ಅಂಕಣ ಬರಹ

ಒಂದು ಭಾವ : ಎರಡು ವಚನ

ಒಡೆದೋಡು ಎನ್ನ ಮನೆಯಲ್ಲಿಲ್ಲದಂತೆ ಮಾಡಯ್ಯ

ಕೊಡುದೇವಾ ಎನ್ನ ಕೈಯಲೊಂದು ಕಱಿಕೆಯನು

ಮೃಡದೇವಾ ಶರಣೆಂದು ಭಿಕ್ಷಕ್ಕೆ ಹೋದರೆ

ಅಲ್ಲಿ, ನಡೆ ದೇವಾ ಎಂದೆನಿಸು ಕೂಡಲಸಂಗಮದೇವಾ ! ೧

**********


ಮನೆಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯಾ

ಬೇಡಿದರೆ ಇಕ್ಕದಂತೆ ಮಾಡಯ್ಯಾ

ಇಕ್ಕಿದೊಡೆ ನೆಲಕ್ಕೆ ಬೀಳುವಂತೆ ಮಾಡಯ್ಯಾ

ನೆಲಕ್ಕೆ ಬಿದ್ದೊಡೆ ನಾನೆತ್ತಿಕೊಂಬುದಕ್ಕೆ ಮುನ್ನವೆ

ಶುನಿ ಎತ್ತಿಕೊಂಬಂತೆ ಮಾಡಾ ಚೆನ್ನಮಲ್ಲಿಕಾರ್ಜುನ

ವಚನ ಚಳುವಳಿಯಲ್ಲಿನ ಆಂತರಿಕ ಪ್ರಭಾವದ ಕೊಡು ಕೊಳುವಿಕೆಗಳು ಬಹಳ ಗಮನ ಸೆಳೆಯುವಂತದ್ದು. ಈ ವಚನಗಳು ಪ್ರಭಾವ ಪ್ರೇರಣೆಗಳ ನೆಲೆಯಲ್ಲಿ ಬಹುಮುಖ್ಯದ್ದಾಗುತ್ತದೆ. ಈ ಕೊಡು ಕೊಡಳುವಿಕೆ ಎಂಬುದಕ್ಕೆ ಒಂದು ಬಹುಮುಖ್ಯ ಕಾರಣ ಇವರಿಬ್ಬರ ಹಿನ್ನೆಲೆಗಳು. ಬಸವಣ್ಣನವರ ಈ ವಚನದಲ್ಲಿನ ಭಾವ ಸಮಾಜದಿಂದ ಆರಂಭಗೊಂಡು ಮತ್ತು ದೈವಕ್ಕೇ ಪರೀಕ್ಷೆಗೊಡ್ಡು ಎನ್ನುವ ಪಂಥಾಹ್ವಾನ ಕೊಡುವಂತಿದೆ. ಅಕ್ಕನಲ್ಲಿ ಇದು ಸಹಜವಾಗಿ ಬಂದಿದೆ. ಅಕ್ಕ ಪರಿಪರಿಯಾಗಿ ತನ್ನ ಬದುಕಲ್ಲಿ ಕಾಣಬೇಕಾದ ಆದರ್ಶಕ್ಕೆ ಅಭಿಮುಖವಾಗಿ ಸುತ್ತಮುತ್ತದವರಿಂದ ಬಹುಕಷ್ಟಕ್ಕೆ ಒಡ್ಡಿಕೊಂಡವಳು. ಬಸವಣ್ಣನವರು ರಾಜನೊಬ್ಬನ ಆಸ್ಥಾನದಲ್ಲಿದ್ದು, ಪ್ರಭುತ್ವದ ಜೊತೆಗೆ, ಅದರ ಒಳಗೆ ಒಂದು ಭಾಗವಾಗಿದ್ದುಕೊಂಡೇ ಸಮಾಜ ಮತ್ತು ಪ್ರಭುತ್ವಗಳ ಸಾಯುಜ್ಯ ಸಂಬಂಧವನ್ನು ಸ್ಥಾಪಿಸುವ ಕಡೆಗೆ ನಡೆದವರು. ಎಲ್ಲಿಯೂ ಮನುಷ್ಯ ಸಹಜವಾದ ಸಂವಹನದಿಂದ ಹೊರಗೆ ಉಳಿದವರಲ್ಲ.  ಬಸವಣ್ಣನವರಲ್ಲಿ ಆತ್ಮೋದ್ಧಾರದಷ್ಟೇ ಮುಖ್ಯವಾಗಿ ಸಮಾಜೋದ್ಧಾರ ಮುಖ್ಯವಾಗುತ್ತದೆ. ಆದರೆ ಅಕ್ಕನಿಗೆ ಆತ್ಮೋದ್ದಾರವಷ್ಟೇ ಮುಖ್ಯ. ಸರ್ವಸಂಗ ಪರಿತ್ಯಾಗಿಯಾಗಿ ನಡೆವಾಗಲೂ ಜೊತೆಗಾರನನ್ನೇ ತನ್ನನ್ನು ಪರೀಕ್ಷೆ ಮಾಡೆನ್ನುವಲ್ಲಿ ಅಕ್ಕಳಲ್ಲಿನ ಗಟ್ಟಿತನ ಬಹಳ ಬೆರಗನ್ನು ಉಂಟುಮಾಡುತ್ತದೆ. ಅಕ್ಕಳ  ಹೆಚ್ಚು ವಚನಗಳು ತನ್ನನ್ನೇ ಕೇಂದ್ರ ಮಾಡಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ವಚನಗಳಲ್ಲಿ ಕಾಡು, ಮರ, ಪ್ರಾಣಿ, ಪಕ್ಷಿಗಳೇ ಅವಳ ಸಂಗಾತದಲ್ಲಿ ಇರುವುದು. ಅಪರೂಪಕ್ಕೊಮ್ಮೆ “ಅಕ್ಕ ಕೇಳವ್ವಾ” ಎಂದು ಸಂಬೋಧನೆ ಮಾಡುತ್ತಾಳೆ. ಅದೂ ತನ್ನೊಳಗಿನೊಳಗಿನೊಳಗನ್ನು “ಅಕ್ಕ” ಎಂದು ಕರೆವಂತಿದೆಯೇ ಹೊರತು ಹೊರಗಿನ ಯಾರೋ ಮತ್ತೊಬ್ಬರನ್ನು ಸಂಬೋಧಿಸಿದಂತೆ ಕಾಣುವುದಿಲ್ಲ.

ಬಸವಣ್ಣನವರ ವಚನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಸಮಾಜದಲ್ಲಿನ ಎರಡು ಭಿಕ್ಷಾಟನೆ ಮಾಡುವ ಭಿಕ್ಷುಕರ ಲಕ್ಷಣಗಳನ್ನು ಹೇಳುತ್ತಿದ್ದಾರೆ. ಒಂದು “ಒಡೆದ ಓಡು” ಮತ್ತೊಂದು “ಕೈಯಲೊಂದು ಕರಿಕೆ” ಹಿಡಿದಿರುವ ಚಿತ್ರವನ್ನು ಕೊಡುತ್ತಿದ್ದಾರೆ. ಒಡೆದ ಓಡು ಒಡೆದ ಮಡಿಕೆಯ ಚಿತ್ರವನ್ನು ಕಣ್ಣ ಮುಂದೆ ಬರುವಂತೆಯೇ, ಓಡು ಎಂಬುದಕ್ಕೆ ತಲೆಬುರುಡೆಯ ಹಿಂಭಾಗದ್ದು ಎಂಬುದನ್ನೂ ನೆನಪಿಸುತ್ತದೆ. ಈ ಲಕ್ಷಣ ಕಾಪಾಲಿಕ ಮತ್ತು ಕಾಳಾಮುಖರ ಬದುಕಿನ ಬಗೆಗೆ ಹೇಳುವಾಗಲೂ ಬರುತ್ತದೆ. ಅದೂ ಮನೆಯಲ್ಲಿ ಇಲ್ಲದ ಮಟ್ಟದ ಕಷ್ಟಗಳನ್ನು ಕೊಡು ಎಂಬುದಕ್ಕೆ ಬಹಳ ದೊಡ್ಡ ಆತ್ಮಸ್ಥೈರ್ಯವು ತಿಳಿಯುತ್ತಿದೆ. ಕೈಯಲ್ಲಿನ ಕರಿಕೆಯ ಚಿತ್ರ ಬಹುಮುಖ್ಯವಾದದ್ದು. ಎಲ್ಲವನ್ನೂ ಕಳೆದುಕೊಂಡು ಬದುಕು ರಸ್ತೆಗೆ ಬಂದಿದ್ದರೂ ಚಿಗುರುವೆನೆಂಬ ಹಟವನ್ನು ಮಾನಸಿಕವಾಗಿ ಇರುವವರನ್ನು, ಒಂದಷ್ಟು ತಮ್ಮೆಡೆಗೆ ಸೆಳೆವುದಕ್ಕೆ ಸಹಾಯಕವಾಗಿ ಕೆಲಸ ಮಾಡುವಂತೆ ಕಾಣುತ್ತಿದೆ. ಅದಷ್ಟೇ ಅಲ್ಲದೇ ಒಂದು ಸಂವಾದ ರೂಪದಲ್ಲಿ ನಾಟಕೀಯತೆಯನ್ನು ವಚನದಲ್ಲಿ ತಂದಿದ್ದಾರೆ. “ಮೃಡದೇವಾ ಶರಣೆಂದು” ಭಿಕ್ಷಕ್ಕೆ ನಡೆದರೆ, “ನಡೆ ದೇವಾ” ಎಂದೆನಿಸುವಂತೆ ಎದುರಿನವರ ಮಾನಸಿಕ ಸ್ಥಿತಿಯನ್ನೂ ತಮ್ಮ ಅಪೇಕ್ಷೆಯ ಕಡೆ ತಿರುಗಿಸಿದ್ದಾರೆ. ಈ ಎಲ್ಲಾ ಕ್ರಿಯೆಗಳೂ ಇರುವವನ ಬಯಕೆಗಳು. ಇಲ್ಲಿನ ಬಹಳ ಮುಖ್ಯ ಕ್ರಿಯಾಪದವಾದ “ಹೋದರೆ” ಎಂಬುದನ್ನು ಗಮನಿಸಿ. ಹೋದರೂ ಹೋಗಬಹುದು, ಹೋಗದೆ ಇದ್ದರೂ ಇಲ್ಲ ಎಂಬ ಎರಡು ಕ್ರಿಯೆಯ ಅರ್ಥಗಳು ಭಾಷೆಯ ಮೂಲಕ ತೆರೆದುಕೊಳ್ಳುತ್ತವೆ. ಇದು ವರ್ತಮಾನದ ಕ್ರಿಯೆಯಂತೆಯೇ ಭವಿಷ್ಯವನ್ನೂ ನೆನಪಿಸುತ್ತದೆ.

ಅಕ್ಕನ ಈ ವಚನವನ್ನು ಗಮನಿಸಿದರೆ ಯಾವುದೇ ಸಮಾಜಿಕ ಅಂಶಗಳು ಅಲ್ಲಿ ದೊರೆಯುವುದಿಲ್ಲ. ಆದರೆ ವಚನವು ಭಾವಕೇಂದ್ರದ ಸೃಷ್ಟಿಸಿಕೊಂಡಿರುವ ಮತ್ತು ಭಾಷೆಯ ಮೂಲಕ ಅಭಿವ್ಯಕ್ತಿಪಡಿಸಿರುವ ದೃಷ್ಟಿಯಿಂದ ಬಹಳ ಎತ್ತರದಲ್ಲಿ ನಿಲ್ಲುತ್ತದೆ. ಈ ವಚನ “ಚಲನಶೀಲ‌ ಸರಣಿ ಚಿತ್ರಗಳನ್ನು ಕೊಡುವುದರ ಜೊತೆಗೆ ಭಾವದಲ್ಲಿ ಮತ್ತು ದೈಹಿಕಕ್ರಿಯೆಗಳಲ್ಲಿ ಬಾಗುವ ಚಿತ್ರವನ್ನು ಕಟ್ಟಿಕೊಡುತ್ತಿದೆ. ಅಕ್ಕನಲ್ಲಿನ ಭಾವತೀವ್ರತೆ ಎಷ್ಟಿತ್ತೆಂಬುದಕ್ಕೆ ಮೊದಲ ಮೂರು ಸಾಲಿನ ಕೊನೆಯಲ್ಲಿ “ಮಾಡಯ್ಯಾ” ಎಂಬ ಪದವು ಪುನರುಕ್ತವಾಗುತ್ತಿದ್ದರೆ, ಕೊನೆಯಲ್ಲಿ “ಮಾಡಾ ಚೆನ್ನಮಲ್ಲಿಕಾರ್ಜುನ” ಎಂದು ನೇರವಾಗಿ ಮೇಲಿನ ದೈನ್ಯತೆಯ ಭಾವ ತತಕ್ಷಣದಲ್ಲಿ ಪಲ್ಲಟವಾಗಿ, ನಿರ್ದೇಶನ ಮಾಡುವ ಹಂತ ತಲುಪಿಬಿಡುತ್ತದೆ. ಇದು ಅಪೂರ್ಣ ಕ್ರಿಯಾಪದ. ಈ ವಚನದ ಅಂಕಿತಕ್ಕೆ ಚನ್ನಮಲ್ಲಿಕಾರ್ಜುನಯ್ಯಾ ಎಂಬ ಪಾಠಾಂತರವೂ ಇದೆ.೩  ಆದರೆ ಅಕ್ಕನ ಇತರ ವಚನಗಳಲ್ಲಿ ಅಪೂರ್ಣ ಕ್ರಿಯಾಪದಗಳನ್ನು ಚನ್ನಮಲ್ಲಿಕಾರ್ಜುನನಿಗೆ ಆರೋಪಿಸಿ ಹೇಳಿರುವುದಕ್ಕೆ ಬಹಳಷ್ಟು ಸಾಕ್ಷಿಗಳು ಸಿಕ್ಕಿರುವುದರಿಂದ ಅಯ್ಯಾ ಎಂಬುದನ್ನು ಬಳಸುವುದಕ್ಕಿಂತ, ಬಳಸದೆ ಇದ್ದರೇ ವಚನದ ಭಾವತೀವ್ರತೆ ತೀವ್ರವಾಗುತ್ತದೆ. ಈ ಭಿಕ್ಷಾಟನೆಯ ಚಿತ್ರ ರಸ್ತೆಯೊಂದರ ಮನೆಯ ಮುಂದಿನಿಂದ ಆರಂಭವಾಗುತ್ತದೆ, ರಸ್ತೆಯ ಪ್ರತೀ ಮನೆಮನೆಯನ್ನೂ ತಪ್ಪದೆ ತಿರುಗುವ ಚಿತ್ರ ಕಣ್ಣಮುಂದೆ ಬರುತ್ತದೆ. ರಸ್ತೆಯಲ್ಲಿ ಅಕ್ಕ ಒಬ್ಬಳೇ ನಡೆಯುತ್ತಿಲ್ಲ ಜೊತೆಯಲ್ಲೊಂದು “ಶುನಿ” ( ನಾಯಿ ) ಯೂ ಇದೆ. ಅದು ಇವಳಷ್ಟೇ ಹಸಿದಿರುವುದೆಂಬುದನ್ನು ಕೊನೆಯಲ್ಲಿ “ನೆಲಕ್ಕೆ ಬಿದ್ದೊಡೆ / ನಾನೆತ್ತಿಕೊಂಬುದಕ್ಕೆ ಮುನ್ನವೇ ಶುನಿಯೆತ್ತಿಕೊಂಬಂತೆ ಮಾಡಾ” ಎಂಬುದರಿಂದ ತಿಳಿಯುತ್ತದೆ. ಇಂದೂ ನಮ್ಮ ಸಮಾಜದಲ್ಲಿ ಕಣ್ಣಿಗೆ ಕಾಣುವ ಚಿತ್ರ. ಒಬ್ಬ ಭಿಕ್ಷುಕ ರಸ್ತೆಯಲ್ಲಿ ಹೋಗುವಾಗ ನಾಯಿಗಳು ಅವನ ಹಿಂದೆಯೇ ಬೊಗಳುತ್ತಾ ನಡೆಯುತ್ತಿರುತ್ತದೆ, ಆದರೆ ಅಕ್ಕನ ಹಿಂದೆ ಬಂದ ನಾಯಿ ಬೊಗಳುತ್ತಿಲ್ಲ ಎಂಬುದು ವಿಶೇಷ. ಅಕ್ಕನ ಜೊತೆ ನಾಯಿಯು ಸುಮ್ಮನಿರುವುದಕ್ಕೆ ಮತ್ತೊಂದು ರೀತಿಯಿಂದ ಅರ್ಥ ಕಲ್ಪಿಸಬಹುದು. ಅಕ್ಕನಿಗೆ ಮನುಷ್ಯ ಸಂಬಂಧಕ್ಕಿಂತ ಪಕ್ಷಿ, ಪ್ರಾಣಿ ಮತ್ತು ಪರಿಸರದ ಜೊತೆಗಿನ ಸಂಬಂಧ ಬಹಳ ದೊಡ್ಡದು ಅನಿಸಿದೆ‌. ಈ ಕಾರಣವೂ ಸುಮ್ಮನೆ ಇರುವ ನಾಯ ಚಿತ್ರ ಬರುವುದಕ್ಕೆ ಕಾರಣ.

ಇಬ್ಬರೂ ವಚನಕಾರರ ಬದುಕಿನ ಹಿನ್ನೆಲೆಯಲ್ಲಿ ಈ ವಚನವನ್ನು ಗಮನಿಸಬಹುದು. ಬಸವಣ್ಣನವರು ಭಕ್ತಿಭಂಡಾರಿ ಹೇಗೋ ಹಾಗೇ ಬಿಜ್ಜಳನ ಭಂಡಾರದ ಮೇಲ್ವಿಚಾರಣೆ ನೋಡಿಕೊಳ್ಖುತ್ತಿದ್ದವರು. ಅಕ್ಕ ಮಹಾರಾಣಿಯಾಗಿದ್ದವಳು ಕೊನೆಗೆ ತನಗಾಗಿ ಎಲ್ಲವನ್ನೂ ಬಿಟ್ಟು ಬಂದವಳು. ಈ ಹಿನ್ನೆಲೆಯಲ್ಲಿ ಇಬ್ಬರೂ ಆರ್ಥಿಕವಾಗಿ ಸಬಲರು ಮತ್ತು ಸಮಾಜದ ಮೇಲ್ವರ್ಗದಲ್ಲಿ ಇದ್ದವರು. ಹೆಣ್ಣಾಗಿ ಅಕ್ಕ ತಾನೇ ಎಲ್ಲ ಬಿಟ್ಟು ದಿಟ್ಟವಾಗಿ ನಿಂತವಳು, ಆತ್ಮ ಸಂಗಾತಕ್ಕೆ ನೀ ಎನಗುಂಟು ಎಂದು ನಡೆದಂತೆ, ಈ ದೇಹವ ನಾಯಿತಿಂದರೇನು ನೀರು ಕುಡಿದರೇನು ಎಂದು ನಿಂತವಳು. ಈ ಎಲ್ಲ ಹಿನ್ನೆಲೆಯಲ್ಲಿ ಈ ವಚನದಲ್ಲಿ ಒಡಮೂಡುವ ಭಾವದಿಂದ ಇಬ್ಬರ ನಿರ್ಧಾರಗಳೂ ಮಹತ್ತರವಾದವುಗಳು.

ಮೇಲಿನ ವಚನಗಳನ್ನು ಗಮನಿಸಿದರೆ ಎರಡರಲ್ಲೂ ಒಂದೇ ಭಾವವಿದೆ. ಒಂದೇ ರೀತಿಯ ಚಿತ್ರಣವನ್ನು ಕಟ್ಟಿಕೊಡುತ್ತಿದ್ದರೂ, ಐತಿಹಾಸಿಕ ದೃಷ್ಟಿ ಮತ್ತು ಬುದ್ದಿ ಬಲದಿಂದ ಬಸವಣ್ಣನವರ ವಚನವು ಯಶಸ್ವಿಯಾದರೆ, ಸರಣಿ ಚಿತ್ರಗಳು ಮತ್ತು ವ್ಯಕ್ತಿಯೊಬ್ಬನ ಭಾವಗಳ ಮೇಲಾಟ,‌ ಆಂಗಿಕ ಅಭಿನಯದ ದೃಷ್ಟಿಯಿಂದ ಅಕ್ಕನದು ಓದುಗರಿಗೆ ಆಪ್ಯಾಯಮಾನವಾಗುತ್ತದೆ. ಮಾನಸಿಕವಾಗಿ ಎರಡೂ ವಚನಗಳ ರಚನಕಾರರ ಸ್ಥಾನ ಒಂದೇ ಇದೆ‌. ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ಕಲ್ಯಾಣ ರಾಜ್ಯ ಎಂಬುದಕ್ಕೆ ಇದೂ ಸಾಕ್ಷಿ. ಭಿಕ್ಷಾಟನೆ ಮಾಡುವಂತೆ ಆಗುವುದಷ್ಟೇ ಅಲ್ಲ, ಅದೂ ಬದುಕಿಗೆ ದಕ್ಕದ ಸ್ಥಿತಿಯಲ್ಲಿನ ಬಡತನ ಕೊಡು ಎಂದು ಕೇಳಿಕೊಳ್ಳುತ್ತಿದ್ದಾರೆ.

ಅಡಿಟಿಪ್ಪಣಿಗಳು

. ಬಸವಣ್ಣನವರ ಷಟ್ ಸ್ಥಲ ವಚನಗಳು. ಸಂ. ಫ಼. ಗು. ಹಳಕಟ್ಟಿ. ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ. ಧಾರವಾಡ. ಸಂ ೪೫೬. ಪು ೧೫೫ (೧೯೫೪)

. ಮಹಾದೇವಿಯಕ್ಕನ ವಚನಗಳು. ಸಂ. ಫ಼. ಗು. ಹಳಕಟ್ಟಿ. ಶಿವಾನುಭವ ಗ್ರಂಥಮಾಲೆ. ಧಾರವಾಡ. ಸಂ ೦೭. ಪು ೩೦ (೧೯೩೧)

೩. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ವ ಸಂ ೩೨೩. ಪು ೮೧೯ (೨೦೧೬)

****************************

ಆರ್.ದಿಲೀಪ್ ಕುಮಾರ್

ಹುಟ್ಟಿದ್ದು ೧೯೯೧ ಮಾರ್ಚಿ ೧ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ

Leave a Reply

Back To Top