ಗಜಲ್
ಜಯಶ್ರೀ.ಭ.ಭಂಡಾರಿ.
ಹವಳದ ತುಟಿಗಳ ಅರಳಿಸಿ ನಗುವ ನನ ಕೂಸೇ ಏನು ಚಂದವೇ ನೀ
ಮಿಂಚುವ ಮುದ್ದು ಕಂಗಳಲ್ಲಿ ದೇವನೇ ನಕ್ಕಂತೆ ಅದೇನ ಚಂದವೇ ನೀ
ಬಾಗಿದ ಕಾಮನಬಿಲ್ಲಿನಂತ ಹುಬ್ಬುಗಳ ಏರಿಳಿತ ದೃಷ್ಟಿ ತಾಗ್ಯವ ಕಂದನೆ
ಜೊಂಪೆ ಜೊಂಪೆ ಮುಂಗುರುಳು ಹಣೆ ಚುಂಬಿಸುವ ಪರಿ ಏನಚಂದವೇ ನೀ
ರೆಪ್ಪೆಗಳ ಪಿಳಿಪಿಳಿ ಆಡಿಸುತ ನೋಡುವ ಸೊಬಗ ಸಿರಿ ಹೇಗೆ ವರ್ಣಿಸಲೆ ನಾ
ಅಳುವ ಕಪೋಲವೆಲ್ಲ ಮುತ್ತುಗಳ ರಾಶಿಯಲಿ ಮಿಂದಂತೆ ಆದೇನ ಚಂದವೇ ನೀ
ಹೆಜ್ಜೆ ಹೆಜ್ಜೆಗಳಲಿ ತಪ್ಹೆಜ್ಜೆ ಇಡುತ್ತ ಏಳು-ಬೀಳುಗಳ ಸೊಗಸೆನ ಬಣ್ಣಿಸಲೆ
ಗೆಜ್ಜೆನಾದದ ಅಲೆಯಲ್ಲಿ ಮನೆಯೆಲ್ಲ ಸಂಭ್ರಮದ ಬೊಗಸೆ ಏನ್ ಚಂದವೇ ನೀ
ಮಡಿಲ ಕಂದನ ಲೀಲೆಗಳಲ್ಲಿ ತನ್ಮಯಳಾಗಿ ಮರೆತಿಹಳು ತಾಯಿ ಜಗವೆಲ್ಲ.
ಎದೆಗವುಚಿಕೊಂಡು ಹಾಲೂಡಿಸುವ ತಾಯಿಯ ತದೇಕ ನೋಟದಿ ಅದೇನ ಚಂದವೇ ನೀ
ಬಂಗಾರದ ಬೊಂಬೆ ನೀ ದೇವನಿತ್ತ ಅಪೂರ್ವ ಕಾಣಿಕೆ ನನ ಬಾಳಿಗೆ
ಅಮ್ಮಾ ಎನ್ನುವ ಕರುಳ ಕೂಗಿಗೆ ಜಯ ಮರುಳಾದದ್ದು ದಿಟವೆ ಏನ ಚಂದವೇ ನೀ.
*************************