ಮಾನವೀಯತೆ ಮರೆಸುತ್ತಿದೆ ಕೊರೊನ

ಲೇಖನ

ಮಾನವೀಯತೆ ಮರೆಸುತ್ತಿದೆ ಕೊರೊನ

ರಾಧಾ ಆರ್.ಡಿ.

India extends coronavirus lockdown by two weeks - BBC News

ತವರು ಮನೆಗೆ ಹದಿನೈದು ದಿನದ ಮಟ್ಟಿಗೆ  ಹೋಗಿದ್ದ ನಾನು ಬಿಗಿ ಲಾಕ್ಡೌನ್ ಆಗುತ್ತೆ ಎಂದು ಒಂದೇ ವಾರಕ್ಕೆ ದಿಡೀರ್ ಅಂತ ವಾಪಸ್ ಹೊರಟೆ.ಊರಿಂದ ಶಿರದ ವರೆಗೂ  ನನ್ನ  ಮತ್ತು ಪಾಪುನ ಅಪ್ಪಾಜಿ ಅಣ್ಣ ಬಿಡಬೇಕು ಅಂತ ಹಾಗೆ ಅಲ್ಲಿಂದ ನಮ್ಮನೆಯವರು ಕರೆದುಕೊಂಡು ಹೋಗಬೇಕು ಅಂತ  ಹೊರಡುವ ಮುನ್ನ ತೀರ್ಮಾನ ಆಗಿತ್ತು, ಬೆಳಗ್ಗೆ ಸುಮಾರು ಆರು ಗಂಟೆಗೆ ನಮ್ಮ ಊರಿಂದ ಹೊರಟೆವು, ಮೂರು ತಾಸಿನ ಪ್ರಯಾಣದ ನಂತರ ಅಂದರೆ ಒಂಬತ್ತು ಗಂಟೆಗೆ ಶಿರ ಟೋಲ್ ತಲುಪಿ ದೆವು. ಅಷ್ಟರಲ್ಲಿ

ನನ್ನ ಯಜಮಾನರು ಅಲ್ಲಿಗೆ ಬಂದು ಬೆಳಗಿನ ಉಪಹಾರ ಸವಿಯುತ್ತಾ ನಮಗಾಗಿ ಕಾದು ನಿಂತಿದ್ದರು. ಅಣ್ಣ ಹಾಗೂ  ಅಪ್ಪಾಜಿ,ಅಣ್ಣನ ಕಾರಿನಿಂದ   ಲಗೇಜ್ ಅನ್ನು ನಮ್ಮ ಕಾರಿಗೆ ಇಡುತ್ತಾ ನನ್ನ ಯಜಮಾನರ ಜೊತೆ ಮಾತಿಗಿಳಿದರು. ಪರಸ್ಪರ ಕ್ಷೇಮ ಸಾಮಾಚ್ಹಾರ ನಡೆಯುತ್ತಿತ್ತು, ಆಷ್ಟೊತ್ತಿಗೆ ಎಲ್ಲಿದ್ದನೋ ಏನೋ ಪಟ್ಟೆ ಪಂಚೆ ,ಅಂಗಿ ಧರಿಸಿ ತಲೆಮೇಲೆ ಇನ್ನೊಂದು     ಪಂಚೆ ಹೊದ್ದಿದ್ದ ಒಬ್ಬ ಮಧ್ಯಮ ವಯಸ್ಸಿನ ವ್ಯಕ್ತಿ ಬಂದು ಬೆಳಗಿನ ತಿಂಡಿ ತಿಂತಾ ಇದ್ದ ನನ್ನ ಯಜಮಾನರನ್ನು ಕೇಳಿದ….. ಸ್ವಾಮೀ….. ನಂಗೂ ಸ್ವಲ್ಪ ಊಟ ಕೊಡಿಅಂತ…. ಹತ್ತಿರಕ್ಕೆ ಬರುತ್ತಿದ್ದ,ಅವನು ಮಾಸ್ಕ್ ಬೇರೆ ಹಾಕಿರಲಿಲ್ಲ, ನಮಗೆ ಭಯ, ಕೊರೊನ ಕಾಲ ಅಂತ, ಇವರು ಹೇಳಿದ್ರು ಎಂಜಲಾಗಿದೆ ಕಣಪ್ಪ ಹೇಗೆ ಕೊಡಲಿ, ಹತ್ತಿರ ಬರಬೇಡ, ಅಲ್ಲೇ ನಿಲ್ಲು, ನಾನು ಒಂದೇ ಡಬ್ಬಿ ತಂದಿರುವೆ ಎಂಜಲಾಗಿದೆ ಹೇಗೆ ಕೊಡಲಿ ಅಂದರು, ಆ ವ್ಯಕ್ತಿ ಬಿಡುವ ಪೈಕಿ ಆಗಿರಲಿಲ್ಲ, ಅದರಲ್ಲೇ ಎರಡು ತುತ್ತು ಕೊಡಣ್ಣ, ಇಲ್ಲ ಅನಬ್ಯಾಡ, ನೀ ತಿನ್ನೋದ ನೋಡಿ ಊಟ ಸಿಗುತ್ತೆ ಅಂತ ಬಂದೀನಿ, ಕೊಡಣ್ಣ ಅಂತ ಕೇಳ್ತಾನೇ ಇದ್ದ. ಎಂಜಲು ಕೊಡಲು ಇವರಿಗೆ ಮನಸಿಲ್ಲ. ಹಾಗೆ ಹೋಗಲು ಆತ ತಯಾರಿಲ್ಲ, ನನ್ನಣ್ಣ ಆತನಿಗೆ ಹೇಳಿದ ಸ್ವಾಮೀ ಕಾರಿನಲ್ಲಿ ಮಗು ಇದೆ, ಹತ್ತಿರ ಬರ್ಬೇಡ, ಕೊಡಬಾರದು ಎಂಬ ಭಾವನೆ ನಮಗಿಲ್ಲ, ಕೊರೊನ  ಕಾಲ ಬರಬೇಡ ಹತ್ತಿರ ಎಂದು ಅಳಿಮಯ್ಯನಿಗಾಗಿ ಕೇಳಿಕೊಂಡ, ಇವ ಎಂದು ಯಾರನ್ನೂ ಹೀಗೆ ಕಳಿಸಿದ್ದವನಲ್ಲ, ಯಾರಾದರೂ ಕಷ್ಟ ಎಂದರೆ ,ಊಟ ಇಲ್ಲ ಎಂದರೆ ತನ್ನ ಬಳಿ ಇದ್ದ ಎಲ್ಲವನ್ನೂ ಎಷ್ಟೋ ಸಾರಿ ಕೊಟ್ಟು ಬಂದಿರುವ ಉದಾರಿ ಇವ. ಇವನ ಬಾಯಲ್ಲಿ ಕೊರೊನ ಹೀಗೆ ಮಾತನಾಡಿಸಿತ್ತು,ಅಷ್ಟರಲ್ಲಿ ಕಾರಿನ ಬಾಗಿಲು ತೆಗೆದು ಅಣ್ಣ ದೂರ ನಿಲ್ಲಿ ಮಗು ಇದೆ ತೊಂದರೆ ಕೊಡಬೇಡಿ ಎಂದು ನಾನು ಹೇಳಿದೆ. ಅಷ್ಟರಲ್ಲಿ ಜೇಬಿನಿಂದ ದುಡ್ಡು ತೆಗೆದು ನೆಲದ ಮೇಲೆ ಹಾಕಿ ತಗೊಳಪ್ಪ ಎಂದರು ನನ್ನ  ಅಪ್ಪಾಜಿ, ಅಣ್ಣ, ನೆಲದ ಮೇಲೆ ಹಾಕ್ತಿಯಲ್ಲಾ ಅಣ್ಣ ,ಅಂದ ಆ ವ್ಯಕ್ತಿ, ನನ್ನ ತಂದೆ ಎನ್ ಮಾಡ್ಲಿ ಕೊರೊನ ಕಾಲ ಕಾಣಪ್ಪ, ಅಂದರು, ಆತ ದುಡ್ಡು ಜೇಬಿಗೆ ಹಾಕಿಕೊಂಡ, ಆಗ ನನಗೆ ಸಣ್ಣ ವಯಸ್ಸಿನಲ್ಲಿ ನಮ್ಮ ಮನೇಲಿ ನಡೆದ ಒಂದು ಘಟನೆ ನನ್ನ ತಲೆಯಲ್ಲಿ ಮಿಂಚಿ ಮಾಯವಾಯ್ತು,,, ನಮ್ಮ ಮನೆಯಲ್ಲಿ  ಬಿಕ್ಷೆಗೆ ಯಾರಾದರೂ ಬಂದರೆ ಎಂದೂ ಕೂಡ ನನ್ನ ಅಪ್ಪ ಅಮ್ಮನ ಬಾಯಲ್ಲಿ ಬಿಕ್ಷುಕ  ಬಂದ ಎನ್ನುವ ಪದ ನಾನು ಕೇಳಿಲ್ಲ.

ಬದಲಾಗಿ ಬಾಗಿಲಿಗೆ ಯಾರೋ ಬಂದಿದ್ದಾರೆ ನೀಡಿ ಎಂದು ಹೇಳುತ್ತಿದ್ದುದು ಈಗಲೂ ನಮ್ಮ ಮನೆಯಲ್ಲಿ ಇದೆ.ಒಂದು ದಿನ ಹೀಗೆ ಯಾರೋ ಬಾಗಿಲಿಗೆ ಒಬ್ಬ ಬಂದ, ಅಮ್ಮಯ್ಯ (ನನ್ನ ಅತ್ತೆ, ಮದುವೆ ವಯಸ್ಸಿನ ಕನ್ಯೆ, ಅವಳಿಗೆ ಎಂದೂ ಅತ್ತೆ ಎಂದು ನಾವು ಕರೆದಿಲ್ಲ, ಈಗಲೂ ಏಕವಚನದಿಂದಲೇ ಮಾತನಾಡಿಸುತ್ತೇವೆ) ನೀಡಲು ತಡ ಮಾಡಿದಳು, ಆ ವ್ಯಕ್ತಿ ಬಾಗಿಲಲ್ಲಿ ಕಾದು ಸಾಕಾಗಿ ಬೇರೆ ಊರಿನ ಕಡೆ ಹೊರಟ, ಇದು ಕೂಡಲೆ ನನ್ನ ತಂದೆಗೆ ಗೋತ್ತಾಗಿದೆ. ಅವರು ಒಳಗೆ ಬಂದು ಅಮ್ಮಯ್ಯಳಿಗೆ ಬೈದರು,ಯಾಕೆ ಹಾಗೆ ಕಳಿಸಿದೆ, ಯಾಕೆ, ಬಾಗಿಲಿಗೆ ಬಂದವರಿಗೆ ನೀಡಲು ಆಗಲ್ಲವಾ? ಅಂತ, ಅದಕ್ಕೆ ಅಮ್ಮಯ್ಯ ಇಲ್ಲ ಅಣ್ಣ  ಹಾಗೇನಿಲ್ಲ. ಮತ್ತೆ ಬರುತ್ತಾನೆ ಬಿಡು. ಹೋದ್ರೆ ಹೋಗ್ಲಿ. ಅಂದ್ಲು, ನನ್ನ ಅಪ್ಪನಿಗೆ ಪಿತ್ತ ನೆತ್ತಿಗೆ ಏರಿತು  ಆಕೆಗೆ ಬೈದು ಹೇಳಿದರು. ನೋಡು ಬಾಗಿಲಿಗೆ ಬಂದವರನ್ನು ಹಾಗೆ ಕಳಿಸಬಾರದು, ಹೋಗಿ ಏನಾದ್ರೂ ಕೊಟ್ಟು ಬಾ ಎಂದು, ಕೂಡಲೆ ಆಕೆ ಅವ ಪಕ್ಕದ ಮನೆ ಹತ್ತಿರ ಇರಬಹುದು ಎಂದು ಹೊರಗೆ ಹೋಗಿ ನೋಡಿದರೆ ಅವ ಅಲ್ಲಿ ಇರಲಿಲ್ಲ, ಸ್ವಲ್ಪ ಮುಂದೆ ಹೋಗಿ ನೋಡಿದ್ರೆ ಆಗ್ಲೇ ಮಜ್ಜಿ ಕಟ್ಟೆ ಮೋರಿ (ನಮ್ಮೂರಿನಿಂದ ಸ್ವಲ್ಪ ದೂರದಲ್ಲಿ ರಸ್ತೆಯ ಮಗ್ಗುಲಲ್ಲಿ   ಇದೆ ಕಟ್ಟೆ.ಇಲ್ಲಿ ಸಂಜೆ ಹೊತ್ತು ಕೆಲಸ ಮಾಡಿ ದಣಿದ ಕೆಲವರು ಪಟ್ಟಂಗ ಹೊಡೆಯಲು ಬಂದು ಕುಂತು ಮಾತಾಡ್ತಾರೆ)  ಹತ್ರ ಇದಾನೆ🙆🏾‍♀️ಹಾಗೆ ಮನೆಗೆ ಹೋದ್ರೆ ಅಣ್ಣ ಬೈತಾನೆ ಅಂತ ಓಡೋಕೆ ಶರು ಮಾಡಿದಳು….. ಅಣ್ಣ ನಿಲ್ಲು… ಅಣ್ಣ ನಿಲ್ಲು.. ಎಂದು ಕೂಗಿ ಕರೆದು ಮನೆಗೆ ಕರೆದುಕೊಂಡು ಬಂದು ನೀಡಿ ಕಳಿಸಿದಳು, ಆಗ ನನ್ನ ಅಪ್ಪಾಜಿ ಖುಷಿಃ ಪಟ್ಟರು.,,,, (ಹಾಗಂತ ನಾವೇನು ಆಗರ್ಭ ಸಿರಿಸಂತರೇನಲ್ಲ ).ಇಂತ ನನ್ನ ಅಪ್ಪನ ಕೈಲಿ ಈ ಕೊರೊನ ದುಡ್ಡನ್ನು ನೆಲದ ಮೇಲೆ ಹಾಕುವ ಹಾಗೆ ಮಾಡಿತ್ತು. . ಆ ದುಡ್ಡನ್ನು ಆ ವ್ಯಕ್ತಿ ಜೇಬಿಗೆ ಹಾಕಿಕೊಂಡು ಹೊರಟ… ಆದರೂ ಅವನ ಕಣ್ಣು ಊಟದ ಮೇಲೆ ಇತ್ತು. ಪಾಪ, ಎಷ್ಟು ಹಸಿದಿದ್ದನೋ ಏನೋ,,,, ,,, ಮುಂದೆ ಸ್ವಲ್ಪ ದೂರ ಹೋಗಿ ಅಲ್ಲಿ ನಿಂತಿದ್ದ ಲಾರಿ ಚಾಲಕನ ಹತ್ತಿರ ಮಾತಿಗಿಳಿದ,,,, ಅಷ್ಟರಲ್ಲಿ ನನ್ನ ಕಂದ ನಿದ್ದೆಯಿಂದ ಎದ್ದ, ನನಗೆ ಅದೇ ಬೇಕಿತ್ತು, ಪಾಪುವನ್ನು ಅವರ ಅಪ್ಪನ ಕೈಗೆ ಕೊಟ್ಟು ನಾವು ಉಪಹಾರಕ್ಕೆ ತಂದಿದ್ದ ತಿಂಡಿಯ ಚೀಲವನ್ನು ಆತುರ ಆತುರವಾಗಿ ಹುಡುಕಿ ತೆಗೆದೆ, ಒಂದು ಕಾಗದದ ತಟ್ಟೆಗೆ ಎರಡು ರೊಟ್ಟಿ ,ಚಟ್ನಿ, ಹಾಕಿದೆ ಪಲ್ಯ ಹಾಕುವ ಹೊತ್ತಿಗೆ ಅವನು ಹೋದರೆ, ಅಯ್ಯೋ ಸಾಕು ಇರಲಿ, ಎಂದು ಅವನ ಕಡೆ ನೋಡಿ ಬಾ ಎಂದು ಸನ್ನೆ ಮಾಡಿದೆ, ಅವ ನಮ್ಮ ಕಡೆ ಬರತೊಡಗಿದ, ಇವರೆಲ್ಲ ಹೇಯ್ ಅವನು ಮತ್ತೆ ಬರ್ತಾ ಇದಾನೆ…. ಅಂತ ಗಾಬರಿಯಲ್ಲಿ ಹೇಳಿದರು, ನಾನೇ ಕರೆದೆ ಎಂದು ಹೇಳುತ್ತಾ ಅವನಿಗೆ  ಸನ್ನೆ ಮಾಡಿದೆ…… ನಾನು ಈ ತಟ್ಟೆ ಇಲ್ಲಿ ಇಡುತ್ತೇನೆ. ನೆಲದ ಮೇಲೆ, ನೀನು ತಗೊಂಡು ಹೋಗು, ಅಂತ. ಅವನಿಗೆ ಅರ್ಥವಾಯಿತು, ಆಯ್ತು ಎಂದು ತಲೆ ಅಲ್ಲಾಡಿಸಿದ. ನಾನು ಆ ತಟ್ಟೆ ನೆಲದ ಮೇಲೆ…. (ಅಂದರೆ ಅದು ರಸ್ತೆನೇ…..) ಇಟ್ಟು… ತಗೊ ಎಂದು ಹೇಳಿ ನನ್ನವರ  ಹತ್ತಿರ  ಬಂದು ನಿಂತೆ…. ಅವನಿಗೆ ಆದ ಖುಷಿಃ ಅಷ್ಟು ಇಷ್ಟಲ್ಲ….. ಆ ತಟ್ಟೆಗೆ ಭಕ್ತಿ ಇಂದ ಮೂರು ಸಲ ನಮಸ್ಕರಿಸಿ ತನ್ನಲ್ಲಿ ಇದ್ದ ಒಂದು ಕಪ್ಪು ಕವರಿಗೆ ಹಾಕಿ ಕೊಂಡು..ನನ್ನ ಕಡೆ ನೋಡುತ್ತಿದ್ದ ಅವನಿಗೆ ನನ್ನನ್ನು  ಕ್ಷಮಿಸು ಎಂಬ ತಪ್ಪಿತ ಮನೋಭಾವದಿಂದ ನಾನು ಕೈ ಮುಗಿದೆ, ಆ ಹೊತ್ತಿನ ಊಟ ಸಿಕ್ಕಿತಲ್ಲ ಎಂಬ ತ್ರುಪ್ತ ಮನೋಭಾವದಿಂದ ಆತ ಕೈ ಎತ್ತಿ ಮುಗಿದು ಹೊರಟು ಹೋದ.

ಆತನಿಗೆ ಊಟ ಕೊಟ್ಟೆನಲ್ಲಾ ಎಂಬ ಸಮಾಧಾನ ನನ್ನಲ್ಲಿ ಇತ್ತಾದರೂ ನೆಲದ ಮೇಲೆ ಇಟ್ಟೆನಲ್ಲ  ಎಂಬ ಅಸಮದಾನ ಇತ್ತು…. ಹಾಗೆಯೇ ನಾವು ಬೆಳಗಿನ ಉಪಹಾರ ಮುಗಿಸಿ ಪರಸ್ಪರ ನಮ್ಮ ಊರಿನ ಕಡೆ ಪ್ರಯಾಣ ಮುಂದುವರೆಸಿದೆವು… ಮಾರ್ಗ ಮದ್ಯೆ ನನ್ನ ಅಮ್ಮನ ನೆನಪಾಯಿತು. ನನ್ನಮ್ಮ ಹೇಳಿದ್ದ ಅವಳ ಅನುಭವದ ಒಂದು ಘಟನೆ ನೆನಪಾಯಿತು… ನಮ್ಮ ಮನೆಯ ಮುಂದೆ ಸುಮಾರು ಬೆಳಗ್ಗೆ ಹನ್ನೊಂದು  ಗಂಟೆ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ  ಕೂತಿದ್ದನಂತೆ. ಅಮ್ಮ ಹೊರಗಡೆ ಬಂದಾಗ ತಾಯಿ ಹೊಟ್ಟೆ ತುಂಬ ಹಸಿದಿದೆ ತಿನ್ನಲು ಏನಾದ್ರೂ ಕೊಡವ್ವ ಎಂದನಂತೆ, ಪ್ರತಿದಿನ ಒಬ್ಬರಿಗೆ ಉಳಿಯುವಷ್ಟು ಅಡಿಗೆ ತಿಂಡಿ ಮಾಡುತ್ತಿದ್ದ ನನ್ನಮ್ಮ ಅವತ್ತು ಅಳತೆಗೆ ಸರಿಯಾಗಿ ಅಡಿಗೆ ಮಾಡಿ ಎಲ್ಲ ಖಾಲಿ ಮಾಡಿ ತೊಳೆದು ಇಟ್ಟಿದ್ದಳಂತೆ. ಇವ ಊಟ ಕೇಳಿದರೆ ಕೊಡಲು ಅಡಿಗೆ ಇಲ್ಲ…. ಇಲ್ಲ ಎನ್ನಲು ಬಾಯಿ ಬಂದಿಲ್ಲ… ಕೊಡಲೇ ಆತನಿಗೆ ಹೇಳಿದಳಂತೆ… ಅಣ್ಣ ಹತ್ತು ನಿಮಿಷ ಇಲ್ಲೇ ಕೂತಿರು,ತಿನ್ನಲು ತರುವೆ….ಇಲ್ಲೇ ಇರು ಬಂದೆ, ಎಂದವಳೇ…. ಮುಂದಿನ ಬಾಗಿಲು ಹಾಕಿ…. (ಸುರಕ್ಷತೆಯನ್ನು ಸಹ ನೋಡಿಕೊಳ್ಳ ಬೇಕಲ್ಲ) ಅಡುಗೆ ಮನೆಗೆ ಹೋಗಿ ಹತ್ತು ನಿಮಿಷದಲ್ಲಿ ಚಿತ್ರಾನ್ನ ಮಾಡಿ, . ಮನೆಯ ಹಿಂದೆ ಇರುವ ಬಾಳೆ ಗಿಡದಲ್ಲಿ ಎಲೆ ಕೊಯ್ದು ಅದರಲ್ಲಿ ಊಟ ಇಟ್ಟು, ಒಂದು ನೀರಿನ ಬಾಟಲಿನಲ್ಲಿ ನೀರು ತುಂಬಿಸಿಕೊಂಡು  ಬಂದು ಬಾಗಿಲು ತೆಗೆದಳಂತೆ,,, ಪಾಪ ಆತ ಅಲ್ಲೇ ಕಾಯುತ್ತಾ ಕುಳಿತಿದ್ದ ನಂತೆ. ಕೊಡಲೇ ಅವನಿಗೆ ಊಟ ನೀರು ಕೊಟ್ಟು ತಗೊ ಅಣ್ಣ ಊಟ ಮಾಡು ಅಂದಳಂತೆ, ಪಾಪ ಎಷ್ಟು ಹಸಿವೆ ಇತ್ತೋ ಏನೋ ಗಪಗಪನೆ ತಿಂದು ನೀರು ಕುಡಿದು ನಿನ್ನ ಹೊಟ್ಟೆ ತಣ್ಣಗೆ ಇರಲವ್ವ ಎಂದು ಎರಡು ಕೈ ಎತ್ತಿ ಹರಸಿ ಹೊರಟು ಹೋದನಂತೆ,, ,, ಇಂತಹ ಎಷ್ಟೋ ಅನುಭವಗಳು ನನ್ನ ತಾಯಿಗೆ ಆಗಿವೆ. ಇಂತಹ ಎಷ್ಟೋ  ಆಶೀರ್ವಾದಗಳು ನನ್ನ ತಾಯಿಗೆ ಸಿಕ್ಕಿವೆ,,, ಅದಕ್ಕೆ ಏನೋ ದೇವರು ಆಕೆಯನ್ನ ಚನ್ನಾಗಿ ಇಟ್ಟಿದ್ದಾನೆ,,, ನಾನು ಕೂಡಲೆ ನನ್ನ ಅಮ್ಮನಿಗೆ ಫೋನ್ ಮಾಡಿ ನಡೆದ ಘಟನೆ ಹೇಳಿದೆ…. ಅದಕ್ಕೆ ನನ್ನ ಅಮ್ಮ ಹೇಳಿದಳು,,,, ಒಳ್ಳೆ ಕೆಲಸ ಮಾಡಿದೆ ಕಣವ್ವ,,,, ದೇವರು ಒಂದೊಂದು ಸಲ ಯಾವುದೋ ರೂಪದಲ್ಲಿ ಬಂದು ನಮ್ಮ  ಪರೀಕ್ಷೆ  ಮಾಡ್ತಾನಂತೆ,,, ಸದ್ಯ ನೀನು ಅವನ್ನ ಹಾಗೆ ಕಳಿಸಿಲ್ಲ ,,, ಯಾವತ್ತು,,, ಯಾರನ್ನು,,,, ಬರಿ ಹೊಟ್ಟೇಲಿ ಕಳಿಸಬೇಡ,,,,,, ಒಳ್ಳೇ ಕೆಲ್ಸ ಮಾಡಿದೆ ಕಣವ್ವ…… ಎಂದಳು….

ಮನಸಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ಆಯ್ತಾದರೂ…. ನೆಲದ ಮೇಲೆ ಇಟ್ಟೆನಲ್ಲ… ಎಂಬ ಅಸಮಧಾನ ಈಗಲೂ ಇದೆ. ಈ ಕೊರೊನ ನಮ್ಮನ್ನ ನಮ್ಮ ಮಾನವೀಯ ಗುಣವನ್ನು ಅಳಿಸಿ ಹಾಕುತ್ತಿದೆ ಎಂದು ಬೇಸರವಾಗುತ್ತಿದೆ.

ಥೂ  ಎಂತ ಕಾಲ ಬಂತು

ಯಾರಾದರೂ ಊಟ ನೀರು ಕೇಳಿದರೆ ಕೊಡಲು ಭಯ…..

ಬಿಕ್ಷೆ ಕೊಡಲು ಭಯ….

ಹತ್ತಿರ ನಿಂತು ಮಾತನಾಡಲು ಭಯ……

ಯಾರಾದರೂ ಸತ್ತರೆ ನೋಡಲು ಹೋಗಲು ಭಯ……

ನೋಂದವರಿಗೆ ಸಾಂತ್ವನ ಹೇಳಲು ಭಯ…..

ಹಣ್ಣು ತರಕಾರಿ. ಮುಟ್ಟಲು ಭಯ…..

ಮಕ್ಕಳನ್ನು ಮೊಮ್ಮಕ್ಕಳನ್ನು ಮುದ್ದಿಸಲು ಭಯ……

ಥೂ ಎಂತ ಕಾಲ ಬಂತಪ್ಪ………

ಹೇ  ಕೊರೊನ ಹೋಗಿ ಬಿಡು ನೀ ಆದಷ್ಟು ಬೇಗ…..

ನಿನ್ನಿಂದ ನಮ್ಮ ಮಾನವೀಯತೆಗೆ ಬಿದ್ದಿದೆ ಬೀಗ………

ಯರಲ್ಲೂ ಇರಲಿಲ್ಲ ಅಮಾನವೀಯತೆಗೆ ಜಾಗ……

ಏಲರಲ್ಲೂ ತುಂಬಿ ತುಳುಕಾಡಿದೆ ಭಯವೆಂಬ ರೋಗ…..

ಹೇ ಕೊರೊನ ಹೋಗಿಬಿಡು ನೀ ಆದಷ್ಟು ಬೇಗ……

*******

One thought on “ಮಾನವೀಯತೆ ಮರೆಸುತ್ತಿದೆ ಕೊರೊನ

  1. ಮನಮುಟ್ಟುವ ಲೇಖನ. ಪರಿಸ್ಥಿತಿ ಎದುರಿಸಿದವರಿಗೇಹೆಚ್ಚು ಅನುಭವ

Leave a Reply

Back To Top