ದಾರಾವಾಹಿ

ಆವರ್ತನ

ಅದ್ಯಾಯ-21

Best 100+ Chicken Pictures | Download Free Images & Stock Photos on Unsplash

ತನ್ನ ಕೋಳಿಗಳು ಸುಮಿತ್ರಮ್ಮನ ಅಂಗಳದಲ್ಲಿ ಹರಡಿದ ಕೊಳಕನ್ನು ತೊಳೆದುಕೊಟ್ಟ ರಾಧಾ ಅವುಗಳ ಮೇಲೆ ಬೇಸರಗೊಂಡು ಮನೆಗೆ ಹೊರಟಳು. ಅವಳ ಸ್ವಚ್ಛತಾ ಅಭಿಯಾನ ಮುಗಿಯುವವರೆಗೆ ತಮ್ಮ ಆವರಣದ ಹೊರಗೆಯೇ ನಿಂತುಕೊಂಡು ಗಮನಿಸುತ್ತಿದ್ದ ಸುಮಿತ್ರಮ್ಮನಿಗೆ ಅವಳು ಹೊರಟು ಹೋಗುತ್ತಲೇ ರಪ್ಪನೆ ಒಂದು ವಿಷಯವು ನೆನಪಾಯಿತು.

‘ಹೇ, ರಾಧಾ, ಸ್ವಲ್ಪ ಇಲ್ಲಿ ಬಾ ಮಾರಾಯ್ತಿ…!’ ಎಂದು ಕೂಗಿದರು. ಅಷ್ಟು ಕೇಳಿದ ಅವಳು, ಅಯ್ಯೋ ದೇವರೇ! ಇನ್ನೇನು ಉಪದ್ರವಿದೆಯೋ ಈ ಹೆಂಗಸಿದ್ದು…? ಎಂದುಕೊಂಡು ಅಳುಕುತ್ತ, ‘ಹಾಂ, ಬಂದೇಮ್ಮಾ…!’ಎನ್ನುತ್ತ ಹಿಂದಿರುಗಿದಳು.

‘ನೋಡು ಮಾರಾಯ್ತೀ, ಯಾವತ್ತಿನಿಂದಲೋ ನಿನಗೊಂದು ಸಂಗತಿ ಹೇಳಬೇಕೆಂದಿದ್ದೆ. ಹಾಳಾದ್ದು ನೆನಪೇ ಬರುತ್ತಿರಲಿಲ್ಲ. ಇವತ್ತು ನಿನ್ನ ಕೋಳಿಗಳ ರಾದ್ಧಾಂತದಿಂದ ಅದು ಮನಸ್ಸಿಗೆ ಬಂತು. ನಿಮ್ಮ ಮನೆಯ ಸಮೀಪ ಒಂದು ದೊಡ್ಡ ಹಾಡಿ ಉಂಟಲ್ಲವಾ ಅದು ಯಾವುದರದ್ದು ಅಂತ ಗೊತ್ತುಂಟಾ ನಿನಗೆ?’ ಎಂದು ಕಣ್ಣಿನಲ್ಲಿ ಆತಂಕ ಸೂಸುತ್ತ ಕೇಳಿದರು.

ಈ ಹೆಂಗಸು ಆ ಕಾಡಿನ ಬಗ್ಗೆ ತನ್ನಲ್ಲೇಕೆ ಕೇಳುತ್ತಿದೆ…? ಎಂದು ಯೋಚಿಸಿದ ರಾಧಾ, ‘ಇಲ್ಲವಲ್ಲ ಸುಮಿತ್ರಮ್ಮ ಯಾಕೆ…?’ ಎಂದು ತಾನೂ ಕಣ್ಣಗಲಿಸಿ ಕೇಳಿದಳು.

‘ಅಯ್ಯೋ, ಅಷ್ಟೂ ಗೊತ್ತಿಲ್ಲವಾ ಮಾರಾಯ್ತೀ ನಿನಗೆ? ಅದೊಂದು ಹಳೆಯ ನಾಗಬನವಂತೆ! ಈ ವಠಾರದ ಸುತ್ತಮುತ್ತ ಯಾರು ಏನೇ ಅಶುದ್ಧ, ಮೈಲಿಗೆ ಮಾಡಿದರೂ ಅಲ್ಲಿ ನಾಗರಹಾವು ಕಾಣಿಸಿಕೊಳ್ಳುತ್ತದಂತೆ! ಹಾಗಾಗಿ ನಿನ್ನ ಸಾಕುಪ್ರಾಣಿಗಳನ್ನೆಲ್ಲ ಅಲ್ಲಿಗೂ ಮತ್ತು ನಮ್ಮ ವಠಾರಕ್ಕೂ ಮೇಯಲು ಬಿಟ್ಟು ಇಲ್ಲದ ರಗಳೆ ಮಾಡಿಕೊಳ್ಳಬೇಡ ಮಾರಾಯ್ತೀ. ನಾಳೆ ನಿನ್ನ ಮಕ್ಕಳಿಗೇನಾದರೂ ತೊಂದರೆಯಾದೀತು. ಸ್ವಲ್ಪ ಜಾಗ್ರತೆ ಮಾಡು! ಇದನ್ನೇ ಹೇಳುವುದಕ್ಕಿತ್ತು. ಆಯ್ತು ಇನ್ನು ಹೊರಡು!’ ಎಂದು ಭೀತಿಯಿಂದ ಹೇಳಿದವರು ಅವಳಿಗಿಂತ ಮುಂಚೆ ತಾವೇ ಒಳಗೆ ನಡೆದುಬಿಟ್ಟರು.

  ಸುಮಿತ್ರಮ್ಮನ ಮಾತು ಕೇಳಿದ ರಾಧಾ ಭಯದಿಂದ ಕಂಪಿಸಿಬಿಟ್ಟಳು. ಹೌದು. ತನ್ನ ಮನೆಯ ಸಮೀಪ ಒಂದು ಮದಗವೂ ದೊಡ್ಡ ಹಾಡಿಯೂ ಇದೆ. ಆದರೆ ಅದು ನಾಗಬನ ಅಂತ ನನಗೆ ಈವರೆಗೂ ಗೊತ್ತಿರಲಿಲ್ಲ! ಎಂದುಕೊಂಡವಳಿಗೆ, ‘ನಿಮ್ಮ ಮನೆಯ ಸಮೀಪ ಒಂದು ಚಂದದ ಹಾಡಿಯೂ ಇದೆ!’ ಎಂದು ಆವತ್ತು ಶಂಕರ ತನ್ನ ಗಂಡನೊಡನೆ ಹೇಳಿದ್ದು ನೆನಪಾಯಿತು. ಅಂದರೆ ಅವರು ಇದನ್ನೇ ಚಂದದ ಹಾಡಿಯೆಂದು ಹೊಗಳಿದ್ದಾ…? ಎಂದು ಯೋಚಿದವಳಿಗೆ ಸುಮಿತ್ರಮ್ಮ ಬಿತ್ತಿದ ನಾಗನ ಭಯವು ದುಪ್ಪಟ್ಟಾಯಿತು. ಅಯ್ಯಯ್ಯೋ ದೇವರೇ! ಏನು ಮಾಡುವುದಪ್ಪಾ ಈಗ…? ಅದು ನಾಗಬನ ಅಂತ ಗೊತ್ತಿದ್ದರೆ ಈ ಜಾಗವೇ ಬೇಡವಿತ್ತು! ಶಂಕರಣ್ಣನಿಗೆ ಗೊತ್ತಿರಲೇಬೇಕು. ಆದರೆ ಅವರ್ಯಾಕೆ ಹೇಳಲಿಲ್ಲ? ಎಂಬ ಚಿಂತೆಯಿಂದಲೇ ಮನೆಯತ್ತ ನಡೆದಳು. ಸಂಜೆ ಗೋಪಾಲ ಮನೆಗೆ ಬಂದು ಗೋಡೆಗೊರಗಿ ಕುಳಿತು ಹುಸ್ಸಪ್ಪಾ! ಎಂದು ಆಯಾಸದುಸಿರು ದಬ್ಬುತ್ತಲೇ, ‘ಅಲ್ಲ ಮಾರಾಯ್ರೇ ಓ ಅಲ್ಲೊಂದು ಕಾಡಿಯಿದೆಯಲ್ಲ ಅದು ಏನೂಂತ ಗೊತ್ತುಂಟಾ ನಿಮಗೆ…?’ ಎಂದು ತಾನೂ ಸುಮಿತ್ರಮ್ಮನಂತೆಯೇ ಪ್ರಶ್ನಿಸಿದಳು.

ಅವನು ದುಡಿದು ಸುಸ್ತಾಗಿ ಬಂದಿದ್ದವನು, ‘ಇಲ್ಲ ಮಾರಾಯ್ತೀ…ಯಾಕೆ ಏನಾಯ್ತೀಗ?’ ಎಂದ ನಿರುತ್ಸಾಹದಿಂದ.

ರಾಧಾಳಿಗೆ ರೇಗಿತು. ‘ಹೌದಾ, ಅಷ್ಟು ಹೇಳಿದರೆ ಮುಗಿಯಿತಾ? ಜಾಗ ಕೊಳ್ಳುವ ಮೊದಲು ನೀವು ಶಂಕರಣ್ಣನ ಹತ್ತಿರ ಅದನ್ನೆಲ್ಲ ವಿಚಾರಿಸಬೇಕಿತ್ತು. ಅದೊಂದು ನಾಗಬನವಂತೆ ಮಾರಾಯ್ರೇ…!’ ಎಂದು ಆತಂಕದಿಂದ ಸಿಡುಕಿದಳು.

   ಅಷ್ಟು ಕೇಳಿದ ಗೋಪಾಲನೂ ತಟ್ಟನೆ ನೆಟ್ಟಗೆ ಕುಳಿತ. ಸಣ್ಣ ಸಮಸ್ಯೆಯ ಮೇಲೊಂದು ದೊಡ್ಡ ಸಂಕಷ್ಟವು ಬಂದಪ್ಪಳಿಸಿದರೆ ಮನುಷ್ಯ ಸಣ್ಣದನ್ನು ಹೇಗೆ ಮರೆತು ದೊಡ್ಡದಕ್ಕೆ ಜೋತು ಬೀಳುತ್ತಾನೋ ಹಾಗೆಯೇ ಗೋಪಾಲನ ಆಯಾಸವೂ ಮಾಯವಾಗಿ ಅವನು ತಾನೂ ನಾಗಬನದ ವಿಚಾರದಲ್ಲಿ ವಿಚಲಿತನಾಗಿಬಿಟ್ಟ. ‘ನಾಗಬನದ ಆಸುಪಾಸು ಮಾಂಸಾಹಾರಿಗಳು ವಾಸಿಸಬಾರದು. ನಾಗನಿಗೆ ಅಶುದ್ಧವಾಗಿ ಅಂಥವರಿಗೆ ನಾಗದೋಷ ಬಡಿಯುತ್ತದೆ!’ ಎಂದು ನಾಗರಹಾವುಗಳು ಕಣ್ಣಿಗೆ ಬಿದ್ದಾಗಲೆಲ್ಲ ಊರ ಮೇಲ್ಜಾತಿಯ ಕೆಲವರು ಭಯಭಕ್ತಿಯಿಂದ ಆಡಿಕೊಳ್ಳುವುದನ್ನೂ ಅದನ್ನು ಕೇಳುವ ಮತ್ತು ನಂಬುವ ಉಳಿದವರು ತಾವೂ ಅಂಥ ಭಯಕ್ಕೆ ಬಿದ್ದು ಒದ್ದಾಡುವುದನ್ನೂ ಹಿಂದಿನಿಂದಲೂ ಅವನು ನೋಡುತ್ತ ಬಂದಿದ್ದ. ಹಾಗಾಗಿ ಆ ನಂಬಿಕೆಯು ಅವನೊಳಗೂ ಬಲವಾಗಿ ಬೇರುಬಿಟ್ಟಿತ್ತು. ಆದರೆ ಆ ನಂಬಿಕೆಯ ಸತ್ಯಾಸತ್ಯತೆಯೇನು? ಯಾವ ಕಾರಣಕ್ಕೆ ಅಂಥ ನಂಬಿಕೆಗಳನ್ನೆಲ್ಲ ಸೃಷ್ಟಿಸಲಾಗಿದೆ? ಎಂಬುದನ್ನು ಅಂಥ ನಂಬಿಕೆಯನ್ನು ಪ್ರಚಾರ ಮಾಡುವವರಿಂದಲೋ ಅಥವಾ ಆ ವಿಚಾರಗಳನ್ನು ಮಾತಾಡುವವರಿಂದಲೋ ಧೈರ್ಯವಾಗಿ ಪ್ರಶ್ನಿಸುವಂಥ ಆತ್ಮಸ್ಥೈರ್ಯವಿಲ್ಲದ ಗೋಪಾಲನೂ ಊರ ಇತರ ಜನಸಾಮಾನ್ಯರಂತೆ ತಾನೂ ಅದನ್ನು ನಂಬಿಕೊಂಡು ಬಂದಿದ್ದ. ಆದ್ದರಿಂದ ಇಂದು ರಾಧಾಳ ಭಯವು ಅವನನ್ನೂ ಕಾಡತೊಡಗಿತು.

   ‘ಹೌದಾ ಮಾರಾಯ್ತೀ… ಛೇ, ಛೇ! ನಂಗೆ ಇದು ಗೊತ್ತೇ ಇರಲಿಲ್ಲವಲ್ಲ…? ಶಂಕರಣ್ಣನಿಗೆ ಗೊತ್ತಿರಲೇಬೇಕು. ಆದರೆ ಅವರೇಕೆ ಈ ವಿಷಯವನ್ನು ಮುಚ್ಚಿಟ್ಟರು?’ ಎಂದು ಗೊಣಗಿದವನು ಅದೇ ಯೋಚನೆಯಲ್ಲಿ ಮುಳುಗಿದ. ಕೆಲವು ಕ್ಷಣದಲ್ಲಿ ಅವನಿಗೆ ವಿಷಯ ಮನವರಿಕೆಯಾಯಿತು. ‘ಓಹೋ…ಅದಕ್ಕೇ ಇರಬೇಕು, ನಾನಾವತ್ತು ಜಾಗದ ಸಂಗತಿ ಮಾತನಾಡಿದ ಕೂಡಲೇ ‘ನೀನು ನಮ್ಮವನೇ ಅಲ್ಲವ ಮಾರಾಯಾ, ನಿನಗೊಂದು ಜಾಗ ಮಾಡಿಕೊಡಲಾರೆನಾ…?’ ಎಂದು ಶಂಕರಣ್ಣ ಬೆಣ್ಣೆಯಲ್ಲಿ ಕೂದಲೆಳೆದಂತೆ ಮಾತನಾಡಿದ್ದು ಮತ್ತು ಅಂಥ ದೋಷವಿದ್ದ ಈ ಜಾಗವನ್ನೂ ನಮಗೆ ಕಡಿಮೆ ಬೆಲೆಗೆ ದಾಟಿಸಿದ್ದು. ಥೂ! ಎಂಥ ಮೋಸ ಮಾಡಿಬಿಟ್ಟ ಮಾರಾಯ್ತೀ…!’ ಎಂದು ಉದ್ಗರಿಸಿ ತಲೆಗೆ ಕೈಹೊತ್ತು ಕುಳಿತುಬಿಟ್ಟ. ಆದರೆ ಮರುಕ್ಷಣ ಅವನಿಗೆ ಹೆಂಡತಿಯ ನೆನಪಾಯಿತು. ಇಂಥ ಸಮಯದಲ್ಲಿ ನಾನೇ ಧೈರ್ಯಗೆಟ್ಟರೆ ಅವಳೂ ಸೋಲುತ್ತಾಳೆ ಎಂದೆನಿಸಿ, ‘ಆದರೂ ಅಂಥದ್ದೇನೂ ಆಗುವುದಿಲ್ಲ ಮಾರಾಯ್ತಿ. ಹೆದರಬೇಡ. ನಾಳೆಯಿಂದ ಕೋಳಿಗಳನ್ನು ಹೊರಗೆಲ್ಲೂ ಬಿಡದಿದ್ದರಾಯಿತಷ್ಟೆ. ನಾಳೆಯೇ ಎಲ್ಲಾದರೂ ಹುಡುಕಿ ಒಂದು ಗೂಡು ತರುತ್ತೇನೆ. ಅದರಲ್ಲೇ ಸಾಕುವ…!’ ಎಂದು ಅವಳನ್ನು ಸಂತೈಸಿದ. ಆಗ ರಾಧಾಳಿಗೂ ಸಮಾಧಾನವಾಯಿತು. ಮರುದಿನ ಸಂಜೆ ಗುಜರಿ ಅಂಗಡಿಯೊಂದರಿಂದ ಹಳೆಯ ಕಬ್ಬಿಣದ ಗೂಡೊಂದನ್ನು ತಂದು ರಾಧಾಳಿಗೆ ಕೊಟ್ಟ. ಅಂದಿನಿಂದ ಕೋಳಿಯ ಸಂಸಾರವು ಬಂಧನಕ್ಕೊಳಗಾಗಿ ಬದುಕತೊಡಗಿತು.

                                                               ***

ಸುಮಿತ್ರಮ್ಮನ ಗಂಡ ಲಕ್ಷ್ಮಣಯ್ಯ ಜೀವವಿಮಾ ಕಂಪನಿಯಿಂದ ನಿವೃತ್ತರಾಗಿ ಮೂರು ವರ್ಷ ಕಳೆದಿತ್ತು. ಅವರ ಮಕ್ಕಳಿಬ್ಬರೂ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಲಕ್ಷ್ಮಣಯ್ಯ ಬಹಳ ಸ್ವಾಭಿಮಾನಿ ಮನುಷ್ಯ. ಆದ್ದರಿಂದ ಅವರು, ಶಂಕರ ಹೊಸತಾಗಿ ಕಟ್ಟಿರಿಸಿದ್ದ ಮನೆಯೊಂದನ್ನು ನಿವೃತ್ತಿಯ ನಂತರ ದೊರೆತ ಹಣದಿಂದಲೇ ಖರೀದಿಸಿ ಹೆಂಡತಿಯೊಂದಿಗೆ ವಾಸಿಸುತ್ತಿದ್ದರು. ಲಕ್ಷ್ಮಣಯ್ಯನಿಗೆ ವಯಸ್ಸು ಅರವತ್ತೈದು ಸಮೀಪಿಸುತ್ತಿತ್ತಾದರೂ ಅವರ ಜೀವನೋತ್ಸಾಹವಿನ್ನೂ ಕುಗ್ಗಿರಲಿಲ್ಲ. ಹಾಗಾಗಿ ನಿವೃತ್ತಿಯ ನಂತರವೂ ದಿನವಿಡೀ ಹೊರಗೆ ಓಡಾಡಿಕೊಂಡು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಕಾರ್ಯಗಳನ್ನೂ ಮತ್ತು ಸ್ನೇಹಿತರ, ಆತ್ಮೀಯರ ಒಂದಷ್ಟು ಬಿಟ್ಟಿ ಚಾಕರಿಗಳನ್ನೂ ಮಾಡಿಕೊಡುತ್ತ ಬ್ಯುಸಿಯಾಗಿರುತ್ತಿದ್ದರು. ಆದ್ದರಿಂದ ಅಂದು ಆದಿತ್ಯವಾರವಾದರೂ ಎಂದಿನಂತೆ ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಪೇಟೆಗೆ ಹೊರಟು ಹೋಗಿದ್ದರು. ಸುಮಿತ್ರಮ್ಮ ತನಗೂ ಗಂಡನಿಗೂ ಬೇಕಾದಷ್ಟು ಅಡುಗೆಯನ್ನು ಮಾಡಿ ಮುಗಿಸಿದರು. ಆದರೆ ತಮ್ಮ ಗಂಟು ನೋವಿನಿಂದಾಗಿ ವಾರದಿಂದ ಒಗೆಯದಿದ್ದ ಬಟ್ಟೆಬರೆಗಳು ಬಚ್ಚಲುಕೋಣೆಯ ಮೂಲೆಯಲ್ಲಿ ರಾಶಿ ಬಿದ್ದಿದ್ದವು. ಇವತ್ತಾದರೂ ಅವುಗಳನ್ನು ಒಗೆದು ಹಾಕೋಣವೆಂದುಕೊಂಡವರು ಅತ್ತ ಹೋಗಿ ಹುಸ್ಸಪ್ಪಾ…! ಎನ್ನುತ್ತ ಬಾಗಿ ಬಟ್ಟೆಯ ರಾಶಿಯನ್ನು ಬಾಚಿಕೊಂಡರು. ಮರುಕ್ಷಣ ಭೀಕರ ಫೂತ್ಕಾರವೊಂದು ಅವರನ್ನು ಬೆಚ್ಚಿಬೀಳಿಸಿದ ಬೆನ್ನಿಗೇ ಹದವಾದ ಬಿಸಿಯುಸಿರೊಂದೂ ಅವರ ಮುಖಕ್ಕೆ ರಪ್ಪನೆ ಬಡಿದು ಮೈಯ ರೋಮರೋಮಗಳನ್ನೂ ನಿಮಿರಿ ನಿಲ್ಲಿಸಿತು! ‘ಅಯ್ಯಯ್ಯಪ್ಪಾ ದೇವರೇ…!’ ಎಂದು ಛಾವಣಿ ಕಿತ್ತು ಹೋಗುವಂತೆ ಕಿರುಚಿದ ಸುಮಿತ್ರಮ್ಮ ಬಟ್ಟೆಗಳನ್ನಲ್ಲೇ ಎಸೆದು ಕೀಲು ನೋವನ್ನೂ ಲೆಕ್ಕಿಸದೆ ಎದ್ದುಬಿದ್ದು ಹೊರಗೆ ಓಡಿದರು. ಅಂಗಳಕ್ಕೆ ಬಂದು ನಿಂತವರ ಕೈಕಾಲುಗಳು ತರತರಾ ಕಂಪಿಸುತ್ತಿದ್ದವು. ಅದರೊಂದಿಗೆ ರಕ್ತದೊತ್ತಡವೂ ಏರಿ ಎದೆಯು ತೀವ್ರವಾಗಿ ಢವಗುಟ್ಟುತ್ತಿತ್ತು. ಏನೂ ತೋಚದೆ ತೆಂಗಿನ ಮರದ ಕಟ್ಟೆಯ ಮೇಲೆ ದೊಪ್ಪನೆ ಕುಸಿದು ಕುಳಿತರು. ಸ್ವಲ್ಪ ಹೊತ್ತಿನ ನಂತರ ಸ್ಥಿಮಿತಕ್ಕೆ ಬಂದವರು ಹೌದೂ, ಆ ಥರ ಬುಸುಗುಟ್ಟಿದ್ದು ಏನಿರಬಹುದು, ಹಾವಾಗಿರಬಹುದಾ…? ಎಂದು ಯೋಚಿಸಿದರು. ತಟ್ಟನೆ ಹೌದು! ಹಾವೇ ಇರಬೇಕು ಎಂದೆನಿಸಿತು. ಅಯ್ಯಯ್ಯೋ ಕೃಷ್ಣಾ ಈಗೇನು ಮಾಡುವುದಪ್ಪಾ…? ಇವರೂ ಮನೆಯಲ್ಲಿಲ್ಲವಲ್ಲಾ…ದೇವ್ರೇ ದೇವ್ರೇ..! ಎಂದು ಸಂಕಟಪಟ್ಟರು. ಬಳಿಕ ಮನೆಯೊಳಗೆ ಹೋಗಿ ನೋಡಲೋ ಬೇಡವೋ? ಎಂಬ ಗೊಂದಲಕ್ಕೆ ಬಿದ್ದರು. ಹೋಗಿ ನೋಡುವುದೇ ಸರಿ ಎನ್ನಿಸಿತು. ಆದರೆ ಮರುಕ್ಷಣ ಅಯ್ಯಬ್ಬಾ, ನನ್ನಿಂದಾಗದಪ್ಪಾ! ಎಂದು ಉದ್ಗರಿಸಿ ಖಿನ್ನರಾಗಿ ಕುಳಿತುಬಿಟ್ಟರು. ಅತ್ತ, ಎದೆ ಬಿರಿಯುವಂಥ ಸುಮಿತ್ರಮ್ಮನ ಬೊಬ್ಬೆಯು ಎದುರು ಮನೆಯ, ಚಿನ್ನದಂಗಡಿಯ ಉದ್ಯೋಗಿ ರಮೇಶನ ಕಿವಿಗೆ ಅಪ್ಪಳಿಸಿತು. ಅವನು ತನ್ನ ಹೊಸ ಪ್ಯಾಂಟಿಗೆ ಇಸ್ತ್ರಿ ಹೊಡೆಯುತ್ತಿದ್ದವನು ಅದನ್ನಲ್ಲೇ ಬಿಟ್ಟು ಸುಮಿತ್ರಮ್ಮನ ಮನೆಗೆ ಓಡಿ ಬಂದ. ತೆಂಗಿನ ಕಟ್ಟೆಯ ಮೇಲೆ ತಲೆಗೆ ಕೈಹೊತ್ತು ಕುಳಿತಿದ್ದ ಅವರನ್ನು ಕಂಡವನು, ‘ಏನಾಯ್ತು ಸುಮಿತ್ರಮ್ಮಾ…?’ ಎಂದ ಕಳವಳದಿಂದ.

‘ಒಳಗೇನೋ ಭಯಂಕರವಾಗಿ ಬುಸುಗುಟ್ಟಿದ ಹಾಗಾಯ್ತು ಮಾರಾಯಾ…. ಬಹುಶಃ ಹಾವೇ ಇರಬೇಕು!’ ಎಂದು ಆಕೆ ಅಳುಮೋರೆ ಹಾಕಿಕೊಂಡು ಅಂದರು. ‘ಹಾವು!’ ಎಂದಾಕ್ಷಣ ರಮೇಶನಿಗೂ ತಾನು ಓಡಿ ಬಂದ ಆವೇಶದಲ್ಲಿ ಅರ್ಧಕ್ಕರ್ಧ ಇಳಿದುಬಿಟ್ಟಿತ್ತು. ಆದರೂ ಇನ್ನರ್ಧಕ್ಕೆ ಸ್ವಲ್ಪ ಧೈರ್ಯವನ್ನು ಬೆರೆಸಿಕೊಂಡು ರಾಧಾಳ ಬೇಲಿಯತ್ತ ಓಡಿದ. ಗೊಬ್ಬರದ ಗಿಡದ ಮಾರುದ್ದದ ಕೋಲೊಂದನ್ನು ಮುರಿದು ತಂದ. ‘ಹೆದರಬೇಡಿ ಸುಮಿತ್ರಮ್ಮ ನಾನಿದ್ದೇನೆ. ಒಳಗೆ ಹೋಗಿ ಏನಿದೆಯೆಂದು ನೋಡಿಕೊಂಡು ಬರುವ ಬನ್ನಿ…!’ ಎಂದು ಅವರಿಗೆ ಧೈರ್ಯ ನೀಡುವ ನೆಪದಲ್ಲಿ ತನಗೂ ಬೆಂಗಾವಲಿಗಿರಲಿ ಎಂದುಕೊಂಡು ಕರೆದ.

‘ಅಯ್ಯೋ ದೇವ್ರೇ… ನಾನು ಬರುವುದಾ…? ಇಲ್ಲ ಇಲ್ಲ ಮಾರಾಯಾ! ಒಮ್ಮೆ ಅದರ ಶಬ್ದ ಕೇಳಿಯೇ ನನ್ನ ಜೀವ ಹಾರಿ ಹೋದ ಹಾಗಾಗಿದೆ. ಇನ್ನೊಮ್ಮೆ ಕೇಳಿದರೆ ಸತ್ತೇ ಹೋಗುತ್ತೇನಷ್ಟೇ!’ ಎಂದ ಸುಮಿತ್ರಮ್ಮ ಮತ್ತದೇ ಭಂಗಿಯಲ್ಲಿ ಕುಳಿತುಬಿಟ್ಟರು.

‘ಹಾಗಾದರೆ ಯಾವ ಕೋಣೆಯಲ್ಲಿ ಶಬ್ದ ಬಂತು ಅಂತನಾದರೂ ತೋರಿಸಿ, ಬನ್ನಿ!’ ಎಂದು ರಮೇಶ ತಾನೊಬ್ಬನೇ ಒಳಗಡಿಯಿಡಲು ಅಂಜುತ್ತ ಮತ್ತೆ ಕರೆದ. ಆದರೆ ಸುಮಿತ್ರಮ್ಮ ಕುಳಿತಲ್ಲಿಂದ ಕದಲಲಿಲ್ಲ. ಅದರ ನಡುವೆಯೂ ಅವರಿಗೊಂದು ಸಂಗತಿ ತಟ್ಟನೆ ಹೊಳೆದು ಮನಸ್ಸಿಗೆ ತೀವ್ರ ನೋವಾಯಿತು. ಅದೇನೆಂದರೆ ಅವರು ತಮ್ಮ ಪೂರ್ವಿಕರ ಕಾಲದಿಂದಲೂ ಮಡಿಮೈಲಿಗೆಯ ಸಂಪ್ರದಾಯವನ್ನು ಕಟ್ಟುನಿಟ್ಟಿನಿಂದ ಪಾಲಿಸಿಕೊಂಡು ಬಂದವರು. ಹಾಗಾಗಿ ಇತರ ಜಾತಿಯವರು ಅದೆಷ್ಟೇ ಹತ್ತಿರದವರಾದರೂ ಅವರನ್ನು ಮುಟ್ಟಿಸಿಕೊಂಡವರೂ ಅಲ್ಲ ಮತ್ತು ಪಡಸಾಲೆಯವರೆಗೂ ಬಿಟ್ಟುಕೊಂಡವರಲ್ಲ. ಅಷ್ಟಲ್ಲದೇ ಅಂಥವರ ಕೈಗಳಿಂದ ನೇರವಾಗಿ ವಸ್ತುಗಳನ್ನು ಪಡೆಯುವುದು ಅಥವಾ ಕೊಡುವುದನ್ನೂ ಮಾಡದೆ ಸದಾ ಅಂತರವಿಟ್ಟುಕೊಂಡೇ ವ್ಯವಹರಿಸುತ್ತ ಬಂದವರು. ಆಕಸ್ಮತ್ತಾಗಿ ಅಥವಾ ಅನಿವಾರ್ಯವಾಗಿ ಅಂಥದ್ದೊಂದು ಪ್ರಮಾದ ನಡೆಯಿತೆಂದರೆ ಆ ಕೂಡಲೇ ಎಲ್ಲೆಲ್ಲೋ ಧಾವಿಸಿ ದನದ ಸೆಗಣಿ ಮತ್ತು ಗಂಜಳವನ್ನು ಹೊತ್ತು ತಂದು ಮನೆಯೊಳಗೆಲ್ಲ ಸಿಂಪಡಿಸಿ, ಸಾರಿಸಿ ಶುದ್ಧಗೊಳಿಸಿದ ನಂತರವೇ ಅವರು ನೆಮ್ಮದಿ ತಾಳುತ್ತಿದ್ದರು. ತಮ್ಮ ಮನೆತನದ ಇಂಥದ್ದೊಂದು ನೇಮನಿಷ್ಠೆಯೇ ಸಮಾಜದಲ್ಲಿ ತಮ್ಮನ್ನು ಎಲ್ಲರಿಗಿಂತ ಮೇಲ್ಮಟ್ಟದಲ್ಲಿ ಇರಿಸಿದೆ ಹಾಗೂ ಇತರರನ್ನು ಅಸ್ಪ್ರಶ್ಯರಂತೆ ಕಾಣುವುದೇ ತಮ್ಮ ಶ್ರೇಷ್ಠತೆಯ ಸಂಕೇತ ಎಂದವರು ನಂಬಿದ್ದರು. ವಿಚಾರ ಹೀಗಿರುವಾಗ ಇಂದು ತಮ್ಮ ಕಣ್ಣ ಮುಂದೆಯೇ ಕೆಳಜಾತಿಯವನೊಬ್ಬ ತಮ್ಮ ಮನೆಯೊಳಗೆ ಪ್ರವೇಶಿಸುವಂತಾಗುತ್ತಿದೆಯಲ್ಲಾ ದೇವರೇ…! ಎಂಬ ಕೊರಗು ಅವರನ್ನು ಹಿಂಸಿಸಿತು. ಆದರೆ ಮನೆಯೊಳಗೆ ಹೊಕ್ಕು ಕುಳಿತು ತಮ್ಮ ಪ್ರಾಣಕ್ಕೇ ಸಂಚಕಾರವಾಗಲಿದ್ದ ಹಾವನ್ನು ನೆನೆದವರ ಮನಸ್ಸು ತಟ್ಟನೆ ತಮ್ಮ ಹಿಂದಿನ ಧೋರಣೆಯನ್ನು ಬದಲಾಯಿಸಿಬಿಟ್ಟಿತು. ‘ಥೂ, ಥೂ! ನನ್ನ ಮಡಿಮೈಲಿಗೆಗಿಷ್ಟು ಬೆಂಕಿ ಬಿತ್ತು! ಆ ದರಿದ್ರದ ಹಾವು ಒಮ್ಮೆ ಹೊರಗೆ ಹೋಗಿಕೊಳ್ಳಲಿ. ಆಮೇಲೆ ಗಣಹೋಮ ಮಾಡಿಯಾದರೂ ಇಡೀ ಮನೆಯನ್ನು ಶುದ್ಧ ಮಾಡಿಸಬಹುದು!’ ಎಂದು ಸಮಾಧಾನ ತಂದುಕೊಂಡರು.

‘ಆ ಹಾವಿನ ಶಬ್ದಕ್ಕೆ ಓಡಿ ಬಂದಿದ್ದರಿಂದ ನನ್ನ ಸೊಂಟ ಹಿಡಿದುಕೊಂಡ ಹಾಗಾಗಿದೆ ಮಾರಾಯಾ. ದಯವಿಟ್ಟು ನೀನೇ ಹೋಗಿ ಅದನ್ನು ಹೊರಗೆ ಓಡಿಸಬೇಕು. ನಿನ್ನ ದಮ್ಮಯ್ಯ!’ ಎಂದು ದೈನ್ಯದಿಂದ ಕೇಳಿಕೊಂಡರು. ಆಗ ರಮೇಶ ಬೇರೆ ವಿಧಿಯಿಲ್ಲದೆ, ‘ಸರಿ. ಯಾವ ಕೋಣೆಯಲ್ಲಿ ಶಬ್ದ ಬಂತೆಂದಾದರೂ ಹೇಳಿ!’ ಎಂದು ಸೆಟೆದು ನಿಂತು ಕೇಳಿದ.

‘ಹೀಗೆ ನೇರವಾಗಿ ಒಳಗೆ ಹೋಗು. ಎಡಬದಿಯಲ್ಲಿ ಬಚ್ಚಲುಕೋಣೆಯಿದೆ. ಅಲ್ಲಿ ಬಟ್ಟೆಯ ರಾಶಿಯೊಂದು ಬಿದ್ದಿದೆ ನೋಡು, ಅಲ್ಲೇ ಶಬ್ದ ಬಂದಿದ್ದು!’ ಎಂದು ಸುಮಿತ್ರಮ್ಮ ಸೂಚಿಸಿದರು.

   ಆದ್ದರಿಂದ ರಮೇಶ ಆದಷ್ಟು ಧೈರ್ಯ ತಂದುಕೊಂಡು ಒಳಗೆ ಹೊರಟ. ಒಂದೊಂದೇ ಹೆಜ್ಜೆಯನ್ನಿಡುತ್ತ ಮತ್ತು ಇಟ್ಟ ಹೆಜ್ಜೆಯ ಹಿಂದೆ ಮುಂದೆಯೇ ದೃಷ್ಟಿಯನ್ನು ನೆಡುತ್ತ ಸುಮಾರು ಇಪ್ಪತ್ತೈದು ಹೆಜ್ಜೆಗಳಷ್ಟು ಮುಂದೆ ಸಾಗಿದ. ಅಲ್ಲೊಂದು ಕಡೆ ಬಟ್ಟೆಯ ರಾಶಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಅದರ ಸಮೀಪ ಹೋಗಿ ನಿಂತ. ಸ್ಪಷ್ಟವಾಗಿ ನಡುಗುತ್ತಿದ್ದ ಕೈಯಲ್ಲಿದ್ದ ಗೊಬ್ಬರದ ಕೋಲಿನಿಂದ ಬಟ್ಟೆಯ ರಾಶಿಯನ್ನು ರಪರಪನೇ ಕೆದಕಿದವನು ಉಬ್ಬಿದ ಭಾಗವೊಂದಕ್ಕೆ ಬಲವಾಗಿ ತಿವಿದನಷ್ಟೆ. ಮರುಕ್ಷಣ ಅವನ ಹೃದಯವೂ ಬಾಯಿಗೆ ಬರುವಂಥದ್ದೊಂದು ಫೂತ್ಕಾರ ಅಪ್ಪಳಿತು. ‘ಅಯ್ಯಯ್ಯಮ್ಮಾ…!’ ಎಂದರಚುತ್ತ ಎರಡಡಿ ಎತ್ತರಕ್ಕೂ ಐದಡಿ ಹಿಂದಕ್ಕೂ ನೆಗೆದು ನಿಂತಿದ್ದ!

   ಇತ್ತ ಸುಮಿತ್ರಮ್ಮನ ಉದಾಸೀನದ ಬಾಚುವಿಕೆಯಿಂದಲೂ ರಮೇಶನ ಒರಟಾದ ತಿವಿತದಿಂದಲೂ ಹೆದರಿ ಕಕ್ಕಾಬಿಕ್ಕಿಯಾಗಿದ್ದ ಸುಮಾರು ಆರು ಅಡಿ ಉದ್ದದ, ನಸುಹಳದಿ ಬಣ್ಣದ ದೈತ್ಯ ನಾಗರಹಾವೊಂದು ಬಟ್ಟೆಯ ರಾಶಿಯಿಂದ ಸರ್ರನೆ ಹೊರಗೆ ಬಂದುದು, ಸುಮಾರು ಎರಡಡಿ ಎತ್ತರಕ್ಕೆ ತನ್ನ ತಲೆಯನ್ನೆತ್ತಿ ಆರಿಂಚು ಅಗಲದ ಹೆಡೆಯನ್ನು ರಪ್ಪನೆ ಅರಳಿಸಿ ನಿಂತು ಬುಸುಗುಟ್ಟುತ್ತ ರಮೇಶನಿಗೆ ದರ್ಶನ ನೀಡಿತು. ಆ ಹಾವಿನ ಉಗ್ರರೂಪವನ್ನು ಕಂಡ ರಮೇಶ, ‘ಅಯ್ಯಯ್ಯೋ ದೇವರೇ… ನನ್ನ ಕಥೆ ಇಲ್ಲಿಗೇ ಮುಗಿಯಿತು…!’ ಎಂದು ಮೆಲ್ಲನೇ ಉದ್ಗರಿಸಿದವನು ಒಂದೇ ಉಸಿರಿಗೆ ಹೊರಗ್ಹೋಡಿ ಬಂದುಬಿಟ್ಟ. ಆದರೆ ಸುಮಿತ್ರಮ್ಮನನ್ನು ಸಮೀಪಿಸುತ್ತಲೇ, ಥೂ! ಒಂದು ಹೆಣ್ಣು ಹೆಂಗಸಿನೆದುರು ತಾನು ಪುಕ್ಕಲುತನ ತೋರಿಸುವುದೇ…? ಎಂದೆನ್ನಿಸಿದವನಿಗೆ ನಾಚಿಕೆಯಾಯಿತು. ಆದ್ದರಿಂದ ತನ್ನನ್ನು ಸಂಭಾಳಿಸಿಕೊಂಡು ಗಂಭೀರವಾಗಿ ಹೆಜ್ಜೆಯಿಡುತ್ತ ಅವರತ್ತ ಹೋದ.

‘ಹೌದು ಸುಮಿತ್ರಮ್ಮಾ ನಿಮ್ಮ ಮನೆಯೊಳಗೆ ದೊಡ್ಡದೊಂದು ನಾಗರಹಾವು ಸೇರಿಕೊಂಡಿದೆ ಮಾರಾಯ್ರೇ!’ ಎಂದು ಕಣ್ಣಗಲಿಸಿ ಅಂದವನು ಸ್ವಲ್ಪಹೊತ್ತು ಅವರೆದುರು ಸುಮ್ಮನೆ ನಿಂತುಕೊಂಡು ಯೋಚಿಸಿದ.

‘ಹೌದಾ ಮಾರಾಯಾ… ಏನಪ್ಪಾ ಮಾಡುವುದೀಗಾ…? ಇಂಥ ಹೊತ್ತಲ್ಲಿ ಹಾಳಾದ ಇವರೂ ಯಾರ ಮನೆಯಲ್ಲಿ ಪಟ್ಟಾಂಗ ಹೊಡಿತಾ ಕುಳಿತಿದ್ದಾರೋ…!’ ಎಂದು ಸುಮಿತ್ರಮ್ಮ ಗಂಡನಿಗೆ ಬೈದವರು ಮರಳಿ ತಲೆಗೆ ಕೈಹೊತ್ತು ಕುಳಿತುಬಿಟ್ಟರು. ಅದನ್ನು ಕಂಡ ರಮೇಶನ ಗಂಡಸುತನವು ಮತ್ತೊಮ್ಮೆ ಕೆರಳಿತು. ಅವನು ಕೂಡಲೇ, ‘ನೀವೇನೂ ಚಿಂತಿಸಬೇಡಿ ಸುಮಿತ್ರಮ್ಮಾ. ಆ ಹಾವನ್ನು ಈಗಲೇ ನಿಮ್ಮ ಕಣ್ಣ ಮುಂದೆಯೇ ಹೇಗೆ ಹೊರಗೆ ಓಡಿಸುತ್ತೇನೆ ಅಂತ ಸುಮ್ಮನೆ ನೋಡುತ್ತಿರಿ ಅಷ್ಟೇ!’ ಎಂದವನು ಕೈಯಲ್ಲಿದ್ದ ಸಣ್ಣಕೋಲನ್ನು ಬೀಸಿ ದೂರಕ್ಕೆಸೆದು ಅಲ್ಲೇ ಗೋಡೆಗೊರಗಿ ನಿಂತಿದ್ದ ಬಲೆ ತೆಗೆಯುವ ಉದ್ದದ ಕೋಲನ್ನು ಕೈಗೆತ್ತಿಕೊಂಡು ಬಿಸಿಯುಸಿರು ದಬ್ಬುತ್ತ ಮತ್ತೊಮ್ಮೆ ಮನೆಯೊಳಗೆ ನಡೆದ. ಅಲ್ಲಿ ನಾಗರಹಾವು ಈಗಲೂ ಅದೇ ಭಂಗಿಯಲ್ಲಿ ನಿಂತಿತ್ತು. ಅದರ ಬುಸುಗುಟ್ಟುವಿಕೆಯು ಸ್ವಲ್ಪ ಮೆತ್ತಗಾಗಿತ್ತು. ಆದರೆ ಮರಳಿ ರಮೇಶನನ್ನೂ ಅವನ ಕೈಯಲ್ಲಿದ್ದ ಉದ್ದದ ಕೋಲನ್ನೂ ಕಂಡದ್ದು ಮತ್ತೆ ಹೆದರಿ, ಜೋರಾಗಿ ಬುಸುಗುಟ್ಟುತ್ತ ಹೆಡೆಯನ್ನು ಬೀಸಿ ಬೀಸಿ ನಾಲ್ಕೈದು ಬಾರಿ ನೆಲಕ್ಕಪ್ಪಳಿಸಿಬಿಟ್ಟಿತು!

(ಮುಂದುವರೆಯುವುದು)

************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

2 thoughts on “

  1. ನಾಗಬನದ ಹತ್ತಿರ ಮಾಂಸಾಹಾರಿಗಳು ಮನೆ ಕಟ್ಟಿ ಇರಕೂಡದೆಂಬುದನ್ನು ರಾಧಾಳೂ ನಂಬಿದ್ದಳು. ಇದೇ ಮುಂದೆ ಅವಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದೆಂಬುದನ್ನು ಕಾದು ನೋಡಬೇಕು. ಈ ಅಧ್ಯಾಯದಲ್ಲಿ ನಾಗರ ಹಾವಿನ ಪ್ರವೇಶವಾಗಿದೆ. ಕುತೂಹಲಕರವಾದ ನಿರೂಪಣೆಯ ಶೈಲಿ ಓದುಗನನ್ನು ಸೆಳೆಯುತ್ತದೆ. ಅಭಿನಂದನೆಗಳು.

Leave a Reply

Back To Top