ರೈಲು ಹನಿ

ಪುಸ್ತಕ ಸಂಗಾತಿ

ರೈಲು ಹನಿ

ರೈಲು ಹನಿ

(ಹನಿಗವನ ಲೋಕದಲ್ಲೊಂದು ಹೊಸ ಪ್ರಯತ್ನ)

ಲೇಖಕರು ಪ್ರವೀಣ್ ಚಿತ್ತಾಪುರ

ಪ್ರಕಾಶಕರು:- ವಿಶ್ವ ಖುಷಿ ಪ್ರಕಾಶನ ಬಾಗಲಕೋಟೆ ಬೆಲೆ..:- ೯೯

ಪುಟಗಳು:- ೬೪

ಮುಖಪುಟದ ಸ್ನೇಹಿತರಾದ ಆತ್ಮೀಯ ಪ್ರವೀಣ್ ಚಿತ್ತಾಪುರ್ ಅವರ ಮೊದಲ ಹನಿಗವನ ರೈಲು ಹಳಿ ವಿಭಿನ್ನ ಪ್ರಯತ್ನದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯನ್ನು ಈ ಪುಸ್ತಕದ ಮೂಲಕ ನೀಡಲು ಹೊರಟಿದ್ದಾರೆ ಪುಸ್ತಕದ ಒಳಹರಿವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಕೆಲವು ಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, ವೃತ್ತಿಯಲ್ಲಿ ಇಂಜಿನಿಯರ್ ಆದರೂ ಕೂಡ ಬಿಡುವಿನ ಅವಧಿಯಲ್ಲಿ ಕನ್ನಡ ಸಾಹಿತ್ಯಲೋಕದಲ್ಲಿ ಬಹಳ ವಿಭಿನ್ನವಾಗಿರುತ್ತೆ ಅಂತ ಒಂದಲ್ಲ ಒಂದು ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ಮುಖಪುಟದಲ್ಲಿ ಮಾಡುತ್ತಲೇ ಇರುವುದನ್ನು ಗಮನಿಸುತ್ತೇವೆ. ಹಾಗೆ ಈ ಪುಸ್ತಕವು ಕೂಡ ಅಷ್ಟೇ ವಿಭಿನ್ನ ಪ್ರಯತ್ನದಿಂದ ಭಾವನೆಗಳನ್ನು ಹೆಣೆದುಕೊಂಡ ಪುಸ್ತಕವಿದು.

ಸಾಮಾನ್ಯವಾಗಿ ರೈಲು ಸಾರಿಗೆ ಬಡವರ ದೀನರ ದಲಿತರ ಮತ್ತು ಮಧ್ಯಮವರ್ಗದ ಆಧಾರಸ್ತಂಭ,ಅಲ್ಲಿ ನಡೆಯುವ ಘಟನೆಗಳೆಲ್ಲವೂ ನೋವು-ನಲಿವು ಪ್ರೀತಿ-ಪ್ರೇಮ, ತಮಾಷೆ,ಹರಟೆ ಕಟ್ಟೆಯಂತೆ ಭಾಸವಾಗುವ ಈ ರೈಲ್ ಎಂಬ ಜೀವನದಲ್ಲಿ ಯಾವ ಯಾವ ಪ್ರಮುಖ ಘಟನೆಗಳು ಜರುಗುತ್ತವೆ ಎಂಬುದನ್ನು ತಮ್ಮ ಹನಿಗವನಗಳ ಮೂಲಕ ವಿಸ್ತಾರಗೊಳಿಸುತ್ತಾ ಹೋಗುತ್ತಾರೆ.

ಈ ಪುಸ್ತಕವನ್ನು ಓದಿದಾಗ ಜಿ.ಎಸ್ ಶಿವರುದ್ರಪ್ಪನವರ ಮುಂಬೈ ಜಾತಕ ರೈಲ್ ಪ್ರಯಾಣ ಜೀವನ ದರ್ಶನ ಒಳಗೊಂಡ ಕವನವು ಕೂಡ ನೆನಪಿಗೆ ಬರುತ್ತದೆ. ಅಂದರೆ ಈ ಧಾವಂತದ ಜೀವನದಲ್ಲಿ ಮನುಷ್ಯ ಏನೆಲ್ಲಾ ತನ್ನ ಕೆಲಸ ಕಾರ್ಯಗಳು ಎಲ್ಲವನ್ನೂ ಕೂಡ ರೈಲುಬಂಡಿಯಲ್ಲಿ ಮಾಡುತ್ತಾನೆ ಎಂಬುದನ್ನು ನಿತ್ಯ ಪ್ರಯಾಣ ಮಾಡುವರಿಗೆ ಕಾಣುತ್ತೇವೆ.

ಮಹಿಳೆಯರು,ದುರ್ಬಲ ವರ್ಗದವರು,ತೃತೀಯ ಲಿಂಗಿಗಳು,ಹೀಗೆ ಜೀವನದ ನಾನಾ ಬಗೆಯ ನಾನಾ ರೀತಿಯನ್ನು ಒಳಗೊಂಡ ಸನ್ನಿವೇಶಗಳನ್ನು , ಘಟನೆಗಳನ್ನು ಈ ಒಂದು ರೈಲುಬಂಡಿಯಲ್ಲಿ ಕಾಣುತ್ತೇವೆ ಅವುಗಳನ್ನೇ ಒಂದು ವಿಷಯ ವಸ್ತುವನ್ನಾಗಿಟ್ಟುಕೊಂಡು ಹನಿಗಳನ್ನು ರಚಿಸಿದ್ದು ನಿಜಕ್ಕೂ ವಿಸ್ಮಯಕಾರಿ ಅಷ್ಟೇ ಜೀವನಕ್ಕೆ ಹತ್ತಿರವಾಗುತ್ತದೆ.

             ಕೆಲಸದ ಧಾವಂತದಲ್ಲಿ ಮನೆಯಿಂದ ತಂದ ತಿಂಡಿ-ತಿನಿಸುಗಳನ್ನು ತಿನ್ನುವುದರಲ್ಲಿ ಸಾಯಂಕಾಲ ಹೋಗಿ ಮನೆಯಲ್ಲಿ ಮಾಡುವ ಕೆಲಸವನ್ನು ರೈಲಿನಲ್ಲಿ ಮಾಡುವ ಸನ್ನಿವೇಶವನ್ನು ಕೂಡ ನಾವು ಕಾಣುತ್ತೇವೆ.

                     ಹೇಳುವ ವಿಷಯವನ್ನು ನವಿರಾಗಿ ಸ್ವಾರಸ್ಯಕರವಾಗಿ ಮನಮುಟ್ಟುವಂತೆ ಅಲ್ಲಲ್ಲಿ ಕುಟಕಿ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.

          ಹಸುಗೂಸು ಹೊತ್ತು ನಿಂತವಳ ಏದುಸಿರ ಕೇಳಿ ಕಣ್ಣು ಕಾಣದವನೊಬ್ಬ ಅವಳಿಗೆ ಜಾಗ ಮಾಡಿಕೊಟ್ಟರೆ ಕಣ್ಣಿದ್ದವರು ಎಂದಿನಂತೆ ಬರೀ ನಿಟ್ಟುಸಿರು ಬಿಟ್ಟರು..

                  ಒಂದು ಹನಿಗವನ ಗಮನಿಸಿದಾಗ ನಮ್ಮ ಅಂತರಂಗದೊಳಗಿನ ಆತ್ಮದ ಪ್ರಶ್ನೆಯನ್ನು ಹಾಗೆ ಸಾರಿ ಸಾರಿ ಬಡಿದೆಬ್ಬಿಸುತ್ತದೆ.ಮಾನವೀಯತೆಯ ಬೀಜ ನಮ್ಮೊಳಗೂ ಇದೆ ಎಂಬುದನ್ನು ಪ್ರಶ್ನಿಸುವಂತೆ ಮಾಡುತ್ತದೆ.

                  ಚಾರ್ಜರ್ ಪಾಯಿಂಟ್ ಇಲ್ಲದ ರೈಲಿನಲ್ಲಿ

ಪವರ್ ಬ್ಯಾಂಕ್ ಇದ್ದವನೇ ಶ್ರೀಮಂತ ಇತ್ತೀಚೆಗೆ ಮೊಬೈಲ್ ಅನ್ನುವ ಲೋಕದಲ್ಲಿ ನಾವೆಲ್ಲರೂ ಕೂಡ ಒಂದಲ್ಲ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಅದಕ್ಕೆ ಅಂಟಿಕೊಂಡಿರುತ್ತೇವೆ. ರೈಲು ಪಯಣದಲ್ಲಿ ಸಾಮಾನ್ಯವಾಗಿ ನಮ್ಮ ನಡುವಿನ ಬದುಕಿನ ಜನಸಾಮಾನ್ಯರ ಜನಜೀವನವನ್ನು ತೋರಿಸುತ್ತದೆ. ಕೆಲವೊಂದು ಸಮಯದಲ್ಲಿ ಇರುವುದಿಲ್ಲ ಆ ಸಮಯದಲಿನ ತೊಳಲಾಟವನ್ನು ಕವಿ ಮಧ್ಯಮ ವರ್ಗದ ಜನರ ಬಗ್ಗೆ ಬಹಳ ಸೂಕ್ಷ್ಮವಾಗಿ ಅರ್ಥಗರ್ಭಿತವಾಗಿ ವಿಶದೀಕರಿಸಿದ್ದಾರೆ.

ಪಯಣದಲಿ ಇದ್ದರೆ ಅಕ್ಕಪಕ್ಕ

ಚೆಲುವೆಯರೆಂಬ ಆಸ್ತಿ

ಗಂಡಸರಿಗೆ ಪದೇ ಪದೇ

ಕತ್ತು ನೋವಿನ ನೆನಪು ಜಾಸ್ತಿ ..?

ವ್ಹಾ ! ಈ ಒಂದು ಹನಿಗವನ ಹದಿಹರಿಯದ ಮನಸುಗಳ ತುಮುಲವನ್ನು ಹಾಗೆ ಬಡಿದೆಬ್ಬಿಸುತ್ತದೆ. ಇಲ್ಲಿ ಯಾನ ಸುಖಕರವಾಗಲಿ ಸಾಗಲು ಕೂಡ ಮಾನಿನಿಯರ ನೆನಪುಗಳು ಅಷ್ಟೇ ! ಕಾಡುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಅರ್ಥೈಸಿದ್ದಾರೆ.

ಹಾಗೆಯೇ ಪುಸ್ತಕ ಕೂಡ ಬಾಳ ಅಚ್ಚುಕಟ್ಟಾಗಿ ಬಹಳ ವಿಭಿನ್ನವಾಗಿ ಮುಖಪುಟದ ಚಿತ್ರ ಬಳಸಿದ ಕಾಗದ ಗಳು ಮತ್ತು ಆ ಹನಿಗಳಿಗೆ ತಕ್ಕಂತೆ ರಚಿಸಿದ ರೇಖಾಚಿತ್ರಗಳು ಕೂಡ ಸಾವಿರ-ಸಾವಿರ ಅರ್ಥಗಳನ್ನೇ ಕಟ್ಟಿಕೊಟ್ಟು ನೆನಪಿನಾಳದಲ್ಲಿ ಹಾಗೆಯೇ ಉಳಿದುಬಿಡುತ್ತದೆ ಅಂತ ಚಿತ್ರಗಳನ್ನು ರಚಿಸಿದ ಝಬಿವುಲ್ಲಾ ಅಸದ್ ಅವರ ಕಲೆಯು ಮೆಚ್ಚುಗೆಗೆ ಪಾತ್ರವಾಗಿದೆ, ಅವರಿಗೂ ಅಭಿನಂದನೆಗಳು.

ಇವರ 100 ಹನಿಗವನಗಳು ಹೇಗಿವೆಯೆಂದರೆ.. ತಿನ್ನುವುದರಿಂದ ಪ್ರಾರಂಭಿಸಿ ತೊಳೆಯುವುದರೊಂದಿಗೆ ಮುಕ್ತಾಯವಾಗುತ್ತದೆ..

ರೈಲು ಅಮ್ಮನಾದರೆ.

ಸೀಟು ಅವಳ ಮಡಿಲು.ಹೌದು ನಿತ್ಯ  ಕಾರ್ಮಿಕರ ಬಡವರ ನಿತ್ಯ ಬದುಕು,ಮಧ್ಯಮವರ್ಗದ ಜನರ ಜನಜೀವನದ ನಾಡಿ ಬಡಿತ.ಎಲ್ಲವನ್ನೂ ಅವರು ಅಲ್ಲೇ   ಕಂಡುಕೊಳ್ಳುತ್ತಾರೆ ಈ ಸಾಲು ಬಹಳ ಅರ್ಥಪೂರ್ಣವಾಗುತ್ತದೆ.ಭಾರತದಂತಹ ಬೃಹತ್ ರಾಷ್ಟ್ರದಲ್ಲಿ  ರೈಲು ಸಾರಿಗೆ ಬಹಳ ಅತೀತವಾಗಿ ಎಲ್ಲರನ್ನೂ ಕೂಡ ತನ್ನ ಒಡಲೊಳಗೆ ತುಂಬಿಕೊಂಡಿದೆ.

ಆದರೆ ಎಲ್ಲಾ ಹನಿಗಳನ್ನು ಗಮನಿಸುತ್ತಾ ಹೋದಂತೆ ಕೆಲವೊಂದು ಅಂಶಗಳು ನನಗೆ ಕಂಡಂತೆ ಹನಿಗಳನ್ನು ಕಡಿಮೆ ಪದಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ಮಾಡಬಹುದಿತ್ತೇನೋ ಎನ್ನಿಸಿತು.!

 ಇಲ್ಲಿರುವ ಹನಿಗಳನ್ನು ನೀವು ಕೂಡ ಓದಿ ಆಸ್ವಾದಿಸಿದಾಗ ಮಾತ್ರ ಅದರೊಳಗಿನ ಮಹತ್ವ

ಮತ್ತು ಸಂವೇದನೆಗಳು ಅರ್ಥೈಸಿಕೊಳ್ಳಲು ಸಾಧ್ಯವೆಂಬುದನ್ನು ಈ ಮೂಲಕ ತಮ್ಮ

ಗಮನಕ್ಕೆ ತರಬಯಸುತ್ತೇನೆ,

           ನಾನು ಹಾಕಿದ ಒಂದೇ ಒಂದು ಕಮೆಂಟ್ಸ್ ಗೆ Parkash ಸರ್ ಮೂಲಕ ನಾಲ್ಕು ಪುಸ್ತಕಗಳನ್ನು ಕೊಟ್ಟು ಓದಿಸಲು ಹಚ್ಚಿದ ತಮಗೆ ಮೊದಲಿಗೆ ಧನ್ಯವಾದಗಳು .ಈ ರೀತಿಯ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ ಸ್ನೇಹಿತರಾದ ಪ್ರವೀಣ ಚಿತ್ತಾಪುರ ಅವರಿಗೆ ತುಂಬು ಹೃದಯದ ಧನ್ಯವಾದಗಳು ಕನ್ನಡ ಸಾಹಿತ್ಯಲೋಕಕ್ಕೆ ಇನ್ನೂ ಹೆಚ್ಚಿನ ಕೃತಿಗಳು ಹರಿದು ಬರಲೆಂದು ಶುಭ ಹಾರೈಸುತ್ತೇನೆ.

***************

ಮುತ್ತು ಬಳ್ಳಾ ಕಮತಪುರ

Leave a Reply

Back To Top