ಬ್ರಹ್ಮ ನ ಸಮಸ್ಯೆ

ಮಕ್ಕಳ ಕಥೆ

ಬ್ರಹ್ಮ ನ ಸಮಸ್ಯೆ

ಸಂತೆಬೆನ್ನೂರು ಫೈಜ್ನಟ್ರಾಜ್

black and gray dog on brown sands

ಜೀವನದಲ್ಲಿ ಎಲ್ಲವೂ ಸರಿ ಇರುವುದಿಲ್ಲ ಅಂತ ನಮ್ಮೆಲ್ಲರಿಗೂ ಗೊತ್ತು. ಒಮ್ಮೊಮ್ಮೆ, ಒಂದೊಂದು ಹೇಗೋ ಎಡವಟ್ಟಾಗಿರುತ್ತೆ. ನಾವೇ ಸರಿ ಮಾಡ್ಕೋಬೇಕಪ್ಪ ಅನ್ನೋ ಅಮ್ಮನ ಮಾತು ನಮ್ಮ ಪುಟಾಣಿ ಮಗಳು ನಂಬ್ತಾನೇ ಇಲ್ಲ? ಅವಳು ಆಡುವ ನೂರಾರು ತರದ ಆಟದ ಸಾಮಾನುಗಳೆಲ್ಲಾ ಎಷ್ಟು ನೀಟಾಗಿವೆ ಅನ್ನುವ ಅರ್ಥದಲ್ಲಿ ಅವಳು ಅಮ್ಮನ ಬಳಿ ವಾದ ಮಾಡುತ್ತಿದ್ದಾಳೆ.

ಅದೆಂಗ್ ಸರಿ ಇರಲ್ಲ? ದೇವರು ತಪ್ಪು ಮಾಡುತ್ತಾನಾ? ಭೂಮಿ, ಆಕಾಶ, ಮರಗಿಡ ಬಳ್ಳಿ, ಮಳೆ, ಬೆಳೆ, ಶಾಲೆ, ಮಿಸ್ಸು, ಪಾಠ, ಪಾಸು-ಫೇಲು ಎಲ್ಲಾ ಅಂದ್ರೆ ಎಲ್ಲಾ ಕರೆಕ್ಟಿದೆಯಲ್ಲಾ?

ಮಗಳ ತರ್ಕ.

ಅಷ್ಟರಲ್ಲಿ ನಮ್  ಕರಿಯ ಹೊರಗಿಂದ ಜೋರು ಬೊಗಳಿದ. ಹಸಿವಾಗಿತ್ತೇನೋ… ಮಗಳೇ ಅನ್ನ ಹಾಲು ಕಲೆಸಿ ಬಟ್ಟಲು ತೆಗೆದುಕೊಂಡು ಹೋಗಿ ಹಾಕಿ ಸಡನ್ನಾಗಿ ಬಂದಳು.

ಬಂದವಳೇ ‘ಅಬ್ಬೂ ನಮ್ಮ ಕರಿಯನ ಬಾಲ ಯಾಕೆ ಸೊಟ್ಟ ಇದೆ?’

ನಂಗ್ ಬ್ರೇಕ್ ಸಿಕ್ತೀಗ, ಮಾಸಿಕವೊಂದನ್ನು ಓದುತ್ತಿದ್ದ ನಾನು ಪಕ್ಕಕ್ಕಿಟ್ಟು ‘ ನೀನೇ ಈಗ ತಾನೇ ಹೇಳಿದೆ, ಎಲ್ಲಾ ಸರಿಯಿರುತ್ತೆ ಅಂತ..’ 

‘ನಾಯಿ ಬಾಲ ಡೊಂಕು ಯಾಕೊ ಗೊತ್ತಿಲ್ಲ, ಆನೆ ಬಾಲ, ಎಮ್ಮೆ ಬಾಲ, ಹಾವಿನ ಬಾಲ, ಕುದುರೆ ಬಾಲ ಎಲ್ಲ ನೇರ; ನಮ್ ಕರಿಯನ ಬಾಲ ಮಾತ್ರ ಯಾಕೆ ಡೊಂಕ?

ಕುತೂಹಲ ಹೊರ ಹಾಕಿದಳು.

ಅವರಮ್ಮ ತಲೆಗೊಂದು ಮೊಟಕಿ  ‘ನಿನ್ನ ಕರಿಯಂಗಷ್ಟೇ ಅಲ್ಲ, ಎಲ್ಲಾ ನಾಯಿ ಬಾಲ ಡೊಂಕೇ; ನಮ್ಮ ಕೆಲವು ನಾಯಕರಂತೆ!’ಅನ್ನುತ್ತಾ ಅಡುಗೆ ಮನೆ ಕಡೆ ಹೋದಳು.

ಅಬ್ಬೂ ಬೇರೆ ನಾಯಿ ಕತೆ ಹಾಳಾಗಿ ಹೋಗಲಿ ನಮ್ ಕರಿಯನ ಬಾಲ ಸೀದಾ ಮಾಡನ?

‘ನಿಮ್ಮಮ್ಮ ಹೇಳಲಿಲ್ವೇ? ನಮ್ಮ ಕೆಲ ರಾಜಕಾರಣಿಗಳ ತರ ಅದು, ಎಂದಿಗೂ ನೇರ ಆಗಲ್ಲ. ಮ್ಯಾನು ಫ್ಯಾಕ್ಚರ್ ಡಿಫೆಕ್ಟ್ ಅಷ್ಟೆ! ಅಂದೆ.’

‘ಅದೇಕೆ ಹಾಗೆ ಅಂತ? ಪಾಪ ನಮ್ ಕರಿಯನ ಬಾಲ ನೋಡಿ ಅವನ ಫ್ರೆಂಡ್ಸು, ಬೇರೆ ಪ್ರಾಣಿಗಳು ಎಷ್ಟು ಆಡ್ಕಂಡವೋ, ಏನೆನಂತ ಮಾತಾಡಿಕೊಂಡು ನಕ್ವೋ ಏನೋ ಎಷ್ಟು ಶೇಮ್ ಆಯ್ತೋ ಪಾಪ’ ಅಂತ ಲೊಚಗುಟ್ಟಿದಳು.

‘ಮನುಷ್ಯ ಮಾತ್ರ ಇನ್ನೊಬ್ಬರನ್ನ ಆಡ್ಕಂಡು ನಗೋದು, ಕಾಲೆಳೆಯುವ ಕೆಟ್ಟ ಗುಣ ಪ್ರಾಣಿಗಳಲ್ಲಿ ಇಲ್ಲ ಗೊತ್ತಾ’ ಅಂದಳು ಅವಳಮ್ಮ ಒಳಗೆ ಒಗ್ಗರಣೆ ಹಾಕುತ್ತಾ!

‘ಹಂಗಾರೆ ನಾಯಿಗಳು ಒಮ್ಮೆಯೂ ತಮ್ಮ ಸೊಟ್ಟ ಬಾಲದ ಬಗ್ಗೆ ಬೇಸರ ಮಾಡ್ಕೊಂಡಿಲ್ಲವಾ?’ ಮಗಳು ಪ್ರಶ್ನೆ ಎಸೆದಳು.

ಯಾಕ್ ಮಾಡಿಕೊಂಡಿಲ್ಲ? ಬಹಳ ಸಾರಿ ಮಾಡಿಕೊಂಡಿವೆ. ಹಾವುಗಳು ನಮ್ಮ ಬಾಯಿಂದ ವಿಷ ಬರುತ್ತೆ ಅಂತ , ಚೇಳು ತಮ್ಮ ಕೊಂಡಿಯಿಂದ ವಿಷ ಅಂತ, ಕಾಗೆ ತಾನು ಕಪ್ಪು ಅಂತ, ಆನೆ ತನಗೆ ಮೈ ಭಾರ ಅಂತ, ಇರುವೆ ನನ್ನನ್ನು ಎಲ್ಲರೂ ತುಳಿತಾರಂತ, ಗೂಬೆ ತಾನು ಅನಿಷ್ಟ ಅಂತ, ಕರಡಿಗೆ ಮೈ ತುಂಬಾ ಕೂದಲಂತ……ಹೀಗೇ ಎಲ್ಲಾ ಪ್ರಾಣಿಗಳಿಗೂ ಒಂದೊಂದು ಅಸಮಾಧಾನ ಇದ್ದೇ ಇತ್ತು ಮತ್ತು ಇದೆ ಕೂಡಾ!

ಬೇರೆಯವರದು ಬಿಡಿ ಅಬ್ಬೂ.. ನಾಯಿ ಬಾಲದ್ ಕತೆ ಹೇಳಿ. ಹಠದಂತೆ ಹೇಳಿದಳು. ಅವಳಮ್ಮ ಅನ್ನ ಹಾಲು ಕಲೆಸಿದ ತಟ್ಟೆ ತಂದು ಕೈಗೆ ಕೊಟ್ಟಳು. ತಿನ್ನಿಸುತ್ತಾ ಕತೆ ಹೇಳಿದೆ…..

ಅಯ್ಯೋ ಅದು ಹದಿನಾರನೇ ಶತಮಾನ ಅಂತ ಕಾಣತ್ತಮ್ಮ, ದಾಸ ಸಾಹಿತ್ಯ ಜೋರಾದ ಪರ್ವ ಕಾಲ. ನಮ್ಮ ದಾಸ ಮಹಾಶಯರು ಸಾಮಾಜಿಕ ವಿಡಂಬನೆ ಮಾಡಿ ಲೋಕದ ಡೊಂಕು ತಿದ್ದುತ್ತಾ ಇದ್ದರು. ನಮ್ಮ ಪುರಂದರ ದಾಸರು ‘ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ…’ಅನ್ನುವ ಬಲು ಘಾಟಿನ ಕೀರ್ತನೆ ರಚಿಸಿದ ಕಾಲ ಅದು.

ನಾಯಿ ಬಾಲದ ವಿಚಾರ ಹೇಳಪ್ಪ ಅಂದ್ರೇ……ರಾಗ ತೆಗೆದಳು

ಅಲ್ಲಿಗೇ ಬಂದೆ ಇರಮ್ಮ, ನಮ್ಮ ಸಮಾಜದಲ್ಲಿನ ನಾಯಕರು ಅಂತ ಅನ್ನಿಸಿಕೊಂಡ ಮಂದಿ ಸಮಾಜಸೇವೆ ಮಾಡದೇ ತಮ್ಮ ಹೊಟ್ಟೆ ತುಂಬಿಸಿಕೊಂಡು ಜನಸಾಮಾನ್ಯರನ್ನು ಕೀಳಗಿ ಕಾಣುವ ಬಗ್ಗೆ ಚಾಟಿ ಏಟಿನಂತೆ ದಾಸರೇನೋ ಕೀರ್ತನೆಯಲ್ಲಿ ಹೇಳಿದರು. ಆದರೆ ಇಂದಿಗೂ ತಿದ್ದಿಕೊಂಡರಾ? ಇಲ್ಲ ಅದೇ ಚಾಳಿ ಇದೆ. ಆಗ ನಮ್ಮ ನಾಯಿಗಳಿಗೆ ಬೇಸರ ಬಂತು.

ದಾಸರೇನೋ ಪದ್ಯ ಬರೆದರು; ಆದರೆ ನಮ್ಮ ಬಾಲ ಸೊಟ್ಟ ಇದ್ದದ್ದಕ್ಕೆ ತಾನೇ ಹೋಲಿಕೆ ಕೊಟ್ಟಿದ್ದಂತ ಇಡೀ ನಾಯಿ ಸಮೂಹ ಬ್ರಹ್ಮನ ಬಳಿ ಬಂದು ದೂರು ದಾಖಲಿಸಿದವು . ವಿಚಾರಣೆಗೆ ಕಾದು ಕಾದು ಸಾಕಾಗಿ ಹೋಯಿತು. ಇಂದು ಈಗ ನಾಳೆ ನಾಡಿದ್ದು ಅಂತ ತಾರೀಕುಗಳು ಸಿಕ್ಕವೇ ಹೊರತು ಬ್ರಹ್ಮದರ್ಶನ ನಮ್ಮ ನಾಯಿಗಳಿಗೆ ಆಗಲೂ ಇಲ್ಲ ,ಪರಿಹಾರ ಸಿಗಲೂ ಇಲ್ಲ!

ಅಲ್ಲಿದ್ದ ಸೇವಕರು ಒಬ್ಬೊಬ್ಬರು ಒಂದೊಂದು ಐಡಿಯಾ ಕೊಟ್ಟರು. ದಬ್ಬೆ ಕಟ್ಟಿ ವಾರ ಕಾದರು, ಬಾಲ ನೆಟ್ಟಗಾಗಲಿಲ್ಲ. ಪೈಪಲ್ಲಿ ಬಾಲ ಇಟ್ಟು ನೇರ ಮಾಡಿ ಹಗ್ಗ ಕಟ್ಟಿ ತಿಂಗಳು ಕಾದರು, ಪ್ರಯೋಜನವಾಗಲಿಲ್ಲ. ಕಾದ ಕಬ್ಬಿಣ ಬಾಲದ ಎರಡೂ ತುದಿಗೆ ಅಪ್ಪಚ್ಚಿ ಮಾಡಿ ನೆಟ್ಟಗೆ ಮಾಡಿದರು. ಕೆಲದಿನಗಳ ನಂತರ ಯಥಾ ರೀತಿಯಲ್ಲಿ ಸೊಟ್ಟ!

ಬ್ರಹ್ಮಲೋಕದಲ್ಲಿ ಏನೆಲ್ಲಾ ಪ್ರಯತ್ನ ಮಾಡಿದರೂ ಉಪಯೋಗವಾಗಲಿಲ್ಲ. ಹೇಗೂ ಇಲ್ಲಿಯವರೆಗೆ  ಬಂದಾಗಿದೆ, ಬ್ರಹ್ಮನ ದರ್ಶನವಾದರೂ ಮಾಡದೇ ಹೋಗಬಾರದಂತ ಕಳ್ಳ ಮಾರ್ಗದಿ ಅವನ ಆಸ್ಥಾನಕ್ಕೆ ನುಗ್ಗಿ ನೋಡಿದರೇ..

ಬ್ರಹ್ಮ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ ! ಈ ನಾಯಿ ಗುಂಪಿಗೇ  ಅಚ್ಚರಿ. ಇಡೀ ಮೂಲೋಕ ಸೃಷ್ಟಿಸಿದ ಇವನು ಹೀಗೆ ಮಂತ್ರಿಗಿರಿ ಕಳೆದುಕೊಂಡ ರಾಜಕಾಋಣಿಯಂತೆ ಮಂಕಾಗಿ ಏಕೆ ಕೂತಿರಬಹುದು? ನಾವೇನೋ ಯಕಃಶ್ಚಿತ್ ಶ್ವಾನಗಳು. ನಮ್ಮದು ಸಮಸ್ಯೆ ಅಲ್ಲದ ಸಮಸ್ಯೆ. ಬ್ರಹ್ಮನಿಗೇನಾಗಿದೆ? ಒಂದು ದೊಡ್ಡ ನಾಯಿ ಜೋರಾಗಿ ಬೊಗಳಿ ಬ್ರಹ್ಮನ ಚಿತ್ತ ಕದಡಿ ಇತ್ತ ತಿರುಗುವಂತೆ ಮಾಡಿತು.

ಬಂದ ತಮ್ಮ ಸಮಸ್ಯೆ ಮರೆತು ‘ಏನಾಯಿತು ಬ್ರಹ್ಮೇಂದ್ರ? ಆಕಾಶ ಕಳಚಲು ನೀ ಭೂಮಿ ಮೇಲಿಲ್ಲ, ಆಕಾಶ ಕಾಯದಾಚೆ ಇದ್ದೀಯ, ಕಳೆದುಕೊಳ್ಳಲು ಏನಿದೆ ನಿನ್ನ ಬಳಿ? ಆದದ್ದೇನು? ಚಿಕ್ಕ ನಾಯಿಯೊಂದು ಕೇಳಿತು.

ತಲೆಯಿಂದ ಕೈಯಿಳಿಸಿ ಕುಳೀತುಕೊಂಡೇ ಹೇಳಿದ ‘ಅಯ್ಯೋ  ಶ್ವಾನಗಳಿರಾ  ನನ್ನ ಸಮಸ್ಯೆ ಕೇಳುವಿರಾ? ಈಗ ನೀವೇ ನೋಡಿದಿರಿಲ್ಲಾ, ನಾ ತಲೆಮೇಲೆ ಕೈ ಹೊತ್ತು ಕೂತಿದ್ದು?’

‘ಹೌದು ನೋಡಿದೆವು, ಅದಕ್ಕೆ ಕೇಳುತ್ತಿರುವುದು’ ಗುಂಪಿನಲ್ಲಿ ಸದ್ದು ಬಂತು.

‘ಒಂದು ತಲೆ ಮೇಲೆ ನನ್ನೆರೆಡು ಕೈಗಳು ಇದ್ದವು,  ಇನ್ನು ಮೂರು ತಲೆ ಖಾಲಿ ಇದ್ದವಲ್ಲಾ? ಅವು ಬೇಸರಾಗಲ್ಲವಾ? ಅಥವಾ ನನಗೆ ನಾಲ್ಕು ಮುಖವಾದರೂ ಏಕೆ ? ನಾ ಸುಂದರ ಅಲ್ಲ ಅಂತ ನನ್ನ ಮಡದಿ ಭಾವಿಸಬಹುದೇನೋ ಅನ್ನುವ ಕೀಳರಿಮೆ ಕಾಡುತ್ತಿದೆ.

ಅಯ್ಯೋ ಇದೇನಿದು ಇಂಥಾ ಸಮಸ್ಯೆ? ಮೊದಲು ಬೊಗಳಿದ ನಾಯಿಯ ಪ್ರಶ್ನೆ.

‘ಹುನ್ರಯ್ಯಾ ನಂಗೂ ಚತುರ್ಮುಖ ಅನ್ನಿಸಿಕೊಳ್ಳೋದು ಮೊದ ಮೊದಲು ಖುಷಿ ಇತ್ತು, ಕ್ರಮೇಣ ಅದರ ಪಾಡು ಗೊತ್ತಾಗಿ ಗೋಳಾಡಂಗಾಗಿದೆ, ಹೇಳಿ ನನ್ನ ಸಮಸ್ಯೆಗೆ ಉತ್ತರ ಯಾರಲ್ಲಿದೆ?

ಎಲ್ಲಾ ನಾಯಿಗಳು ಮುಖ ಮುಖ ನೋಡಿಕೊಂಡು ‘ಹನುಮಂತಪ್ಪ ಹಗ್ಗ ಕಡಿಯುವಾಗ ಪೂಜಾರಪ್ಪ ಶಾವಿಗೆ ಕೇಳಿದ್ನಂತೆ ’ ಅನ್ನುವಂತಾಯಿತಲ್ಲ ಅಂದುಕೊಂಡವು.

‘ಸರಿ ನೀವೆಲ್ಲಾ ಯಾಕೆ ಬಂದಿರಿ, ನಿಮ್ಮ ಸಮಸ್ಯೆ ಏನು’ ಅಂದ ಬ್ರಹ್ಮನಿಗೆ ನಾಯಿಗಳು ಉತ್ತರ ಕೊಡದೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಆ ಲೋಕದಿಂದ ಮೌನವಾಗಿ ನಡೆದೇ ಬಿಟ್ಟವು.

ಬ್ರಹ್ಮ ಈಗ ಎದ್ದು ನಿಂತು ಜೋರಾಗಿ ನಕ್ಕ. ಮಡದಿ ತಲೆ ತುಂಬಾ ಹೂ ಮುಡಿಯುತ್ತಾ, ಜಡೆ ಮುಂದು ಮಾಡಿ ಬಂದು ‘ ಏಕೆ ಇಂತಹ ಆಟ ಕಟ್ಟಿದಿರಿ? ಪಾಪ ಆ ನಾಯಿಗಳ ಸಣ್ಣ ಸಮಸ್ಯೆ ಪರಿಹರಿಸಬಹುದಿತ್ತಲ್ಲಾ ?’ ಅಂತ ಅಂದಾಗ ಬ್ರಹ್ಮ ನಕ್ಕು ‘ದೇವಿ ಪ್ರಪಂಚದ ಸೃಷ್ಟಿಯೆಲ್ಲವೂ ಸೂಕ್ತವಾಗಿಯೇ ರಚನೆಯಾಗಿದೆ. ಅದರಲ್ಲಿ ಯಾವುದೇ ಲೋಪವಿಲ್ಲ. ಈಗ ಈ ನಾಯಿಗಳಿಗೆ ಸ್ಪಂದಿಸಿದರೆ ನಾಳೆ ಬೇರೆ ಬೇರೆ ಪ್ರಾಣಿಗಳು, ಪಕ್ಷಿಗಳು, ಕಡೆಗೆ ಮನುಷ್ಯರೂ ದೂರು ಹೊತ್ತು ತರವುದರಲ್ಲಿ ಅನುಮಾನವಿಲ್ಲ. ಅವುಗಳ ಬಾಲ ಸೊಟ್ಟ ಇರಬಹುದು, ಆದರೆ ನಿಯತ್ತು? ಅದು ಜಗದ್ವಿಖ್ಯಾತ ಅಲ್ಲವಾ? ಹಿಡಿ ಅನ್ನ ಹಾಕಿದ ಮನೆಯನ್ನು ಕಾಯುವ ಪ್ರಾಮಾಣಿಕತೆ ಸೂರ್ಯ ಚಂದ್ರ ಇರುವತನಕ ಮೆರೆಯುತ್ತದೆ ಅಲ್ಲವೇ? ನಮ್ಮಲ್ಲಿನ ಊನ ನೋಡುವುದಕ್ಕಿಂತ ಇರುವ ಧನಾತ್ಮಕ ಅಂಶ ನೋಡಿ ನಡೆಯಬೇಕು . ಆದ್ದರಿಂದ ನನ್ನ ಸಮಸ್ಯೆ ಹೇಳಿ ಸಾಗ ಹಾಕಿದೆ’. ಅಂದಾಗ ಮಡದಿ ನಕ್ಕು ಮೌನವಾದಳು.

ಇವಳ ಊಟವೂ ಮುಗಿದಿತ್ತು.

ಅಯ್ಯೋ ಹೌದಾ ಅಬ್ಬು….. ಪಾಪ ಅದ್ಕೆ ನಮ್ ಕರಿಯನ ಬಾಲ ಸೊಟ್ಟ, ಸಧ್ಯ ಅವುಗಳ ನಿಯತ್ತು ಮನುಷ್ಯ ಕಲಿತರೆ ಎಷ್ಟು ಚೆಂದ ಅಲ್ವಾ ಅಬ್ಬೂ?  ನಂಗ್ ನಿದ್ದೆ ಬರ್ತಿದೆ ಮಲಗ್ತೀನಂತ ಮಗಳೆದ್ದು ರೂಮಿಗೆ ನಡೆದಳು.

ಅವಳಮ್ಮ ಬಂದು ‘ಏನ್ರೀ….. ನೀವು ಹೇಳಿದ ಬ್ರಹ್ಮ ಲೋಕದ ಕತೆ ನಿಜನ?’ 

‘ನಿನ್ನ ಮಗಳ ಕೈಲಿ ಸಿಕ್ಕಿ ಹಾಕಿಕೊಳ್ಳಲಾದೀತಾ? ಅದಕ್ಕೆ ಕಾಲ್ಪನಿಕ ಒಂದು ಕತೆ ಹೇಳಿದೆ ಅಷ್ಟೆ!’

‘ಒಳ್ಳೆ ಅಪ್ಪ ಒಳ್ಳೆಯ ಮಗಳು ಬನ್ನಿ ಊಟ ಮಾಡಿ ಮಲಗಿ’ ಎನ್ನುತ್ತಾ ಒಳ ನಡೆದಳು!

**********************

2 thoughts on “ಬ್ರಹ್ಮ ನ ಸಮಸ್ಯೆ

Leave a Reply

Back To Top