ಕಥೆ
ಮೀನಾಕ್ಷಿ
ಗಣಪತಿ ಹೆಗಡೆ
ರಾಮಣ್ಣನಿಗೆ ಆಗುತ್ತಿರುವ ಮಾನಸಿಕ ಹೊಯ್ದಾಟಕ್ಕೆ ಕಾರಣ ಇಲ್ಲದೆ ಇಲ್ಲ. ಇವನೊಬ್ಬ ಪಾಪದವ. ಪಾಪದವ ಅಂದರೆ ಏನೂ ತಿಳಿಯದ ಹೆಡ್ಡ ಅಂತ ಅಲ್ಲ. ಹಾಗೂ ಅರ್ಥ ಮಾಡುವವರಿದ್ದಾರೆ ಅನ್ನಿ. ಈಗಿನ ಕಾಲದ ಜನರೇ ಹಾಗೆ. ಯಾವುದಾದರೂ ಸುದ್ಧಿ ಮಾಡುವವರೋ ಅಥವಾ ಸುದ್ಧಿಯಾಗುವವರೋ ಇದ್ದರೆ, ಅವರೇ ಸಿದ್ಧರು ಹಾಗೂ ಪ್ರಸಿದ್ಧರು.
ಪಾಪದವ ಅಂದರೆ, ಯಾರಿಗೂ ತೊಂದರೆ ಕೊಡುವವನಲ್ಲ ರಾಮಣ್ಣ. ‘ರಾಯರೆ, ನಾವು ಬೇರೆಯವರಿಗೆ ಉಪಕಾರ ಮಾಡಬೇಕು. ಸಾಧ್ಯವಾಗದೇ ಇದ್ದಲ್ಲಿ ಅಪಕಾರವನ್ನಾದರೂ ಮಾಡಬಾರದು’. ಇದು ರಾಮಣ್ಣನ ನೀತಿ. ಬೇರೆಯವರಲ್ಲಿ ಯಾವಾಗಲೂ ಹಿತವನ್ನೇ ಬಯಸುವವನು.
ಇಂತಹ ರಾಮಣ್ಣನಲ್ಲಿ ಡ್ರೈವರ್ ಹನುಮಂತು ಹೇಳಿದ ‘ರಾಮಣ್ಣನವರೆ, ಯಾಕೋ ನನಗೆ ಇದು ಸರಿ ಅನಿಸುವದಿಲ್ಲ.’ ರಾಮಣ್ಣನವರಿಗೆ ಗೊತ್ತು. ಹನುಮಂತು ಮಾತಿಗೆ ಪ್ರಾರಂಭಿಸಿದರೆ ಹೀಗೆ. ಅವನದು ಅನಿಸಿಕೆ ಅಲ್ಲ. ನಿರ್ಣಯ. ನಾವು ಒಪ್ಪಲೇ ಬೇಕು. ವಿಷಯ ಆಮೇಲೆ ಹೇಳುವದು. ಆದರೂ ಕೇಳಿದರು. ‘ಏನು ಹನುಮಂತು, ನೀನು ಹೇಳುವದು?. ವಿಷಯ ಏನು? ಎಲ್ಲಿ?’
‘ಪಕ್ಕದ ಓಣಿಯ ಮೀನಾಕ್ಷಿ ಇದ್ದಾಳಲ್ಲ. ಅವಳ ಕಥೆ.’ ಕುತೂಹಲ ಹೆಚ್ಚಿತು ರಾಮಣ್ಣನಿಗೆ. ರಿಕ್ಷಾ ಡ್ರೈವರ್ ಹನುಮಂತು ಮುಂದುವರಿಸಿದ. ‘ಗಂಡನನ್ನು ನುಂಗಿದವಳು ಅವಳು. ಮಗ ಬೇರೆ ಇದ್ದಾನೆ. ಸಂಸಾರಂದಿಗರ ಮಧ್ಯೆ ಇರುವವಳು. ನಾನೇ ಸ್ವತಃ ನೋಡಿದ್ದೇನೆ ರಾಮಣ್ಣನವರೆ. ಮೊನ್ನೆ ಸಬ್ ರೆಜಿಸ್ಟ್ರಾರ್ ಕಚೇರಿಗೆ ಒಬ್ಬರನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದೆ, ಬಾಡಿಗೆಗೆ. ನನ್ನನ್ನು ಕಂಡು ಮುಜುಗರವಾಗಿರಬೇಕು. ಮುಖ ತಿರುವಿ ಹೋದಳು ಅವನ ಜೊತೆ.’
‘ಅವನ ಜೊತೆ ಅಂದರೆ?’ ರಾಮಣ್ಣ ಕೇಳಿದ. ‘ಅದೇ, ಮೋಹನನ ಜೊತೆ. ಅವಳ ಗಂಡ ವಿವೇಕನ ಆಫೀಸಿನಲ್ಲಿ ಕೆಲಸ ಮಾಡುತ್ತಾನಲ್ಲ? ಅವನು. ಮೋಹನನ ಕಾರಿನಲ್ಲಿ ಅವಳು ಹೋಗುವದನ್ನು ನಾನೇ ನೋಡಿದ್ದೇನೆ ಬಿಡಿ. ರಿಕ್ಷಾದಲ್ಲಿ ಬಾಡಿಗೆಗೆ ಹೋಗಿದ್ದಾನಲ್ಲ, ತಿರುಗಿ ಬರುವಾಗ ಅವನಲ್ಲಿ ಕೇಳಿದೆ, ಅವರು ಯಾಕೆ ಬಂದಿದ್ದಾರೆ ಅಂತ. ಏನೋ ರೆಜಿಸ್ಟ್ರೇಶನ್ನಿಗೆ ಇರಬೇಕು, ಅಂತ ಹೇಳಿದರು. ರಾಮಣ್ಣನವರೆ, ಗಂಡ ಸತ್ತು ಒಂದು ತಿಂಗಳು ಕಳೆಯಲಿಲ್ಲ. ಈಗಲೇ ಅವಸರವೇನಿತ್ತು ಮದುವೆಯಾಗಲು. ಮತ್ತೊಂದು ವಿಷಯ ಗೊತ್ತಾ ನಿಮಗೆ? ಬಹಳ ದಿನಗಳಿಂದ ಅವರ ಕುರಿತಾಗಿ ಜನರು ಹೇಳಿಕೊಳ್ಳುತ್ತಿದ್ದರು. ವಿವೇಕ ಅದನ್ನೇ ಮನಸಿಗೆ ಹಚ್ಚಿಕೊಂಡು ತೀರಿಹೋದ ಎನ್ನುವವರೂ ಇದ್ದಾರೆ. ಅದೆಲ್ಲಾ ನನಗೇಕೆ ಬಿಡಿ. ಮಾಡಿದವರ ಪಾಪ ಆಡಿದವರಿಗೆ.’
ಹನುಮಂತುವಿನ ವಾರ್ತಾಪತ್ರಿಕೆಗೆ ನಿಯಂತ್ರಣ ಇಲ್ಲ ಅಂತ ಗೊತ್ತಿದ್ದರೂ, ಮೀನಾಕ್ಷಿಯ ಕುರಿತಾದ ಅವನ ಹೇಳಿಕೆ ಯಾಕೋ ರಾಮಣ್ಣನ ಮನಸ್ಸಿಗೆ ಬೇಸರವನ್ನುಂಟು ಮಾಡಿತು.
ರಾಮಣ್ಣನ ಮನಸ್ಸು ಸ್ವಲ್ಪ ಹಿಂದಕ್ಕೆ ಓಡಿತು. ವಿವೇಕ ಹಾಗೂ ಮೋಹನ ನನಗೆ ಗೊತ್ತಿರುವವರೆ. ವಿವೇಕ ನನ್ನ ಮನೆಯ ಪಕ್ಕದ ಬೀದಿಯಲ್ಲಿರುವವ. ಬಾಡಿಗೆ ಮನೆ. ದಾವಣಗೆರೆ ಕಡೆಯವ. ಸರಕಾರಿ ಆಫೀಸಿನಲ್ಲಿ ಕೆಲಸ. ಊರಿನಲ್ಲಿ ತಂದೆ ಹಾಗೂ ತಾಯಿ ಇದ್ದಾರೆ ಅಂತ ಹೇಳುತ್ತಿದ್ದ. ಮೂವತ್ತೈದರ ಆಜುಬಾಜು ವಯಸ್ಸು. ಏಳು ವರ್ಷದ ಹಿಂದೆ ಮದುವೆಯಾಗಿ ಹೆಂಡತಿಯೊಡನೆ ಪಕ್ಕದ ಓಣಿಯಲ್ಲೇ ಬಿಡಾರ ಮಾಡಿದ್ದ. ಹೆಂಡತಿಯ ಊರು ಹಾವೇರಿ ಕಡೆಯಂತೆ. ಪಕ್ಕದ ಓಣಿಯಲ್ಲವೇ? ಬಂದ ಸ್ವಲ್ಪೇ ದಿನಕ್ಕೆ ಪರಿಚಯವಾಯಿತು. ಒಂದು ರೀತಿಯಲ್ಲಿ ಫೆಮಿಲಿ ಫ್ರೆಂಡ್ ಇದ್ದ ಹಾಗೆ. ಅವನದು ನನ್ನ ಮಗನ ವಯಸ್ಸು. ನನ್ನ ಮೊಮ್ಮಗ ನಚಿಕೇತ ಹಾಗೂ ಅವನ ಮಗ ಚೈತನ್ಯ ಒಂದೇ ಶಾಲೆಗೆ ಹೋಗುವವರು. ಒಂದೇ ಬಸ್ಸಿನಲ್ಲಿ. ಬೆಳಿಗ್ಗೆ ಎಂಟು ಗಂಟೆಗೆ ಬಸ್ ಸ್ಟೋಪಿನಲ್ಲಿ ನಾನು ನಚಿಕೇತನನ್ನು ಶಾಲೆಗೆ ಬಿಡಲು ಹೋಗುವಾಗ ವಿವೇಕ ಅಥವಾ ಮೀನಾಕ್ಷಿ ಚೈತನ್ಯನ ಜೊತೆ ನಿಂದಿರುತ್ತಿದ್ದರು.
ಮೀನಾಕ್ಷಿ ಸರಕಾರೀ ಶಾಲೆಯಲ್ಲಿ ಶಿಕ್ಷಕಿ. ಮದುವೆಗೆ ಮೊದಲೇ ಬಿ.ಎಸ್.ಸಿ: ಬೀ.ಎಡ್. ಪದವಿ ಮುಗಿಸಿದ್ದಳಂತೆ. ಹಾವೇರಿಯ ಬಳಿ ಖಾಸಗೀ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳಂತೆ. ಪಗಾರಿಗಿಂತ ಮುಖ್ಯವಾಗಿ ಟೈಂಪಾಸ್ ಹಾಗೂ ಅನುಭವ ಅಂತ ಕೆಲಸಮಾಡುತ್ತಿದ್ದಳಂತೆ. ಒಮ್ಮೆ ಅವಳೇ ಹೇಳಿದ್ದಳು. ಮದುವೆಯಾದ ಮೇಲೆ ನೌಕರಿಗೆ ಪ್ರಯತ್ನಿಸುತ್ತಿದ್ದಳು. ಅಷ್ಟರಲ್ಲಿ ಚೈತನ್ಯನ ಜನನವಾಯಿತು. ಅವನಿಗೆ ಎರಡು ವರ್ಷವಾದ ಮೇಲೆ ನೌಕರಿ ಪಡೆದುಕೊಂಡಿದ್ದಳು. ಸಿಟಿ ಮಾರ್ಕೆಟ್ ಹತ್ತಿರ ಶಾಲೆ. ಶಾಲೆಗೆ ಬಸ್ಸಿನಲ್ಲಿ ಹೋಗಿ ಬಂದು ಮಾಡುತ್ತಿದ್ದಳು. ಬೆಳಿಗ್ಗೆ ಮಗನನ್ನು ಶಾಲಾ ಬಸ್ಸಿಗೆ ಹತ್ತಿಸಿ ಎಂಟು ಘಂಟೆ ಬಸ್ಸಿಗೆ ಶಾಲೆಗೆ ಹೊರಟವಳು ಸಾಯಂಕಾಲ ಐದಕ್ಕೆಲ್ಲಾ ಬಂದು ಬಿಡುತ್ತಿದ್ದಳು. ಅವಳು ಬಂದ ನಂತರ ಮನೆಗೆಲಸದವಳು ಹೊರಟು ಬಿಡುತ್ತಿದ್ದಳು.
ಆಗಾಗ ವಿವೇಕನ ತಂದೆ ತಾಯಿ ವಿವೇಕನ ಮನೆಗೆ ಬಂದು ಹತ್ತು ಹದಿನೈದು ದಿನ ಇದ್ದು ಹೋಗುತ್ತಿದ್ದರು. ಪಾರ್ಕಿಗೆ ಅವರೂ ಬರುತ್ತಿದ್ದರು. ಅಲ್ಲಿ ನಮ್ಮ ಭೇಟಿಯಾಗುತ್ತಿತ್ತು. ರಜಾದಿನಗಳಲ್ಲಿ ನಚಿಕೇತ ಹಾಗೂ ಚೈತನ್ಯರೂ ಕೂಡುತ್ತಿದ್ದರು. ಅವರದು ದಾವಣಗೆರೆಯ ಸಮೀಪದ ಹಳ್ಳಿ. ಅವರೂ ಸರಕಾರಿ ನೌಕರಿಯಲ್ಲಿದ್ದವರೆ. ಈಗ ರಿಟೈರ್ ಆದಮೇಲೆ ಊರಿನಲ್ಲೇ ಸೆಟಲ್ ಆಗಿದ್ದಾರಂತೆ.
ಮೋಹನನದು ವಿವೇಕನ ಆಫೀಸಿನಲ್ಲಿಯೇ ಕೆಲಸ. ಜ್ಯೂನಿಯರ್. ಮೂಲ ಬೆಂಗಳೂರಿನವನೇ. ಜಯನಗರದಲ್ಲಿ ಮನೆ. ತಂದೆ ತಾಯಿಯರ ಜೊತೆ ವಾಸ. ಒಂದೇ ಆಫೀಸಿನಲ್ಲಿ ಕೆಲಸವಾದುದರಿಂದ, ಸಹಜವಾಗಿಯೇ ಆಗಾಗ ವಿವೇಕನ ಮನೆಗೆ ಬಂದು ಹೋಗುತ್ತಿದ್ದ. ನನಗೂ ಪರಿಚಯದವನೇ. ಒಳ್ಳೆಯವನ ಹಾಗೆ ಕಾಣುತ್ತಿದ್ದ.
ಈಗ ಹನುಮಂತು ಹೀಗೆ ಹೇಳುತ್ತಿದ್ದಾನೆ. ಅವನು ಹೇಳುವದೇ ಹಾಗೆ. ಸಾಕ್ಷಿ ಸಮೇತ ಸಿಕ್ಕಿಬಿದ್ದ ನ್ಯಾಯಾಲಯದಲ್ಲಿಯ ನಿರ್ಣಯದ ಹಾಗೆ. ಮೀನಾಕ್ಷಿಗೂ ಮೋಹನನಿಗೂ ರಜಿಸ್ಟ್ರಾರ್ ಆಫೀಸಿನಲ್ಲಿ ರೆಜಿಸ್ಟರ್ ಮದುವೆಯಾಯಿತು. ನಂಬದೇ ಇರಲು ಕಾರಣವೆಲ್ಲಿ?
ವಿವೇಕ ಆರೋಗ್ಯವಾಗಿಯೇ ಇದ್ದ. ಮರಣ ಹೊಂದುವ ವಯಸ್ಸಲ್ಲ. ಎರಡು ಮೂರು ತಿಂಗಳುಗಳ ಹಿಂದೆ ತಲೆ ನೋವು ಅಂತ ಹೇಳುತ್ತಿದ್ದನಂತೆ. ಎಮ್.ಆರ್.ಆಯ್ ಮಾಡಿಸಿದ್ದರು. ಮೆದುಳಿನಲ್ಲಿ ಸಣ್ಣ ಗಡ್ಡೆಯ ಆಕಾರ ಇದೆ. ಆಪರೇಶನ್ ಅವಶ್ಯಕತೆಇಲ್ಲ. ಔಷಧಿಯಲ್ಲಿಯೇ ಕಡಿಮೆಯಾಗುತ್ತದೆ ಅಂತ ಮಣಿಪಾಲದಲ್ಲಿಯ ಡಾಕ್ಟರರು ಹೇಳಿದ್ದರಂತೆ. ವಿಧಿಯ ಆಟ ಮೀರುವವರಾರು?. ಒಂದೇ ವಾರದಲ್ಲಿ ಪುನಃ ತಲೆ ನೋವು ಬಂದು ಆಸ್ಪತ್ರೆಗೆ ದಾಖಲು ಮಾಡಿದರು. ಹಿಂತಿರುಗಿ ಬರಲಿಲ್ಲ.
ರಾಮಣ್ಣನವರು ಶಾಂತವಾಗಿಯೇ ವಿಚಾರಿಸುವವರು. ‘ತಪ್ಪೇನು? ಪಾಪ ಎಳೇ ಹುಡುಗಿ. ಮಗನೂ ಸಣ್ಣವ. ಬೆಂಗಳೂರಿನಲ್ಲಿ ವಾಸ. ಮೋಹನನಿಗೂ ಮದುವೆಯಾಗಿಲ್ಲ. ಹೆಚ್ಚೂ ಕಡಿಮೆ ಮೀನಾಕ್ಷಿಯದೇ ವಯಸ್ಸು ಅನ್ನಿ. ಗುಣ- ಸ್ವಭಾವಗಳ ಪೂರ್ಣ ಪರಿಚಯ ಇದೆ. ಮಗ ಚೈತನ್ಯನಿಗೂ ಗೊತ್ತಿದೆ. ಬೆಂಗಳೂರಿನಲ್ಲಿ ಒಬ್ಬ ಗಂಡಿನ ಆಶ್ರಯ ಒಳ್ಳೆಯದೇ ಸರಿ’. ಸಮಾಧಾನ ಮಾಡಿಕೊಳ್ಳುವರು.
ಆದರೂ ಹಳೆಯ ಜಮಾನಾದವರಾದ ರಾಮಣ್ಣನವರಿಗೆ ವಿವೇಕನ ತಂದೆ ತಾಯಿಯರನ್ನು ನೆನೆದು ವ್ಯಥೆ ಯಾಗುತ್ತದೆ. ಎಷ್ಟೆಂದರೂ ಮುದಿ ಜೀವಗಳು. ಮಗ ಚೈತನ್ಯ ದೊಡ್ಡವನಾಗುತ್ತಿದ್ದಾನೆ. ಸ್ವಂತ ಸುಖದ ಕಡೆ ಲಕ್ಷ್ಯವಹಿಸದೆ ಅತ್ತೆ ಮಾವ ಹಾಗೂ ಮಗನ ಕಡೆ ಆಲೋಚಿಸಬಹುದಿತ್ತು ಅಂತಲೂ ಅನಿಸುತ್ತಿದೆ. ಮಗ ದೊಡ್ಡವನಾದ ಮೇಲೆ ಇವಳಿಗೆ ರಕ್ಷಣೆಯ ಅವಶ್ಯಕತೆಯೇನೂ ಇರಲಿಲ್ಲ. ಇದೇ ಕುರಿತ ದ್ವಂದ್ವ ಆಲೋಚನೆಯಲ್ಲಿಯೇ ಮನಸು ಉದ್ವೇಗದಲ್ಲಿದ್ದದ್ದು.
ರಾಮಣ್ಣನವರಿಗೆ ವಿಚಾರಮಾಡಲು ಬೇರೆ ವಿಷಯಗಳಿಲ್ಲವೇ? ಮೀನಾಕ್ಷಿಯ ಭವಿಷ್ಯವೋ, ಭೂತವೋ ಅವರಿಗೇನಾಗಬೇಕಿದೆ? ಜನವೂ ಹತ್ತಿರದವರಲ್ಲ, ವಿಷಯವೂ ಆಸಕ್ತಿದಾಯಕವಲ್ಲ. ಹತ್ತು ಹದಿನೈದು ದಿನದಲ್ಲಿ ಮರೆತರು.
ದಿನಗಳಿಗೇನು? ಉರುಳುವದೇ ಕೆಲಸ. ತಾನೂ ಉರುಳಿ ನಮ್ಮನ್ನೂ ಉರುಳಿಸುತ್ತವೆ. ಡ್ರೈವರ್ ಹನುಮಂತು ಮತ್ತೆ ಸಿಕ್ಕಿದ. ‘ರಾಮಣ್ಣನವರೇ ನಮಸ್ಕಾರ’ ಮಾತಿಗೆ ಪ್ರಾರಂಭಿಸಿದ. ಮತ್ತೆ ಮೀನಾಕ್ಷಿಯದೇ ಸುದ್ಧಿ. ಎಲ್ಲಾ ಅಧಿಕೃತ ಚಾನೆಲ್ ಇದ್ದ ಹಾಗೆ. ‘ಮೀನಾಕ್ಷಿ ಹಾಗೂ ಮೋಹನ ಮದುವೆಯಾದರೂ ಒಟ್ಟಿಗೆ ಇಲ್ಲ. ಮೀನಾಕ್ಷಿಯ ಅತ್ತೆ ಮಾವನವರಿಗೆ ಮನಸ್ಸಿರಲಿಲ್ಲವಂತೆ. ಮಗನನ್ನು ದಾವಣಗೆರೆಯ ಶಾಲೆಗೆ ವರ್ಗಾಯಿಸುವಂತೆ ಕೇಳಿ ಇಲ್ಲಿಯ ಶಾಲೆಗೆ ಅರ್ಜಿ ಹಾಕಿದ್ದಾರಂತೆ. ಮೋಹನ ಹಾಗೂ ಮೀನಾಕ್ಷಿ ಒಟ್ಟೊಟ್ಟಿಗೆ ಕಾರಿನಲ್ಲಿ ತಿರುಗುತ್ತಾರಂತೆ. ಅಂತೆ ಕಂತೆ ಯಾಕೆ ನಾನೇ ಸ್ವತಃ ನನ್ನ ಕಣ್ಣುಗಳಿಂದಲೇ ನೋಡಿದ್ದೇನೆ. ಮುಂದಿನ ವರ್ಷದ ಪ್ರಾರಂಭದಲ್ಲಿ ಮಗ ದಾವಣಗೆರೆಯ ಶಾಲೆಗೇ ಹೋಗುತ್ತಾನಂತೆ. ಮಗನನ್ನು ಅಜ್ಜ ಅಜ್ಜಿಯರ ಜೊತೆ ಕಳುಹಿಸಿ ಆಮೇಲೆ ಸ್ವತಂತ್ರವಾಗಿ ಬೆಂಗಳೂರಿನಲ್ಲಿ ಇರುತ್ತಾರಂತೆ’ . ಇವಿಷ್ಟು ಹನುಮಂತು ಸಂಗ್ರಹಿಸಿ ರಾಮಣ್ಣನವರಿಗೆ ಹಸ್ತಾಂತರಿಸಿದ ವಿಷಯ.
ಇದರಲ್ಲಿ ರಾಮಣ್ಣನವರಿಗೆ ಯಾವುದೇ ಆಸಕ್ತಿ ಇರಲಿಲ್ಲ. ‘ಯಾರೇ ಆದರೂ ತಮ್ಮ ಜೀವನವನ್ನು ಸರಿಯಾಗಿ ಸಾಗಿಸಿ ದಡಮುಟ್ಟಿದರೆ ಸಾಕು. ವೃಥಾ ಬೇರೆಯವರ ಜೀವನದಲ್ಲಿ ವೈಚಾರಿಕ ಅತಿಕ್ರಮಣ ಸಲ್ಲದು’ ಎಂದುಕೊಂಡವರು. ಹೂಂ ಅಂತಲೂ ಹೇಳಲಿಲ್ಲ ಉಹೂಂ ಅಂತಲೂ ಹೇಳಲಿಲ್ಲ. ಬೇರೆಯವರ ಸಂಸಾರದಲ್ಲಿ ಹುಳಿ ಕಾಣುವ ಅಥವಾ ಹುಳಿ ಹಿಂಡುವವರಿಗೆ ಪ್ರತಿಸ್ಪಂದನೆ ಇಲ್ಲದಿದ್ದರೆ ವೇಗವರ್ಧಕ ಇಲ್ಲದ ರಾಸಾಯನಿಕ ಕ್ರಿಯೆಯಂತೆ ಸ್ತಬ್ಧವಾಗಿ ಬಿಡುತ್ತದೆ. ಹನುಮಂತನ ಮಾತಿನ ವೇಗ ನಿಂತಿತು.
ಮುಂದಿನದನ್ನು ರಾಮಣ್ಣನವರ ಮಾತಿನಲ್ಲಿ ಕೇಳಿ.
ಸ್ವಲ್ಪೇದಿನದ ನಂತರ ನಮ್ಮ ಮನೆಯ ಗೇಟಿನ ಬಳಿ ಮೀನಾಕ್ಷಿಯು ಅವಳ ಮಗ ಹಾಗೂ ಮಾವನವರ ಜೊತೆ ಬರುವದು ಕಾಣಿಸಿತು. ನನ್ನ ಮೊಮ್ಮಗ ನಚಿಕೇತ ಹಾಗೂ ಮೀನಾಕ್ಷಿಯ ಮಗ ಚೈತನ್ಯ ಒಂದೇ ಕ್ಲಾಸಿನವರು. ಶಾಲೆಯ ಬಸ್ಸನ್ನು ಒಂದೇ ಕಡೆ ಹತ್ತುವದರಿಂದ ಅವರ ಕುಟುಂಬ ಸ್ವಲ್ಪ ಹತ್ತಿರ, ಅಷ್ಟೇ. ಪಾರ್ಕಿನಲ್ಲಿ ವಿವೇಕನ ಅಪ್ಪನನ್ನು ಚೈತನ್ಯನ ಜೊತೆ ಕೆಲವೊಮ್ಮೆ ಭೇಟಿಯಾದದ್ದು ಹೌದಾದರೂ ವೈಯಕ್ತಿಕವಾದ ಮಾತುಕತೆ ನಡೆಸುವಷ್ಷು ಸಲಿಗೆ ಇಲ್ಲ. ಪರಿಚಯ ಅಷ್ಟೇ. ಅದನ್ನೇ ಬೇಕಾದರೆ ಆತ್ಮೀಯತೆ ಎನ್ನಬಹುದು.
ಈಗ ನನ್ನನ್ನು ಭೇಟಿಯಾಗಲು ಯಾಕೆ ಬಂದರು? ಅವಳ ಹಾಗೂ ಮೋಹನನ ಮದುವೆಯ ಕುರಿತಾದ ವಿಚಾರವೇ? ವಿವೇಕನ ಆಸ್ತಿಯ ಹಂಚಿಕೆಯ ವಿಚಾರವೇ? ಚೈತನ್ಯನ ಶಾಲೆಯ ಬದಲಾವಣೆಯ ಕುರಿತೇ? ಇದರಲ್ಲಿ ಏನಾದರೂ ರಾಜಿ ಮಾಡಬೇಕೆಂದು ಕೋರಿ ಬಂದರೇ? ಹೇಗೂ ಮನೆಯ ಹತ್ತಿರ ಬಂದಿದ್ದಾರಲ್ಲ. ಏನು ಅಂತ ಅವರಿಂದಲೇ ಕೇಳೋಣ.
‘ಬನ್ನಿ ಬನ್ನಿ. ನೀವು ಬಂದಿದ್ದು ತುಂಬ ಸಂತೋಷ.’ ಅವರನ್ನು ಮನೆಯ ಒಳಗಡೆ ಕರೆದು ಕೂಡ್ರಿಸಿದೆ. ‘ಇಲ್ಲಿ ನೋಡೆ. ಯಾರು ಬಂದಿದ್ದಾರೆ ಅಂತ.’ ಮನೆಯವರನ್ನು ಕರೆದು ಪರಿಚಯಿಸಿದೆ. ನಚಿಕೇತ, ಚೈತನ್ಯನ ಜೊತೆ ಕೂಡಿದ. ನನ್ನ ಮಗ-ಸೊಸೆ ಕೆಲಸದಿಂದ ಹಿಂದಿರುಗಿರಲಿಲ್ಲ. ಏನು ತೆಗೆದು ಕೊಳ್ಳುತ್ತೀರಿ. ಕಾಫಿನೋ ಅಥವಾ ಚಹನೋ? ನನ್ನ ಮನೆಯವಳು ವಿಚಾರಿಸಿದಳು. ಕಾಫಿ ಮಾಡಲು ಒಳ ಹೋದಳು.
‘ಅಂಕಲ್ ಹೇಗಿದ್ದೀರಿ?’ ಮಾತಿಗೆ ತೊಡಗಿದಳು ಮೀನಾಕ್ಷಿ. ಗಂಡನನ್ನು ಕಳೆದು ಕೊಂಡ ನಂತರ ಸರಿಯಾಗಿ ಮುಖಾಮುಖಿಯಾಗಿರದ ನನಗೆ ಮಾತನಾಡಲು ದಾರಿಮಾಡಿ ಕೊಟ್ಟಳು. ಏನಮ್ಮಾ.? ವಿಷಯ ತಿಳಿದು ಬೇಸರವಾಯಿತು. ನಾವು ನಾವು ಪಡೆದದ್ದನ್ನು ಅನುಭವಿಸಲೇ ಬೇಕಲ್ಲವೇ? ರಾಯರೇ ನೀವು ಯಾವಾಗ ಬಂದಿರಿ? . ಮೀನಾಕ್ಷಿ, ಏನಾದರೂ ಬೇಕಿದ್ದರೆ ನನ್ನಲ್ಲಿ ಕೇಳಮ್ಮ. ನಾನಾಗಲೀ ನನ್ನ ಮಗನಾಗಲೀ ಪ್ರಯತ್ನಿಸುತ್ತೇವೆ. ಬೇಕಾದರೆ ನನ್ನ ಕಾರನ್ನು ತೆಗೆದುಕೋ. ಓಡಾಟಕ್ಕೆ ಅನುಕೂಲವಾದೀತು. ಮುಂದೇನು ಮಾಡಬೇಕಿಂದಿರುವೆ?.
‘ಥೇಂಕ್ಸ್ ಅಂಕಲ್. ನಿಮ್ಮ ವಿಶ್ವಾಸಕ್ಕೆ ನಾನು ಋಣಿ. ನಿಮಗೆಲ್ಲಾ ಯಾಕೆ ತೊಂದರೆ. ನಮ್ಮ ಮನೆಯವರು ತೀರಿಕೊಂಡ ನಂತರ ಕೆಲವೊಂದು ಕೆಲಸಗಳನ್ನು ಮಾಡಬೇಕಿತ್ತು. ಮನೆಯವರ ಆಫೀಸಿನಿಂದ ಪೆನ್ಶನ್ ಅಂತೂ ಸಿಗುವದಿಲ್ಲ. ಪ್ರಾವಿಡೆಂಟ್ ಫಂಡು ಸೆಟ್ಲ ಆಗಬೇಕಿತ್ತು. ಇನ್ಶೂರೆನ್ಸ್ ಸಹ ಸೆಟ್ಲ ಆಗಬೇಕಿತ್ತು. ಅತ್ತೆ ಮಾವನವರಲ್ಲಿ ಇಲ್ಲಿಗೇ ಬಂದು ಉಳಿಯಿರಿ ಅಂದೆ. ಅವರು ಇಲ್ಲಿ ಬೇಡಮ್ಮ ದಾವಣಗೆರೆಗೇ ಬಾ ಅಂದರು. ನಾನು ಮಗನ ಜೊತೆ ದಾವಣಗೆರೆಗೆ ಹೋಗುವ ತಯಾರಿಯಲ್ಲಿದ್ದೇನೆ. ನನ್ನ ಮನೆಯವರ ಆಫೀಸಿನಲ್ಲಿದ್ದಾನಲ್ಲ ಮೋಹನ? ನನಗೆ ಅಣ್ಣನ ಹಾಗೆ ನಿಂತು ಸಹಕರಿಸಿದ. ಕೆಲವೊಂದು ದಿನ ರಜೆಯನ್ನೂ ಹಾಕಿ ಅವನದೇ ಕಾರಿನಲ್ಲಿ ತಿರುಗಿ ಕೆಲಸ ಮುಗಿಸುವಲ್ಲಿ ಸಹಕರಿಸಿದ. ಚೈತನ್ಯನನ್ನು ಮುಂದಿನ ವರ್ಷ ದಾವಣಗೆರೆ ಶಾಲೆಗೆ ಹಾಕುವ ವಿಚಾರ ಇದೆ. ಆ ಕುರಿತು ಪ್ರಿನ್ಸಿಪಾಲರನ್ನು ಮೋಹನನೇ ಭೇಟಿಯಾಗಿದ್ದಾನೆ. ಬರುವ ಜೂನ್ ನಿಂದ ಅಲ್ಲೇ ಶಾಲೆ. ನನ್ನ ವರ್ಗಾವರ್ಗಿಯ ಸಮಸ್ಯೆಯೂ ಬಗೆಹರಿದಿದೆ. ದಾವಣಗೆರೆಗೇ ವರ್ಗದ ಆರ್ಡರ್ ದೊರಕಿದೆ. ನಮ್ಮದು ಒಂದು ಸೈಟು ಕೇ.ಆರ್.ಪುರಂ. ಹತ್ತಿರ ಇತ್ತು. ನನ್ನ ಹೆಸರಿನಲ್ಲೇ ಇತ್ತು. ಸ್ಟೇಟ್ ಬ್ಯಾಂಕಿನವರು ಮನೆ ಕಟ್ಟುವ ಒಪ್ಪಿಗೆಯ ಮೇಲೆ ಸಾಲ ಕೊಟ್ಟಿದ್ದರು. ಪಕ್ಕದಲ್ಲೇ ಮೋಹನನ ಸೈಟು ಇದೆ. ಇಲ್ಲಿ ನಮಗೆ ಯಾಕೆ ಸೈಟು? ಸಾಲ ತೀರಿಸಿ ಸೈಟನ್ನು ಮೋಹನನ ಹೆಸರಿಗೆ ವರ್ಗಾಯಿಸಿದೆ. ಸಬ್ ರೆಜಿಸ್ಟ್ರಾರ್ ಕಚೇರಿಗೆ ನಾವಿಬ್ಬರೂ ತಿರುಗಾಡಬೇಕಾಯಿತು. ಅಂತೂ ಕೆಲಸ ಆಯಿತು. ಅದೇ ಸಮಾಧಾನ. ನಿಮ್ಮನ್ನೊಮ್ಮೆ ಭೇಟಿಯಾಗೋಣ ಅಂತ ಬಂದೆ. ನಾಳೆ ದಾವಣಗೆರೆಗೆ ಹೊರಡುತ್ತಿದ್ದೇವೆ. ನೀವು ಆಂಟಿಯ ಜೊತೆ ದಾವಣಗೆರೆಗೆ ಬನ್ನಿರಿ.’ ಅಂದಳು.
ನನ್ನವಳು ಕಾಫೀ ತಿಂಡಿ ತಂದಳು. ಸಂತೋಷದಿಂದ ಎಲ್ಲರೂ ಕೂಡಿ ಮುಗಿಸಿದೆವು. ಮೀನಾಕ್ಷಿಯ ಮಾವನವರೂ ಅವರಲ್ಲಿಗೆ ಬರಲು ಆಮಂತ್ರಿಸಿದನರು. ನಾವು ಸಮ್ಮತಿಸಿದೆವು. ನಾನು, ನನ್ನ ಮನೆಯವಳು ಹಾಗೂ ನಚಿಕೇತ ಗೇಟಿನವರೆಗೆ ಹೋಗಿ ಅವರನ್ನು ಬೀಳ್ಕೊಟ್ಟೆವು. ನಾನು ಮನೆಯವಳಿಗೆ ಗೊತ್ತಾಗದ ಹಾಗೆ ಕಣ್ಣೊರಸಿಕೊಂಡೆ.
ನಾಲ್ಕು ದಿನ ಬಿಟ್ಟು ಡ್ರೈವರ್ ಹನುಮಂತು ಭೇಟಿಯಾದ. ‘ರಾಮಣ್ಣನವರೇ ವಿಷಯ ಕೇಳಿದ್ದೀರ? ‘
ಏನೋ ಅಂತ ಕೇಳಿದೆ.
“ಮೀನಾಕ್ಷಿ ದಾವಣಗೆರೆಗೆ ಹೋಗಿದ್ದಾಳಂತೆ. ಅಲ್ಲಿಯ ಆಸ್ತಿಯಲ್ಲಿ ಪಾಲು ತೆಗೆದುಕೊಂಡು ಬಂದು ಮೋಹನ ಹಾಗೂ ಅವಳು ಶಾಸ್ತ್ರೋಕ್ತ ಮದುವೆಯಾಗುತ್ತಾರಂತೆ.”
ಮಾಡಿದವರ ಪಾಪ ಆಡಿದವರಿಗೆ. ಸರಿ. ನಡೆಯದೇ ಇದ್ದದ್ದನ್ನು ಊಹಿಸಿ ಹೇಳಿದವರ ಪಾಪ? ಕೇಳಿದವರಿಗಲ್ಲವೇ? ಕಿವಿ ಮುಚ್ಚಿಕೊಂಡೆ.
*********
ಕಥೆ ಚೆನ್ನಾಗಿದೆ. ಸಮಾಜದಲ್ಲಿ ನಡೆಯುವುದೇ ಹೀಗೆ..ಊಹಾಪೋಹದ ಮಾತುಗಳು..ಮೀನಾಕ್ಷಿ ಯಂತಹ ಒಳ್ಳೆಯ ಹೆಣ್ಣಿನ ಹೆಸರು ಹಾಳು ಮಾಡುತ್ತಾರೆ.
ರಾಮಣ್ಣ ಮತ್ತು ಮೀನಾಕ್ಷಿಯ ಪಾತ್ರ ಚೆನ್ನಾಗಿ ಬಂದಿದೆ
ಸುದ್ದಿಗಳಿಗೆ ರೆಕ್ಕೆಪುಕ್ಕ ಹುಟ್ಟಿಕೊಳ್ಳುವುದೇ ಹೀಗೆ