ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ29

ಆತ್ಮಾನುಸಂಧಾನ

ಕೂಲಿಕಾರ ಸಂಘದ ಉಚಿತ ಪುಸ್ತಕ;

ಅಪ್ಪನ ಸಾಲೆಯ ಕೋಳಿ ಆಸೆ

10 Surprising Facts About Chickens | PETA

ನನ್ನ ಕುಟುಂಬದ ಆರ್ಥಿಕ ಇತಿಮಿತಿಗಳ ನಡುವೆ ಬಿ.ಎ. ಪದವಿ ಶಿಕ್ಷಣ ಪಡೆಯುವುದು ಮಾತ್ರ ನನ್ನ ಕೈಗೆ ಎಟಕಬಹುದಾದ ಗುರಿಯಾಗಿತ್ತು. ಯಾರು ಹೇಗೆ ಸಹಾಯ ಮಾಡಿದರೂ ಬೇಡವೆನ್ನದೇ ಕೈ ಚಾಚುವ ಅನಿವಾರ್ಯತೆಯ ದಿನಗಳವು.

ಆದರೆ ನಾನು ಕಾಲೇಜು ಓದುವ ದಿನಗಳಲ್ಲಿ ಸಮೀಪದ ಬಂಧುಗಳಲ್ಲಿ ಯಾರೂ ಸಹಾಯ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೆಚ್ಚೆಂದರೆ ಚಹಾದಂಗಡಿಯ ಮುಂದೆಯೇ ಸಿಕ್ಕಾಗ ಚಹಾ-ತಿಂಡಿ ಕೊಡಿಸುವಷ್ಟು ಅಕ್ಕರೆಯನ್ನೆನೋ ತೋರಿಸುತ್ತಿದ್ದರು.

ನಾನು ಕಾಲೇಜು ಸೇರಿದ ಮೊದಲ ವರ್ಷ ಅಂಕೋಲೆಯಲ್ಲಿ “ಹಿಚ್ಕಡ ಗ್ರೂಪ್ ಹಿಂದುಳಿದ ವರ್ಗದ ಕೂಲಿಕಾರರ ಸಂಘ” ಎಂಬ ಸಂಸ್ಥೆಯಿದೆ. ಅಲ್ಲಿ ಅರಣ್ಯ ಗುತ್ತಿಗೆ, ಇನ್ನಿತರ ಕಾಮಗಾರಿಗಳನ್ನು ನಿರ್ವಹಿಸುವ ಕಂತ್ರಾಟು ಮಾಡುತ್ತಾರೆ. ಅವರು ತಮ್ಮ ಲಾಭಾಂಶದಲ್ಲಿ ಬಡ ದಲಿತ ಮಕ್ಕಳ ಶಿಕ್ಷಣ, ಆರೋಗ್ಯ ಇತ್ಯಾದಿ ಆರ್ಥಿಕ ನೆರವು ನೀಡುತ್ತಾರೆ… ಎಂದು ಹಿರಿಯರೊಬ್ಬರು ತಿಳಿಸಿದರಲ್ಲದೆ ಉಚಿತ ಪುಸ್ತಕಕ್ಕಾಗಿ ಅರ್ಜಿ ಸಲ್ಲಿಸಬಹುದೆಂದು ಸಲಹೆ ನೀಡಿದರು.

ಅಂಕೋಲೆ ಸೀಮೆಯ ಬಹಳಷ್ಟು ಜನ ಜಾತಿ ಬಾಂಧವರು ಇಲ್ಲಿ ಸದಸ್ಯರರಾಗಿದ್ದರಲ್ಲದೆ ಕೆಲವು ಡಿ. ದರ್ಜೆಯ ಕಾರಕೂನಕಿ ಕೆಲಸವನ್ನು ಮಾಡುತ್ತಿದ್ದರು. ನಾನು ತುಂಬ ವಿಶ್ವಾಸದಿಂದ ಉಚಿತ ಪಠ್ಯ ಪುಸ್ತಕಗಳಿಗಾಗಿ ಅರ್ಜಿ ಸಲ್ಲಿಸಿದೆ. ಅಂದು ಸಂಸ್ಥೆಯ ಕಾರ್ಯದರ್ಶಿಗಳಾಗಿ ವಾಮನ ಪೈ ಎಂಬುವರು ಇದ್ದಂತೆ ನೆನಪು. ಅವರು ನನ್ನ ಅರ್ಜಿಯನ್ನು ಮನ್ನಿಸಿ ಅಗತ್ಯ ಪಠ್ಯ ಪುಸ್ತಕಗಳಿಗೆ ಮಂಜೂರಿ ನೀಡಿದರು. ನನ್ನ ಕಾಲೇಜು ಓದಿನ ಮೊದಲ ವರ್ಷದ ಅಪೇಕ್ಷೆಗಳು ಸುಲಭವಾದವು.

ಒಂದು ವರ್ಷದ ಓದು ಮುಗಿದ ಬಳಿಕ ಇತರರಿಗೆ ಓದಲು ಅನುಕೂಲವಾಗುವಂತೆ ಎಲ್ಲ ಪುಸ್ತಕಗಳನ್ನು ಜೋಪಾನವಾಗಿ ಸಂಘಕ್ಕೆ ಮರಳಿಸಬೇಕೆಂದು ನಿಯಮವಾಗಿತ್ತು. ನಾನು ಪರೀಕ್ಷೆ ಮುಗಿಯುತ್ತಿದ್ದಂತೆ ಎಲ್ಲ ಪುಸ್ತಕಗಳನ್ನು ಕಾಳಜಿ ಪೂರ್ವಕ ಮರಳಿಸಿ ಎರಡನೆಯ ವರ್ಷದ ಪುಸ್ತಕಗಳಿಗಾಗಿ ಅರ್ಜಿ ಸಲ್ಲಿಸಿ ಬಂದೆ.

ಕಾಲೇಜು ಆರಂಭವಾಗುವ ಹೊತ್ತಿಗೆ ಪುಸ್ತಕಗಳಿಗಾಗಿ ಸಂಘದ ಕಛೇರಿಗೆ ಹೋದಾಗ ನನಗೆ ತೀವೃ ನಿರಾಶೆಯಾಯಿತು. ನಾನು ಗಂಗಾವಳಿ ನದಿಯ ಆಚೆ ಸೀಮೆಯವನೆಂದೂ, ಅಲ್ಲಿಯ ಯಾರೂ ಸಂಘದ ಸದಸ್ಯತ್ವ ಹೊಂದಿಲ್ಲ ವೆಂದೂ ಕಾರಣ ಹೇಳಿ ನನ್ನ ಅರ್ಜಿಯನ್ನು ಮನ್ನಿಸದಿರುವಂತೆ ಈಚೆ ಸೀಮೆಯ ನನ್ನ ಜಾತಿ ಬಾಂಧವರೇ ಆಕ್ಷೇಪ ಸಲ್ಲಿಸಿರುವರೆಂದೂ ಕಛೇರಿಯ ಸಿಬ್ಬಂದಿಗಳು ನನಗೆ ವಿವರಿಸಿದರು. ಮೇಲಾಗಿ ನಾನೊಬ್ಬ ಶಾಲಾ ಶಿಕ್ಷಕನ ಮಗನಾದ್ದರಿಂದ ನನಗೆ ಆರ್ಥಿಕ ಅನಾನುಕೂಲವೇನೂ ಇಲ್ಲವೆಂದೂ ತಮ್ಮ ನಿರ್ಧಾರಕ್ಕೆ ಪೂರಕ ಕಾರಣವನ್ನು ತಿಳಿಸಿದರು.

ನನಗೆ ಪಠ್ಯ ಪುಸ್ತಕಗಳು ಉಚಿತವಾಗಿ ದೊರೆಯಲಿಲ್ಲ ಎಂಬುದಕ್ಕಿಂತ ಅವರು ನೀಡಿದ ಕಾರಣಗಳಿಂದ ತುಂಬ ನೋವಾಯಿತು. ಯಾವ ಸೀಮೆಗೆ ಸಂಬಂಧಿಸಿದ್ದರೂ ನಾನು ನಿಮ್ಮದೇ ಜಾತಿಗೆ ಸೇರಿದ ವಿದ್ಯಾರ್ಥಿ. ಅಲ್ಲದೆ ನನ್ನಂತೆ ಇತರ ಹಲವಾರು ಜನ ವಿದ್ಯಾರ್ಥಿಗಳು ಇಂಥ ಬೇಡಿಕೆಯ ಅರ್ಜಿ ಸಲ್ಲಿಸಿದ್ದರೆ ಸಂಘಕ್ಕೆ ಉಂಟಾಗಲಿರುವ ಆರ್ಥಿಕ ಹೊರೆಯನ್ನು ಪರಿಗಣಿಸಿ ನನ್ನ ಅರ್ಜಿಯನ್ನು ಕೈ ಬಿಟ್ಟರೂ ನಾನು ಆತಂಕಪಡುತ್ತಿರಲಿಲ್ಲ. ನಾನು ಒಬ್ಬನೇ ಒಬ್ಬನಾಗಿ ಕಾಲೇಜು ಓದಲು ಆರಂಭಿಸಿರುವಾಗ ನನಗೆ ನೀಡಲು ಅವಕಾಶವಿರುವ ಚಿಕ್ಕ ನೆರವನ್ನು ನಿರಾಕರಿಸಿ ಜಾತಿ ಬಂಧುಗಳೇ ಆಕ್ಷೇಪ ಸಲ್ಲಿಸಿದ್ದು ನನಗೆ ತುಂಬಾ ಸಂಕಟವನ್ನುಂಟು ಮಾಡಿತು.

ಮತ್ತೆ ನಾನು “ಹಿಚ್ಕಕಡ್ ಗ್ರೂಫ್ ಕೂಲಿಕಾರರ ಸಂಘ”ದತ್ತ ವಿನಂತಿಸಲು ತಲೆ ಹಾಕಲಿಲ್ಲ. ಕಾಲೇಜಿನ ಗ್ರಂಥಾಲಯದಲ್ಲಿಯೇ ಅಗತ್ಯವಾದ ಎಲ್ಲ ಪಠ್ಯಗಳೂ ಮುಂದಿನ ಎರಡು ವರ್ಷಗಳೂ ಉಚಿತವಾಗಿ ದೊರೆತವು. ಪಠ್ಯ ಪುಸ್ತಕಗಳಿಗೆ ಕೊರತೆಯೇನೂ ಆಗಲಿಲ್ಲ.

ಏನಿದ್ದರೂ ನನ್ನ ಕಾಲೇಜು ಶಿಕ್ಷಣದ ಮೊದಲೊಂದು ವರ್ಷದ ಓದಿಗಾಗಿ ನನಗೆ “ಹಿಚ್ಕಡ್ ಗ್ರೂಫ್ ಕೂಲಿಕಾರರ ಸಂಘ”ವು ಪಠ್ಯಪುಸ್ತಕವನ್ನು ಪೂರೈಸಿದ್ದು ಬಹುದೊಡ್ಡ ಉಪಕಾರವೇ ಆಗಿದೆ. ಅದಕ್ಕಾಗಿ ಅಂದಿನ ಸಂಘದ ಎಲ್ಲ ಪದಾಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ನಾನು ಯಾವಾಗಲೂ ಕೃತಜ್ಞನಾಗಿಯೇ ಇರುವೆ.

ನಾವು ಪದವಿ ಶಿಕ್ಷಣ ಪಡೆಯುತ್ತಿರುವಾಗಲೇ ನಮ್ಮ ತಂದೆಯವರು ಗಂಗಾವಳಿ ನದಿಯ ಈಚೆ ದಂಡೆಯ ಮೇಲಿರುವ ಮಂಜಗುಣಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿತ್ಯವೂ ಮುಂಜಾನೆ ನಮ್ಮೊಡನೆಯೇ ಗಂಗಾವಳಿ ನದಿಯನ್ನು ದಾಟಿ ಮಂಜಗುಣಿ ಶಾಲೆಗೆ ಬರುತ್ತಿದ್ದರು. ಅವರಿಗೆ ಸಹಾಯಕ ಶಿಕ್ಷಕರಾಗಿದ್ದ ನೆರೆಯ ಅಗ್ಗರಗೋಣ ಗ್ರಾಮದ ಗಣಪತಿ ನಾಯಕರೆಂಬ ಶಿಕ್ಷಕರೂ ನಿತ್ಯ ನದಿ ದಾಟಿ ಶಾಲೆಗೆ ಬರುತ್ತಿದ್ದರು. ಅವರ ಮಗ ಪ್ರಮೋದ ನಾಯಕ ನನ್ನ ಸಹಪಾಠಿಯೇ ಆಗಿದ್ದನಾದರೂ ಅವನ ಮುಖ್ಯ ವಿಷಯ ಇಂಗ್ಲಿಷ್ ಆದುದರಿಂದ ತರಗತಿಯಲ್ಲಿ ಬೇರೆ ಬೇರೆಯಾಗಿ ಇರುತ್ತಿದ್ದರು. ಉಳಿದಂತೆ ನದಿ ದಾಟುವಲ್ಲಿ ಬಸ್ ಪ್ರಯಾಣದಲ್ಲಿ ಪೇಟೆಯ ತಿರುಗಾಟದಲ್ಲಿ ಕಾಲೇಜ್ ಕ್ಯಾಂಪಸ್ ಹುಡುಕಾಟಗಳಲ್ಲಿ ನಾವು ಜೊತೆಯಾಗಿಯೇ ಇರುತ್ತಿದ್ದೆವು.

ಒಮ್ಮೆ ಅಪ್ಪನ ಮಂಜಗುಣಿ ಶಾಲೆಯ ತಪಾಸಣೆ ನಡೆಯಬೇಕಿತ್ತು. ಅಂದಿನ ದಿನಗಳಲ್ಲಿ ಶಾಲಾ ತಪಾಸಣೆಗೆಂದು ಬರುವ ಅಧಿಕಾರಿಗಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿದರೆ ಶರಾ ಬರೆಯುವಾಗ ಅಧಿಕಾರಿಗಳು ಉದಾರವಾಗಿರುತ್ತಾರೆ ಎಂದು ಬಹುತೇಕ ಶಿಕ್ಷಕರ ನಂಬಿಕೆಯಾಗಿತ್ತು.

ಮಂಜಗುಣಿ ಶಾಲೆಯ ತಪಾಸಣೆಯ ದಿನ ಮಧ್ಯಾಹ್ನ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು. ನಾವು ಕಾಲೇಜು ಮುಗಿಸಿ ಮಧ್ಯಾಹ್ನದ ಹೊತ್ತಿಗೆ ಬಸ್ಸಿನಲ್ಲಿ ಊರಿಗೆ ಮರಳುತ್ತಿದ್ದೆವಾದ್ದರಿಂದ ನಮ್ಮ ನಮ್ಮ ಪಾಲಕರಿಬ್ಬರೂ ಪ್ರಮೋದನಿಗೂ, ನನಗೂ ಮಧ್ಯಾಹ್ನದ ಊಟಕ್ಕೆ ಶಾಲೆಗೆ ಬರುವಂತೆ ಅಪ್ಪಣೆ ಮಾಡಿದರು.

ನಾನು ಮತ್ತು ಪ್ರಮೋದ ಮಂಜಗುಣಿ ತಾರಿದಂಡೆಯಲ್ಲಿ ಬಸ್ಸಿನಿಂದಿಳಿದು ಗೆಳೆಯರಿಗೆ ವಿಷಯ ತಿಳಿಸಿ ನೇರ ಶಾಲೆಯತ್ತ ಹೆಜ್ಜೆ ಹಾಕಿದೆವು. ನದಿ ತೀರದ ಗುಂಟ ಎರಡು ಕಿಲೋ ಮೀಟರ್ ಅಂತರವನ್ನು ಕ್ರಮಿಸಿ ನಾವು ಶಾಲೆಗೆ ತಲುಪುವಾಗ ಸಾಹೇಬರುಶಿಕ್ಷಕರೆಲ್ಲ ಊಟ ಮುಗಿಸಿದ್ದರು.

ನಮ್ಮ ಊರಿನವರೇ ಆದ ವೆಂಕಟ್ರಮಣ ನಾಯಕ ಎಂಬುವುದು ಅಲ್ಲಿ ಅಡಿಗೆ ತಯಾರು ಮಾಡಿ ಉತ್ಕೃಷ್ಟವಾದ ಕೋಳಿ ಮಸಾಲೆಯನ್ನು ಸಿದ್ಧಪಡಿಸಿದ್ದರು. ವೆಂಕಟ್ರಮಣ ನಾಯಕರು ಗಂಗಾವಳಿಯಿಂದ ಆರಂಭಿಸಿ ಸುತ್ತಲಿನ ಹನೇಹಳ್ಳಿ, ಗೋಕರ್ಣದವರೆಗೆ ಎಲ್ಲ ಚಹದಂಗಡಿಗಳಿಗೆ ತಿಂಡಿ ತಿನಿಸು ತಯಾರಿಸಿ ಕೊಡುವ ಪ್ರಸಿದ್ಧ “ಮಾಲ್‌ಕರಿ” ಎನಿಸಿದ್ದರು. ಉತ್ತಮ ಗುಣಮಟ್ಟದ ಮೈಸೂರು ಪಾಕ್, ಬೂಂದಿಲಾಡು, ರವಾಲಾಡು, ಮಿಠಾಯಿಯನ್ನು ತಯಾರಿಸುವಲ್ಲಿ ಸಿದ್ಧ ಹಸ್ತರಾಗಿದ್ದರು. ವಿಶೇಷ ಸಮಾರಂಭದ ಅಡಿಗೆಯ ಕೆಲಸದಲ್ಲಿಯೂ ಮುಖ್ಯ ಬಾಣಸಿಗರಾಗಿ ಸಹಕರಿಸುತ್ತಿದ್ದರು.

ಅಂದು ಅಪ್ಪನ ಶಾಲೆಯ ಕೋಳಿ ಮಸಾಲೆ ಅದ್ಭುತವಾಗಿ ಸಿದ್ಧವಾಗಿತ್ತು. ನಾವು ಶಾಲೆಗೆ ತಲುಪಿದಾಗ ಶಾಲೆಯಿಡೀ ಕೋಳಿ ಮಸಾಲೆಯ ಪರಿಮಳದಲ್ಲಿ ಮಿಂದೆದ್ದು ನಿಂತಂತೆ ಭಾಸವಾಯಿತು. ನಾಯಕರ ಅಡಿಗೆ ಅನುಭವದ ರಸಪಾಕದಂತಿರುವ  ಆಸೆಯೊಂದಿಗೆ ನಾಡವರ ವಿಶೇಷವಾದ ಹಂಚಿನ ರೊಟ್ಟಿಯೊಂದಿಗೆ ಸವಿದ ಅಂದಿನ ಭೋಜನದ ಸವಿಯನ್ನು ನನ್ನ ಸುದೀರ್ಘವಾದ ಬದುಕಿನಲ್ಲಿ ಮತ್ತೆಂದೂ ಸವಿಯುವುದು ಸಾಧ್ಯವೇ ಆಗದಂತೆ ಅಂದಿನ ನೆನಪು ಸ್ಥಿರವಾಗಿದೆ.

ಊಟ ಮುಗಿಸಿದ ನಮ್ಮಿಬ್ಬರ ಕೈಯಲ್ಲಿಯೂ ಮನೆಗೆ ಮುಟ್ಟಿಸುವಂತೆ ನೀಡಿದ ಕೋಳಿ ಮಸಾಲೆ ಡಬ್ಬಗಳ ಚೀಲ ಹಿಡಿದು ಮತ್ತೆ ಮಂಜಗುಣಿ ತಾರಿಯತ್ತ ಸಂತೃಪ್ತಿಯ ಹೆಜ್ಜೆ ಹಾಕಿದೆವು. ದಾರಿಯುದ್ಧದ ನಮ್ಮ ಚರ್ಚೆಯಲ್ಲಿ ಬಿ.ಎ. ಓದು ಮುಗಿಸಿದ ಬಳಿಕ ನಾವು ನೌಕರಿ ಸೇರುವುದಿದ್ದರೆ ಅದು ಸಾಲೆಯ ತಪಾಸಣಾಧಿಕಾರಿಯಾಗಿಯೇ ತೀರಬೇಕು ಎಂದು ಮನದಲ್ಲಿಯೇ ಸಂಕಲ್ಪ ಮಾಡಿಕೊಂಡಿದ್ದೆವು!

*******

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

2 thoughts on “

  1. ಗುರೂಜಿ,
    ನಿಮ್ಮ ಬಿ. ಎ. ಪದವಿ ಶಿಕ್ಷಣದ ಸಮಯದಲ್ಲಿ ಕೂಡ ಮತ್ತೆ ಜಾತಿ ಅಡ್ಡವಾಯಿತು, ನೀವು ನಮ್ಮ ಕರಾವಳಿ ತೀರದ ಅರಬಿ ಸಮುದ್ರವನ್ನು ದಾಟದಂತೆ ನನಗೆ ಅನಿಸುತ್ತದೆ ಎಷ್ಟು ಚನ್ನಾಗಿ ಬರೆದಿದ್ದೀರಿ ಎಂದರೆ ನಂಬಲು ಸಾಧ್ಯವಿಲ್ಲ. ಏನೇ ಆಗಲಿ past is past.
    ಮುಂದಿನ ಸಂಚಿಕೆ
    ಎದುರಾಗಿವೆ…..

  2. ಸರ,
    ನಮ್ಮವರ ಸಣ್ಣತನ, ಕೋಳಿ ಸಾರಿನ ಪಳದಿಯ ಸುವಾಸನೆ ನೆನಪೂ ತುಂಬಾ ಚೆನ್ನಾಗಿದೆ.

Leave a Reply

Back To Top