ಅಂಕಣ ಬರಹ

ತೊರೆಯ ಹರಿವು

ಸವಿ ವೇದನೆ

ಆಗುವ ನೆನಪುಗಳು..

व्हाट्सएप्प के मजेदार मसेज. whatsapp funny massage.: आज कल के माँ बाप सुबह  स्कूल बस में बच्चे क… | Essence of india, Cute kids photography, Schools  around the world

 

ನಾನು ಸಣ್ಣವಳಿದ್ದಾಗ ಮೂರ್ನಾಲ್ಕು ವರ್ಷಗಳಿಗೊಮ್ಮೆ ಮನೆಯ ಸರಕು ಸಾಮಾಗ್ರಿಗಳನ್ನು ಗಂಟುಮೂಟೆ ಕಟ್ಟಿಕೊಂಡು ನಮ್ಮ ಕುಟುಂಬ ಊರಿಂದೂರಿಗೆ ಪ್ರಯಾಣಿಸುತ್ತಿದ್ದುದು ಸಾಮಾನ್ಯ ವಿಷಯವಾಗಿತ್ತು. ಈ ಸಂಚಾರದ ನಿರಂತರತೆಗೆ ನನ್ನ ಅಣ್ಣ (ಅಪ್ಪ) ಸರಕಾರಿ ನೌಕರರಾಗಿದ್ದುದು ಹಾಗೂ ಈ ವರ್ಗಾವಣಾ ಪ್ರಕ್ರಿಯೆಯನ್ನು ಅವರು ಸಹಜವಾಗಿ ಸ್ವೀಕರಿಸುತ್ತಿದ್ದದ್ದು ಪ್ರಮುಖವಾಗಿತ್ತು.

ಹೀಗೆ ಪದೇ ಪದೇ ವರ್ಗವಾಗುತ್ತಿದ್ದರಿಂದ ನನ್ನ ಶಾಲಾ ಶಿಕ್ಷಣ ಮೈಸೂರು, ಹಾಸನ ಜಿಲ್ಲೆಗಳ ಕೆಲವು ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ನಡೆಯಿತು. ಮತ್ತೆ ಮತ್ತೆ  ಹೊಸ ಶಾಲೆ, ಹೊಸ ಗೆಳೆತನ, ಹೊಸ ಪರಿಸರ. ಈ ಎಲ್ಲವೂ ಆ ಬಾಲ್ಯದಲ್ಲಿ ಸಾಹಸಮಯವಾಗಿ ಕಾಣುತ್ತಿತ್ತು. ಅಂದಿನ ಸೊಗಸಿನ ದಿನಗಳ ಒಂದೆರಡು ಅನುಭವಗಳನ್ನು ಈಗ ಸುಮ್ಮನೆ ನೆನಪಿಸಿಕೊಂಡರೂ  ಸಾಕೂ ಮನಸ್ಸು ಜಿಗಿಯುವ ಹುಲ್ಲೆಮರಿಯಾಗುತ್ತದೆ.

  ಆ ಶಾಲಾ ದಿನಗಳಲ್ಲಿ ನಮ್ಮದು ತೀರಾ ಹಗುರವಾದ ಬಟ್ಟೆಯಿಂದ ಮಾಡಿದ ಪಾಟೀಚೀಲ. ಸ್ಲೇಟು, ಬಳಪ, ಪಠ್ಯಪುಸ್ತಕಗಳಿಗಿಂತಲೂ ಹೆಚ್ಚಾಗಿ ವಿವಿಧ ನಮೂನೆಯ ಕಲ್ಲು, ಮಿರುಗುವ ಬಟ್ಟೆ ಚೂರು, ಹಕ್ಕಿ ಪುಕ್ಕ, ಯಾವುದೋ ಹಣ್ಣು- ಕಾಯಿ-ಕಡ್ಡಿ, ಚೂರು ಹೀಗೆ ಏನೇನು ಇದ್ದವೋ ಆ ಬ್ರಹ್ಮಾಂಡದೊಳಗೆ!! ಆಗ ಯಾರಾದರೂ ಹಲವು ಕೋಟಿ ರೂಪಾಯಿ ಕೊಡುತ್ತೇವೆ ಆ ಚೀಲವನ್ನು ನಮಗೆ ಕೊಡಿ ಎಂದರೆ, ಅಷ್ಟೂ ನಗದನ್ನು ಸಾರಾಸಗಟಾಗಿ ನಿರಾಕರಿಸಲು ಕಾರಣವಾಗಬಹುದಾದ ಅತ್ಯಮೂಲ್ಯ ಎನಿಸುವ ವಸ್ತುಗಳು ಅದರಲ್ಲಿರುತ್ತಿದ್ದವು. ಕೋಟಿಗಿರುವ ಸೊನ್ನೆ ಎಷ್ಟು? ಅದರ ಮೌಲ್ಯ ಎಷ್ಟೆಂದು ಆಗ ಗೊತ್ತಿದ್ದರೆ ತಾನೆ!?

  ಅದು ಹೋಗಲಿ ಬಿಡಿ.. ಸದಾ ಆರೇಳು ಮಕ್ಕಳು ಗುಂಪು ಸೇರಿ ಶಾಲಾ ಚೀಲದೊಳಗೆ ಪುಸ್ತಕೇತರ ಹಲವು ಪರಿಕರಗಳನ್ನು ಹೊತ್ತು ಶಾಲೆಗೆ ಹೋಗುತ್ತಿದ್ದ ನಮ್ಮ ತಂಡವು ಯಾವ ‘ಸಾರ್ಥ’ಕ್ಕೂ (ವ್ಯಾಪಾರೀ ತಂಡ) ಕಡಿಮೆ ಇರುತ್ತಿರಲಿಲ್ಲ.  

ತಲೆಯ ಮೇಲೆ ಬಟ್ಟೆಯ ಪಾಟೀಚೀಲದ ಹಿಡಿಕೆಯನ್ನು ಹಾಕಿಕೊಂಡು, ಬೆನ್ನ ಹಿಂದೆ ಇಳಿಬೀಳಿಸಿಕೊಂಡ ಚೀಲವನ್ನು ನಡಿಗೆಯ ಲಯಕ್ಕೆ ಬಡಿದುಕೊಳ್ಳುತ್ತಾ, ಕೆಲವೊಮ್ಮೆ ಜೋಳಿಗೆಯಂತೆ ಹೆಗಲಿಂದ ಇಳಿಸಿಕೊಂಡು, ಕೆಲವೊಮ್ಮೆ ನೆತ್ತಿ ಮೇಲೇರಿಸಿ, ಮುಂದಿನ ಬಾರಿ ಎದೆಯ ಮುಂದಿನಿಂದ ಕುತ್ತಿಗೆಗೆ ನೇತು ಬೀಳಿಸಿ, ಸೊಂಟ ಕೈಗಳಿಗೆ ಸುತ್ತಿಕೊಂಡು, ಮೊಣಕಾಲುಗಳಿಂದ ಚೀಲದೊಳಗೆ ಇದ್ದ ಸ್ಲೇಟನ್ನು ಬಡಿಯುತ್ತಾ ಸಾಗುತ್ತಿದ್ದಾಗ ಅದರೊಳಗಿರುವುದು ‘ಸಾಕ್ಷಾತ್ ಸರಸ್ವತಿ ಸ್ವರೂಪ’ ಅನ್ನೋದು ಸಾಸುವೆ ಕಾಳಷ್ಟೂ ನೆನಪಾಗುತ್ತಿರಲಿಲ್ಲವಲ್ಲಾ! ಅಂಥಾ ಅತಿ ಮುಗ್ಧ ಸೊಗಸುಗಾರಿಕೆಯ ಅನುಭವವು ಆರೇಳು ಕೇಜಿ ಭಾರ ತೂಗುವ ಶಾಲಾ ಬ್ಯಾಗ್ ಹಾಗೂ ಮನೆಯ ಮುಂದೆಯೇ ಶಾಲಾ ವಾಹನಗಳನ್ನು ಏರಿಳಿಯುವ ನಮ್ಮ ಮಕ್ಕಳಿಗೆಲ್ಲಿ ಸಿಗಬೇಕು?!

    ಒಂದರಿಂದ ಮೂರನೆಯ ತರಗತಿಯವರೆಗೆ ‘ಹದಿನಾರು’ ಎಂಬ ಗ್ರಾಮದಲ್ಲಿ ನಾನು ಓದಿದ್ದು. ಅದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಒಂದು ಹಳ್ಳಿ. ಮೈಸೂರು ಯದುವಂಶದವರಿಗೂ ಆ ಊರಿಗೂ ನಂಟು. ‘ಯದುನಾಡು’ ಹೋಗಿ ಹದಿನಾಡು- ಹದಿನಾರು ಆದ ಬಗ್ಗೆ ಕತೆಗಳಿವೆ. ಅಲ್ಲಿ ಶಾಲೆಗೆ ಹೋಗಿ ಕಲಿತದ್ದಕ್ಕಿಂತ ಗೆಳೆಯರೊಡನೆ ಆಡಿದ್ದು, ಊರಿನ ವಿಶಾಲ ಕೆರೆ- ಏರಿ, ಈ ಬದಿಗೆ ಚಾಪೆ ಎಣೆಯುತ್ತಿದ್ದ ಜನರು, ಸುತ್ತೂರು ಮಠ, ಗಣಪತಿ ಪೂಜೆ- ಮೆರವಣಿಗೆ, ಹುಳಿಮಾವು, ರೈಸ್ ಮಿಲ್ ಮಾಲೀಕರ ಮನೆ, ತೋಟ, ಚಕ್ಕೋತ ಹಣ್ಣು, ಅಪ್ಪನ ಗೆಳೆಯರು, ನಮೋ ವೆಂಕಟೇಶ ಹಾಡಿನ ಟಾಕೀಸು… ರಾಶಿ ರಾಶಿ ಸಿನೆಮಾಗಳು!! ಮನೆ ಹಾಗೂ ಆಸ್ಪತ್ರೆಯ ಕಂಪೌಂಡಿನೊಳಗಿದ್ದ ದೊಡ್ಡ ನೀಲಗಿರಿ ಮರ, ಅಪ್ಪನ ಪರಿಶ್ರಮದ ಸುಂದರ ಕೈ ತೋಟ, ಮಲ್ಲಿಗೆ ಹಂಬು, ಬಾವಿ… ಆಗೀಗ ಮೈಸೂರು… ದಾಸ್ ಪ್ರಕಾಶ್, ಗುರು ಹೊಟೇಲು… ಮಸಾಲೆ ದೋಸೆ!!  ಜ಼ೂ, ಚಾಮುಂಡಿ- ಮಲೆ ಮಹದೇಶ್ವರ ಬೆಟ್ಟ… ಛೇ… ಏಕೆ ದೊಡ್ಡವರಾದೆವೋ..? ಏಕೆ ಈ ನೆನಪುಗಳು ಮಧುರ ಯಾತನೆಗಳಾಗಿ ಉಳಿದವೋ…

   ನನ್ನ ನಾಲ್ಕನೇ ತರಗತಿಯ ವಿದ್ಯಾಭ್ಯಾಸವು ಹಾಸನ ಜಿಲ್ಲೆಯ ಅರಕಲಗೂಡು ಎಂಬ ತಾಲೂಕಿನಲ್ಲಾಯ್ತು. ಅದು ಆ ಕಾಲಕ್ಕಿನ್ನೂ ದೊಡ್ಡ ಹಳ್ಳಿಯಂತೆ ಇತ್ತೇ ಹೊರತು ದೊಡ್ಡ ಪಟ್ಟಣದ ಕುರುಹು ಅಷ್ಟಾಗಿ ಕಾಣುತ್ತಿರಲಿಲ್ಲ. ಮಧ್ಯಾಹ್ನದ ಬಿಸಿ ಊಟ ಸವಿದದ್ದು ಅಲ್ಲಿನ ಶಾಲೆಯಲ್ಲಿಯೇ. ಜೊತೆಗೆ, ಚೈತ್ರ, ವೈಶಾಖ, ಜೇಷ್ಠ.. ಎಂಬ 12 ಮಾಸಗಳೂ, ವಸಂತ , ಗ್ರೀಷ್ಮ, ವರ್ಷ.. ಎಂಬ 6 ಋತುಗಳೂ, ಅಶ್ವಿನಿ, ಭರಣಿ, ಕೃತಿಕಾ, ರೋಹಿಣೀ.. ಎಂಬಿತ್ಯಾದಿ 27 ನಕ್ಷತ್ರಗಳ ಹೆಸರುಗಳನ್ನು ಉರುಹೊಡೆದುದೂ ಆ ಶಾಲೆಯಲ್ಲಿಯೇ. ಆಗ ಅಭ್ಯಾಸ ಮಾಡಿದ್ದು ಈಗ ಪೂರ್ಣ ನೆನಪಿರದಿದ್ದರೂ, ಆ ಊರಿನ ಬಸ್ ನಿಲ್ದಾಣದ ಬಳಿಯಿದ್ದ ಎತ್ತರದ ಮರದ ಮೇಲೆ ತಲೆಕೆಳಗಾಗಿ ನೇತಾಡುತ್ತಿದ್ದ ನೂರಾರು ಬಾವಲಿಗಳು ಮಾತ್ರ ನೆನಪಿನಾಳದಲ್ಲಿ ಹಾಗೇ ಕಪ್ಪುಬಣ್ಣದಲಿ ಹೆಪ್ಪುಗಟ್ಟಿವೆ. ಆದರೆ ಅತ್ಯಂತ ಕಡಿಮೆ ಅವಧಿಯ ಆ ಶಾಲೆಯಲ್ಲಿ ದೊರೆತ ಗೆಳೆತನದ ಹೆಸರುಗಳು ಮನದ ನೇಪಥ್ಯಕ್ಕೆ ಸರಿದು ಮಸುಕಾಗಿರುವುದು ನನ್ನ ಪರಮ ದುರಾದೃಷ್ಟ.

    ರಾವಂದೂರು ಎಂಬ ಊರಿದೆ. ಹಾಸನ ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ. ಅಲ್ಲಿ ನಾನು ಐದು ಮತ್ತು ಆರನೆಯ ಇಯತ್ತೆ ಓದುವಾಗಿನ ನೆನಪುಗಳು ಮಾತ್ರ ಇನ್ನೂ ಹಸುರಾಗಿ ಸೊಗಸಾಗಿವೆ! ಅಲ್ಲಿನ  ಶಾಲಾ ಕಾರ್ಯಕ್ರಮಕ್ಕಾಗಿ, ನನ್ನ ಮೋಟು ಜಡೆಗೆ ಚೌಲಿ ಹಾಕಿಸಿಕೊಂಡದ್ದು, ಡಾನ್ಸ್ ಮಾಡುವಾಗ ಸೀರೆ ಸಡಿಲವಾಗಿ ಜಾರಿ ಕಾಲಿಗೆ ತೊಡರಿಸಿ ಬಿದ್ದುದ, ಕೋಗಿಲೆ ಕಂಠವಿಲ್ಲದ ನಾನೂ ಸಹ “ ಚೆಲುವಿ ಚೆಲುವಿ ಎಂದು ಅತಿಯಾಸೆ ಪಡಬೇಡ..” ಎಂದು ಜನಪದ ಗೀತೆ ಹಾಡಲು ಹೋಗಿ ಅರ್ಧಕ್ಕೇ ಬಾಯೊಣಗಿ, ನನ್ನ ಸ್ವರ ನನಗೇ ಕೇಳಿಸದಂತಾಗಿ ಮುಂದೆ ಹಾಡದೇ ಬಿಟ್ಟದ್ದು, ಜೀವಂತ ಮೀನನ್ನೇ ಬಕೇಟಿನೊಳಗೆ ಇಟ್ಟುಕೊಂಡು ತಂದ ವಿಜ್ಞಾನದ ಮಾಸ್ಟರರು ಮೀನಿನ ರಚನೆ ಬಗ್ಗೆ ಲೈವ್ ಪಾಠ ಮಾಡಿದ್ದು… ಎಲ್ಲವೂ ನನ್ನ ನೆನಪಿನ ಪರದೆಯ ಮೇಲೆ ಇನ್ನೂ ಚಲಿಸುತ್ತಿರುವ ಚಿತ್ರಗಳು.

 ರಾವಂದೂರಿನಲ್ಲಿ ನಮಗೊಂದು ರಮಣೀಯ ಸ್ಥಳವಿತ್ತು. ಅದು ನನ್ನಣ್ಣ ಓದುತ್ತಿದ್ದ ಹೈಸ್ಕೂಲು. ಅದೇ ಊರಿನಲ್ಲಿಯೇ ತುಂಬಾ ದೂರದಲ್ಲಿತ್ತು. ಅಲ್ಲಿಗೆ ಒಂದು ಭಾನುವಾರ ನಾನು, ನನ್ನ ಗೆಳತಿಯರಾದ ಪ್ರಿಯಾ, ಬಬಿತಾ, ರೂಪ, ಶ್ವೇತಾ ಮೊದಲಾದವರು ಪಿಕ್ನಿಕ್ ಹೋಗಿದ್ದೆವು. ಬಹುಶಃ ಮನೆಯಲ್ಲಿ ಹೇಳರಲಿಲ್ಲ. ಹೇಳಿದ್ದರೆ ಅಷ್ಟು ದೂರ ಸಣ್ಣ ಮಕ್ಕಳಾದ ನಮ್ಮನ್ನು ಅವರು ಕಳಿಸುತ್ತಲೂ ಇರಲಿಲ್ಲ. ನಮಗೋ ಅದು ಮೋಸ್ಟ್ ಅಡ್ವೆಂಚರಸ್ ಪಿಕ್ನಿಕ್..! ನಾವೆಲ್ಲಾ ಆ ಹೈಸ್ಕೂಲಿನ ವಿಶಾಲ ಜಾಗ, ದೊಡ್ಡ ಕಟ್ಟಡ, ಆ ಶಾಲಾ ಆವರಣದ ಕಾರಂಜಿ ಕೊಳ, ಮರಗಳ ಸಾಲು, ವಿಶಾಲ ಮೈದಾನ ನೋಡಿ ಕಣ್ಣರಳಿಸಿಕೊಂಡು ಸಂಭ್ರಮಿಸಿದ್ದೆವು. 


     ಹುಣಸೇಹಣ್ಣು, ಉಪ್ಪು , ಸಕ್ಕರೆ, ಖಾರದಪುಡಿ ಬೆರೆಸಿ ಜಜ್ಜಿ ಮಾಡಿಕೊಂಡ ಅದ್ಭುತ ರುಚಿಯ ಉಂಡೆಯೇ ನಮ್ಮ ಪಿಕ್ನಿಕ್ಕಿನ ಊಟ, ಅಲ್ಲಿ ಆಡಿದ ಮರಕೋತಿ ಆಟ.. ಎಷ್ಟು ಸೊಗಸಿತ್ತು!  ಮಕ್ಕಳಿನ್ನೂ ಮನೆ ಸೇರಿಲ್ಲವೆಂದು ದೊಡ್ಡವರನ್ನು ಕಾಡಿರಬಹುದಾದ ಆತಂಕವು ಅಮೋಘ ಸಾಹಸದಲ್ಲಿ ಮೈ ಮರೆತಿದ್ದ ನಮಗೆ ಹೇಗೆ ಗೊತ್ತಾಗಬೇಕು? ಸಂಜೆ ಸೂರ್ಯನನ್ನು ಅವನ ಮನೆಗೆ ಕಳಿಸಿಯೇ ನಾವು ನಮ್ಮ ನಮ್ಮ ಮನೆಗೆ  ಬಂದದ್ದು. ಈ ಬೇಜವಾಬ್ದಾರಿತನದ ಸಾಹಸಕ್ಕೆ ನನಗೆ ಮನೆಯಲ್ಲಿ ಬಹುದೊಡ್ಡ ಸನ್ಮಾನ ಕಾಯುತ್ತಿತ್ತು. ಬಾಗಿಲ ಸಂದಿಗೆ ಸೇರಿಸಿ ಕಣ್ಣು ಅಗಲಿಸಿಕೊಂಡು  ರೊಟ್ಟಿ ಮಗುಚುವ ಕೋಲಿನಿಂದ ಅಮ್ಮ ಬಿಸಿಯಾಗಿ ಕೊಟ್ಟ ಏಟಿನ ರುಚಿಯು ಇವತ್ತಿಗೆ ನಗು ಬರಿಸುವುದು ನಿಜವಾದರೂ ಆ ಹೊತ್ತಿನಲ್ಲಿ ಇನ್ಮುಂದೆ ಗೆಳೆಯರೂ ಬೇಡ, ಅವರೊಡನೆ ಮಾಡಬೇಕೆಂದಿರುವ ಪಿಕ್ನಿಕ್ಕೂ ಬೇಡವೆನಿಸುವಂತೆ ಮಾಡಿತ್ತು. ಇಷ್ಟಾದ ಮೇಲೂ ಆ ಶಾಲೆಯ ರಮ್ಯತೆಗೆ, ಅದರ ಸೊಗಸುಗಾರಿಕೆಗೆ ಸೋತ ಮನಸ್ಸು ಹೈಸ್ಕೂಲ್ ಅನ್ನು ಆ ಶಾಲೆಯಲ್ಲಿಯೇ ಓದಬೇಕೆಂದು ಸಂಕಲ್ಪಿಸಿಕೊಂಡಿತ್ತು. ಅದನ್ನು ಮಾತ್ರ ಇನ್ನೂ ಮರೆಯಲಾಗಿಲ್ಲ. ಆದರೆ ನನಗೆ ಅದೊಂದು ಈಡೇರಲಾಗದ ಕನಸಾಗಿಯೇ ಉಳಿದು ಬಿಟ್ಟದ್ದು ಮಾತ್ರ ನನ್ನ ಜೀವನದ ಪರಮ ನಿರಾಸೆಯ ವಿಷಯವಾಗಿದೆ…. ಏಕೆಂದರೆ, ಅಷ್ಟರಲ್ಲಿ ನನ್ನ ಅಪ್ಪನಿಗೆ ಮಂಡ್ಯ ಜಿಲ್ಲೆಯತ್ತ ವರ್ಗವಾಗಿ ಹಳ್ಳಿಗಳ ಗಮ್ಮತ್ತು ನಿಧಾನವಾಗಿ ದೂರವಾಗುತ್ತಾ ಪಟ್ಟಣವೆಂಬ ಬೆರಗಿನ ಬೆಳಕು ಹಳ್ಳಿ ಸೊಗಡು ತುಂಬಿಕೊಂಡಿದ್ದ ನನ್ನ ಕಣ್ಣೊಳಗೆ ಸೇರತೊಡಗಿತು….

 ಆದರೆ, ಹಳ್ಳಿ ಶಾಲೆಯಿಂದ ಹೊರಟ ಆ ಕೊನೆಯ ದಿನ ನನ್ನ ಸಹಪಾಠಿಗಳು, ತರಗತಿಯ ಒಳಗೆ ಕಿಟಕಿಯ ಬಳಿ ನಿಂತು ಅಳುತ್ತಾ ಕೈ ಬೀಸಿ ಟಾಟಾ ಮಾಡಿ ಬೀಳ್ಕೊಟ್ಟಾಗ ನನ್ನ ಕಂಗಳಿಂದ ಜಾರಿದ ವೇದನೆ ಈಗಲೂ ಎದೆಯನ್ನು ಹಸಿಗೊಳಿಸುತ್ತದೆ… 

******************

 ವಸುಂಧರಾ ಕದಲೂರು.

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ  ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

2 thoughts on “

Leave a Reply

Back To Top