ಕಾವ್ಯಯಾನ

ಮೌನದ ಮಡುವಿನೊಳಗೆ

White Lines

ಸಂತೆಬೆನ್ನೂರು ಫೈಜ್ನಾಟ್ರಾಜ್

ಮನಸ್ಸು ನೀರಿಂದ

ಹೊರಬಂದ ಮೀನು

ಇಂದಿನಿಂದ ಅಲ್ಲ

ಅಂದಿನಿಂದಲೂ…!

ಕಾರಣವಲ್ಲದ

ಕಾರಣಕ್ಕೆ ಸುಖಾ ಸುಮ್ಮನೆ

ಮಾತಿಗೆ ಮಾತು ಬೆಳೆದು’ಮೌನ’

ತಾಳಿ ತಿಂಗಳ ಮೇಲೆ ಹನ್ನರೆಡು

ದಿನಗಳಾದವು!

ದಾಂಪತ್ಯ ಆದಾಗ್ಯೂ

ನೂರಾರು ಕ್ಷಣಗಳನ್ನು

ಹೇಗೆಂದರೆ ಹಾಗೆ ಎಲ್ಲೆಂದರೆ ಅಲ್ಲಿ

ಸರಸದಿ ಹಾಡು ಹಳೆಯದಾದರೇನು

ಎಂಬಂತೆ  ಕಳೆದಿದ್ದೂ

ಒಂದು ‘ಮಾತು’

ನೂರು ಸುಖಗಳನ್ನು ಕೊಲ್ಲುತ್ತೆ ಅನ್ನೋದೆಷ್ಟು ಘಾಟು ಅಲ್ವಾ?

ಜಗಳ ಆಡೋದು

ಇಬ್ಬರಿಗೂ ಚಟ ಅಲ್ಲ,

ಚಾಳೀನೂ ಇಲ್ಲ.

ಒಣ ಅಹಂ ಇಷ್ಟು ಅಂತರ ತಂದಿರಿಸಿ

ನಮಗೇ ಇರುಸು-ಮುರುಸು   ಆದಂತಾಗಿದೆ.

ನಮ್ಮಗಳ ನಡುವಿನ

ಸಂತಾನಗಳ ಸಂಧಾನವೂ ಈಗೀಗ

ಸಫಲವಾಗದೇ’ಮೌನವೇ ಆಭರಣ…’

ಅಂದುಕೊಳ್ಳುತ್ತಲೇ  ಕಳ್ಳ ಮನಸ್ಸು

ಕದ್ದು ಕೂಡಾ ಪರಸ್ಪರ

ನೋಡಿಕೊಳ್ಳುತ್ತಿಲ್ಲ?

ಒಲವೆಂಬ ಒಲವು   ಮಾತುಗಳಿಂದಲೇ

ಶುರುವಾಗುತ್ತೆ ಅನ್ನುವಾಗಲೇ

ಮೌನ-ಕಣಿವೆ ತೋರಿಸುತ್ತೆ ಅನ್ನೋದು

ಈಗೀಗ ಈರ್ವರಿಗೂ ಪಥ್ಯವಾಗಿದೆ(?)

ಮೊದಲೇ ಹೇಳಿದೆನಲ್ಲಾ

ಅಹಂ ಅಡ್ಡ ಬಂದು ಒಂದು ಹಾಸಿಗೆಯ ಎರೆಡೆರಡಾಗಿ ಮಾಡಿ

ಮಧ್ಯರಾತ್ರಿ ಕೂಡಾ ಮೈ-ಕೈ ತಾಕಿದರೂ

ಬೆಚ್ಚಿಬೀಳೋ ತರಹ ಆಗಿದೆಯೆಂದರೆ ಮಾತುಗಳಿಗೆ

ಅದೆಷ್ಟು ಶಕ್ತಿ ಅಲ್ವಾ?

ಕಂಡೂ ಕಾಣದ ಪ್ರೀತಿಗೆ,

ಕೇಳಿಯೂ ಕೇಳದ ಒಳ ಮಾತಿಗೆ

ಇಬ್ಬರೂ ಕಿವಿ-ಮನ  ಕೊಡ್ತಾ ಇದ್ದೇವೆ.

ಗಂಡೆಂಬ ಅಥವಾ ಹೆಣ್ಣೆಂಬ ಅಗೋಚರ ಅಹಮಿಕೆ

ಅಡ್ಡಗೋಡೆ!   

ಅದರ ಮೇಲಿನ ಪ್ರೀತಿ ದೀಪ ಉರಿಯುತಿದೆ ಸರಿ,

ಅದರಡಿಯ ಕತ್ತಲು ನಮ್ಮ

ನಡುವೆ ಕಣ್ಣ ಪಟ್ಟಿಯಾಗಿದೆ!

ಒಂದೇ ಸೂರಿನಡಿ ಒಂದೇ ಮನಸ್ಸಿದೆಯಾದರೂ

ಮಾತುಗಳು ಒಂದೇಆಗಿಲ್ಲ.

ಮೌನ ರಾಜ್ಯದ ಒಳಗೆ ಪ್ರೀತಿ ಸೈನಿಕರೆಲ್ಲಾ ರೆಸ್ಟ್ ನಲ್ಲಿದ್ದಾರೆ ಏನು

ಮಾಡುವುದು?


Leave a Reply

Back To Top