ಗಜಲ್ ಜುಗಲ್ ಬಂದಿ-02
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಒಲವಾಗುವದೆಂದರೆ ಬರಿದೆ ಮಾತಲ್ಲ ಮೌನ ಅರಿಯಬೇಕು
ಜೊತೆಯಾಗುವದೆಂದರೆ ಬರಿದೆ ಹೆಜ್ಜೆಯಲ್ಲ ಯಾನ ಅರಿಯಬೇಕು/
ಅಂದು ಹಂಚಿಕೊಂಡ ಭಾವಕ್ಕೆ ಯಾವ ಹೆಸರೂ ಇಡಲಿಲ್ಲ
ಕಾಯುವದೆಂದರೆ ಬರಿದೆ ಸಮಯವಲ್ಲ ಏಕತಾನ ಅರಿಯಬೇಕು/
ಕೇಳಿದ್ದೆ ನಡೆದು ಬಾ ಬಾಳಿಗೆ ಬಣ್ಣಗಳು ಉಳಿಯುತ್ತವೆ ಎಂದು
ಭಾವಗಳೆಂದರೆ ಬರಿದೆ ಘಟನೆಗಳಲ್ಲ ದುಮ್ಮಾನ ಅರಿಯಬೇಕು/
ಕಣ್ಣು-ಕಣ್ಣು ಬೆಸೆದು ಅದೆಷ್ಟು ಬಿಂಬಗಳ ಸೃಷ್ಟಿಸಿದ್ದೆವು
ಕನಸಾಗುವದೆಂದರೆ ಬರಿದೆ ಚಿತ್ರವಲ್ಲ ಧ್ಯಾನ ಅರಿಯಬೇಕು/
ಏಳು-ಬೀಳುಗಳ ದಾಟಿ ನಡೆದರೆತಾನೇ”ಸ್ಮಿತ”ದ ನಿಜ ಅನುಭವ
ಬದುಕೆಂದರೆ ಬರಿದೆ ಜೀವಿಸುವದಲ್ಲ ಒಗತನ ಅರಿಯಬೇಕು/
ಸ್ಮಿತಾ ಭಟ್
*****
ಪ್ರೇಮವೆಂದರೆ ಬರೀ ಕನಸಲ್ಲ ನನಸಾಗಿಸುವ ಕಲೆಯ ಅರಿಯಬೇಕು
ಸೇರುವುದೆಂದರೆ ದೇಹ ಮಾತ್ರವಲ್ಲ ಮನದ ಒಳಸೆಲೆಯ ಅರಿಯಬೇಕು
ಪರಸ್ಪರ ಅರಿತುಕೊಳ್ಳದಿದ್ದರೆ ವ್ಯರ್ಥವಾದೀತು ಬರೆದಿಟ್ಟ ಬದುಕು
ಬರೀದೆ ಓದುವುದಲ್ಲ ಹೃದಯಪುಸ್ತಕದ ಪ್ರತಿ ಓಲೆಯ ಅರಿಯಬೇಕು
ಜೋಡಿ ರೆಕ್ಕೆ ಹಿಮ್ಮುಖ ಚಾಚಲು ಹಕ್ಕಿ ಹಾರುವುದ ಕಂಡಿಲ್ಲವೇ
ಸದಾ ಹಿನ್ನೆಲೆಯಾಗಿ ನಿಂತು ಗೆಲ್ಲಿಸುವ ಅಲೆಯ ಅರಿಯಬೇಕು
ಸವಿನೆನಪಿನ ದಾಖಲೆಗೆ ಮಹಲುಗಳ ಕಟ್ಟಿ ಮೆರೆಸಬೇಕಿಂದಿಲ್ಲ ಸಖ
ಬದುಕಿದಷ್ಟು ದಿನ ನಲಿವ ಪೊರೆಯಲು ಸ್ಥಿರ ನೆಲೆಯ ಅರಿಯಬೇಕು
ಅನಂತಡೆಗಿನ ಸರಳ’ರೇಖೆ’ ಚಲನೆಯ ಅಳೆಯಲಾಗದು ತಾನೇ
ಜಗದ ಅಳತೆ ಮಾನಗಳಿಗೆ ನಿಲುಕದ ಒಲವ ಬೆಲೆಯ ಅರಿಯಬೇಕು
ರೇಖಾ ಭಟ್
********************************