ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥೆ

ಅಗ್ನಿಸ್ಪರ್ಶ

ಗುರುರಾಜ ಶಾಸ್ತ್ರಿ

ಸಾರ್‌ ನಿಮ್ಮ ತಂದೆಗೆ ತುಂಬಾ ಹುಷಾರಿಲ್ಲ, ಕೋವಿಡ್‌ ಬಂದ ಹಾಗಿದೆ,  ಅಂತ ಫೋನಿನಲ್ಲಿ ಹೇಳಿದ ಶಿವರಾಮ.  ನೀವು ಯಾರು ಮಾತಾಡ್ತಾ ಇರೋದು ಎಂದ ಮಹೇಶ.  ಸಾರ್‌, ನಾನು ಶಿವರಾಮ, ನಿಮ್ಮ ಮನೆಯ ಮಹಡಿಯ ಮೇಲೆ ಇರುವ ರೂಮಿನಲ್ಲಿ ಬಾಡಿಗೆಗೆ ಇದ್ದೇನೆ.  ನೋಡಿ ಶಿವರಾಮ, ನಾನಿವಾಗ ಇರೋ ಪರಿಸ್ಥಿತಿಯಲ್ಲಿ ಸರ್ಜಾಪುರದಿಂದ  ಹನುಮಂತನಗರಕ್ಕೆ ಬರೋಕ್ಕೆ ಆಗೋಲ್ಲ.  ಒಂದು ಕೆಲಸ ಮಾಡಿ, ನೀವೇ ಬಿಬಿಎಮ್‌ಪಿ ಅವರಿಗೆ ಫೋನ್‌ ಮಾಡಿ ಅವರನ್ನು ಯಾವುದಾದರೂ ಆಸ್ಪತ್ರೆಗೆ ಸೇರಿಸಿ.  ನನಗೆ ನನ್ನ ಹೆಂಡತಿ ಮತ್ತು ಎರಡು ಪುಟ್ಟ ಮಕ್ಕಳು ಇದ್ದಾರೆ.  ನಾನು ಅಲ್ಲಿಗೆ ಬಂದು  ರಿಸ್ಕ್‌  ತೊಗೊಳೋದಕ್ಕಾಗೋಲ್ಲ. ಸರಿ ಸಾರ್‌, ನಿಮ್ಮ ತಮ್ಮ ಸುರೇಶಾನೂ ಹಾಗೇ ಹೇಳದರು.  ಪ್ರೈವೇಟ್‌ ಆಸ್ಪತ್ರೆಗೆ ಸೇರಿಸಬೇಡಿ, ಯಾವುದಾದರೂ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಎಂದರು.  ಈಗಾಗಲೇ ಅವರಿಗೆ ಎಂಬತ್ತು ವರ್ಷ, ಸುಮ್ಮನೆ ಈಗ ಅವರ ಮೇಲೆ ಐದಾರು ಲಕ್ಷ ಖರ್ಚು ಮಾಡೋದ್ರಲ್ಲಿ ಅರ್ಥ ಇಲ್ಲ ಅಲ್ವೇ ಶಿವರಾಮ ಎಂದ ಮಹೇಶ.  ಸರಿ ಸಾರ್‌, ಎಲ್ಲಾದರೂ ಸರ್ಕಾರಿ ಆಸ್ಪತ್ರೆಗೆ ಸೇರಿಸ್ತೀನಿ ಎಂದ ಶಿವರಾಮ.   ಮಕ್ಕಳಿಬ್ಬರೂ ಬೆಂಗಳೂರಿನಲ್ಲೇ ಇದ್ದರೂ, ಮಕ್ಕಳ ಮನೆಯಲ್ಲಿ ಮಡಿ, ಮೈಲಿಗೆ ಇವೆಲ್ಲಾ ಸರಿಹೋಗೋಲ್ಲ ಅಂತ ಶ್ಯಾಮರಾಯರು ಒಬ್ಬರೇ ತಾವೇ ಬೆಂಗಳೂರಿನಲ್ಲಿ  ಕಟ್ಟಿಸಿದ್ದ  ತಮ್ಮ ಸ್ವಂತ ಮನೆಯಲ್ಲಿದ್ದರು.  ಪಾಪ, ಬಾಡಿಗೆಗೆ ಇದ್ದ ಶಿವರಾಮನೇ ಈಗ ಅವರಿಗೆ ಆಪತ್ತಿಗಾದ ನಂಟ.

ಕೋವಿಡ್ ತೀವ್ರತೆ ಹೆಚ್ಚಿತ್ತು.  ಅದರಲ್ಲೂ ವಯ‌ಸ್ಸಾದವರು ಯಾರಾದರು ಕೋವಿಡ್‌ ಬಂದೂ ವಾಸಿಯಾಗಿ ಬದುಕಿ ಬಂದರೆ ಅವರನ್ನು ಯಮನನ್ನೇ ಗೆದ್ದು ಬಂದಿದ್ದಾರೆ ಎಂಬಂತೆ ಜನ ನೋಡುತ್ತಿದ್ದರು.  ಆದರೆ ಶ್ಯಾಮರಾಯರಿಗೆ ಯಮನನ್ನು ಗೆಲ್ಲೋ ಶಕ್ತಿ ಇರಲಿಲ್ಲ.  ಅವರು ಸಾವನ್ನಪ್ಪಿದರು.  ಪಾಪ ಶಿವರಾಮ ತಾನೇ ಏನು ಮಾಡಿಯಾನು.  ಸರ್ಕಾರಿ ಖೋಟಾದಲ್ಲಿ ಆಸ್ಪತ್ರೆಗೆ ಸೇರಿಸಿದ್ದಕ್ಕೆ ಹಣವಂತೂ ಏನೂ ಖರ್ಚಾಗಲಿಲ್ಲ.  ಮತ್ತೆ ಮಕ್ಕಳಿಗೆ ಫೋನ್‌ ಮಾಡಿದ ಶಿವರಾಮ.  ಸಾರ್‌ ಅಪ್ಪಾವ್ರು ಹೋಗಿಬಿಟ್ಟರು.  ಸರ್ಕಾರದವರೇ ಅಂತ್ಯ ಸಂಸ್ಕಾರ ಮಾಡ್ತಾರೆ.  ನಿಮ್ಮ ಕಡೆಯಿಂದ ಯಾರಾದರೂ ಇಬ್ಬರು ಮಾತ್ರ ದೇಹ ನೋಡಲು ಹಾಗೂ ಚಿತಾಗಾರದ ಒಳಗೆ ಹೋಗಲು ಅವಕಾಶ ಇದೆ.  ನೀವು ಅಣ್ಣತಮಂದಿರಿಬ್ಬರೂ ಬನ್ನಿ ಎಂದ.  ಇಬ್ಬರು ಮಕ್ಕಳದೂ ಒಂದೇ ಉತ್ತರ.  ಎಲ್ಲಾ ಮುಗಿದುಹೋದ ಮೇಲೆ, ನಾವು ಬಂದು ತಾನೆ ಏನು ಪ್ರಯೋಜನ.  ಶಿವರಾಮ ನಿನ್ನ ಗೂಗಲ್‌ ಪೇ ಗೆ ಒಂದಷ್ಟು ಹಣ ಹಾಕ್ತೀವಿ, ನೀನೇ ಅಗ್ನಿಸ್ಪರ್ಶ ಮಾಡು ಎಂದರು.  ಬೇರೆ ದಾರಿ ಇಲ್ಲದೇ, ಯಾವುದೋ ಊರಿನಿಂದ ಬಂದು ಇಲ್ಲೊಂದು ಅಗರಬತ್ತಿ ಕಂಪನಿಯಲ್ಲಿ ಸೇಲ್ಸ್‌ಮೆನ್‌ ಆಗಿದ್ದ ಶಿವರಾಮನಿಗೆ ತನ್ನ ಮನೆಯ ಮಾಲೀಕನ  ದೇಹಕ್ಕೆ ಅಗ್ನಿಸ್ಪರ್ಶ ಮಾಡಬೇಕಾಯಿತು. 

ಆದರೆ ಮಕ್ಕಳಿಬ್ಬರೂ ಕಾನ್ಫರೆನ್ಸ್‌ ಕಾಲಿನಲ್ಲಿ  ಶಿವರಾಮನೊಂದಿಗೆ ಅಂತ್ಯಕ್ರಿಯೆ ಮುಗಿಯುವವರೆವಿಗೂ  ಮಾತನಾಡುತ್ತಲೇ ಇದ್ದರು.   ವೀಡಿಯೋ  ಆನ್‌ ಮಾಡಿ, ಶ್ಯಾಮರಾಯರ ಮುಖವನ್ನು ಅವರಿಬ್ಬರಿಗೂ ತೋರಿಸಿದ್ದ ಶಿವರಾಮ. ಚಿತಾಗಾರದ ರಿಜಿಸ್ಟರ್‌ನಲ್ಲಿ ಶಿವರಾಮ, ಶ್ಯಾಮರಾಯರ ಮಗ ಎಂದು ಅಂತ್ಯಕ್ರಿಯೆ ಮಾಡುತ್ತಿರುವವರ ಹೆಸರು ಎಂಬ ಜಾಗದಲ್ಲಿ ಬರೆದ.  ಇದಕ್ಕೆ ತಮ್ಮ ಸಮ್ಮತಿ ಇದೆ ಎಂದು ವೀಡಿಯೋ ಕಾಲ್‌ನಲ್ಲಿದ್ದ ಮಕ್ಕಳಿಬ್ಬರೂ ಚಿತಾಗಾರದ ಅಧಿಕಾರಿಗಳಿಗೆ ತಿಳಿಸಿದರು.  ಅಪ್ಪನ ಡೆತ್‌ ಸರ್ಟಿಫಿಕೇಟ್‌  ತೊಗೋಳೋದಿದೆ, ಸಾದ್ಯವಾದರೆ ಶ್ರೀರಂಗಪಟ್ಟಣಕ್ಕೆ ಹೋಗಿ  ಅಪ್ಪನ ಅಸ್ಥಿಯನ್ನು  ಬಿಟ್ಟು ಬರಲು ಸಾಧ್ಯವೇ, ಎಂದು ವಿಚಾರಿಸಿದರು ಮಕ್ಕಳಿಬ್ಬರು.  ಶ್ಯಾಮರಾಯರಿಗೆ ಅಗ್ನಿಸ್ಪರ್ಶ ಮಾಡಿದ ತಕ್ಷಣವೇ ನಾನು ಅವರ ಮಗನಾದೆ ಸಾರ್.‌  ನಾನು ಹುಟ್ಟಿದ ಎರಡು ವರ್ಷಕ್ಕೆ ನನ್ನ ತಂದೆ ಸತ್ತರಂತೆ.  ಹಾಗಾಗಿ ಅವರೇನೂ ನನಗೆ ಜ್ಞಾಪಕವಿಲ್ಲ.   ನಿಮ್ಮ ತಂದೆಯ ಮೂಲಕ ನನಗೆ ಈ ಪಿತೃ ಕಾರ್ಯ ಮಾಡುವ ಹಾಗಾಯಿತು.  ಎಲ್ಲವನ್ನೂ ನಾನೇ ಮುಗಿಸಿಬಿಡುತ್ತೇನೆ ಬಿಡಿ.   ನಾನೊಬ್ಬ ಸಾಧಾರಣ ಸೇಲ್ಸ್‌ ಮೆನ್‌, ನನಗೆ ಸಂಬಳ ಜಾಸ್ತಿ ಇಲ್ಲ, ಹಾಗಾಗಿ ಈ ಕಾರ್ಯಗಳಿಗೆ ಹಣ ಬೇಕಾಗುತ್ತದೆ, ನೀವು ಕೊಡುವುದಾದರೆ ಸಂತೋಷ ಎಂದ ಶಿವರಾಮ.  ಇಬ್ಬರು ಮಕ್ಕಳು ಒಪ್ಪಿಕೊಂಡರು.

ಪರಿಚಯವಿದ್ದ ಪುರೋಹಿತರ ಮೂಲಕ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ  ಮಾಡಿಸಿ, ಯಾವುದು ಮುಖ್ಯವೋ ಆ ಕಾರ್ಯಗಳನ್ನು ಮಾತ್ರ ಮುಗಿಸಿ ಮನೆಗೆ ಬಂದ ಶಿವರಾಮ.  ಸಾರ್‌ ರವೆ ಉಂಡೆ, ಕಜ್ಜಾಯ ಪ್ರಸಾದ ತಂದಿದ್ದೇನೆ, ನಿಮಗೆ ತಂದು ಕೊಡಲೇ ಎಂದ.  ಬೇಡ ನಾವು ಮೂರು ತಿಂಗಳಿಂದ ಹೊರಗೆ ಏನೂ ತಿನ್ನುತ್ತಿಲ್ಲ, ತುಂಬಾ ಧನ್ಯವಾದಗಳು ಎಂದು ಹೇಳಿ ಮಕ್ಕಳಿಬ್ಬರು ಸೇರಿ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿ ಶಿವರಾಮನ ಖಾತೆಗೆ ಹಾಕಿದರು. 

ಇದಾಗಿ ಎರಡು ತಿಂಗಳಾಗಿತ್ತು.  ಒಂದು ದಿನ ಬೆಳಿಗ್ಗೆ ಶಿವರಾಮ ಕೆಲಸಕ್ಕೆ ಹೊರಡಲು ತಯಾರಿ ನಡೆಸುತ್ತಿದ್ದಾಗ, ಒಬ್ಬ ಲಾಯರ್‌ ಶಿವರಾಮನ ಹತ್ತಿರ ಬಂದು, ಶ್ಯಾಮರಾಯರ ದೇಹಕ್ಕೆ   ನೀನೇನ ಚಿತಾಗಾರದಲ್ಲಿ  ಅಗ್ನಿಸ್ಪರ್ಶ ಮಾಡಿದ್ದು ಎಂದು ಕೇಳಿದರು.  ಶಿವರಾಮನಿಗೆ ಭಯವಾಗಲು ಶುರುವಾಯಿತು.  ತನ್ನಿಂದೇನೋ ತಪ್ಪಾಗಿದೆ ಎಂದು ಊಹಿಸಿ, ಹೌದು ಸಾರ್‌, ಶ್ಯಾಮರಾಯರಿಗೆ ಆರೋಗ್ಯ   ಕೆಟ್ಟಿತ್ತು, ಆಗಲೇ ಮಕ್ಕಳಿಬ್ಬರಿಗೂ ಫೋನ್‌ ಮಾಡಿದೆ, ಆದರೆ ಅವರು ಬರಲಿಕ್ಕಾಗಲ್ಲ ಎಂದು ಹೇಳಿ ನನಗೆ ಶ್ಯಾಮರಾಯರನ್ನು ಆಸ್ಪ್ತರೆಗೆ ಸೇರಿಸಲು ಹೇಳಿದರು.  ಶ್ಯಾಮರಾಯರು ಸತ್ತಾಗಲೂ ಅವರು ಅದೇ ಉತ್ತರ ಕೊಟ್ಟರು.  ವೀಡಿಯೋ ಕಾಲ್‌ ಮಾಡಿದಾಗ ಚಿತಾಗಾರದ ಸಿಬ್ಬಂದಿಗೆ ನಾನೇ ಅಗ್ನಿಸ್ಪರ್ಶ ಮಾಡಲು ಅವರ ಒಪ್ಪಿಗೆ ಇದೆ ಎಂದು ಸೂಚಿಸಿದ್ದರು ಎಂದ ಶಿವರಾಮ.  ಕೇಳಿದ್ದಷ್ಟಕ್ಕೆ ಉತ್ತರ ಕೊಡು, ಕತೆ ಎಲ್ಲಾ ಹೇಳಬೇಡ.  ಅವರ ಮಕ್ಕಳಿಬ್ಬರನ್ನೂ ಮಾತನಾಡಿಸಿ ಆಯಿತು, ಅವರು ನೀನು ಹೇಳಿದ್ದೇ ಹೇಳಿದರು ಎಂದರು ಲಾಯರ್.  ಶಿವರಾಮ ಸ್ವಲ್ಪ ಸುಧಾರಿಸಿಕೊಂಡ.  ಸರಿ ಅವರ ಡೆತ್‌ ಸರ್ಟಿಫಿಕೇಟ್‌ ಎಲ್ಲಿ ಎಂದು ಕೇಳಿದಾಗ, ತನ್ನ ಮನೆಯ ಕಪಾಟಿನಲಿಟ್ಟಿದ್ದ ಡೆತ್‌ ಸರ್ಟಿಫಿಕೇಟ್‌ ತಂದು ಕೊಟ್ಟ. 

ಈ ಭಾನುವಾರ ಅವರ ಮಕ್ಕಳಿಬ್ಬರೂ ಆಸ್ತಿ ಹಂಚಿಕೆಗಾಗಿ ಈ ಮನೆಗೆ ಬರುತ್ತಿದ್ದಾರೆ.  ಮನೆಯೆಲ್ಲಾ ಸ್ವಲ್ಪ ಕ್ಲೀನ್‌ ಮಾಡಿಸಿಟ್ಟಿರು.  ಮಾತುಕತೆ ನಡೆಯುವಾಗ ಚಹ, ಕಾಫಿ ಬೇಕಾಗಬಹುದು, ನೀನೂ ಅಂದು ಇರಬೇಕು ಎಂದರು.  ಸರಿ ಎಂದ ಶಿವರಾಮ.

ಭಾನುವಾರ ಮಕ್ಕಳಿಬ್ಬರು ಮತ್ತು ಅವರ ಸಂಸಾರ ಎಲ್ಲರೂ ಶ್ಯಾಮರಾಯರ ಮನೆಗೆ ಬಂದರು.  ಶಿವರಾಮ ಸುಮಾರು ಎರಡು ವರ್ಷದಿಂದ ಬಾಡಿಗೆಗೆ ಇದ್ದ, ಆದರೆ ಎಂದೂ ಅವರನ್ನೆಲ್ಲಾ ನೋಡಿರಲಿಲ್ಲ. ಚಿತಾಗಾರದಿಂದ ವೀಡಿಯೋ ಕಾಲ್‌ ಮಾಡಿದಾಗಲೇ ಅವನು ಮಹೇಶ ಸುರೇಶನನ್ನು ನೋಡಿದ್ದು. ಲಾಯರ್‌ ಮಾತುಕತೆ ಆರಂಭಿಸಿ  ಶ್ಯಾಮರಾಯರು ಒಂದು ವಿಲ್‌ ಮಾಡಿಟ್ಟಿದ್ದಾರೆ.  ಅದನ್ನು ಓದಲೆಂದೇ ನಿಮಗೆಲ್ಲಾ ನಾನು ಇಂದು ಇಲ್ಲಿಗೆ ಬರಲು ಹೇಳಿದ್ದು ಎಂದರು. 

ಅಪ್ಪನ ಹಣದ ವ್ಯವಹಾರದ ಬಗ್ಗೆ ಮಕ್ಕಳಿಗೆ ಅಷ್ಟೇನೂ ಗೊತ್ತಿರಲಿಲ್ಲ.  ಲಾಯರ್‌ ವಿಲ್‌ ಓದಲು ಪ್ರಾರಂಭಿಸಿದರು.  ಮೈಸೂರಿನಲ್ಲಿರುವ ಎರಡು ಸೈಟುಗಳನ್ನು ಒಬ್ಬೊಬ್ಬ ಮಗನಿಗೆ ಕೊಡಬೇಕು.  ಬ್ಯಾಂಕಿನಲ್ಲಿಟ್ಟಿದ್ದ ಸುಮಾರು ನಲವತ್ತು ಲಕ್ಷ ಹಣ ಮೊಮ್ಮಕ್ಕಳಿಗೆ ಸಮನಾಗಿ ಹಂಚಬೇಕು.  ಎರಡು ಸಾವಿರ ಚದರಡಿಯ ಸೈಟಿನಲ್ಲಿ ಕಟ್ಟಿರುವ ಈ ಹನುಮಂತನಗರದ ಮನೆ ಸುಮಾರು ಮೂರು ಕೋಟಿ ರೂಪಾಯಿ ಬೆಲೆಯದ್ದಾಗಿದ್ದು ಇದನ್ನು  ಮಠಕ್ಕೆ ಕೊಡಬೇಕೆಂದುಕೊಂಡಿದ್ದೆ.  ಆದರೆ ಯಾವ ಮಠದವರು ಈ ರೀತಿ ಬಂದ ಮನೆಗಳನ್ನು ಉಳಿಸಿಕೊಳ್ಳುತ್ತಿಲ್ಲ, ಅವರು ಅದನ್ನು ಮಾರಿ ಬೇರೆ ಕಾರ್ಯಗಳಿಗೆ ಉಪಯೋಗಿಸುತ್ತಿದ್ದಾರೆ.  ಹಾಗಾಗಿ ಕಡೇ ಕಾಲದಲ್ಲಿ ಯಾರು ನನ್ನನ್ನು  ನೋಡಿಕೊಂಡು ನನ್ನ ದೇಹಕ್ಕೆ ಅಗ್ನಿಸ್ಪರ್ಶ ಮಾಡಿ ಅಂತ್ಯಸಂಸ್ಕಾರವೆಲ್ಲಾ ಮಾಡುತ್ತಾರೋ, ಅವರಿಗೆ ಈ ಮನೆ ಸೇರಬೇಕಾಗುತ್ತದೆ.  ಒಂದು ವೇಳೆ ಮಕ್ಕಳಿಬ್ಬರೂ ಇದಕ್ಕೆ ಅರ್ಹರಾದರೆ, ಮನೆಯನ್ನು ಮಾರಿ  ಬಂದ ಹಣವನ್ನು ಅವರಿಬ್ಬರೂ  ಸಮನಾಗಿ ಹಂಚಿಕೊಳ್ಳಬಹುದು.

ಮಾಸಿದ್ದ ಬಿಳಿ  ಪಂಚೆ ಉಟ್ಟು, ಕಿತ್ತುಹೋದ ಯಾವುದೋ ಒಂದು ಟೀಶರ್ಟ್‌ ಧರಿಸಿ,  ಅಡುಗೆ ಮನೆಯಿಂದ  ಕಾಫೀ ಮಾಡಿ ಒಂದು ದೊಡ್ಡ ತಟ್ಟೆಯಲ್ಲಿ ಕಾಫೀ ಲೋಟಗಳನ್ನು   ತರುತ್ತಿದ್ದ ಶಿವರಾಮನ ಕಡೆ ಎಲ್ಲರ ದೃಷ್ಟಿ ನಾಟಿತ್ತು.

————

About The Author

5 thoughts on “ಅಗ್ನಿಸ್ಪರ್ಶ”

  1. ಅಪ್ಪನ ಆಸ್ತಿ ಹಂಚಿಕೆಗೆ ಬರೋರಿಗೆ ಅಪ್ಪನ ಅಸ್ತಿ ವಿಸರ್ಜನೆಗೆ ಸಮಯ ಸಿಗೋಲ್ಲಾ ಇಂದು ನಡೆಯುತಿರುವ ನೈಜತೆ….. ಕೋರೋನ ಎಲ್ಲರನ್ನೂ ಎಂಥ ಹೀನ ಸ್ಥಿತಿಗೆ ಕೊಂಡಯ್ಯುತಿದೆ

  2. GURUPRASAD HALKURIKE

    ಅಗ್ನಿ ಸ್ಪರ್ಶ ಕಥೆಯು ಇತ್ತೀಚಿನ ದಿನಗಳಲ್ಲಿ ನಶಿಸಿಹೋಗುತ್ತಿರುವ ಸಂಬಂಧಗಳ ಕುರಿತಾಗಿದ್ದು ನಿರೂಪಣೆಯ ಶೈಲಿಯು ಸರಳ ಹಾಗೂ ನೇರವಾಗಿ ಮನಮುಟ್ಟುವಂತಿದೆ. ಈ ರೀತಿಯ ಸಂಬಂಧಗಳ ನಶಿಸುವಿಕೆಗೆ ಕೇವಲ ಕೊರೋನ ಮಾತ್ರವೇ ಕಾರಣವಲ್ಲ. ಇದು ಬಹಳ ಕಾಲದ ಹಿಂದಿನಿಂದಲೇ ಸಂಬಂಧಗಳು ನಶಿಸಿಹೋಗುತ್ತಿದ್ದದ್ದನ್ನು ಅನೇಕರು ಹತ್ತಿರದಿಂದಲೇ ನೋಡಿದ್ದಾರೆ. ಇದಕ್ಕೆ ಕಾರಣವು ಹಲವು. ಹಾಗಂದ ಮಾತ್ರಕ್ಕೆ ಈ ಪರಿಯು ಎಲ್ಲೆಡೆಯೂ ಹರಡಿಲ್ಲ. ಈಗಲೂ ಎಷ್ಟೋ ಮಕ್ಕಳು ತಮ್ಮ ಮಾತಾ-ಪಿತೃಗಳನ್ನು ಉತ್ತಮ ರೀತಿಯಲ್ಲೇ ನೋಡಿಕೊಳ್ಳುತ್ತಿರುವುದನ್ನು ಕಾಣಬಹುದು. ಹಾಗೂ ಅವರ ಕಾಲಾನಂತರ ಅವರಿಗೆ ಸೂಕ್ತ ಸಂಸ್ಕಾರಗಳನ್ನೂ ಮಾಡಿರುವರು. ಹೌದು, ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸದೇ ತಮಗೆ ಬರಬೇಕಾದ ಲಾಭಕ್ಕಾಗಿ ಹಾತೊರೆಯುವ ಪೀಳಿಗೆಯು ಹೆಚ್ಚುತ್ತಿರುವುದು ಸಮಾಜಕ್ಕೆ ಒಳಿತಲ್ಲ.
    ಒಟ್ಟಾರೆ, ಗುರುರಾಜ ಶಾಸ್ತ್ರಿಗಳು ಬರೆದ ಕಥೆಯು ಅನೇಕರ ಕಣ್ತೆರೆಸುವುದರಲ್ಲಿ ಅನುಮಾನವಿಲ್ಲ. ಶಾಸ್ತ್ರಿಗಳಿಗೆ ಅಭಿನಂದನೆಗಳು.

  3. S Nagendra Kumar

    ಗುರುರಾಜ್ ಅವರೇ ಪ್ರಪಂಚ ಡಲ್ಲಿ ಸಂಬಂಧಗಳು ಇಷ್ಟು ಹಳಸಿ ಹಗೋಗಿದೆಯಾ ಎಂದು ಆಶ್ಚರ್ಯ ವಾಗುತ್ತದೆ ಧರ್ಮ ನಶಿಸುತ್ತಿದೆ

  4. ಇಂದಿನ ಕಾಲದಲ್ಲಿ ನಡೆಯುತ್ತಿರುವ ಘೋರ ಅನ್ಯಾಯ ಇದು. ಕೊರೊನ ಅನ್ನುವುದು ಒಂದು ನೆಪ ಅಷ್ಟೇ. ಇಂತಹ ಪ್ರಕರಣಗಳು ಈ ನಡುವೆ ತುಂಬಾ ಹೆಚ್ಚಾಗಿದೆ.
    ಸಂಬಂಧಗಳು ಉಳಿಯುವಂತಾಗಲಿ.
    ನಿಮ್ಮ ಈ ಬರವಣಿಗೆ ಎಲ್ಲರ ಕಣ್ತೆರೆಯಲಿ.
    ಆದರೆ ಅದರಲ್ಲಿ ಹಣದ ಆಸೆ ಇಲ್ಲದೆ ಪ್ರೀತಿ ತುಂಬಿದ ಮನಸ್ಸು ಇರಲಿ ಎಂದು ಆಶಿಸೋಣ.

  5. H V Rajalakshmi

    ಇವತ್ತಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನ ಸಹಜವಾಗಿ ಬರಹಗಾರರು ನಿರೂಪಿಸಿದ್ದಾರೆ

Leave a Reply

You cannot copy content of this page

Scroll to Top