ಪರಿಸರ ಕವನಗಳು

ಪುಸ್ತಕ ಸಂಗಾತಿ

ಪರಿಸರ ಕವನಗಳು

ಪರಿಸರ ಸಂರಕ್ಷಣೆ ಕುರಿತು ಈಗಾಗಲೇ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ, ಪರಿಸರ ಪ್ರೇಮಿ ಮತ್ತು ಹೋರಾಟಗಾರ ನಿವೃತ್ತ ಪ್ರಾಚಾರ್ಯ, ಶಿಕ್ಷಣ ತಜ್ಞ ಪ್ರೊ.ಜಿ.ಕೆ.ಖಡಬಡಿಯವರು ತಮ್ಮಎಂಭತ್ತರ ಇಳಿವಯಸ್ಸಿನಲ್ಲಿ, ಜ್ಞಾನ ಮತ್ತು ಅನುಭವದಫಲವಾಗಿ ಹೊರತಂದಿರುವ ಕವನ ಸಂಕಲನ  “ ಪರಿಸರ ಕವನಗಳು”. ಒಟ್ಟು ಇಪ್ಪತ್ತೊಂದು ಕವನಗಳನ್ನು ಒಳಗೊಂಡು ಚಿಕ್ಕದಾದರೂ ಚೊಕ್ಕವಾಗಿದೆ. ಕವನ ಸಂಕಲನವು ಅಭಿವೃದ್ದಿಯ ಹೆಸರಿನಲ್ಲಿ ಪರಿಸರದ ಮೇಲೆ ಮಾನವನು ಮಾಡುತ್ತಿರುವ ಅನ್ಯಾಯ,ಅನ್ಯಾಯದ ವಿರುದ್ದ ಜಾಗೃತಿ ಮತ್ತು ಸಂರಕ್ಷಣೆಯ ಎಲ್ಲಾ ಆಯಾಮಗಳಲ್ಲಿ ಅರಿವನ್ನು ಮೂಡಿಸುತ್ತವೆ. “ಪಶ್ಚಿಮ ಘಟ್ಟದ ಅಳಲು” ಎನ್ನುವ ಕವನವು

ಅಭಿವೃದ್ದಿ ಹೆಸರಲ್ಲಿ ನಡೆಯಿತು ಅನ್ಯಾಯ ಅಪಾರ

ತಲೆಎತ್ತಿದವು ಐಶಾರಾಮಿ

ರೆಸ್ಟೊರಂಟುಗಳು ಅಪಾರ

ಎನ್ನುತ್ತಾ ಪಶ್ಚಿಮ ಘಟ್ಟದ ಪರಿಸ್ಥಿತಿಯನ್ನು ಕವನ ರೂಪದಲ್ಲಿ ಓದುಗನ ಮುಂದಿಡುತ್ತಾರೆ. ‘ಜೀವರಕ್ಷಕ’ ಎನ್ನುವ ಕವನದಲ್ಲಿ ಓಝೋನ್ ಮಹತ್ವವನ್ನು ಸಾರುತ್ತಾರೆ.

ಹಾಕೋಣ ಬನ್ನಿ ಕಡಿವಾಣ ಸಿ.ಎಫ್.ಸಿ ವಿಷಕೆ

ಪಾಲಿಸೋಣ ಮೌಂಟ್ರೇಲ ಒಪ್ಪಂದದ ನಿಯಮಗಳ

“ಓಝೋನ ನಾಶದಿಂದಾಗುವ ಪರಿಣಾಮಗಳು” ಕವನದಲ್ಲಿದೆ.’ಪರಿಸರ ಸಂಕ್ರಾಂತಿ’ ಎನ್ನುವ ಕವನವು

ಹಬ್ಬ ಹುಣ್ಣಿಮೆಗಳು

ಭಾರತೀಯ ಸಂಸ್ಕೃತಿ,

ಸುಗ್ಗಿ ಸಂಭ್ರಮ

ಪರಿಸರ ಸಂಕ್ರಾಂತಿ

ನಮ್ಮ ಸಂಸ್ಕೃತಿಯ ಹಬ್ಬಗಳಲ್ಲಿ  ಪರಿಸರವನ್ನು ಪೂಜಿಸುವ ಹಬ್ಬಗಳೇ ಪ್ರಧಾನವಾಗಿವೆ. ಅವುಗಳನ್ನು ಅಚರಿಸುವ ಮೂಲಕವೂ ನಾವು ಪರಿಸರ ಸಂರಕ್ಷಣೆ ಮಾಡಬೇಕೆಂದು ತಿಳಿಸುತ್ತಾರೆ.”ಮನೆಗೊಂದು ಕೈತೋಟ “ಎನ್ನುವ ಕವನದಲ್ಲಿ  ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರು ವಹಿಸಿಕೊಳ್ಳಲು ಕೈತೋಟ ಸುಲಭ ದಾರಿ ಮತ್ತು ಅದರಿಂದಾಗುವ ಲಾಭಗಳನ್ನು ಕಾವ್ಯಾತ್ಮಕವಾಗಿ ಚಿತ್ರಿಸಿದ್ದಾರೆ.

“ಜೀವಸೆಲೆ ಸಹ್ಯಾದ್ರಿ”ಎನ್ನುವ ಕವನದಲ್ಲಿ ಜೀವಸಂಕುಲದ ಸಮತೋಲನಕ್ಕೆ ಸಹಾಯಕವಾಗಿರುವ ಸಹ್ಯಾದ್ರಿಯ ವರ್ಣನೆಯಿದೆ.

“ಮರದ ಅಳಲು” ಎನ್ನುವ ಕವನವು

“ಹೇ… ಮಾನವಾ

ಏನು ಸಾಧಿಸಿದೆ ನನ್ನ ಕಡಿದು..?”

ಎಂದು ಪ್ರಶ್ನಿಸುವ ಮರ ತನ್ನ ನೋವನ್ನು ತೋಡಿಕೊಳ್ಳುತ್ತದೆ.

“ನೋಡಿದಡೆ ಎಲ್ಲೆಡೆ ಕಸ ” ಎನ್ನುವ ಕವನವು, ಸ್ವಚ್ಚಭಾರತ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸೊಣ ಎನ್ನುತ,

“ ತ್ಯಾಜ್ಯ ವಿಲೇವಾರಿ

ಸಾಗಿದೆ ಆಮೆಗತಿಯಲ್ಲಿ

ಮಾಲಿನ್ಯ ಪರಿಸರದಿಂದ ಯಮಯಾತನೆಯಿಲ್ಲಿ” ಎನ್ನುವ ಸಾಲುಗಳು ಪರಿಸರ ಮಾಲಿನ್ಯದಿಂದಾಗುವ ಪರಿಣಾಮಗಳನ್ನು ಸಾರುತ್ತದೆ. ಕಸಮುಕ್ತ ಪರಿಸರವನ್ನು ನಿರ್ಮಾಣ ಮಾಡೋಣ ಎನ್ನುವ ಸಂದೇಶವನ್ನು ಸಾರುತ್ತದೆ.

 “ಪ್ಲಾಸ್ಟಿಕ್” ಕವನವು  

ಹಾದಿ ಬೀದಿ ಚರಂಡಿಯಲೆಲ್ಲಾ

ನೀನೇ ತುಂಬಿರುವೆ

ಮೂಕ ಪ್ರಾಣಿಗಳ ಹೊಟ್ಟೆ ಸೇರಿ ಪ್ರಾಣಕೆ ಕುತ್ತು ತಂದಿರುವೆ

ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಕ್ಕೆ ಜಾನುವಾರುಗಳು, ಜಲಚರಗಳು ಬಲಿಯಾಗುತ್ತಿರುವ ವಾಸ್ತವದ ಚಿತ್ರಣವನ್ನು ತೆರೆದಿಡುತ್ತದೆ. ಅಂತರ್ಜಲ’ ಕವನದಲ್ಲಿ,

“ ಮನುಕುಲಕೆ ಇಲ್ಲ

ಸದ್ಬಳಕೆಯ ಜ್ಞಾನ

ನದಿ ಕೆರೆಗಳನು ಮಾಡಿರುವನು ಮಲಿನ”. ಜಲಸಂಪನ್ಮೂಲಗಳ ಕಡೆಗೆ ನಮಗಿರುವ ದಿವ್ಯ ನಿರ್ಲಕ್ಷ್ಯದಿಂದಾಗಿ ನೀರು ಮಲಿನವಾಗುತ್ತದೆ. ನೀರನ್ನು ಸಂರಕ್ಷಿಸುವುದು ನಮ್ಮೆಲ್ಲರಿಗೂ ಸೇರಿದ್ದು ಎನ್ನುವ ಅರಿವನ್ನು ಕಟ್ಟಿಕೊಟ್ಟಿದ್ದಾರೆ.”ಪರಿಸರ ಪ್ರಜ್ಞೆ” ಕವನದಲ್ಲಿ “ಬೆಳೆಸಲು ಗಿಡಮರ ಕೈ ಜೋಡಿಸೊಣ ನೆಲ ಜಲ ವಾಯು ನಿರ್ಮಲಗೊಳಿಸೊಣ “ ವೆಂದು ಕರೆ ನೀಡುತ್ತಾರೆ. ಹೀಗೆ ಇಡೀ ಕವನ ಸಂಕಲನವು ಪರಿಸರ ಸಂರಕ್ಷಣೆಯ ಕುರಿತಾದ ಸಂದೇಶಗಳನ್ನು ಸಾರುತ್ತ ಓದುಗರಲ್ಲಿ ಪರಿಸರ ಜಾಗ್ರತಿಯನ್ನು ಮೂಡಿಸುತ್ತದೆ. ಕ್ಲಿಷ್ಟಕರವಾದ ವಿಷಯವನ್ನು ಕವನದ ಭಾಷೆಯಲ್ಲಿ ಹೇಳುವ ಅವರ ಮೊದಲ ಪ್ರಯತ್ನ

ಯಶಸ್ವಿಯಾಗಿದೆ ಎಂದು ಹೇಳಬಹುದು.

***

ಡಾ.ನಿರ್ಮಲಾ ಬಟ್ಟಲ

2 thoughts on “ಪರಿಸರ ಕವನಗಳು

Leave a Reply

Back To Top