ದಾರಾವಾಹಿ

ಆವರ್ತನ

ಅದ್ಯಾಯ-19

10 abstract painting ideas | Articles

ಬ್ಯಾಂಕರ್ ನಾರಾಯಣರು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ. ಅವರ ಹೆಂಡತಿ ಗಿರಿಜಕ್ಕ. ಇವರ ಮೂವರು ಮಕ್ಕಳೂ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಮತ್ತು ಸಂಸಾರದ ನಿಮಿತ್ತ ಹೊರದೇಶದಲ್ಲೂ, ಪರವೂರಿನಲ್ಲೂ ನೆಲೆಸಿದ್ದರು. ಆದ್ದರಿಂದ ಈಗ ಎರಡೂವರೆ ಸಾವಿರ ಚದರಡಿಯ ಮಾಳಿಗೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುವುದು. ಮನೆಗೆಲಸದ ವೆಂಕಮ್ಮ ದಿನಾ ನಿಶ್ಶಬ್ದವಾಗಿ ಬಂದು ತನಗೆ ನಿಗದಿಪಡಿಸಲಾದ ಕೆಲಸಕಾರ್ಯಗಳನ್ನು ಚೊಕ್ಕವಾಗಿ ಮಾಡಿಕೊಟ್ಟು ಹೊರಟು ಹೋಗುತ್ತಾಳೆ. ಹಬ್ಬ ಹರಿದಿನಗಳಲ್ಲೂ ಇನ್ನಿತರ ಶುಭದಿನಗಳಲ್ಲೂ ನಾರಾಯಣ ದಂಪತಿಯ ಮಕ್ಕಳು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಅಪ್ಪ ಅಮ್ಮಂದಿರೊಂದಿಗೆ ನಾಲ್ಕು ದಿನ ಖುಷಿಯಿಂದಿದ್ದು ಹೊರಟು ಹೋಗುವ ಪರಿಪಾಠವನ್ನು ನಿಭಾಯಿಸುತ್ತಿದ್ದಾರೆ. ಉಳಿದ ದಿನಗಳಲ್ಲಿ ‘ನನಗೆ ನೀನು, ನಿನಗೆ ನಾನು!’ ಎಂಬಂತಿರುತ್ತದೆ ಈ ಮುದಿಜೀವಗಳ ಬದುಕು. ತೀರಾ ಬಡತನದಿಂದ ಬಂದಂಥ ನಾರಾಯಣರು, ಕೆಳದರ್ಜೆಯ ಗುಮಾಸ್ತನಾಗಿ ಉದ್ಯೋಗ ಆರಂಭಿಸಿದವರು. ಆದರೆ ಕಾಯಕವೇ ಕೈಲಾಸ! ಎಂಬ ದೃಢ ನಂಬಿಕೆಯಿಂದ ತಮ್ಮ ಜೀವಮಾನವಿಡೀ ಮಿಲಿಟರಿ ಶಿಸ್ತಿನಂಥ ವ್ಯಕ್ತಿತ್ವವನ್ನು ರೂಢಿಸಿಕೊಂಡು, ಕಣ್ಕಾಪು ಕಟ್ಟಿದ ಕುದುರೆಯಂತೆ ಅತ್ತಿತ್ತದ ಯಾವ ವಿಷಯಗಳ ಕುರಿತಾಗಿಯೂ ಆಸಕ್ತಿವಹಿಸಿದೆ ಬರೇ ಬ್ಯಾಂಕಿಗಾಗಿಯೇ ಅವಿರತವಾಗಿ ದುಡಿಯುತ್ತ ಹಂತಹಂತವಾಗಿ ಮೇಲ್ದರ್ಜೆಗೆ ಭಡ್ತಿ ಹೊಂದಿ ಮ್ಯಾನೇಜರ್ ಹುದ್ದೆಗೆ ಏರಿದವರು. ಆದ್ದರಿಂದ ಆ ಉದ್ಯೋಗಕ್ಕಿರಬೇಕಾದ ಗತ್ತು, ಬಿಗುಮಾನಗಳನ್ನು ತುಸು ಹೆಚ್ಚೇ ತಮ್ಮ ಮೇಲೆ ಹೇರಿಕೊಂಡು ಅಧಿಕಾರದ ವರ್ಚಸ್ಸಿನಿಂದ ಮುಂದುವರೆದು ಬಹುಬೇಗನೇ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿ ನಿವೃತ್ತರಾದವರು.

   ಇಂಥ ಸ್ವಭಾವದ ನಾರಾಯಣರು ನಿವೃತ್ತರಾಗುವವರೆಗೆ ಯಾವ ದೈವದೇವರುಗಳನ್ನೂ ನಂಬದೆ, ಪೂಜಿಸದೆ ಕಟ್ಟಾ ನಾಸ್ತಿಕರಾಗಿ ಬದುಕುತ್ತ ಯಶಸ್ಸಿನ ಗುರಿ ತಲುಪಿದವರು. ಆದರೆ ನಿವೃತ್ತರಾದ ಕೆಲವೇ ವರ್ಷದೊಳಗೆ ಇದ್ದಕ್ಕಿದ್ದಂತೆ ಒಮ್ಮೆ ಅವರು ದೈವ ದೇವರಗಳ ಅತೀವ ಭಕ್ತರಾಗಿ ಬದಲಾಗಿಬಿಟ್ಟರು. ಅದಕ್ಕೆ ಮುಖ್ಯ ಕಾರಣವೂ ಇತ್ತು. ನಾರಾಯಣರು ಆವರೆಗೆ ಆರೋಗ್ಯವಂತರಾಗಿ ಘನ ಗಾಂಭೀರ್ಯದಿಂದ ಬದುಕಿದವರು. ಆದರೆ ಯಾವತ್ತು ಅವರನ್ನು ಮಧುಮೇಹ, ರಕ್ತದೊತ್ತಡ ಮತ್ತು ಅಸ್ತಮದಂಥ ವಯೋಸಹಜ ಕಾಯಿಲೆಗಳು ಆವರಿಸಿಕೊಂಡಿತೋ ಅಂದಿನಿಂದ ಅವರು ಒಳಗೊಳಗೇ ದುರ್ಬಲರಾಗತೊಡಗಿದರು. ಆವರೆಗೆ ಹಠ ಹಿಡಿದು ಕಾಪಾಡಿಕೊಂಡು ಬಂದಂಥ ಅವರ ಆತ್ಮಸ್ಥೈರ್ಯವೆಂಬ ಭದ್ರಕೋಟೆಯು ಒಡೆದು ನುಚ್ಚುನೂರಾಯಿತು. ಆ ಕಾಯಿಲೆಗಳ ಹಿಂಸೆಗಿಂತಲೂ ಅವು ತನ್ನಂಥ ಆರೋಗ್ಯವಂತ ಆತ್ಮ ಸಂಯಮಿಯನ್ನೇ ಹಿಡಿದುಕೊಂಡಿವೆ ಎಂದರೆ ಅರ್ಥವೇನು? ಎಂಬ ಆಘಾತವೇ ಅವರನ್ನು ಹಣ್ಣು ಮಾಡತೊಡಗಿತ್ತು. ಹಾಗಾಗಿ ಬರಬರುತ್ತ ಅವರಿಗೆ ಬದುಕೇ ನಶ್ವರವೆನ್ನಿಸತೊಡಗಿತು.

ಅಸ್ತಮವೊಂದನ್ನುಳಿದು ಮತ್ತೆರಡು ಕಾಯಿಲೆಗಳು ಗಿರಿಜಕ್ಕನಿಗೂ ಇದ್ದವು. ಆದರೆ ಅವರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಹೆಂಗಸಲ್ಲ. ಕಾರಣ ಅದಾಗಲೇ ಅವರಲ್ಲಿ ವಯೋಸಹಜ ಪ್ರಬುದ್ಧತೆ ಮೂಡಿತ್ತು. ಹಾಗಾಗಿ ಆಕೆ ತಮ್ಮ ಇಷ್ಟದ ದೈವದೇವರುಗಳ ಪೂಜೆ ಪುನಸ್ಕಾರಗಳಲ್ಲೂ ದೈನಂದಿನ ಚಟುವಟಿಕೆಗಳಲ್ಲೂ ತೊಡಗಿಕೊಂಡು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಗಂಡನ ನಿರುತ್ಸಾಹ ಮತ್ತು ಅವರು ಸದಾ ತಮ್ಮ ಕಾಯಿಲೆಗಳ ಬಗ್ಗೆಯೇ ಕೊರಗುತ್ತ ಕೃಶರಾಗುತ್ತಿದ್ದುದನ್ನು ಕಾಣುತ್ತಿದ್ದವರಿಗೆ ಆತಂಕವಾಗುತ್ತಿತ್ತು. ಆದ್ದರಿಂದ ದಿನಾಲು ಗಂಡನಿಗೆ ಬಗೆಬಗೆಯಿಂದ ಸಾಂತ್ವನ ಹೇಳುತ್ತ ಒತ್ತಾಸೆಯಾಗಿರಲು ಪ್ರಯತ್ನಿಸುತ್ತಿದ್ದರು. ಆದರೂ ನಾರಾಯಣರಿಗೆ ಹೆಂಡತಿಯ ಬುದ್ಧಿಮಾತುಗಳು ಹಿಡಿಸುತ್ತಿರಲಿಲ್ಲ. ಹೀಗಿದ್ದ ಸಮಯದಲ್ಲೇ ಒಮ್ಮೆ ನಾರಾಯಣರ ದೊಡ್ಡ ಕುಟುಂಬದ ಮೂಲದ ಮನೆಯಲ್ಲಿ ವರ್ಷಾವಧಿ ‘ಭೂತ’ ಕ್ಕೆ ನಡೆಯುವ ದಿನವನ್ನು ಗೊತ್ತು ಪಡಿಸಲಾಯಿತು. ಅದರ ಹೇಳಿಕೆ ನೀಡಲು ಅವರ ಹಿರಿಯ ಮಾವ ಸಂಜೀವಣ್ಣ ಮನೆಗೆ ಬಂದರು.

   ಸಂಜೀವಣ್ಣ ಮತ್ತು ನಾರಾಯಣರು ತೀರಾ ಹತ್ತಿರದ ಬಂಧುಗಳೇನಲ್ಲ. ಚಿಕ್ಕಮ್ಮ, ದೊಡ್ಡಮ್ಮನ ಮಕ್ಕಳಿಂದ ಸಂಬಂಧಿಗಳಾದವರು. ಹಿಂದೆಲ್ಲ ತಮ್ಮ ಬಂಧುಗಳು ಅಥವಾ ಸ್ನೇಹಿತರು ಎಂಬ ಭೇದಭಾವವಿಲ್ಲದೆ ಎಲ್ಲರೊಡನೆಯೂ ಖಡಕ್ಕಾಗಿ ವ್ಯವಹರಿಸುತ್ತಿದ್ದ ನಾರಾಯಣರು ಇಂದು ಕುಂದಿದ ಜೋಲು ಮುಖ ಹೊತ್ತುಕೊಂಡು ತಮ್ಮನ್ನು ಸ್ವಾಗತಿಸಿದ್ದನ್ನು ಕಂಡ ಸಂಜೀವಣ್ಣನಿಗೆ ಅನುಕಂಪವೂ ಅನುಮಾನವೂ ಒಟ್ಟೊಟ್ಟಿಗೆ ಮೂಡಿತು. ‘ಅರೇರೇ, ಏನೋ ನಾಣು…ಹೀಗಾಗಿಬಿಟ್ಟಿದ್ದೀಯಾ ಹುಷಾರಿಲ್ಲವನಾ…?’ ಎಂದು ಕೇಳಿಯೇ ಬಿಟ್ಟರು. ತಮ್ಮನ್ನು ಕಂಡ ಕೂಡಲೇ ಮಾವನ ಬಾಯಿಯಿಂದ ಹೊರಟ ಅಂಥ ಆತ್ಮೀಯತೆಯ ಮಾತುಗಳು ನಾರಾಯಣರೊಳಗಿನ ಹತಾಶೆಯ ತಂತಿಯನ್ನು ರಪ್ಪನೆ ಮೀಟಿದಂತಾಯಿತು. 

‘ಅಯ್ಯೋ, ಮಾವಾ ನನ್ನ ಅವಸ್ಥೆಯನ್ನು ಏನೂಂತ ಕೇಳುತ್ತೀರಿ…? ಜೀವನದಲ್ಲಿ ಎಷ್ಟೊಂದು ಕಷ್ಟಪಟ್ಟು ಮೇಲೆ ಬಂದವನು ನಾನು ಅಂತ ನಿಮಗೆಲ್ಲರಿಗೂ ಗೊತ್ತುಂಟಲ್ಲವಾ? ನನ್ನ ಹೆತ್ತವರ ಅಂದಿನ ಬಡತನಕ್ಕೂ ನಾನು ಬೆಳೆದು ಬಂದ ರೀತಿಗೂ ಏನಾದರೂ ಸಂಬಂಧವಿದೆ ಅಂತ ನಿಮಗಾದರೂ ಅನಿಸುತ್ತದಾ ಹೇಳಿ!’ ಎಂದು ತಮ್ಮ ಕಳೆಗುಂದಿದ ಕಣ್ಣುಗಳಲ್ಲಿ ಹಿಡಿತ ತಪ್ಪಿ ತೊಟ್ಟಿಕ್ಕುತ್ತಿದ್ದ ನೀರನ್ನು ಬೈರಾಸಿನಿಂದ ಒರೆಸಿಕೊಳ್ಳುತ್ತ ಅಂದರು. ಮಾವನಿಗೆ ಸೋದರಳಿಯನ ಅಳು ನೋಡಿ ಇನ್ನೂ ಸೋಜಿಗವಾಯಿತು. ಹೌದು ಅವರು ನಾರಾಯಣರ ಕುಟುಂಬದ ಬಡತನವನ್ನು ಕಣ್ಣಾರೆ ಕಂಡಿದ್ದರು. ಅಲ್ಲದೇ ಅಂದು ಅವರ ಕುಟುಂಬವೂ ಅನುಕೂಲಸ್ಥವಾಗಿತ್ತು. ಹಾಗಾಗಿ ಆವತ್ತು ಅವರು ನಾರಾಯಣರ ಕುಟುಂಬಕ್ಕೆ ಸಹಾಯ ಮಾಡಲು ಮನಸ್ಸು ಮಾಡಿದ್ದರೆ ನೈಜ ಬಂಧುತ್ವವನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸಿಕೊಳ್ಳಬಹುದಿತ್ತು. ಆದರೆ, ‘ಉಳ್ಳವರ ಬಹುತೇಕ ಸಹಾಯ ತಮ್ಮ ಪ್ರತಿಷ್ಠೆಯ ಪ್ರದರ್ಶನಕ್ಕಾಗಿಯೇ ಇರುತ್ತದೆ. ಅದು ನಿಜವಾದ ಬಡತನವನ್ನೆಂದೂ ಅಳಿಸುವ ಪ್ರಯತ್ನ ಮಾಡದು!’ ಎಂಬ ಮಾತಿನಂತೆಯೇ ಸಂಜೀವಣ್ಣನ ಮನಸ್ಥಿತಿಯೂ ಇತ್ತು. ಆದ್ದರಿಂದ ಅವರು, ‘ಅವರೇನೂ ತಮ್ಮ ಹತ್ತಿರದ ಸಂಬಂಧಿಗಳಲ್ಲ. ಅವರ ರಕ್ತ ಸಂಬಂಧಿಕರೇ ಸುಮಾರು ಜನ ಅನುಕೂಲಸ್ಥರಿದ್ದು ಅವರೆಲ್ಲರೂ ಸುಮ್ಮನಿರುವಾಗ ನಾವೇಕೆ ಮೇಲೆ ಬಿದ್ದುಕೊಂಡು ಹೋಗಿ ಉದ್ಧಾರ ಮಾಡಬೇಕು?’ ಎಂಬ ಧೋರಣೆಯಿಂದ ದೂರವೇ ಇದ್ದವರು. ಹೀಗೆ ಅಂದು ನಾರಾಯಣರ ಎಲ್ಲ ಬಂಧುಗಳೂ ಅವರ ಕುಟುಂಬವನ್ನು ಅಸ್ಪ್ರಶ್ಯರಂತೆ ಕಾಣುತ್ತ ದೂರದಿಂದಲೇ ಸಂಬಂಧವನ್ನು ನಿಭಾಯಿಸಿಕೊಂಡು ಬಂದಿದ್ದರು. ಆದರೆ ನಾರಾಯಣರು ಬೆಳೆದು ಬ್ಯಾಂಕ್ ಅಧಿಕಾರಿಯಾಗಿ ಹೆಸರು ಮಾಡಿದ ಮೇಲೆ ಇತರರಂತೆ ಸಂಜೀವಣ್ಣನ ಧೋರಣೆಯೂ ಬದಲಾಯಿತು ಮತ್ತು ವಯೋಸಹಜ ಪ್ರಬುದ್ಧತೆಯೂ ಅವರನ್ನು ಮೃದುವಾಗಿಸಿತ್ತು. ಪರಿಣಾಮ, ಅವರು ಈಗೀಗ ರಕ್ತ ಸಂಬಂಧಿಗಳೊಂದಿಗೆ ಹೆಚ್ಚೆಚ್ಚು ಅನ್ಯೋನ್ಯವಾಗಿರಲು ಪ್ರಯತ್ನಿಸುತ್ತ ಎಲ್ಲರ ಮನೆಗಳಿಗೂ ಆಗಾಗ ಭೇಟಿ ನೀಡುತ್ತ ಒಂದು ಮಟ್ಟದ ಬಾಂಧವ್ಯವನ್ನು ಹೊಸದಾಗಿ ಚಿಗುರಿಸುವಲ್ಲಿ ಸಫಲರಾಗಿದ್ದಾರೆ. ಇಂಥ ಸಂಜೀವಣ್ಣ ಇಂದು ನಾರಾಯಾಣರ ಮಾತಿಗೆ, ‘ಹೌದು ಹೌದು ಮಾರಾಯಾ ನಿನ್ನ ಅಪ್ಪ, ಅಮ್ಮ ಆವಾಗ ಇದ್ದ ಪರಿಸ್ಥಿತಿಯನ್ನು ನೆನೆದರೆ ನೀನಿಷ್ಟೊಂದು ಎತ್ತರಕ್ಕೆ ಬೆಳೆಯುತ್ತಿ ಅಂತ ನಾವ್ಯಾರೂ ಕನಸು ಮನಸಿನಲ್ಲೂ ಎಣಿಸಲಿಲ್ಲ ನೋಡು!’ ಎಂದು ತಾವೂ ಅವರ ಮಾತನ್ನು ಅನುಮೋದಿಸಿದರು.

    ಅಷ್ಟು ಕೇಳಿದ ನಾರಾಯಣರು ಸ್ವಲ್ಪ ಗೆಲುವಾದರು. ‘ಹ್ಞೂಂ, ಹೌದಲ್ಲವಾ ಮಾವ. ಹಾಗಿರುವಾಗ ಅಂಥ ಸ್ಥಾನಮಾನವನ್ನು ನಾನು ಗಳಿಸಲು ಮತ್ತದನ್ನು ಉಳಿಸಿಕೊಳ್ಳಲು ಜೀವನದ ಎಂಥೆಂಥ ಸಂಗತಿಗಳನ್ನೂ ಸುಖ ಸಂತೋಷಗಳನ್ನೂ ಕಣ್ಣೆತ್ತಿಯೂ ನೋಡದೆ ಇಷ್ಟು ವರ್ಷಗಳ ಕಾಲ ರಾಜ ಸಿಪಾಯಿಯಂತೆ ಬದುಕಿದೆನೆಂದರೆ ಸಣ್ಣ ವಿಷಯವಾ ಹೇಳಿ? ಆದರೆ ಇಷ್ಟೆಲ್ಲ ಆದ ಮೇಲೆ ರಿಟಾಯರ್‍ಮೆಂಟ್‍ನ ನಂತರವಾದರೂ ಸ್ವಲ್ಪ ನೆಮ್ಮದಿಯಿಂದ ಜೀವನ ಸಾಗಿಸುವ ಎಂದು ಕನಸು ಕಂಡಿದ್ದರೆ ಇದೇನಾಗಿ ಹೋಯಿತು ಮಾವಾ! ಇಷ್ಟರವರೆಗೆ ಎಲ್ಲಿದ್ದವೋ ಹಾಳು ಕಾಯಿಲೆಗಳೆಲ್ಲ ನನ್ನನ್ನು ನುಂಗಿ ನೀರು ಕುಡಿಯುತ್ತಿವೆಯಲ್ಲ? ಇವು ನನ್ನನ್ನು ಹಿಂಸಿಸುವುದನ್ನು ನೋಡಿದರೆ ಬಹಳ ಬೇಗನೇ ಸತ್ತು ಹೋಗುತ್ತೇನೇನೋ ಅಂತ ಟೆನ್ಷನ್ ಆಗಿಬಿಟ್ಟಿದೆ!’ ಎಂದು ನಾರಾಯಣರು ನೋವು ತೋಡಿಕೊಂಡರು. ಅವರ ಮಾತಿಗೆ ಸಂಜೀವಣ್ಣ ಮೌನವಾಗಿ ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಗಿರಿಜಕ್ಕ ಇಬ್ಬರಿಗೂ ಕಾಫಿ ತಂದು ಕೊಟ್ಟು ತಾನೂ ಗಂಡನ ಪಕ್ಕದಲ್ಲಿ ಕುಳಿತವರು, ‘ಅಲ್ಲ ಸಂಜೀವಣ್ಣಾ, ಇವರ ಕಥೆ ಏನು ಮಾರಾಯ್ರೇ…! ಯಾವಾಗಲೂ ಇವರಿಗೆ ಬರೇ ಕಾಯಿಲೆಯದ್ದೇ ಚಿಂತೆಯಾಗಿಬಿಟ್ಟಿದೆಯಲ್ಲ? ಆ ಸಣ್ಣಪುಟ್ಟ ರೋಗಗಳು ನನಗೂ ಇವೆ. ಆದರೆ ನಾನ್ಯಾಕೆ ಟೆನ್ಷನ್ ಮಾಡಿಕೊಳ್ತಾ ಇಲ್ಲ! ಅದಾದರೂ ಅರ್ಥವಾಗಬೇಕಲ್ಲವಾ ಇವರಿಗೆ? ದಯವಿಟ್ಟು ಹೆಚ್ಚು ಚಿಂತೆ ಮಾಡ್ಕೋಬೇಡಿ. ಅದರಿಂದ ಇರುವ ಆರೋಗ್ಯವೂ ಕೆಟ್ಟು ಹೋಗುತ್ತದೆ. ಅಂತ ನಂಗಂತೂ ಹೇಳಿ ಹೇಳಿ ಸಾಕಾಗಿ ಹೋಯ್ತು. ಇನ್ನು ನೀವೇ ಇವರಿಗೆ ಬುದ್ಧಿ ಹೇಳಬೇಕಷ್ಟೇ!’ ಎಂದರು ನೋವಿನಿಂದ.

‘ಆಯ್ತು, ಆಯ್ತಮ್ಮಾ. ನಾನೇ ಹೇಳುತ್ತೇನೆ. ಇನ್ನು ನೀನೂ ಮಂಡೆಬಿಸಿ ಮಾಡ್ಕೊಂಡು ನಿನ್ನ ಆರೋಗ್ಯವನ್ನೂ ಕೆಡಿಸಿಕೊಳ್ಳಬೇಡ. ಒಳಗೆ ನಡಿ. ಏನಾದರೂ ಅಡುಗೆ ಮಾಡು. ಊಟ ಮಾಡಿಕೊಂಡೇ ಹೋಗುತ್ತೇನೆ’ ಎಂದು ಸಂಜೀವಣ್ಣ ಹಿರಿಯನ ಅಧಿಕಾರದಿಂದ ಆಜ್ಞಾಪಿಸಿದವರು ಸೋದರಳಿಯನ ಸಮಸ್ಯೆಗೂ ಅದಾಗಲೇ ಪರಿಹಾರವನ್ನು ಹುಡುಕಿಯಾಗಿತ್ತು. ಅದನ್ನು ತಿಳಿಸಲೂ ಇದೇ ಸುಸಂದರ್ಭವೆಂದುಕೊಂಡವರು, ‘ನೋಡು ನಾಣೂ ನಿನಗಿಂತ ಹಿರಿಯನಾಗಿ ಒಂದೆರಡು ಮಾತು ಹೇಳುತ್ತೇನೆ. ಅದನ್ನು ತಾಳ್ಮೆಯಿಂದ ಕೇಳಬೇಕು ನೀನು…?’ ಎಂದರು ಗಂಭೀರವಾಗಿ.

‘ಆಯ್ತು ಮಾವ, ಹೇಳಿ…!’ ಎಂದರು ನಾರಾಯಣರೂ ಆಸಕ್ತಿಯಿಂದ.

‘ನಮ್ಮ ದೇಹದಲ್ಲಿ ತ್ರಾಣ ಇರುವಾಗ ಮತ್ತು ರಕ್ತವೂ ಬಿಸಿಯಿರುವಾಗ ನಾವು ಯಾರು? ಈ ಭೂಮಿಯಲ್ಲಿ ಯಾಕೆ ಹುಟ್ಟಿದೆವು? ಮನುಷ್ಯ ಜೀವನ ಎಂದರೇನು? ನಮ್ಮ ಬದುಕಿನಲ್ಲಿ ತಾಪತ್ರಯಗಳು ಯಾಕೆ ಬರುತ್ತವೆ? ಸಂಸಾರ, ಬಂಧು ಬಳಗ, ಆಸೆ ದುರಾಸೆಗಳಿಗೆ ಅರ್ಥವೇನು? ಇಲ್ಲಿ ಯಾವುದು ಸತ್ಯ ಯಾವುದು ಮಾಯೆ? ಸತ್ತ ನಂತರ ಎಲ್ಲಿಗೆ ಹೋಗುತ್ತೇವೆ?’ ಎಂಬ ಯಾವ ಪ್ರಶ್ನೆಗಳೂ ನಮ್ಮಲ್ಲಿ ಹುಟ್ಟುವುದಿಲ್ಲ ಅಥವಾ ಹುಟ್ಟಿದರೂ ಅದಕ್ಕೆ ತಕ್ಕ ಉತ್ತರವೂ ನಮ್ಮ ಆಗಿನ ತಿಳಿವಿಗೆ ಸಿಗುವುದಿಲ್ಲ. ಹಾಗಾಗಿ ಸಮಾಜದ ಸಂಸ್ಕಾರ ಸಂಪ್ರದಾಯಗಳಿಗೆ ತಕ್ಕಂತೆ ಬದುಕನ್ನು ರೂಪಿಸಿಕೊಳ್ಳುತ್ತ ಹೋಗುತ್ತೇವೆ. ಆ ಪ್ರಯತ್ನದಲ್ಲಿ ಗೆಲ್ಲುತ್ತೇವೋ ಸೋಲುತ್ತೇವೋ ನಮಗೆ ಮುಖ್ಯವಾಗುವುದಿಲ್ಲ. ಆದರೆ ಕೊನೆಯಲ್ಲಿ ನಮ್ಮ ದಾರಿಯೇ ಸರಿ ಎಂಬ ನಿರ್ಧಾರಕ್ಕೆ ಬಂದು ಜೀವನ ಇಷ್ಟೇ ಎಂಬ ಭ್ರಮೆಯಲ್ಲಿ ಬದುಕುತ್ತೇವೆ. ಅಂಥ ಜೀವನದ ಅನುಭವಗಳಿದಿಂದಾಗಿ ಮುಂದೆ ಬರುವ ವೃದ್ಧಾಪ್ಯದ ಬಗ್ಗೆಯಾಗಲಿ ದೇಹವನ್ನು ಕೊನೆ ಮುಟ್ಟಿಸಲು ಎಡತಾಕುವ ರೋಗರುಜಿನಗಳ ಕುರಿತಾಗಲಿ ಸರಿಯಾದ ತಿಳುವಳಿಕೆ, ಕಾಳಜಿ ನಮಲ್ಲಿ ಹೆಚ್ಚಿನವರಿಗಿರುವುದಿಲ್ಲ. ಆದರೆ ಕೊನೆಯವರೆಗೆ ಬದುಕಿದ ಎಲ್ಲರಿಗೂ ಮುದಿತನ ಬಂದೇ ಬರುತ್ತದಲ್ಲ! ಒಂದು ದಿನ ಅದು ಬಂದು ಇನ್ನೇನು ಎಲ್ಲವೂ ಮುಗಿಯುತ್ತದೆ ಎಂಬಷ್ಟರಲ್ಲಿ ಆ ಕಠೋರ ಸತ್ಯವನ್ನು ಸ್ವೀಕರಿಸಲಾಗದೇ, ಎದುರಿಸಲಾಗದೇ ಸಣ್ಣ ಮಕ್ಕಳಂತೆ ಕೈಕಾಲು ಬಡಿದುಕೊಂಡು ಅಳತೊಡಗುತ್ತೇವೆ ಮತ್ತು ಕೊನೆಯಲ್ಲಿ ಮನಸ್ಸಿನ ಸ್ವಾಸ್ಥ್ಯವನ್ನು ಕಳೆದುಕೊಂಡು ನರಳುತ್ತೇವೆ. ಇಂಥ ಅವಸ್ಥೆಯಲ್ಲಿ ಒದ್ದಾಡುವವನು ನಿನ್ನೊಬ್ಬನೇ ಅಲ್ಲ ಮಾರಾಯಾ. ನನ್ನನ್ನೂ ಸೇರಿಸಿ ಹೆಚ್ಚಿನ ಮುದುಕರ ಅವಸ್ಥೆಯೇ ಹೀಗಾಗಿ ಬಿಟ್ಟಿದೆ. ಇವುಗಳ ಜೊತೆಯಲ್ಲಿ ಇನ್ನೊಂದು ದೊಡ್ಡ ದುರಂತವೆಂದರೆ ಸಾಯುವವರೆಗೂ ನಾವು ಈ ಜೀವನ ನಶ್ವರ ಎಂಬುದನ್ನು ಒಪ್ಪಿಕೊಳ್ಳುವುದೇ ಇಲ್ಲ! ಆದ್ದರಿಂದ ನೀನು ಈ ಎಲ್ಲಾ ವಿಚಾರಗಳನ್ನು ಅರ್ಥ ಮಾಡಿಕೊಂಡೆಯೆಂದರೆ ನಿನ್ನ ರೋಗರುಜಿನವೆಲ್ಲವೂ ಅರ್ಧಕ್ಕರ್ಧ ಗುಣವಾಗುತ್ತವೆ ನೋಡು!’ ಎಂದು ಗಂಭೀರವಾಗಿ ಹೇಳಿದರು. ಆದರೆ ಇನ್ನೂ ಕಣ್ಕಾಪು ಕಿತ್ತೊಗೆಯದ ನಾರಾಯಣರ ಮನಸ್ಸೆಂಬ ಮುದಿ ಕುದುರೆಗೆ ಆ ವಿಚಾರವು ಸ್ವಲ್ಪವೂ ಅರ್ಥವಾಗಲಿಲ್ಲ.

‘ಏನೋ ಮಾವಾ, ನನಗೊಂದೂ ತಿಳಿಯುವುದಿಲ್ಲ!’ ಎಂದು ಉದಾಸೀನ ತಾಳಿದರು. ಅವರ ಪ್ರತಿಕ್ರಿಯೆಯನ್ನು ಕಂಡ ಸಂಜೀವಣ್ಣನಿಗೆ ತಾನು ಬೋರ್ಗಲ್ಲ ಮೇಲೆ ನೀರೆರೆದಂತಾಯಿತಲ್ಲ ಎಂದೆನ್ನಿಸಿತು. ಆದರೂ ಸೋಲೊಪ್ಪಿಕೊಳ್ಳದೆ, ‘ಹಾಗೆಲ್ಲ ನಿರಾಶೆ ಮಾಡಿಕೊಳ್ಳಬಾರದು ಮಾರಾಯಾ. ನಿನ್ನ ತೊಂದರೆಗಳಿಗೆಲ್ಲಾ ಪರಿಹಾರ ಇದ್ದೇ ಇದೆ. ಸ್ವಲ್ಪ ತಾಳ್ಮೆಯಿಂದಿರು!’ ಎಂದು ಮೃದುವಾಗಿ ಅಂದವರು, ‘ಅದೆಲ್ಲ ಹಾಗಿರಲಿ ಮಾರಾಯಾ… ನೀನು ನಮ್ಮ ಮನೆತನದ ದೈವಗಳನ್ನು ನೋಡಲು ಬರದೆ ಎಷ್ಟು ವರ್ಷವಾಯಿತು ಹೇಳು? ಇಷ್ಟು ಕಾಲ ದುಡಿಮೆ ದುಡ್ಡು ಸಂಸಾರ ಅಂತ ಓಡುತ್ತಲೇ ಇದ್ದೆ. ಆದರೆ ಈಗ ನೋಡಿದರೆ ಅದರಿಂದ ನಿಜವಾದ ಸುಖ ಏನು ಪಟ್ಟೆ ಹೇಳು? ಅಷ್ಟಲ್ಲದೇ ನಿನ್ನ ಇಲ್ಲಿಯವರೆಗಿನ ದೊಡ್ಡ ಗೆಲುವಿಗೆ ಕಾರಣವಾದವರು ಯಾರು ಅಂತ ಒಮ್ಮೆಯಾದರೂ ಯೋಚಿಸಿದ್ದೀಯಾ? ಹತ್ತಾರು ತಲೆಮಾರಿನಿಂದಲೂ ನಮ್ಮ ಸಂತಾನವನ್ನು ಕಾಪಾಡಿಕೊಂಡು ಬಂದಂಥ ನಮ್ಮ ದೈವ, ಭೂತಗಳೇ ನಿನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಅಂತ ಇನ್ನಾದರೂ ಅರ್ಥ ಮಾಡಿಕೋ ಮಾರಾಯಾ! ನೀನು ಆ ಶಕ್ತಿಗಳನ್ನು ಮರೆತಿರುವುದರಿಂದಲೇ ಬಹುಶಃ ಅವು ಈಗ ನಿನ್ನನ್ನು ಎಚ್ಚರಿಸಲೆಂದು ನಿನ್ನ ಆರೋಗ್ಯದೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿರಬಹುದು ಮಾತ್ರವಲ್ಲ ನನ್ನನ್ನೂ ಅವುಗಳೇ ಇವತ್ತು ನಿನ್ನಲ್ಲಿಗೆ ಕಳುಹಿಸಿರಬಹುದು ಅಂತ ನನಗನ್ನಿಸುತ್ತದೆ. ಹಾಗಾಗಿ ನಾನು ಬಂದಾಯ್ತಲ್ಲ ಇನ್ನು ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡ. ಈ ಸಲ ಜುಮಾದಿ ದೈವದ ದರ್ಶನ ಇಟ್ಟುಕೊಂಡಿದ್ದೇವೆ. ನಿನ್ನ ಸಮಸ್ಯೆಯನ್ನೂ ಅದರೊಡನೆ ‘ಕೇಳಿ’ ನೋಡುವ. ಎಂಥೆಂಥದ್ದಕ್ಕೆಲ್ಲ ಆ ಶಕ್ತಿಯಲ್ಲಿ ಪರಿಹಾರವಿದೆ. ನಿನಗೊಂದು ಸಿಗಲಿಕ್ಕಿಲ್ಲವಾ! ನನ್ನಷ್ಟು ಮುದುಕನಾ ನೀನು? ಸಾಕಷ್ಟು ವಯಸ್ಸಿರುವಾಗಲೇ ಆ ಕಾಯಿಲೆಗಳು ನಿನ್ನನ್ನು ಹಿಡಿದಿವೆಯೆಂದರೆ ಏನರ್ಥ? ಒಂದು ಕೆಲಸ ಮಾಡು, ಇವತ್ತಿನಿಂದಲೇ ನಮ್ಮ ದೈವಗಳನ್ನು ಭಕ್ತಿಯಿಂದ ನಂಬಿ ಪೂಜಿಸಲು ಮನಸ್ಸು ಮಾಡು. ನಮ್ಮ ಕಾಲವೆಲ್ಲ ಮುಗಿಯುತ್ತ ಬಂತು ಮಾರಾಯಾ. ಇನ್ನು ಅವುಗಳಿಗೆ ಹೂ, ನೀರು ಇಡಲು ನಮ್ಮಿಂದ ಕೂಡುವುದಿಲ್ಲ. ಅದಕ್ಕೆಂದೇ ಆ ಕಾರಣಿಕಗಳು ನಿನ್ನ ಬೆನ್ನು ಹತ್ತಿವೆ ಅಂತ ಕಾಣುತ್ತದೆ. ಅವುಗಳನ್ನು ನಿರಾಶೆ ಮಾಡಬೇಡ!

   ನಾಡಿದ್ದು ಭೂತಕ್ಕೆ ಆಗುವ ಒಂದು ವಾರಕ್ಕೆ ಮುಂಚೆ ಮನೆಗೆ ಬಂದು ದೈವಗಳ ಚಾಕರಿ ಮಾಡು. ಆಮೇಲೆ ನಿನ್ನ ಆರೋಗ್ಯದಲ್ಲಿ ಸುಧಾರಣೆಯಾಗದಿದ್ದರೆ ಮತ್ತೆ ಹೇಳು!’ ಎಂದು ಸಂಜೀವಣ್ಣ ಕಡ್ಡಿ ಮುರಿದಷ್ಟು ಖಚಿತವಾಗಿ ಮತ್ತು ಅಷ್ಟೇ ಆತ್ಮೀಯವಾಗಿ ನಾರಾಯಣರಿಗೆ ಆಜ್ಞಾಪಿಸಿದರು. ಅಷ್ಟು ಕೇಳಿದ ನಾರಾಯಣರಿಗೆ, ‘ಮುಳುಗುವಾತನಿಗೆ ಒಣ ದಿಮ್ಮಿಯಾಸರೆ!’ ಎಂಬಂತಾಗಿ ಮರಳಿ ಕಣ್ಣಲ್ಲಿ ನೆಮ್ಮದಿಯ ನೀರಾಡಿತು. ‘ಹೌದು ಹೌದು ಮಾವ ನಾನು ತಪ್ಪು ಮಾಡಿದೆ. ಇಷ್ಟು ವರ್ಷಗಳ ಕಾಲ ನನ್ನ ಜೀವನ ಮತ್ತು ನಾನು ಕಟ್ಟಿಕೊಂಡ ಸಂಸಾರವನ್ನು ಮಾತ್ರವೇ ಒಂದು ಹಂತಕ್ಕೆ ತಲುಪಿಸುವ ಬಗ್ಗೆ ಹಗಲುರಾತ್ರಿ ಯೋಚಿಸುತ್ತ ಆರೋಗ್ಯವನ್ನೇ ಕಡೆಗಣಿಸಿಬಿಟ್ಟೆ. ಅದಕ್ಕೇ ಹೀಗಾಗಿರಬೇಕು. ಇಲ್ಲ ಇನ್ನು ಹಾಗಾಗಲು ಬಿಡುವುದಿಲ್ಲ. ಇನ್ನು ಮುಂದೆ ನಮ್ಮ ಮನೆತನದ ದೈವ, ಭೂತಗಳ ಆರಾಧನೆಯ ಜವಾಬ್ದಾರಿಯೆಲ್ಲ ನನ್ನದೇ ಮಾವ! ನೀವು ಹೇಗೆ ಹೇಳುತ್ತೀರೋ ಹಾಗೆಯೇ ನಡೆದುಕೊಳ್ಳುತ್ತೇನೆ. ಇವತ್ತಿನಿಂದ ನನ್ನದು ಎನ್ನುವುದು ಏನೂ ಇಲ್ಲ. ಇದ್ದರೆ ಅವನ್ನೆಲ್ಲ ಆ ಶಕ್ತಿಗಳೇ ನೋಡಿಕೊಳ್ಳಲಿ!’ ಎಂದು ಗದ್ಗದಿತರಾಗಿ ನುಡಿದರು. ನಾರಾಯಣರ ಅಂಥ ಭರವಸೆಯ ಮಾತು ಕೇಳಿದ ಸಂಜೀವಣ್ಣನಿಗೆ ಬಹಳ ಕಾಲದಿಂದ ತಮ್ಮ ನೆತ್ತಿಯ ಮೇಲಿದ್ದ ದೊಡ್ಡ ಹೊರೆಯೊಂದು ತಟ್ಟನೆ ಇಳಿದಷ್ಟು ಹಿತವಾಯಿತು. ಆದ್ದರಿಂದ ಸೋದರಳಿಯನನ್ನು ಮನಸಾರೆ ಹೊಗಳಿ ಹರಸಿ ಸಂಜೆಯ ಹೊತ್ತಿಗೆ ಹಿಂದಿರುಗಿದರು.

  ಅಂದಿನಿಂದ ನಾರಾಯಣರು ಬದಲಾದರು. ಅವರ ಮನಸ್ಸು ಸದಾ ಮನೆತನದ ದೈವ, ದೇವರುಗಳತ್ತಲೇ ತುಡಿಯತೊಡಗಿತು. ಹಾಗಾಗಿ ತಮ್ಮ ಮೂಲದ ಮನೆಯ ಭೂತಾರಾಧನೆಯ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡರು. ಅದರ ಹಿರಿಮೆಗಾಗಿ ದೈವಗಳಿಗೆ ಬೆಳ್ಳಿಯ ಮುಖವಾಡ ಮತ್ತು ಕಡ್ಸಲೆ (ಕತ್ತಿ)ಗಳನ್ನು ಹರಕೆಯ ರೂಪದಲ್ಲಿ ಅರ್ಪಿಸಿದರು. ಮುಂದೆ ಪ್ರತಿವರ್ಷ ಅವರ ಸುಪರ್ದಿಯಲ್ಲಿಯೇ ಆಟ, ಕೋಲ ಮತ್ತು ನೇಮಗಳು ವಿಜೃಂಭಣೆಯಿಂದ ನಡೆಯುತ್ತ ಬಹಳ ಬೇಗನೇ ತಮ್ಮ ಕುಟುಂಬಸ್ಥರ ಮೆಚ್ಚುಗೆಗೆ ಪಾತ್ರರಾದರು. ಇಷ್ಟಾದ ಮೇಲೆ ನಾರಾಯಣರ ಮನೆಯಲ್ಲೂ ಊರ ಮಾರಿಪೂಜೆಯ ಆಚರಣೆ ಶುರುವಾಯಿತು. ತಮ್ಮ ಗ್ರಾಮದ ಗುಳಿಗ ಮತ್ತು ನೀಚದೈವಗಳ ಕೋಲಕ್ಕೆ ಊರ ಕೋಳಿ ಮತ್ತು ಆಡುಗಳನ್ನು ಹರಕೆ ಸಲ್ಲಿಸುವ ಕ್ರಮವನ್ನು ಇಟ್ಟುಕೊಂಡರು. ಅವರಲ್ಲಾದ ಅಂಥ ಬದಲಾವಣೆಯಿಂದ ಅವರ ಮನಸ್ಸೂ ಉಲ್ಲಸಿತವಾಗಿರತೊಡಗಿತು. ಅದರಿಂದ ಆವರೆಗೆ ಕಿತ್ತು ತಿನ್ನುತ್ತಿದ್ದ ಕಾಯಿಲೆಗಳಿಗೂ ಹೆಂಡತಿಯ ಒತ್ತಾಯದಿಂದ ಆಯುರ್ವೇದ ಚಿಕಿತ್ಸೆಯನ್ನಾರಂಭಿಸಿದ ಸ್ವಲ್ಪಕಾಲದಲ್ಲಿ ಅವು ಕೂಡಾ ಹತೋಟಿಗೆ ಬಂದವು. ಹೀಗಾಗಿ ಅವರು ದಿನೇದಿನೇ ಗೆಲುವಾಗುತ್ತ ಬಂದರು.

   ಇಂಥ ನಾರಾಯಣರು ಇಂದು ತಮ್ಮ ಮನೆಯ ಹೊರಗಿನ ಜಗುಲಿಯ ಮೆಟ್ಟಿಲಲ್ಲಿ ಕುಳಿತುಕೊಂಡು ಕಾಲಿನ ಉಗುರು ಕತ್ತರಿಸುತ್ತಿದ್ದರು. ಆಗ ರಾಧಾಳ ಹೇಟೆಯು ಮರಿಗಳ ಸಮೇತ ಅವರ ಅಂಗಳಕ್ಕೆ ಅಡಿಯಿಟ್ಟಿತು. ಅವರ ಉಗುರು ಕಟ್ಟರಿನಿಂದ ಸಿಡಿಯುತ್ತಿದ್ದ ಉಗುರಿನ ಚೂರುಗಳನ್ನು ಯಾವುದೋ ಕೀಟಗಳಿರಬೇಕೆಂದುಕೊಂಡ ಕೋಳಿಯು ಧಾವಿಸಿ ಬಂದು ಒಂದೆರಡು ಚೂರುಗಳನ್ನು ಕುಟುಕುಟುಕಿ ಹೆಕ್ಕಿ, ‘ಕೊಕ್ಕ್ ಕೊಕ್ಕ್ ಕೊಕ್ಕ್ ಕೊಕ್ಕ್…!’ ಎಂದು ತನ್ನ ಪಿಳ್ಳೆಗಳನ್ನು ಕರೆಯಿತು. ಆ ಮರಿಗಳು ಅಷ್ಟೇ ಗಲಾಟೆಯೆಬ್ಬಿಸುತ್ತ ಓಡೋಡಿ ಬಂದವು. ನಾರಾಯಣರಿಗೆ ರಾಧಾಳ ಕೋಳಿಯ ಹಿಂಡು ಕಂಡು ಖುಷಿಯಾಯಿತು. ‘ಹೇ, ಗಿರಿಜಾ ಇಲ್ನೋಡನಾ… ಈ ಕೋಳಿಗಳಿಗೆ ಸ್ವಲ್ಪ ಅನ್ನವಿದ್ದರೆ ತಂದು ಹಾಕು ಮಾರಾಯ್ತೀ…!’ ಎಂದು ಹೆಂಡತಿಗೆ ಸೂಚಿಸಿದರು. ಬರುವ ತಿಂಗಳಲ್ಲಿ ಕಾಪುವಿನ ಮಾರಿಪೂಜೆಯಿದೆ. ಅದಕ್ಕೊಂದು ಊರ ಹುಂಜ ಬೇಕಾಗುತ್ತದೆ. ಅದನ್ನು ರಾಧಾಳಿಂದಲೇ ಕೊಂಡರಾಯ್ತು ಎಂದುಕೊಂಡರು. ಅಷ್ಟರಲ್ಲಿ ಗಿರಿಜಕ್ಕ ಒಂದು ಸೌಟು ಅನ್ನವನ್ನು ತಂದು ಕೋಳಿಗಳನ್ನು ಕರೆದು ತೆಂಗಿನ ಕಟ್ಟೆಯಲ್ಲಿ ಹಾಕಿ ಹೋದರು. ಹೇಟೆಯು ಮರಿಗಳೊಂದಿಗೆ ಅತ್ತ ಓಡಿ ಹೋಗಿ ಎರಡೇ ನಿಮಿಷದಲ್ಲಿ ಅನ್ನವನ್ನು ಗಬಗಬನೇ ಕಬಳಿಸಿತು. ಆದರೂ ತನ್ನ ಹಸಿವೆ ಇಂಗಿಲ್ಲವೆಂಬಂತೆ ಮತ್ತೆ ನಾರಾಯಣರ ಸಮೀಪ ಹೋಗಿ ಕೊಕ್ಕ್ ಕೊಕ್ಕ್ ಕೊಕ್ಕ್…! ಎಂದು ಅಂಗಲಾಚಿತು. ಆಗ ನಾರಾಯಣರಿಗೆ ಕಿರಿಕಿರಿಯಾಯಿತು. ‘ಇನ್ನೆಂಥದು ನಿಂದು? ತಿಂದಾಯಿತಲ್ಲವಾ ಹೋಗ್ ಹೋಗ್…!’ ಎಂದು ಗದರಿಸಿದರು. ಅವರ ಕಣ್ಣು ಮತ್ತು ಮೂಗಿನ ಹೊಳ್ಳೆಗಳು ಅರಳಿ ಕೆಂಪಾದುದನ್ನು ಕಂಡ ಕೋಳಿಯು ರಪ್ಪನೆ ಆತಂಕಗೊಂಡು,‘ಕೊಕ್ ಕೊಕ್ಕ್ ಕೊಕ್ಕ್!’ ಎಂದು ತನ್ನ ಪಿಳ್ಳೆ ಬಳಗವನ್ನು ಕರೆದುಕೊಂಡು ಪಕ್ಕದ ಮನೆಯತ್ತ ಹೊರಟು ಹೋಯಿತು.

   ನಾರಾಯಣರ ಮನೆಯ ಪಕ್ಕದ ಮನೆ ಉಮೇಶಯ್ಯನದ್ದು. ಅವರು ಕುಟುಂಬ ಸಮೇತ ಒಂದು ತಿಂಗಳ ಹಿಂದೆ ಮುಂಬೈಯ ಸಂಬಂಧಿಕರ ಮದುವೆಗೆಂದು ಹೋಗಿದ್ದವರು ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ವಾರವೆಂದು ಕುಳಿತು ಆತಿಥ್ಯ ಸ್ವೀಕರಿಸುತ್ತ ಮಜವಾಗಿ ಕಾಲ ಕಳೆಯುತ್ತಿದ್ದರು. ರಾಧಾಳ ಹೇಟೆಯು ಅವರ ಅಂಗಳದಲ್ಲೂ ಒಂದು ಸುತ್ತು ಹೊಡೆಯಿತು. ಆದರೆ ಅಲ್ಲಿ ಅಡುಗೆಯ ಪರಿಮಳವಾಗಲಿ, ಜನರ ಓಡಾಟವಾಗಲಿ ಕಾಣದೆ ನಿರಾಶೆಗೊಂಡು ಅವರ ಪಕ್ಕದ ಸುಮಿತ್ರಮ್ಮನ ಮನೆಯಂಗಳಕ್ಕೆ ಹೋಯಿತು. ಆಗ ಅದರ ಗಮನವು ರಪ್ಪನೆ ಸುಮಿತ್ರಮ್ಮನ ತೆಂಗಿನಕಟ್ಟೆಯತ್ತ ಹರಿಯಿತು. ಕೆಲವು ಕ್ಷಣ ಅತ್ತ ಕೊರಳೆತ್ತಿ ನೋಡಿದ್ದು ಮರಿಗಳೊಂದಿಗೆ ಅತ್ತ ಓಡಿತು. ಸುಮಿತ್ರಮ್ಮನ ತೆಂಗಿನ ಕಟ್ಟೆಯಲ್ಲಿ ಕೆಲವು ಕಾಲದಿಂದ ಕೊಳಚೆ ನೀರು ತುಂಬಿಕೊಂಡು ಹುಳು ಹುಪ್ಪಟೆಗಳಾಗಿ ಮುಲುಗುಟ್ಟುತ್ತಿದ್ದವು. ಕೋಳಿಗೆ ಸ್ವರ್ಗದ ಬಾಗಿಲು ತೆರೆದಂತಾಯಿತು. ಮರಿಗಳೊಂದಿಗೆ ಕಟ್ಟೆಯೊಳಗೆ ಧುಮುಕಿತು. ಹತ್ತೇ ನಿಮಿಷದಲ್ಲಿ ಕಂದು, ಬೆಳ್ಳಗಿನ ಮರಿಗಳೆಲ್ಲ ಪೂರ್ತಿ ಕೊಳಚೆಯ ಬಣ್ಣದ್ದಾಗಿ ಮಾರ್ಪಟ್ಟವು. ಆ ರಾಡಿಯಲ್ಲಿ ಇಷ್ಟಬಂದಂತೆ ಕುಣಿದು ಕುಪ್ಪಳಿಸುತ್ತ ಮಿಂದು ಕುಡಿದು ಅಲ್ಲಿನ ಅಸಂಖ್ಯಾತ ಹುಳಹುಪ್ಪಟೆಗಳನ್ನು ಕೆದಕಿ ಕೆದಕಿ ತಿನ್ನತೊಡಗಿದವು. ಅದರಿಂದ ಹೆದರಿದ ಒಂದಷ್ಟು ಕ್ರಿಮಿಕೀಟಗಳೂ ಕಪ್ಪೆಮರಿಗಳೂ ತಟಪಟನೇ ಹೊರಗೆ ನೆಗೆದು ದಿಕ್ಕುತಪ್ಪಿ ಓಡತೊಡಗಿದವು. ಹೇಟೆಯೂ ಮತ್ತು ಕೆಲವು ಮರಿಗಳೂ ಅರಚುತ್ತ ಅವನ್ನು ಬೆನ್ನಟ್ಟುತ್ತ ಅಂಗಳವಿಡೀ ಓಡಾಡತೊಡಗಿದವು.

   ಸುಮಿತ್ರಮ್ಮ ಅಡುಗೆಕೋಣೆಯಲ್ಲಿ ತಮ್ಮ ಸಂಧಿವಾತದ ಕಾಲುಗಳನ್ನು ನೀಡಿ ಕುಳಿತುಕೊಂಡು ತರಕಾರಿ ಹೆಚ್ಚುತ್ತಿದ್ದರು. ಅಷ್ಟರಲ್ಲಿ ಕೋಳಿಗಳ ಕೂಗು ಗಲಾಟೆಯನ್ನು ಕೇಳಿಸಿಕೊಂಡವರು, ‘ಅರೆರೇ, ಇದೇನಪ್ಪಾ ಕೋಳಿಗಳ ಸದ್ದು…!?’ ಎನ್ನುತ್ತ ಕಷ್ಟಪಟ್ಟು ಎದ್ದು ಹೊರಗೆ ಬಂದರು. ಹತ್ತಾರು ಕೋಳಿಯ ಬಳಗವೊಂದು ಕರ್ಕಶವೆಬ್ಬಿಸುತ್ತ ಅಂಗಳದಲ್ಲಿ ಕುಣಿಯುತ್ತಿತ್ತು. ದುಬಾರಿ ಬೆಲೆಯ, ಬಣ್ಣಬಣ್ಣದ ಇಂಟರ್‍ಲಾಕ್ ಹೊದೆಸಿದ್ದ ಅವರ ಅಂಗಳವಿಡೀ ಕೊಳಚೆಯೆದ್ದು ವಾಸನೆ ಬೀರುತ್ತಿತ್ತು. ಅದನ್ನು ಕಂಡವರಿಗೆ ವಾಕರಿಕೆಯೂ ಅಸಾಧ್ಯ ಸಿಟ್ಟೂ ಒಟ್ಟೊಟ್ಟಿಗೆ ಬಂತು. ‘ಅಯ್ಯಯ್ಯಯ್ಯೋ ಕೃಷ್ಣಾ…! ಏನಪ್ಪಾ ಇದು ಪ್ರಾರಬ್ಧ…! ಛೀ, ಛೀ! ಹೇ, ಹೇ, ಹೌವ್ವಾ, ಹೌವ್ವಾ, ಹೌವ್ಹಾ…!’ ಎಂದು ಕೈಗಳನ್ನು ಬೀಸುತ್ತ ಕಿರುಚಿದರು. ಅಷ್ಟಕ್ಕೆ ಕೋಳಿಗಳೆಲ್ಲ ಬೆದರಿ ಒಂದಷ್ಟು ದೂರವೇನೋ ಓಡಿದವು. ಆದರೆ ತುಸು ಹೊತ್ತಲ್ಲಿ ಮತ್ತೆ ಬಂದು ತಮ್ಮ ಕಾರ್ಯದಲ್ಲಿ ಮಗ್ನವಾದವು. ಸುಮಿತ್ರಮ್ಮ ಮತ್ತಷ್ಟು ಕೋಪಗೊಂಡು ಒಳಗೆ ಧಾವಿಸಿ ಪೊರಕೆ ಹಿಡಿದುಕೊಂಡು ಬಂದು ಕೋಳಿಯ ಹಿಂಡನ್ನು ಬಡಿದು ಓಡಿಸಲು ಅಂಗಳಕ್ಕಿಳಿದರು. ಆದರೆ ಹೇಟೆಯು ತಾನು ಎಂಥ ಬ್ಯುಸಿ ಕೆಲಸದಲ್ಲಿದ್ದರೂ ಸುಮಿತ್ರಮ್ಮನ ಮೇಲೊಂದು ಕಣ್ಣಿಟ್ಟುಕೊಂಡೇ ಕಾರ್ಯಮಗ್ನವಾಗಿತ್ತು. ಆದ್ದರಿಂದ ಸುಮಿತ್ರಮ್ಮನ ಕೈಯಲ್ಲಿ ಪೊರಕೆಯನ್ನು ಕಂಡ ಅದು, ‘ಕೊಕ್ಕೊಕ್ಕ್… ಕ್ಯಾರ್ರಾಂವ್ಞ್, ಕೊಕ್ಕೊಕ್ಕ್… ಕ್ಯಾರ್ರಾಂವ್ಞ್, ಕೊಕ್ಕೊಕ್ಕ್… ಕ್ಯಾರ್ರಾಂವ್ಞ್…!’ ಎಂದು ಅಪಾಯಸೂಚಕ ಕೂಗೆಬ್ಬಿಸುತ್ತ ಮರಿಗಳೊಂದಿಗೆ ಹಾರಿ ಹೊರಗೆ ಹೋಯಿತು. ಅದರಿಂದ ಸುಮಿತ್ರಮ್ಮನ ಕೋಪವು ತಟ್ಟನೆ ಕೋಳಿ ಮಾಲಕರ ಮೇಲೆ ತಿರುಗಿತು. ಪೊರಕೆ ಹಿಡಿದುಕೊಂಡೇ ಹೊರಟರು. ಕೋಳಿಗಳು ಇನ್ನೂ ಬೆದರಿ ಬೆಂಡಾಗಿ ನೇರವಾಗಿ ತಮ್ಮ ಮನೆಯತ್ತಲೇ ಓಡಿದವು. ಸುಮಿತ್ರಮ್ಮನೂ ಅತ್ತ ನುಗ್ಗಿದರು.

   ಗೋಪಾಲ ದಂಪತಿಯ ಮನೆಯ ಸುತ್ತ ಗೊಬ್ಬರದ ಗಿಡ(ಗ್ಲೈರಿಸೀಡಿಯಾ)ಗಳಿಂದ ಕಟ್ಟಿದ ಬೇಲಿಯ ಹೊರಗೆ ಬಂದು ನಿಂತ ಸುಮಿತ್ರಮ್ಮ, ‘ರಾಧಾ…ಹೇ ರಾಧಾ…! ಎಲ್ಲಿದ್ದಿ ಮಾರಾಯ್ತಿ ಹೊರಗೆ ಬಾರನಾ…!’ ಎಂದು ಜೋರಾಗಿ ಸಿಡುಕಿದರು. ರಾಧಾ ಬಚ್ಚಲಲ್ಲಿ ಮುಸುರೆ ತಿಕ್ಕುತ್ತಿದ್ದವಳು ಸುಮಿತ್ರಮ್ಮನ ಕೂಗು ಕೇಳಿ ಬೆಚ್ಚಿಬಿದ್ದು ಗೇಟಿನತ್ತ ಓಡಿ ಬಂದವಳು, ಮುಸುರೆಯ ಕೈಗಳನ್ನು ಆತಂಕದಿಂದ ಸೆರಗಿಗೆ ಒರೆಸಿಕೊಳ್ಳುತ್ತ, ‘ಏನಾಯ್ತು ಸುಮಿತ್ರಮ್ಮ…?’ ಎಂದಳು ಮೃದುವಾಗಿ.

‘ಅಯ್ಯಯ್ಯೋ ಮಾರಾಯ್ತೀ… ಏನಾಯ್ತು ಅಂತ ಕೇಳ್ತಿಯಾ? ಅಲ್ನೋಡು ನಿನ್ನ ಕೋಳಿಗಳ ದರಿದ್ರ ಆಟವನ್ನು! ನನ್ನ ತೆಂಗಿನ್ಕಟ್ಟೆಯ ಹೊಲಸನ್ನೆಲ್ಲಾ ತಂದು ಅಂಗಳವಿಡೀ ಬಳಿದುಬಿಟ್ಟಿವೆ. ನೀನು ಕೋಳಿ ಸಾಕೋದಿದ್ರೆ ನಿನ್ಮನೆ ಕಂಪೌಂಡ್‍ನೊಳಗೇ ಸಾಕಬೇಕು ಮಾರಾಯ್ತಿ. ಅವುಗಳನ್ನು ವಠಾರದಲ್ಲೆಲ್ಲ ಮೇಯಲು ಬಿಟ್ಟರೆ ಹೇಗೇ? ಆ ಹೊಲಸು ಜೀವಿಗಳು ಬಂದು ನಮ್ಮ ಮಡಿಮೈಲಿಗೆಯನ್ನು ಹಾಳು ಮಾಡೋದೆಲ್ಲ ನಮಗೆ ಇಷ್ಟವಾಗೋದಿಲ್ಲ ನೋಡು!’ ಎಂದು ಕೋಪದಿಂದ ಗದರಿಸಿಬಿಟ್ಟರು. ಅಷ್ಟು ಕೇಳಿದ ರಾಧಾಳಿಗೆ ಆಘಾತವಾಯಿತು.

‘ಅಯ್ಯಯ್ಯೋ ಹೌದಾ ಸುಮಿತ್ರಮ್ಮಾ… ಅವುಗಳನ್ನು ಆಗಲೇ ಮದಗದಾಚೆ ಅಟ್ಟಿ ಬಂದಿದ್ದೆನಲ್ಲ! ಹಾಳಾದವು ನನ್ನ ಕಣ್ಣು ತಪ್ಪಿಸಿ ನಿಮ್ಮಲ್ಲಿಗೆ ಬಂದಿರಬೇಕು. ತಪ್ಪಾಯಿತು ಸುಮಿತ್ರಮ್ಮಾ. ಇನ್ನುಮುಂದೆ ನಿಮ್ಮಾಚೆ ಬರದಂತೆ ಜಾಗ್ರತೆ ಮಾಡುತ್ತೇನೆ…!’ ಎಂದು ದೈನ್ಯದಿಂದ ಹೇಳಿ ಅವರನ್ನು ಸಮಾಧಾನ ಮಾಡಲು ನೋಡಿದಳು. ಆದರೆ ಅವರ ಕೋಪ ಇನ್ನಷ್ಟು ಕುದಿಯಿತು.

 ‘ಇನ್ನು ಮೇಲೆ ಬರದಂತೆ ಆಮೇಲೆ ನೋಡಿಕೊಳ್ಳುವಿಯಂತೆ. ಈಗ ಮೊದಲು ಅವು ಮಾಡಿರುವ ಹೇಸಿಗೆಯನ್ನು ನಿನ್ನದೇ ಇಡುಸೂಡಿಯಿಂದ ಗುಡಿಸಿ, ಸ್ವಚ್ಛ ಮಾಡಿಕೊಟ್ಟು ಹೋಗು ಬಾ, ಹೊರಡು!’ ಎಂದರು ಖಾರವಾಗಿ.

‘ಆಯ್ತಮ್ಮ ಬರುತ್ತೇನೆ  ನಡೆಯಿರಿ…’ ಎಂದ ರಾಧಾ ಪೊರಕೆ ಹಿಡಿದುಕೊಂಡು ಅವರ ಹಿಂದೆ ಹೆಜ್ಜೆ ಹಾಕಿದಳು. ತನ್ನ ಕೋಳಿಗಳು ಬಳಿದಿದ್ದ ಹೊಲಸಿನೊಂದಿಗೆ ವಾರದಿಂದಲೂ ಇಡುಸೂಡಿ ಸೋಕಿಸದಿದ್ದ ಅಂಗಳದ ಮೂಲೆಮೂಲೆಗಳನ್ನೂ ರಾಧಾ ಗುಡಿಸಿ ನೀರು ಹಾಕಿ ತೊಳೆದುಕೊಟ್ಟ ಮೇಲೆಯೇ ಸುಮಿತ್ರಮ್ಮನ ಅಸಹನೆ ಸ್ವಲ್ಪಮಟ್ಟಿಗೆ ತಣ್ಣಗಾಗಿದ್ದು!

(ಮುಂದುವರೆಯುವುದು)

***************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

 

One thought on “

  1. ರಾಧಾ ಗೋಪಾಲ ದಂಪತಿ ನೆಲೆಸಿದ ಬಾಗೀವನದ ವಠಾರದಲ್ಲಿರುವ ನಾರಾಯಣ ಅವರ ಕೌಟುಂಬಿಕ ಹಿನ್ನೆಲೆಯನ್ನು ಈ ಅಧ್ಯಾಯದಲ್ಲಿ ಕಾಣಬಹುದು. ರಾಧಾ ಸಾಕಿದ ಕೋಳಿಗಳಿಂದ ನೆರೆಮನೆಯವರಿಗೆ ಆಗುವ ತೊಂದರೆಯನ್ನು ಕಾದಂಬರಿಕಾರರು ಸ್ವಾರಸ್ಯಕರವಾಗಿ ಬಿಂಬಿಸಿದ್ದಾರೆ. ಅಭಿನಂದನೆಗಳು

Leave a Reply

Back To Top