ಗಜಲ್ ಜುಗಲ್ ಬಂದಿ-==05
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-05
ಒಲವ ನಿರೀಕ್ಷೆಯಲಿ ಬದುಕುವುದು ಇನ್ನೆಷ್ಟು ದಿನ
ನೀನೇ ನಾನಾಗಿ ಧ್ಯಾನಿಸುವುದು ಇನ್ನೆಷ್ಟು ದಿನ.
ಈ ಪ್ರೀತಿಯೊಂದು ಅನುಭಾವ ಅನುಭವಿಸು ಎನ್ನುವೆ
ಒಳಗೊಳಗೇ ಅರಳಿ ಸೋಲುವುದು ಇನ್ನೆಷ್ಟು ದಿನ.
ನೆನಪುಗಳ ಅಲೆ ಬಡಿತಕೆ ಎದೆಗಡಲ ತೀರ ಕೊರೆಯುತ್ತಿದೆ
ಬೊಗಸೆಯೊಳಗಿನ ಹನಿಯ ಹಿಡಿದಿಡುವುದು ಇನ್ನೆಷ್ಟು ದಿನ.
ಯಾರೂ ಕಾಣದ ಲೋಕದಲಿ ಕೈ ಕೈ ಹಿಡಿದ ಸುತ್ತೋಣ ಬಾ
ಹಂಬಲಿಸುವ ಮನವ ಸಂತೈಸುವುದು ಇನ್ನೆಷ್ಟು ದಿನ.
ಯಾರಿಗೆ ಯಾರೂ ಆಸರೆಯಲ್ಲ ಇಲ್ಲಿ, ಹೇಗೆ ಒಪ್ಪಲಿ”ಸ್ಮಿತ”
ಭವಿತವ್ಯದ ಬಾಗಿಲಿಗೆ ನಿತ್ಯವೂ ಹೂ ಬೀರುವುದು ಇನ್ನೆಷ್ಟು ದಿನ
ಸ್ಮಿತಾ ಭಟ್
ನೆನಪಿನ ಮೆಲುಕಿನಲಿ ಬದುಕು ಸವೆಸುವುದು ಇನ್ನೆಷ್ಟು ದಿನ
ನಂಬಿಕೆಯ ಗುಟುಕಿನಲಿ ದಿನ ಕಳೆಯುವುದು ಇನ್ನೆಷ್ಟು ದಿನ
ಭ್ರಮೆ ಎಲ್ಲೆಲ್ಲೂ ನಿನ್ನ ಹುಡುಕುವಂತೆ ಮಾಡುತ್ತಿದೆ ಈಗೀಗ
ಬರಿದೇ ಮರೀಚಿಕೆಗಳ ಹಿಂಬಾಲಿಸುವುದು ಇನ್ನೆಷ್ಟು ದಿನ
ನನಸಿನ ತೋರಣ ಕಟ್ಟಿದ ಬದುಕಿನ ಹಂಬಲ ಅನುದಿನ
ಕನಸುಗಳನ್ನೆ ಹಡೆದು ಹಗುರಾಗುವುದು ಇನ್ನೆಷ್ಟು ದಿನ
ಮನ ನಿತ್ಯ ಧ್ಯಾನಿಸುತಿದೆ ದಟ್ಟ ಕಾಡಿನಂಥ ನಿನ್ನೊಲವಿಗೆ
ಬಯಲಿನಲ್ಲೆ ಹಗಲು ಇರುಳು ಎಣಿಸುವುದು ಇನ್ನೆಷ್ಟು ದಿನ
ನಕ್ಷೆ ಹಿಡಿದ ‘ರೇಖೆ’ ಗುರಿಯಡೆಗೆ ಸಾಗುತಿರುವುದು ದಿಟ
ಕಕ್ಷೆ ಸೇರಲೆಂದು ನಿರೀಕ್ಷೆಗಳ ಬೆಳೆಯುವುದು ಇನ್ನೆಷ್ಟು ದಿನ
ರೇಖಾ ಭಟ್
***************************
Beautiful
ಸುಪರ್
ತುಂಬಾ ಚೆನ್ನಾಗಿದೆ
ಉತ್ತಮ ಜುಗಲ್ ಬಂದಿ
ಧನ್ಯವಾದಗಳು ಎಲ್ಲರಿಗೂ