ಲೇಖನ
ನಾಲ್ವಡಿ ಕೃಷ್ಣರಾಜ ಒಡೆಯರ್
ಮತ್ತು ಮೀಸಲಾತಿ
ಆಶಾ.ಎಸ್.
ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಮತ್ತು ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ್ ಸನ್ನಿಧಾನ ಅವರ ಮೊದಲ ಮಗನಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ೧೮೮೪ ಜೂನ್ ೪ರಂದು ಮೈಸೂರು ಅರಮನೆಯಲ್ಲಿ ಜನಿಸಿದರು
.
೧೮೯೪ರಲ್ಲಿ ಕಲ್ಕತ್ತ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಹತ್ತನೇ ಚಾಮರಾಜೇಂದ್ರ ಒಡೆಯರ್ ಗಂಟಲು ನೋವಿನಿಂದಾಗಿ ಆಕಸ್ಮಿಕವಾಗಿ ಮರಣ ಹೊಂದಿದರು, ಇನ್ನೂ ಹತ್ತು ವರ್ಷ ವಯಸ್ಸಿನವರಾಗಿದ್ದ ಕೃಷ್ಣರಾಜ ಒಡೆಯರ್ ಅವರು ರಾಜ್ಯಭಾರವನ್ನು ವಹಿಸಿಕೊಳ್ಳಬೇಕಾಯಿತು. ತಾಯಿ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಕೃಷ್ಣರಾಜ ಒಡೆಯರ್ ೧೯೦೨ರಲ್ಲಿ ೧೮ ವಯಸ್ಸು ತಲುಪುವವರೆಗೆ ರಾಜ್ಯವನ್ನು ರಾಜಪ್ರತಿನಿಧಿಯಾಗಿ ಆಳಿದರು. ೧೯೦೨ ಫೆಬ್ರವರಿ ೨ರಂದು ಕೃಷ್ಣರಾಜ ಒಡೆಯರ್ ಅವರು ತಾಯಿಯಿಂದ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಅದೇ ವರ್ಷ ಆಗಸ್ಟ್ ಎಂಟರಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಆಗಿನ ಬ್ರಿಟೀಷ್ ಇಂಡಿಯಾದ ವೈಸ್‍ರಾಯ್ ಲಾರ್ಡ್ ಕರ್ಜನ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ವಿದ್ಯುಕ್ತವಾಗಿ ಮೈಸೂರಿನ ಮಹಾರಾಜರೆಂದು ಘೋಷಿಸಿದರು.
ಮಹಾರಾಜರು ಪಿ. ರಾಘವೇಂದ್ರ ರಾವ್ ಅವರ ನಿರ್ದೇಶನದಡಿಯಲ್ಲಿ ಲೋಕರಾಜನ್ ಅರಮನೆಯಲ್ಲಿ ತನ್ನ ಆರಂಭಿಕ ಶಿಕ್ಷಣ ಮತ್ತು ತರಬೇತಿಯನ್ನು ಹೊಂದಿದರು. ಪಾಶ್ಚಿಮಾತ್ಯ ಅಧ್ಯಯನಗಳು ಜೊತೆಗೆ, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಶಿಕ್ಷಣ ಪಡೆದರು. ಕುದುರೆ ಸವಾರಿ ಮತ್ತು ಭಾರತೀಯ ಮತ್ತು ಪಶ್ಚಿಮ ಶಾಸ್ತ್ರೀಯ ಸಂಗೀತವನ್ನು ಕೂಡ ಕಲಿತರು. ಮುಂದೆ ಅಜ್ಮೀರ್ ನ ಮೇಯೊ ಕಾಲೇಜ್‍ನಲ್ಲಿ ಶಿಕ್ಷಣ ಮುಂದುವರೆಸಿದರು, ಆದರೆ ಅನಾರೋಗ್ಯದ ಕಾರಣ ಮೈಸೂರಿಗೆ ಮರಳಬೇಕಾಯ್ತು. ಬಾಂಬೆ ಸಿವಿಲ್ ಸರ್ವೀಸ್‍ನ ಸರ್ ಸ್ಟುವರ್ಟ್ ಫ್ರೇಸರ್ ಅವರು ಆಡಳಿತ ನಿರ್ವಹಣೆ, ನ್ಯಾಯಶಾಸ್ತ್ರ, ತತ್ವಶಾಸ್ತ್ರ ಬಗ್ಗೆ ಶಿಕ್ಷಣವನ್ನು ನೀಡಿದರು. ಬಳಿಕ ರಾಜ್ಯದಲ್ಲಿ ಪ್ರವಾಸಗಳನ್ನು ಮಾಡುವ ಮೂಲಕ ರಾಜ್ಯದ ಅವಶ್ಯಕತೆ ಹಾಗೂ ಆಡಳಿತದ ಬಗ್ಗೆ ವ್ಯಾಪಕವಾದ ಜ್ಞಾನವನ್ನು ಪಡೆದರು.
ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ
೧೯೧೮ರಲ್ಲಿ ಸರ್ಕಾರದ ಮುಖ್ಯ ನ್ಯಾಯಾಧೀಶರಾಗಿದ್ದ ಸರ್.ಲೆಸ್ಲಿ ಮಿಲ್ಲರ್ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ, ಎಲ್ಲಾ ಸಮುದಾಯದ ಜನರಿಗೆ ಸರ್ಕಾರಿ ಉದ್ಯೋಗದಲ್ಲಿ ಪ್ರತಿನಿಧ್ಯ ದೊರಕುವಂತೆ ಅಧ್ಯಯನ ಮಾಡಿ, ವರದಿ ನೀಡಲು ಆದೇಶ ಮಾಡಿದರು. ನಂತರ ಆಯೋಗದ ಶಿಫಾರಸ್ಸುಗಳಂತೆ ಬ್ರಾಹ್ಮಣರು, ಆಂಗ್ಲೋ ಇಂಡಿಯನ್ನರನ್ನು ಹೊರತು ಪಡಿಸಿ ಉಳಿದ ಎಲ್ಲಾ ಜಾತಿಗಳನ್ನು ಹಿಂದೂಗಳೆಂದು ಪರಿಗಣಿಸಿ, ೧೯೨೧ರಲ್ಲಿ ಪ್ರಥಮ ಭಾರಿಗೆ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಶೇ.೭೫ ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದರು. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು “ಮೀಸಲಾತಿಯ ಜನಕ” ಎನ್ನುತ್ತಾರೆ.
“ಮಿಲ್ಲರ್ ಆಯೋಗ” ರಚನೆ ಸಾಮಾಜಿಕ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಯಿತು. ಮಿಲ್ಲರ್ ಆಯೋಗ ಜಾರಿಗೆ ಬರಲಾಗಿ ಮೊಟ್ಟ ಮೊದಲ ಬಾರಿಗೆ ಮೈಸೂರು ಸಂಸ್ಥಾನಕ್ಕೆ ಕಾಂತರಾಜೇ ಅರಸ್ ದಿವಾನರಾಗಲು ಸಾಧ್ಯವಾಯಿತು. ಈ ಕಾಲದಲ್ಲೇ ಒಕ್ಕಲಿಗರ ಸಂಘ, ರೆಡ್ಡಿ ಜನಸಂಘ, ವೀರಶೈವರ ಜಾತಿ ಆಧಾರಿತ ಶಾಲಾ- ಕಾಲೇಜುಗಳು ಆರಂಭವಾದುವು.
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದರೆ, ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿ ಕೊಟ್ಟದ್ದು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು.
ಇವರ ಕಾಲದಲ್ಲಿ ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದಾರೆ. ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು 1915 ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.
ಗ್ರಾಮ ನೈರ್ಮಲೀಕರಣ
ವೈದ್ಯ ಸಹಾಯ
ವಿದ್ಯಾ ಪ್ರಚಾರ
ನೀರಿನ ಸೌಕರ್ಯ
ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಸಂಸ್ಥೆಗಳಾದವು.
ಹೊಸ ರೈಲು ದಾರಿಗಳ ನಿರ್ಮಾಣ
ಮೈಸೂರು – ಅರಸೀಕೆರೆ,
ಬೆಂಗಳೂರು – ಚಿಕ್ಕಬಳ್ಳಾಪುರ,
ಚಿಕ್ಕಜಾಜೂರು – ಚಿತ್ರದುರ್ಗ,
ನಂಜನಗೂಡು – ಚಾಮರಾಜನಗರ,
ತರೀಕೆರೆ – ನರಸಿಂಹರಾಜಪುರ,
ಶಿವಮೊಗ್ಗ – ಆನಂದಪುರ ಈ ಎಲ್ಲ ರೈಲು ಮಾರ್ಗಗಳನ್ನು ೧೯೩೧ ರ ವೇಳೆಗೆ ಪೂರೈಸಲಾಯಿತು .
ನೀರಾವರಿ
೧೯೦೭ರಲ್ಲಿ ‘ವಾಣೀವಿಲಾಸ ಸಾಗರ'(ಮಾರಿ ಕಣಿವೆ) ಕಟ್ಟಲ್ಪಟ್ಟಿತು. ೧೯೧೧ ರಲ್ಲಿ ಆರಂಭವಾದ ‘ಕೃಷ್ಣರಾಜ ಸಾಗರ’ ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. ೧೯೦೦ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿ ಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು.
ಇದು ಭಾರತದ ಮೊದಲ ಜಲ ವಿದ್ಯುತ್ ಕೇಂದ್ರ. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರದು. ಇದರ ಫಲಿತಾಂಶವಾಗಿ ೧೯೦೫ ಆಗಸ್ಟ್ ೩ ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು.
“ಜಾತಿ ಆಧಾರದ ಮೇಲೆ ಯಾರನ್ನೂ ಸಾರ್ವಜನಿಕ ಶಾಲೆಗಳಿಂದ ದೂರವಿಡುವ ಪರಿಪಾಠಗಳನ್ನು ಸರ್ಕಾರ ಎತ್ತಿ ಹಿಡಿಯದು. ಸಾರ್ವಜನಿಕ ಶಾಲೆಗಳನ್ನು ತೆರಿಗೆ ಆದಾಯದದಿಂದ ನಡೆಸುತ್ತಿರುವುದರಿಂದ ಶಿಕ್ಷಣವು ಸಹ, ಆಸ್ಪತ್ರೆ, ನ್ಯಾಯಾಲಯ, ರೈಲು ಪ್ರಯಾಣ ಇತ್ಯಾದಿ ಸಾರ್ವಜನಿಕ ಕ್ಷೇತ್ರಗಳಂತೆ ರಾಜ್ಯದ ಎಲ್ಲಾ ವರ್ಗದ ಜನರಿಗೂ ಲಭ್ಯವಾಗಬೇಕು”. ಎಂಬುದು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಶಯವಾಗಿತ್ತು.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿಶ್ವವಿದ್ಯಾನಿಲಯದ ಮೊಟ್ಟ ಮೊದಲ ಘಟಿಕೋತ್ಸವದಲ್ಲಿ – “ಶಿಕ್ಷಣವು ಕೆಲವೇ ಅದೃಷ್ಟಶಾಲಿಗಳಿಗೆ ಮಾತ್ರವಲ್ಲ. ಎಲ್ಲರಿಗೂ ಉನ್ನತ ಶಿಕ್ಷಣ ದೊರೆಯಲಿ ಎಂಬ ಕಾರಣಕ್ಕಾಗಿಯೇ ಮೈಸೂರು ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ. ಇದು ದೇಶದ ಅಸ್ಪೃಶ್ಯ, ಹಿಂದುಳಿದ, ಅಲ್ಪಸಂಖ್ಯಾತರುಗಳಿಗೆ ಅಂದರೆ ಶೇ.೮೫ ರಷ್ಟಿರುವ ಹಿಂದುಳಿದ ಎಲ್ಲಾ ಸಮುದಾಯದವರಿಗೆ ಇದೆ. ಇಲ್ಲಿನ ಬೋಧಕರು ಅವರ ತಿಳುವಳಿಕೆಯ ಮಟ್ಟಕ್ಕೆ ಇಳಿದು ತಮ್ಮ ಜ್ಞಾನವನ್ನು ಅವರೊಂದಿಗೆ ಹಂಚಿಕೊಳ್ಳಬೇಕು” ಎಂದಿದ್ದರು.
ದೇಶದ ನೂರಾರು ಮಹಾರಾಜರಲ್ಲಿ ಕೇವಲ ನಾಲ್ವರು ಮಾತ್ರ ದಲಿತ ಹಾಗೂ ಅಸ್ಪೃಶ್ಯರಿಗೆ ಮೀಸಲಾತಿ ನೀಡಿದ್ದು, ಇವರುಗಳಿಗೆ ಪ್ರೇರಣೆ ಆಗಿದ್ದು ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರು.ಸಮಾನತೆಗಾಗಿ ಶ್ರಮಿಸಿದರು. ಅವರ ಕೊಡುಗೆ ಅಪಾರ.
*************************************
ನಾಡಿನ ಪ್ರಾತಃ ಸ್ಮರಣೀಯರ ಬಗ್ಗೆ ಚೆನ್ನಾಗಿ ಬರೆದಿರುವಿರಿ.
ಅದ್ಭುತ ಪ್ರತಿಭೆ. ಇತಿಹಾಸ ನಮಗೆ ಪಾಠವಾಗಬೇಕು.ಮೀಸಲಾತಿ ಎಂದರೆ ಉರಿದುಬೀಳುವ ಒಂದು ವರ್ಗವಿದೆ. ಅವರಿಗೆ ಇದೊಂದು ತಿಳುವಳಿಕೆ .ಪ್ರಭುತ್ವ ಹೇಗಿರಬೇಕು ಎಂಬುದಕ್ಕೆ ನಾಲ್ವಡಿ ಕೃಷ್ಣರಾಜರು ಒಂದು ಅತ್ಯುತ್ತಮ ಉದಾಹರಣೆ.