ಕವಿತೆ
ಅನ್ನದಾತ
ವಿಜಯಲಕ್ಷ್ಮಿ ಕೊಟಗಿ
ಬರಗಾಲದ ಬಡಿತಕ್ಕೆ ಬರಗೆಟ್ಟ ಕೃಷಿಕನಿವ
ಬಾರದ ಮಳೆಗಾಗಿ ಮುಗಿಲಿಗೆ ಮುಖ ಮಾಡಿ
ಬಿರುಕು ನೆಲದಲಿ ಹಸಿರ ಹುಡಕ ಹೊಂಟಾನು
ಬೀರಪ್ಪದೇವರ ಹರಕೆ ಡೊಳ್ಳು ಬಾಜಭಜಂತ್ರಿ
ಬುತ್ತಿ ಚೆರಗ ಹೊತ್ತು ದಿಕ್ಕುದಿಕ್ಕಿಗೆ ಎರಚಿ
ಬೂದಿಬಸವಂಗೆ ಜಲಾಭಿಷೇಕವ ಮಾಡ್ಯಾನು
ಬೆಲೆ ಇಲ್ಲದಿದ್ದರೂ ಹರಿಸುತ ಬೆವರ ಧಾರೆ
ಬೇರಾವ ಕಸುಬು ಗೊತ್ತಿಲ್ಲ ಕೃಷಿಯಲ್ಲದೆ
ಬೈಗು ಬೆಳಗನು ಮಾಡಿ ಉತ್ತುಬಿತ್ಯಾನು
ಬೊಬ್ಬೆಯೆದ್ದ ಅಂಗೈಗೆ ಮದ್ದು ಮಾಡುವಷ್ಟಿಲ್ಲ
ಬೋಳು ನೆಲದಲಿ ಚಿಗುರೊಡೆದ ಹರುಷಕೆ
ಬೌದ್ಧಿಕವಾಗಿ ಅಕ್ಷರ ದಕ್ಕಿಲ್ಲದಿದ್ದರೂ ಪದಕಟ್ಟಿ ಹಾಡ್ಯಾನು
ಬಂಗಾರದ ಬೆಳೆಗೆ ಬೆಂಬಲ ಬೆಲೆ ದೊರಕಲು
ಬಹುಶಃ ರೈತನೇ ನಾಡ ದೊರೆಯಾದಾನು
ಅನ್ನದಾತನೆಂಬ ಅಭಿನಾಮಕೆ ಶರಣುಶರಣು
*****************