ಕವಿತೆ
ಬೀಗರ ಮನೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಇಲ್ಲೇ ಹತ್ತಿರದಲ್ಲೇ ಇದೆ
ಬನ್ನಿ ನೀವು ಹುಡುಕಿರುವವರ ಮನೆ
ಹಳೆಯ ಕಾಲದ ನಾಡ ಹೆಂಚಿನ ಮನೆ
ಈಗಲೋ ಆಗಲೋ ಅನ್ನುವ
ರೋಗಿ ಇದ್ದ ಹಾಗಿದೆ
ಈಗದರ ರೂಪು ರೇಖೆ
ಎಲ್ಲ ಒಳಗಿರುವವರ ಹಾಗೆಯೇ
ಥೇಟು!
ಹೌದು
ಅವರು ನಿಮಗೇನು?
ಸ್ನೇಹವೋ ಬಂಧು-ಬಾಂಧವ್ಯವೋ?
ಸ್ನೇಹ ಅಂತೇನೂ ಇಲ್ಲ
ನಾವೂ ಅವರ ಥರ
ನೇಕಾರರು!
ಮತ್ತವರು ನಮಗೀಗ ಬೀಗರು-
ಬಹುಷಃ ಆಗುವವರು
ಎಲ್ಲ ಒಪ್ಪಿ ಒಪ್ಪಂದ ಅಂತ ಆದರೆ…
ನಾವೋ ಸದ್ಯ ಹಣೆಯ
ಚರ್ಮ ಬೇರು ಸಹಿತ ಹರಿದು
ಈಗ ಬೀದಿ ಎದೆಯೊಳಗೆ ನೇರ
ಬಿದ್ದು ಹೋಗಿರುವವರು!
ಒಂದೊಳ್ಳೆ ಬಾಳ ಕನಸಿಗಾಗಿ ಮತ್ತೆ
ಹಂಬಲಿಸಿರುವವರು…
ಹಾಗೂ ಆ ಚರ್ಮ ತಿದ್ದಿ ತೀಡಿ
ಮತ್ತೊಮ್ಮೆ ನಮ್ಮ ನಮ್ಮ ಹಣೆಗೆ
ಅಂಟಿಸುವ ಹಂಬಲದಲ್ಲಿರುವವರು…
ಓ, ಅಹುದೋ…?
ಛೆ ಅಯ್ಯೋ ಪಾಪ!
ಅವರದೂ ನಿಮಗಿಂತ ವಿಶೇಷವೇನಿಲ್ಲ ಬಿಡಿ
ಹಾಗಂತ ಅವರು ಕೂಡ
ಇದೀಗ ಬೀದಿ ಬದಿಗೆ ಬಿದ್ದವರೇ
ಎಲ್ಲ ಬಡ ನೇಕಾರರ ಥರ…
ಮದುವೆ ಮುಂಜಿಗೆಂಥ ಬರ
ಹೇಗಿದ್ದರೇನು ಯಾರ ಸ್ಥಿತಿ!
ಹೌದು ಬಡತನ
ಮತ್ತೀಗ ಕೋವಿಡ್ ನಂಟಸ್ತನ
ಒಟ್ಟೊಟ್ಟು ಸೇರಿ ಹೆಣೆದಿವೆ
ಘಟ್ಟಿಯಾದೊಂದು ಭಾರಿ ಹಗ್ಗ!
ಎಲ್ಲ ಕುತ್ತಿಗೆಗೂ ಬಿರುಸಾಗಿ ಬಿಗಿವಂಥ ಹಗ್ಗ…
ಮೇಲಾಗಿ
ಎಲ್ಲ ಸರಕಾರಗಳು
ಕೈತುಂಬ ಕೊಟ್ಟಂತೆ ರಂಗದ ಮಧ್ಯೆ
ಬಾರಿಸಿ ಬಜಂತ್ರಿ
ಆಗಾಗ ಯಥೇಚ್ಛ ಹೆಣೆದ
ಮಾತು ಮಾತಿನ ಢೋಂಗಿತನದ
ಹಾವು ಹಗ್ಗ
ಜೊತೆಜೊತೆಗೇ ಸೇರಿ ಗಡುಸಾಗಿದೆ
ಕರಾಳ ನಂಜಾಗಿದೆ!
ಒಂದೇ ಎಳೆತಕ್ಕೆ
ಉಸಿರು ದಢಕ್ಕಂತ ಇಲ್ಲ
ಎಂಬ ಖಡಾಖಂಡಿತಕ್ಕೆ!
ಬನ್ನಿ
ಇತ್ತ ಬನ್ನಿ ತೋರಿಸುವೆ
ನಿಮ್ಮ ನೆಚ್ಚಿನ ಬೀಗರಾಗುವವರ
ನೀವು ನೋಡಿರದ
ಆ…ಮನೆ!
******************
A simple truth of the day
ಲೇಖನ ಚೆನ್ನಾಗಿದೆ. ಅಭಿನಂದನೆಗಳು
ಡಾ. ಪ್ರಸನ್ನ ಕುಮಾರ್ ಹಾಗೂ ಡಾ. ರಮೇಶ್ ಇಬ್ಬರಿಗೂ ಅನಂತ ಧನ್ಯವಾದಗಳು.
ಚೆನ್ನಾಗಿದೆ , ಅಭಿನಂದನೆಗಳು.