ಕವಿತೆ
ಆದಿಯೋ-ಅಂತ್ಯವೋ
ಚಂದ್ರು ಪಿ ಹಾಸನ್
ಯುಗಯುಗದ ಆದಿ ಯುಗಾದಿ
ಹೊಸವರ್ಷದ ಹುಟ್ಟಿಗೆ ಸಂತಸವೆಲ್ಲಿದೆ
ಕೇವಲ ಸಾವಿನ ನೋವಿನ ಹಾದಿ
ಹೊಸ ಭಯ ಭೀತಿಯ ಹಾದಿ
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತವೆಲ್ಲಿದೆ
ಎಲ್ಲೆಲ್ಲೂ ಸಾವಿನ ಆರ್ತನಾದ
ಕೆಮ್ಮಿನ ಕರ್ಕಶ ಸಂಕಟ ಕೂಗು
ಯಾರು ಹೊಣೆಯಾಗಿದ್ದಾರೆ ಇದಕ್ಕೆ?
ಎಲ್ಲಾ ಮಾನವನ ಆಸೆಯೇ ಮೂಲ
ಪ್ರಕೃತಿಯ ವಿರುದ್ಧ ಬದುಕುವ ಬೆಳವಣಿಗೆಯ ಹುಚ್ಚು ಹಂಬಲ
ತನ್ನ ಸಂತತಿಯ ಬೆಳೆಸುವುದಕ್ಕಾಗಿ
ವನ ಸಂತತಿಯ ನಾಶ ಮಾಡಿದ ವಾತಾವರಣ ಬದಲಾವಣೆಯಾಗಿ
ಬದಲಾವಣೆಯ ಹೆಸರಿನಲ್ಲಿ
ಹಸಿರ ಬಸಿರಿಗೆ ಮಾರಕನಾಗಿ
ಪ್ರಕೃತಿಯ ಬದಲಾಯಿಸುತ್ತಿರುವುದು
ಹೊಸಜೀವಿಗಳ ಉಗಮದ ಕಾರಣ
ಒಂದೆಡೆ ಹಬ್ಬ ಆಚರಿಸುವುದೋ
ಇಲ್ಲವೇ ಭಯದಭೀತಿಯಲ್ಲಿ
ಕಾಲಕಳೆಯುವುದೋ ಅರಿಯೇ
ಕಾಲವೇ ಇದಕ್ಕೆ ಉತ್ತರಿಸಬೇಕು
****