
ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—32
ಆತ್ಮಾನುಸಂಧಾನ
ಕಂಡರಿಯದ ಕರ್ನಾಟಕ
ವಿಶ್ವವಿದ್ಯಾಲಯದ ಅಂಗಳದಲ್ಲಿ

ಬಿ.ಎ ಅಂತಿಮ ವರ್ಷದ ಫಲಿತಾಂಶವು ಬರುತ್ತಿದ್ದಂತೆ ನಾನು ನನ್ನ ಎಂ.ಎ ಓದಿನ ಕುರಿತು ಗಟ್ಟಿ ಮನಸ್ಸು ಮಾಡಿದೆ. ವಿಶ್ವವಿದ್ಯಾಲಯ ಪ್ರವೇಶ ಪ್ರಕ್ರಿಯೆಗೆ ಬೇಕಾದ ಅನುಕೂಲಗಳನ್ನು ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದೆ.
ಇದೇ ಸಮಯದಲ್ಲಿ ತೀರ ಆಕಸ್ಮಿಕವಾಗಿ ನನಗೆ ನೆರೆಯ ಗೋಕರ್ಣ ಸಮೀಪದ ಸಾಣೆಕಟ್ಟೆ ಎಂಬ ಊರಿನಲ್ಲಿರುವ “ಸದ್ಗುರು ನಿತ್ಯಾನಂದ ಹೈಸ್ಕೂಲು” ಮುಖ್ಯಾಧ್ಯಾಪಕರಿಂದ ಪತ್ರವೊಂದು ಬಂತು. ಅದರಲ್ಲಿ ನಾನು ಬಿ.ಎ ಪಾಸು ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತ ಪ್ರಸ್ತುತ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರ ಹುದ್ದೆಗೆ ಅವಕಾಶವಿದ್ದು ಇಷ್ಟವಿದ್ದರೆ ಬಂದು ಸೇರಿಕೊಳ್ಳಬಹುದು ಎಂಬ ಸೂಚನೆಯೂ ಇತ್ತು.
ನನಗೆ ಆಶ್ಚರ್ಯ ಮತ್ತು ಬಯಸದೇ ಬಂದ ಈ ಅವಕಾಶಕ್ಕಾಗಿ ಆನಂದವೂ ಆಯಿತು. ಆದರೆ ಅದೇ ಸಂದರ್ಭದಲ್ಲಿ ಇಂಥ ಅವಕಾಶ ನೀಡಿದ ಹೃದಯವಂತ ಮುಖ್ಯಾಧ್ಯಾಪಕರ ಕುರಿತು ಕುತೂಹಲವೂ ಹೆಚ್ಚಿತು.
ಅಂದು ಸಾಣಿಕಟ್ಟೆಯ ಸದ್ಗುರು ನಿತ್ಯಾನಂದ ಪ್ರೌಢಶಾಲೆಗೆ ಗೋಪಾಲಕೃಷ್ಣ ಪಿ. ನಾಯಕ ಎಂಬುವವರು ಮುಖ್ಯಾಧ್ಯಾಪಕರಾಗಿದ್ದರು. ಅವರು ಹಿಂದೆ ಅಂಕೋಲೆಯ ಪಿ.ಎಂ.ಹೈಸ್ಕೂಲಿನಲ್ಲಿ, ವಿ.ಕೇ.ಗರ್ಲ್ಸ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಅಂಕೋಲೆಯ ಪ್ರಾಥಮಿಕ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಪ್ರಾಚಾರ್ಯರಾಗಿಯೂ ಕಾರ್ಯನಿರ್ವಹಿಸಿ ಸುದ್ದಿಯಾಗಿದ್ದರು.
ತಮ್ಮ ಶಿಕ್ಷಕ ವೃತ್ತಿಯೊಡನೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿಯೂ ತುಂಬಾ ಕ್ರಿಯಾಶೀಲರಾಗಿದ್ದ ಜಿ.ಪಿ. ನಾಯಕರು ಉತ್ತಮ ನಾಟಕ ಮತ್ತು ನೃತ್ಯ ಕಲಾವಿದರಾಗಿ, ಸಂಘಟಕರಾಗಿ ಜನಾನುರಾಗಿಯಾಗಿದ್ದರು.
ಇದೀಗ ಅದೇ ಗೋಪಾಲಕೃಷ್ಣ ನಾಯಕರು ಸಾಣಿಕಟ್ಟೆಯ ನಿತ್ಯಾನಂದ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ ಎಂಬ ಸಂಗತಿ ತಿಳಿದು ಬಂತು. ಆದರೆ ಅವರಿಗೆ ನನ್ನ ಕುರಿತಾದ ಪರಿಚಯ ಮತ್ತು ಕಾಳಜಿ ಹೇಗೆ ಸಾಧ್ಯವಾಯಿತು? ಎಂದು ಯೋಚಿಸುವಾಗ ತಂದೆಯವರಿಂದ ಉತ್ತರ ದೊರೆಯಿತು.
ಶಿಕ್ಷಕರಾಗಿರುವ ತಂದೆಯವರು ಶಿಕ್ಷಕ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿದ್ದ ಜಿ.ಪಿ. ನಾಯಕರ ಸಂಪರ್ಕಕ್ಕೆ ಬಂದಾಗ ಸಹಜವಾಗಿ ತನ್ನ ಕುಟುಂಬ ಮತ್ತು ಮಕ್ಕಳ ಶಿಕ್ಷಣದ ಕುರಿತು ಅವರೊಡನೆ ಮಾತನಾಡಿದ್ದಾರೆ. ಪದವಿ ಓದುತ್ತಿರುವ ನನಗಾಗಿ ಭವಿಷ್ಯದಲ್ಲಿ ಉದ್ಯೋಗದ ಕುರಿತಾಗಿಯೂ ಪ್ರಸ್ತಾಪಿಸಿದ್ದಾರೆ. ಇದನ್ನು ನೆನಪಿಟ್ಟು ಮಾನ್ಯ ಜಿ.ಪಿ. ನಾಯಕರು ತಾವು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಲ್ಲಿಯೇ ಅವಕಾಶ ಕಂಡುಬಂದಾಗ ನನಗೆ ಉದ್ಯೋಗವಕಾಶ ಒದಗಿಸುವ ಔದಾರ್ಯದಿಂದ ಪತ್ರ ಬರೆದಿರುವುದು ಸ್ಪಷ್ಟವಾಯಿತು.
ನನಗೆ ತುಂಬ ಸಂದಿಗ್ಧವೆನ್ನಿಸಿತು. ತೀರ ಇತ್ತೀಚಿನ ದಿನಗಳಿಂದ ನನ್ನಲ್ಲಿ ಹೆಚ್ಚುತ್ತಿರುವ ಎಂ.ಎ. ಓದಿನ ಒಲವು. ಇನ್ನೊಂದು ಕಡೆಯಲ್ಲಿ ತುಂಬ ಗೌರವಾನ್ವಿತರೆನ್ನಿಸಿದ ಜಿ.ಪಿ. ನಾಯಕರ ಆಶ್ರಯದಲ್ಲಿ ಕೆಲಸ ಮಾಡುವ ಸುಂದರ ಅವಕಾಶ. ಬಹಳ ಮುಖ್ಯ ಸಂಗತಿಯೆಂದರೆ ಕುಟುಂಬದ ಪ್ರಸ್ತುತ ಪರಿಸ್ಥಿತಿಯಲ್ಲಿ ನಾನು ದುಡಿದು ಸಂಪಾದಿಸಬೇಕಾದ ಅವಶ್ಯಕತೆ!
ಈ ಹೊಯ್ದಾಟದಲ್ಲಿ ಕೆಲವು ದಿನಗಳು ಕಳೆದವು ಕೊನೆಗೂ ನನ್ನ ಒಲವು ಇರುವುದು. ಎಂ.ಎ ಓದಿನತ್ತಲೇ ಎಂಬುದನ್ನು ಗ್ರಹಿಸಿದ ನಮ್ಮ ತಂದೆಯವರು ನನಗೆ “ಓದನ್ನೇ ಮುಮದುವರಿಸು” ಎಂದು ಅಂತಿಮವಾಗಿ ಸಲಹೆ ನೀಡಿದರು.
ಮಾನ್ಯ ಗೋಪಾಲಕೃಷ್ಣ ನಾಯಕರಿಗೆ ನನ್ನ ಓದಿನ ಬಯಕೆಯನ್ನು ಸೂಕ್ಷö್ಮವಾಗಿ ವಿವರಿಸಿ ಅವರು ತೋರಿದ ಕಾಳಜಿಗಾಗಿ ಕೃತಜ್ಞತೆ ಸಲ್ಲಿಸಿ ಪತ್ರ ಬರೆದು ಹಾಕಿದೆ. ನಾಯಕರು ಯಾವ ಬೇಸರವೂ ಇಲ್ಲದೆ ನನಗೆ ಅಭಿನಂದನೆ ಸಲ್ಲಿಸಿ ಆಶೀರ್ವಾದವನ್ನು ಮಾಡಿ ಉತ್ತರ ಬರೆದರು.
ನಂತರದ ಬದುಕಿನಲ್ಲಿ ಸಾಹಿತ್ಯ ಸಾಂಸ್ಕೃತಿಕ ಸಂದರ್ಭದಲ್ಲಿ ಹಲವು ಭಾರಿ ಮುಖಾಮುಖಿಯಾದ ನಾಯಕರು ಅತ್ಯಂತ ಪ್ರೀತಿ ಮತ್ತು ಅಭಿಮಾನದಿಂದಲೇ ನನ್ನನ್ನು ಕಂಡರು. ತಾವು ರಾಜ್ಯಮಟ್ಟದಲ್ಲಿ ಸಾಂಸ್ಕೃತಿಕ ವ್ಯಕ್ತಿಯಾಗಿ ಗೌರವ ಪಡೆದಾಗಲೂ ಅದೇ ನಿರ್ವ್ಯಾಜ್ಯ ಪ್ರೀತಿ ಸ್ನೇಹಗಳಿಂದ ಕೊನೆಯ ತನಕ ನನ್ನನ್ನು ಗೌರವಿಸಿದರು. ನನ್ನ ಬದುಕಿನಲ್ಲಿ ಮರೆಯಲಾಗದ ಮರೆಯಬಾರದ ವ್ಯಕ್ತಿಯಾಗಿ ನೆನಪಲ್ಲಿ ಉಳಿದರು.
ಎಲ್ಲ ಮುಗಿದು ನಾನು ವಿಶ್ವವಿದ್ಯಾಲಯದ ಪ್ರವೇಶಕ್ಕಾಗಿ ಧಾರವಾಡಕ್ಕೆ ಹೊರಡುವ ಸನ್ನಾಹದಲ್ಲಿ ತೊಡಗಿರುವಾಗ ಇನ್ನೊಂದು ಆಕಸ್ಮಿಕ ಆತಂಕ ಎದುರಾಯಿತು.
ನನ್ನ ತಾಯಿಯ ಚಿಕ್ಕಪ್ಪ ನಮ್ಮ ತಂದೆಯವರಿಗೆ ಶಿಕ್ಷಣಕ್ಕೂ ಸಹಾಯಕನಾಗಿ ನಿಂತು ಅವರ ಬೆಳವಣಿಗೆಯ ಎಲ್ಲ ಹಂತಗಳಲ್ಲಿ ನಿಂತ ರಾಕಜ್ಜ ನಮ್ಮೊಟ್ಟಿಗೆ ವಾಸವಾಗಿದ್ದ. ಹೆಂಡತಿ ಮಕ್ಕಳು ಯಾರಿಗಿಂತಲೂ ನಮ್ಮ ಕುಟುಂಬವನ್ನೇ ಆಶ್ರಯಿಸಿಕೊಂಡಿದ್ದ ರಾಕಜ್ಜ ನನ್ನನ್ನು ಉಳಿದೆಲ್ಲ ಮೊಮ್ಮಕ್ಕಳಿಂದ ಹೆಚ್ಚು ಎದೆಗೆ ಹಚ್ಚಿಕೊಂಡಿದ್ದ.
ಇದೀಗ ನಾನು ಓದುವುದಕ್ಕಾಗಿ ದೂರದ ಧಾರವಾಡಕ್ಕೆ ಹೊರಟಿದ್ದೇನೆ ಎನ್ನುವಾಗ ಅವನಿಗೆ ಅದು ಅಮೇರಿಕೆಗೋ ಇಂಗ್ಲೆಂಡಿಗೋ ಹೊರಟಂತೆ ದೂರ ಪ್ರಯಾಣವಾಗಿ ಕಂಡಿದೆ. ಆತ ನಾನು ಧಾರವಾಡಕ್ಕೆ ಹೋಗಲೇ ಬಾರದೆಂದು ಹಠ ಹಿಡಿದ. ಎರಡು ಮೂರು ದಿನ ಮನೆಯಲ್ಲಿ ಈ ವಿಷಯದ ಕುರಿತಾಗಿಯೇ ವಾದ-ವಿವಾದಗಳು ನಡೆದವು. ಇದು ಎಂತಹ ವಿಕೋಪಕ್ಕೆ ಹೋಯಿತೆಂದರೆ ಅಂತಿಮವಾಗಿ ಗ್ರಾಮದೇವರಲ್ಲಿ ಪ್ರಸಾದ ಕೇಳುವುದೆಂದೇ ತೀರ್ಮಾನವಾಯಿತು.
ಆದರೆ ದೇವರೂ ನನ್ನನ್ನು ಬಿಟ್ಟುಕೊಡಲಿಲ್ಲ. ಎಲ್ಲವೂ ನನ್ನ ಪರವಾಗಿಯೇ ಇತ್ಯರ್ಥವಾದವು. ನಾನು ಧಾರವಾಡಕ್ಕೆ ಹೊರಡುವುದೆಂದೇ ನಿರ್ಣಯವಾಯಿತು. ರಾಕಜ್ಜ ಮಾತ್ರ ಇದರಿಂದಲೂ ರಾಜಿಯಾಗದೇ ಕೋಪಗೊಂಡು ಸತ್ಯಾಗ್ರಹಕ್ಕೆ ನಿಂತ ನಮ್ಮ ಮನೆಯಿಂದ ಹೊರಟು ನೆರೆಯಲ್ಲಿರುವ ನಾರಾಯಣ ನಾಯಕರ ಗೇರು ಹಕ್ಕಲಿನಲ್ಲಿ ಗೇರು ಮರದ ನೆರಳಿನಲ್ಲಿ ಒಲೆಹೂಡಿ ತಾನೇ ಬೇಯಿಸಿಕೊಂಡು ಉಣ್ಣಲು ಆರಂಭಿಸಿದ. ನನಗೆ ತುಂಬ ಸಂಕಟವಾಯಿತು. ಇಷ್ಟೆಲ್ಲವನ್ನು ಆತ ನನ್ನ ಮೇಲಿನ ಅತಿಯಾದ ಅಕ್ಕರೆಯಿಂದಲೇ ಮಾಡುತ್ತಿದ್ದಾನೆ ಎನ್ನುವಾಗ ಅವನನ್ನು ಬಿಟ್ಟು ಹೊರಡುವುದೂ ನನಗೆ ಅಸಾಧ್ಯವೆನ್ನಿಸತೊಡಗಿತು. ಅಪ್ಪ ಈ ಎಲ್ಲವನ್ನು ಒಂದು ಮಕ್ಕಳಾಟವೆಂಬಂತೆ ಗಮನಿಸಿ ಉಪೇಕ್ಷೆ ಮಾಡಿದರು. ಅವ್ವ “ನಾನೆಲ್ಲ ಸರಿ ಮಾಡುವೆ ನೀನು ಹೋಗಿ ಬಾ” ಎಂದು ಧೈರ್ಯ ತುಂಬಿದಳು.
೧೯೭೨ ಜುಲೈ ತಿಂಗಳ ಒಂದು ಮುಂಜಾನೆ ನನ್ನ ಬಟ್ಟೆ ಬರೆಗಳನ್ನು ಹಾಸಿಗೆ ಗಂಟಿನೊಡನೆ ಹೊಂದಿಸಿಕೊಂಡು ತಾಯಿ ತಂದೆಯವರಿಗೆ ಕೈ ಮುಗಿದು ಧಾರವಾಡಕ್ಕೆ ಹೊರಟು ಕಂಡರಿಯದ ಕರ್ನಾಟಕ ವಿಶ್ವವಿದ್ಯಾಲಯದ ಅಂಗಳಕ್ಕೆ ಬಂದು ನಿಂತೆ.
*****************
ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಗುರೂಜಿ,
ಅಂತೂ ಅರಬಿ ಸಮುದ್ರ ದಾಟಿ ಘಟ್ಟದ ಮೇಲಿನ ಭಾಗಕ್ಕೆ ಬಂದಾಯಿತು. ಅಂದಿನ ಜನರು ತುಂಬಾ ಹೃದಯವಂತರು, ನೋಡಿ ನಿಮಗೊಸಕರ ಅವರು ಏನೆಲ್ಲ ಮಾಡಿದರು. ನಿಮ್ಮ ತಂದೆ ಓದಿದವರು ಎಂದು ಧಾರವಾಡ ವಿಶ್ವವಿದ್ಯಾಲಯ ಸೇರಿಕೊಂಡು ಎಮ. ಎ. ಪದವಿ ಪಡೆಯಲು ಅವಕಾಶವಾಯಿತು.
ಮುಂದಿನ ಸಂಚಿಕೆ
ಎದುರಾಗಿರುವೆ…..
ಧನ್ಯವಾದಗಳು
49 ವಷ೯ಗಳ ಹಿಂದಿನ ನಿಮ್ಮ ಧಾರವಾಡ ಪಯಣದ ಕಥೆ ರೋಚಕವಾಗಿದೆ.
ಧನ್ಯವಾದಗಳು ಸರ್