಗೆ ತಿಳಿದ ಮಟ್ಟಿಗೆ ಓ, ಅಲ್ಲೊಂದು ಹಳೆಯ ಬನವಿದೆಯಲ್ಲ ಬಹುಶಃ ಇವನು ಅಲ್ಲಿನವನೇ ಇರಬೇಕು. ಆ ಬನ ಜೀರ್ಣೋದ್ಧಾರವಾಗದೆ ನೂರು ವರ್ಷ ಕಳೆಯಿತಂತೆ! ಅದನ್ನು ತಿಳಿಸಲೂ ಇವನು ಬಂದಿರಬಹುದು. ಯಾವುದಕ್ಕೂ ನೀವೊಮ್ಮೆ ಜೋಯಿಸರಲ್ಲಿ ‘ಪ್ರಶ್ನೆ’ ಇಟ್ಟು ಕೇಳುವುದು ಒಳ್ಳೆಯದಲ್ಲವಾ…?’ ಎಂದು ಲಕ್ಷ್ಮಣಯ್ಯ ಬೆಚ್ಚಿಬೀಳುವಂಥ ಸಲಹೆಯನ್ನು ಕೊಟ್ಟ ಸುಂದರಯ್ಯ, ‘ಹೇಗೆ ನಮ್ಮ ತಿಳುವಳಿಕೆ…?’ ಎಂಬ ಹಮ್ಮಿನಲ್ಲಿ ಎಲ್ಲರನ್ನೂ ದಿಟ್ಟಿಸಿದರು. ಆದರೆ ಅಲ್ಲಿದ್ದ ಅನೇಕರಿಗೆ ಸುಂದರಯ್ಯನ ಗರ್ವಿಷ್ಠ ಸ್ವಭಾವವು ಮೊದಲಿನಿಂದಲೂ ಹಿಡಿಸುತ್ತಿರಲಿಲ್ಲ. ಆದರೆ ಈಗ ಅವರು ವಿವರಿಸಿದ ಸಂಗತಿಯನ್ನು ತಿರಸ್ಕರಿಸಲು ಅಥವಾ ಪ್ರತಿಯಾಡಲು ತಮ್ಮೊಳಗಿನ ಭಯ ಮತ್ತು ನಂಬಿಕೆಗಳು ಅವರನ್ನು ಬಿಡಲಿಲ್ಲ. ಆದ್ದರಿಂದ ಎಲ್ಲರೂ ವಿಧಿಯಿಲ್ಲದೆ, ‘ಹೌದು ಹೌದು. ಹಾಗೆ ಮಾಡುವುದೇ ಒಳ್ಳೆಯದು!’ ಎಂದು ಧ್ವನಿಗೂಡಿಸಿ ಮೌನವಾದರು. ಆಗ ಸುಂದರಯ್ಯನ ಹಮ್ಮಿನ ಕೋಡು ಇನ್ನಷ್ಟು ಸೆಟೆದುಕೊಂಡಿತು.
ಆದರಿತ್ತ ಲಕ್ಷ್ಮಣಯ್ಯ, ಸುಂದರಯ್ಯನ ಸಲಹೆ ಕೇಳಿ ಅಸಹನೆಗೊಂಡಿದ್ದರು. ಅವರು ಸುಂದರಯ್ಯನ ಮಾತನ್ನು ಕಡೆಗಣಿಸಿ, ‘ಅದನ್ನೆಲ್ಲ ಆಮೇಲೆ ನೋಡಿಕೊಳ್ಳುವ ಸುಂದರಯ್ಯ. ಈಗ ಮೊದಲು ಈ ಹಾವನ್ನು ಹೊರಗೆ ಕಳುಹಿಸುವ ಉಪಾಯ ಹೇಗೆಂದು ಯೋಚಿಸುವ!’ ಎಂದರು ಅಸಡ್ಡೆಯಿಂದ. ಆಗ ಸುಂದರಯ್ಯನಿಗೆ ಮುಖಕ್ಕೆ ಹೊಡೆದಂತಾಯಿತು. ಆದರೂ ತೋರಿಸಿಕೊಳ್ಳದೆ, ‘ಹೌದೌದು. ಅದನ್ನು ಮೊದಲು ಮಾಡುವ!’ ಎಂದು ಹೇಳಿ ಸಪ್ಪಗಾದರು. ಇತ್ತ ನಾಗನ ಸ್ಫುರದ್ರೂಪವನ್ನೂ, ಅವನ ಗಜ ಗಾಂಭೀರ್ಯವನ್ನೂ ಭಯಭಕ್ತಿಯಿಂದ ಕಣ್ತುಂಬಿಕೊಂಡು ಭಾವಪರವಶರಾಗಿದ್ದ ಸುಮಿತ್ರಮ್ಮನಿಗೆ ಸುಂದರಯ್ಯನೂ, ತನ್ನ ಗಂಡನೂ ಹಾವನ್ನು ಹಿಡಿಸುವುದರ ಬಗ್ಗೆ ಮಾತಾಡಿದ್ದು ತೀವ್ರ ಕಳವಳವಾಯಿತು! ‘ಅಯ್ಯಯ್ಯೋ ದೇವರೇ…! ನೀವೆಲ್ಲ ಏನು ಮಾತೂಂತ ಆಡುತ್ತಿದ್ದೀರಿ ಮಾರಾಯ್ರೇ…? ಬೇಡ, ಬೇಡಪ್ಪಾ! ಇವನನ್ನು ಹಿಡಿಸುವುದು ಗಿಡಿಸುವುದು ಏನೂ ಬೇಡ. ಸುಂದರಯ್ಯ ಹೇಳಿದಂತೆ ನಮ್ಮಿಂದ ಅವನಿಗೇನೋ ತೊಂದರೆಯಾಗಿರಬೇಕು. ಅದು ಅವನ ಕೋಪದಿಂದಲೇ ತಿಳಿಯುತ್ತದೆ!’ ಎಂದು ಆತಂಕದಿಂದ ಹೇಳಿದವರು ಏನೋ ನೆನಪಿಗೆ ಬಂದು ರಪ್ಪನೆ ದೇವರ ಕೋಣೆಯತ್ತ ಓಡಿದರು. ಅಲ್ಲಿದ್ದ ತಮ್ಮ ನೆಚ್ಚಿನ ದೈವ ಷಣ್ಮುಖನ ಪ್ರಸಾದವನ್ನೂ ತೀರ್ಥದ ಬಾಟಲಿಯನ್ನೂ ಮತ್ತು ಹರಿವಾಣದಲ್ಲಿದ್ದ ಒಂದು ಮುಷ್ಟಿ ಅಕ್ಷತೆಕಾಳುಗಳನ್ನೂ ಗೋರಿಕೊಂಡು ಬಂದರು. ಆಹೊತ್ತು ಲಕ್ಷ್ಮಣಯ್ಯ ಹೆದರಿಕೆಯಿಂದ ಗರುಡ ಕಂಬದಂತೆ ದೂರದಲ್ಲಿ ನಿಂತುಕೊಂಡು ಹಾವನ್ನು ದಿಟ್ಟಿಸುತ್ತಿದ್ದರು. ಅವರನ್ನು ಕಂಡ ಸುಮಿತ್ರಮ್ಮನಿಗೆ ತೀರಾ ಅಸಹನೆಯಾಯಿತು. ರಪ್ಪನೆ ಗಂಡನತ್ತ ನಡೆದು ಮುದಿ ಕೋಣವನ್ನು ತಳ್ಳುತ್ತ ಮುನ್ನಡೆಸುವಂತೆಯೇ ಅವರನ್ನು ಹಾವಿನ ಸಮೀಪಕ್ಕೆ ಕರೆದು ತಂದು ನಿಲ್ಲಿಸಿದವರು ಅವರ ಬೆನ್ನಿಗೆ ತಮ್ಮನ್ನೊತ್ತಿ ನಿಂತರು.
ಹೆಂಡತಿಯ ಯೋಚನೆ ಏನೆಂದು ಅರ್ಥವಾಗದ ಲಕ್ಷ್ಮಣಯ್ಯ ಅವಳ ವರ್ತನೆಯಿಂದ ಕಂಗಾಲಾದರು. ‘ಅರೆರೇ, ನಿನ್ನದೆಂಥದು ಮಾರಾಯ್ತಿ ಹುಚ್ಚಾಟ! ಹಾವಿನಿಂದ ಕಚ್ಚಿಸಿ ನನ್ನನ್ನು ಕೊಲ್ಲಬೇಕಂತಿದ್ದಿಯಾ ಹೇಗೇ…?’ ಎಂದು ದುರುಗುಟ್ಟುತ್ತ ದೂರ ಸರಿಯಲು ಪ್ರಯತ್ನಿಸಿದರು. ಆದರೆ ಸುಮಿತ್ರಮ್ಮ ಗಂಡನ ರಟ್ಟೆಯನ್ನು ಹಿಡಿದು ನಿಲ್ಲಿಸಿ ದೀರ್ಘ ಉಸಿರೆಳೆದುಕೊಂಡವರು, ‘ನೀವೀಗ ಸ್ವಲ್ಪ ಹೊತ್ತು ಸುಮ್ಮನೆ ನಿಂತುಕೊಂಡರೆ ಸರಿ…!’ ಎಂದು ಗದರಿಸಿದರು. ಅಷ್ಟಕ್ಕೆ ಲಕ್ಷ್ಮಣಯ್ಯ ತಣ್ಣಗಾದರು. ಮರುಕ್ಷಣ ಸುಮಿತ್ರಮ್ಮ, ಹಿಂದೆ ತಮ್ಮ ಹಿರಿಯರೆಲ್ಲ ನಾಗರಹಾವನ್ನು ಕಂಡಾಗ ಯಾವ ರೀತಿಯ ಗೌರವಾದರದಿಂದ ಕೈಮುಗಿದು ಭಯಭಕ್ತಿಯನ್ನು ತೋರಿಸುತ್ತಿದ್ದರೋ ಅದೇ ಭಾವನೆಯನ್ನು ತಮ್ಮ ಮೇಲೂ ಆವಾಹಿಸಿಕೊಂಡರು. ಗಂಡನಿಗೂ ಹಾಗಿರಲು ಕಣ್ಣಿನಲ್ಲೇ ಸೂಚಿಸಿದರು. ಲಕ್ಷ್ಮಣಯ್ಯ ತಟ್ಟನೆ ತಮ್ಮ ಕೈಬೆರಳುಗಳನ್ನು ಹೆಣೆದು ಇಳಿಬಿಟ್ಟು ಜೋಲು ಮೋರೆ ಹಾಕಿಕೊಂಡು ಹೆಂಡತಿಯ ಪಕ್ಕದಲ್ಲಿ ನಿಂತರು.
ಸ್ವಲ್ಪ ಹೊತ್ತಿಗೆ ಮುಂಚೆ ಮನೆಯ ತಾರಸಿ ಬಿರುಕು ಬೀಳುವಂತೆ ಅರಚಿದ್ದ ಸುಮಿತ್ರಮ್ಮನೇ ಈಗ ಇಷ್ಟೊಂದು ಧೈರ್ಯವಾಗಿರುವುದನ್ನು ಕಂಡ ಉಳಿದವರೂ ಒಂದೊಂದೇ ಹೆಜ್ಜೆ ಮುಂದೆ ಬಂದು ಕೈಮುಗಿದು ನಿಂತುಕೊಂಡರು. ಅದನ್ನು ಗಮನಿಸಿದ ಸುಮಿತ್ರಮ್ಮನ ಹುಮ್ಮಸ್ಸು ದುಪ್ಪಟ್ಟಾಯಿತು. ‘ಓ… ಅನಾಥ ಬಂಧು ನಾಗದೇವನೇ…! ನಿನ್ನಂಥ ದೈವಶಕ್ತಿಯೊಂದು ನಮ್ಮಂಥ ಮನುಷ್ಯರ ಗಲೀಜು, ಮೈಲಿಗೆ ತುಂಬಿದ ಜಾಗದಲ್ಲೆಲ್ಲ ಕಾಣಿಸಿಕೊಳ್ಳುವುದು ಎಷ್ಟು ಸರಿಯೆಂದು ನೀನೇ ಹೇಳು…? ನಮ್ಮಿಂದ ನಿನಗೇನೋ ಅಪಚಾರವಾಗಿದೆ ಅಂತ ನಾವೂ ಒಪ್ಪುತ್ತೇವೆ ಮತ್ತು ಅದೇನೆಂಬುವುದನ್ನು ಆದಷ್ಟು ಬೇಗ ‘ಪ್ರಶ್ನೆ’ಯಿಟ್ಟು ತಿಳಿದುಕೊಂಡು ಬಗೆಹರಿಸುತ್ತೇವೆ. ಆದ್ದರಿಂದ ನೀನೀಗ ದಯವಿಟ್ಟು ಇಲ್ಲಿ ಯಾರಿಗೂ ತೊಂದರೆ ಮಾಡದೆ ನಿನ್ನ ತಾಣಕ್ಕೆ ಹೊರಟು ಹೋಗಬೇಕು!’ ಎಂದು ಗದ್ಗದಿತರಾಗಿ ಪ್ರಾರ್ಥಿಸಿಕೊಂಡರು. ಬಳಿಕ ಹೆಡೆಯೆತ್ತಿ ಬುಸುಗುಟ್ಟುತ್ತಿದ್ದ ಹಾವಿನ ನೆತ್ತಿಯ ಮೇಲೆ ಮೂರು ಬಾರಿ ಅಕ್ಷತೆಕಾಳನ್ನೂ ಗಂಧಪ್ರಸಾದವನ್ನೂ ರಪರಪನೇ ಎಸೆದು, ‘ಹ್ಞೂಂ! ಇನ್ನು ನಾವೆಲ್ಲರೂ ಹೊರಗೆ ಹೋಗುವ. ಅವನು ಅದೃಶ್ಯನಾಗಲು ಅವಕಾಶ ಕೊಡುವ!’ ಎಂದು ಹೇಳಿ ಅವಸರವಸರವಾಗಿ ಹೊರಗೆ ನಡೆದರು. ಆಗ ಉಳಿದವರೂ ಭಕ್ತಿಯಿಂದ ಹಾವಿಗೆ ಕೈಮುಗಿದು ಸುಮಿತ್ರಮ್ಮನನ್ನು ಹಿಂಬಾಲಿಸಿದರು.
ಇತ್ತ, ತನ್ನ ಮೇಲೆ ರಪರಪನೇ ಬಂದಪ್ಪಳಿಸಿದ ನೂರಾರು ಹರಳಿನಂಥ ವಸ್ತುಗಳನ್ನೂ ನೀರಿನ ರೂಪದ ಸಿಂಪಡಿಸುವಿಕೆಯನ್ನೂ, ‘ಮರ್ಯಾದೆಯಿಂದ ಈಗಿಂದೀಗಲೇ ಹೊರಗೆ ನಡೆ…!’ ಎಂಬಂಥ ಸುಮಿತ್ರಮ್ಮನ ದಪ್ಪ ಕೈಗಳ ಚಲನೆಯನ್ನೂ ಮತ್ತು ಅವರ ಶರಣಾಗತಿಯ ಮನೋತರಂಗಗಳನ್ನೂ ಹಾಗೂ ಅಲ್ಲಿಯವರೆಗೆ ಕೆರಳಿದ ಜೇನ್ನೊಣಗಳಂತೆ ಸುತ್ತುವರೆದು ನಿಂತಿದ್ದ ಮನುಷ್ಯಾಕೃತಿಗಳು ತಟ್ಟನೆ ಕಣ್ಮರೆಯಾಗಿದ್ದನ್ನೂ ತೀವ್ರ ಭಯ, ಗೊಂದಲದಿಂದಲೇ ಗಮನಿಸುತ್ತಿದ್ದ ಶೀತರಕ್ತ ದೇಹಿಯಾದ ನಾಗರಹಾವಿನ ರಕ್ತದೊತ್ತಡವೂ ತುಸುಹೊತ್ತು ನೆತ್ತಿಗೇರಿಬಿಟ್ಟಿತು. ಆದ್ದರಿಂದ ಆ ಹಾವು, ಇನ್ನೂ ತಾನಿಲ್ಲಿ ನಿಂತೆನೆಂದರೆ ಈ ಮನುಷ್ಯರು ನನ್ನ ತಿಥಿ ಮಾಡಿ, ಭೂರೀ ಭೋಜನ ಸವಿಯುವುದು ಖಂಡಿತಾ! ಎಂದು ಯೋಚಿಸಿದ್ದು ಮಿಂಚಿನವೇಗದಲ್ಲಿ ಹೊರಗೆ ಹರಿದು ಕಣ್ಮರೆಯಾಗಿಯಿತು.
(ಮುಂದುವರೆಯುವುದು)
***************************
ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.
ನಾಗರಹಾವು ಮನೆಯೊಳಗೆ ಪ್ರವೇಶಿಸಿದಾಗ ಅಲ್ಲಿ ಮನೆಯವರು ಪಕ್ಕದ ಮನೆಯವರು ಭೀತಿಗೊಂಡು ವರ್ತಿಸುವ ರೀತಿಯನ್ನು ಕಾದಂಬರಿಕಾರರು ಸ್ವಾರಸ್ಯಕರವಾಗಿ ಚಿತ್ರಿಸಿದ್ದಾರೆ. ಅಭಿನಂದನೆಗಳು.