ಲೇಖನ
ಭಾವ ಪುಷ್ಪಗಳು
ಜಯಶ್ರೀ.ಜೆ. ಅಬ್ಬಿಗೇರಿ
ಅತಿ ವೇಗದ ಯಾಂತ್ರಿಕ ಬದುಕಿನಲ್ಲಿ ಜೀವನದ ಜೀವನಾಡಿಯನ್ನೇ ನಿರ್ಲಕ್ಷಿಸುತ್ತಿದ್ದೇವೆ. ಸೆಳೆದು ತೆಕ್ಕೆಗೆ ಹಾಕಿಕೊಳ್ಳುವ ಅಮ್ಮನ ಮಡಿಲು ಮರೆತು ಅದೆಷ್ಟೋ ವರುಷಗಳೇ ಆದವು. ಜೀವ ಚೈತನ್ಯ ಹೊಮ್ಮಿಸುತ್ತಿದ್ದ ಅಜ್ಜಿಯ ದನಿಯಲ್ಲಿನ ಹಾಡುಗಳು, ರಾತ್ರಿ ಮಲಗುವಾಗಿನ ಕಥೆಗಳು,.ಅಪ್ಪನ ಕೈ ಬರಹದಲ್ಲಿದ್ದ ಓಲೆಗಳು. ಅಮ್ಮನ ಒಲವು ನೆನೆದಾಗ ಆಯಸ್ಕಾಂತದಮತೆ ಅದಕ್ಕೆ ಅಂಟಿಕೊಳ್ಳುವ ಬಗೆ, ಅಕ್ಕರೆಯ ಅಕ್ಕನ ಮಾತುಗಳಿಂದ ಉಲ್ಲಾಸಗೊಳ್ಳುವುದು, ತಮ್ಮನ ತುಂಟುತನದಿಂದ ಮತ್ತೆ ತಾಜಾತನ, ಬೀಗ ಬೀಗತಿಯರ ವ್ಯಂಗ್ಯದ, ಹಾಸ್ಯದ ಮುಖವರಳಿಸುವ ಮಾತುಗಳು, ನೆರೆಹೊರೆಯವರ ನೆರವಿನ ಭಾವ ತುಂಬಿಕೊಳ್ಳುವ ಕಾಲ ಕಳೆದುಹೋಗಿದೆ. ಭಾವನೆಗಳು ಅರ್ಥವಾಗುವುದು ನೋವಿನಲ್ಲಿ ಇರುವವನಿಗೆ ಮಾತ್ರ ಎನ್ನುವ ಕಾಲ ಬಂದೊದಗಿದೆ. ಭಾವ ಸಂಬಂಧಗಳಿಗಿಂತ ದೊಡ್ಡ ಆಯುಧವಿಲ್ಲ. ಸದ್ಭಾವಗಳು ತುಂಬಿದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು. ಭಾವರಹಿತವಾಗಿದ್ದರೆ ಗೆದ್ದ ಜಗತ್ತನ್ನು ಕ್ಷಣ ಮಾತ್ರದಲ್ಲಿ ಕಳೆದುಕೊಳ್ಳುವೆವು. ಪರಸ್ಪರ ಹೊಂದಾಣಿಕೆ ಸ್ವಭಾವ ಬೆಳೆಸಿಕೊಂಡು ಹೋಗುವುದು ಪ್ರಧಾನವಾದ ಗುಣ. ಸಮಾನಾಭಿಪ್ರಾಯಗಳನ್ನು ಗುರುತಿಸಿ ಪರಸ್ಪರ ಸಂಘಟಿತರಾಗಿ ಮುಂದುವರಿಯುವುದೇ ಜಾಣತನ. ಇನ್ನೂ ವಿವರವಾಗಿ ಹೇಳಬೇಕೆಂದರೆ ನಾವು ಯಾರೊಂದಿಗೆ ಒಡನಾಡಬೇಕಾಗಿದೆಯೋ ಅವರೊಂದಿಗೆ ಸರಿಸಮನಾಗಿ ನಡೆಯುವುದು. ಭಾವನಾತ್ಮಕ ಲೋಕದ ಬಗ್ಗೆ ಅಲಕ್ಷ್ಯದಿಂದಿರುವ ಜನರಲ್ಲಿ ಅತೃಪ್ತಿ ಅಸಮಾಧಾನ ಹೆಚ್ಚಾಗಿ ಕಂಡು ಬರುತ್ತಿದೆ ಸಮಾಧಾನ ನೆಮ್ಮದಿ ಇಲ್ಲದಾಗ ಇವುಗಳನ್ನೆಲ್ಲ ನೆನೆಯುತ್ತೇವೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂದು ಒಲ್ಲದ ಮನಸ್ಸಿನಿಂದ ಭಾವನಾತ್ಮಕ ಅಧ್ಯಾಯಕ್ಕೊಂದು ನಮಸ್ಕಾರ ಹೇಳುತ್ತೇವೆ. ಹಾಗೆ ನೋಡಿದರೆ ಮಾನವ ಇದುವರೆಗೆ ಉಳಿದಿದ್ದು ಮುಂದೆ ಉಳಿಯುವುದೂ ಭಾವನೆಗಳಿಂದಾಗಿಯೇ. ಪಟ್ಟ ಪಾಡುಗಳ ಹುಟ್ಟು ಅಡಗಿಸುವ ತಾಕತ್ತು ಭಾವಲೋಕಕ್ಕೆ ಮಾತ್ರ ಇರೋದು. ಭಾವನಾತ್ಮಕ ಲೋಕವನ್ನು ದಾಟಿ ಮುಂದಕ್ಕೆ ಹೋಗುವುದು ನಮ್ಮನ್ನು ಸಂತಸದಿಂದ ಜೀವಂತವಿರಿಸಲಾರದು.ನಮಗೆಲ್ಲ ಜೀವ ನೀಡುವ ತಾಯಿಯಂತೆ ಪೊರೆಯುವ ಬೆಳೆಸುವ ಗುಣ ನಿತ್ರಾಣಗೊಂಡಾಗೆಲ್ಲ ಲವಲವಿಕೆಯಿಂದ ಜೀವಂತಗೊಳಿಸುವ ಸಮ್ಮೋಹಕತೆ ಮಧುರ ಸಂಬಂಧಗಳಿಗೆ ಬಿಟ್ಟರೆ ಬೇರೆ ಯಾವುದಕ್ಕೂ ಇಲ್ಲ. ಭಾವಗಳು ಸದಾ ಸೃಷ್ಟಿಯಾಗುವ ಬದಲಾಗುವ ಭಾಷೆಯಂತೆ. ಉತ್ತಮ ಭಾವಜೀವಿಗಳನ್ನು ಪಡೆಯುವುದು ಸುಲಭ. ಆದರೆ ಅಂಥವರನ್ನು ಒಗ್ಗೂಡಿಸುವುದು ಕಠಿಣ ಕೆಲಸ. ಆದರೆ ಭಾವನೆಗಳು ಗಾಳಿಯಂತೆ ನಿಂತಲ್ಲೆ ನಿಲ್ಲದೆ ನಾಳೆಗೂ ಬದುಕುವ ಭರವಸೆಯನ್ನು ತುಂಬುವವು.
ಆಹಾರ ನೀರು ಸೂರು ಇದ್ದರೆ ಸಾಕು ಬದುಕಿ ಬಿಡುತ್ತೇವೆ ಎಂದು ಬಿಡುವುದಕ್ಕೆ ನಾವು ಇತರ ಪ್ರಾಣಿ ಪಶು ಪಕ್ಷಿಗಳಂತಲ್ಲ. ನಮ್ಮನ್ನು ಉಳಿದೆಲ್ಲ ಪ್ರಾಣಿವರ್ಗದಿಂದ ಭಿನ್ನವಾಗಿ ನಿಲ್ಲಿಸಿದ್ದೇ ಈ ಭಾವಲೋಕ. ಭಾವಲೋಕವನ್ನು ದೂರ ಮಾಡುತ್ತಿರುವ ನಾವು ಸಾಗಿಸುತ್ತಿರುವ ಜೀವನ ರಸವಿರದ ರಸಪೂರಿ ಮಾವಿನ ಹಣ್ಣನ್ನು ತಿಂದಂತಾಗುತ್ತಿದೆ. ರಸ ಒಸರುವ ಫಲಗಳನ್ನು ತಿಂದಂತೆ ಜೀವನ ರಸಮಯವಾಗಬೇಕಾದರೆ ಭಾವಪೂರ್ಣವಾಗಿರಬೇಕು.ಭಾವಗಳು ತುಂಬಿರದ,ಸವಿ ನೆನಪುಗಳೆಲ್ಲ ನೆನಪಾಗಿ, ಅಚ್ಚಾಗಿ ಉಳಿಯದ ಬದುಕನ್ನು ಜೀವನವೆಂದು ಕರೆಯಬಹುದೇ? ಎಂಬ ಗೊಂದಲ ದಿನೇ ದಿನೇ ಹೆಚ್ಚಾಗುತ್ತಿದೆ. ಈಚೆಗಿನ ದಾವಂತದ ಬದುಕಿನಲ್ಲಿ ಬೇರೆಯವರ ನೋವಿಗೆ ಸ್ಪಂದಿಸಲಾಗುತ್ತಿಲ್ಲ ನಮ್ಮ ಸಂತಸವನ್ನು ಸಂಭ್ರಮಿಸಲೂ ಆಗುತ್ತಿಲ್ಲ. ಪರಸ್ಪರ ಸಂಪರ್ಕಕ್ಕೆ ಬರಲಾಗುತ್ತಿಲ್ಲ. ಬೇಕಾಗಿದ್ದೆಲ್ಲ ಕೈಗೆಟುಕುವಂತೆ ಒಂದೇ ಕೋಣೆಯಲ್ಲಿ ಎಲ್ಲವೂ ಅಟ್ಯಾಚ್ ಆಗಿ ಇರುವಾಗ ಸಂಪರ್ಕ ಏಕೆ ಬೇಕು?. ಬೇಕು ಅಂದದ್ದೆಲ್ಲ ಆನ್ಲೈನ್ ಮಾರ್ಕೆಟ್ ಮೂಲಕ ಬಾಗಿಲಿಗೆ ಬರುವಾಗ ಬೇರೆಯವರ ಜರೂರತ್ತಾದರೂ ಏನಿದೆ? ಎಂದೆನಿಸುತ್ತಿದೆ.ಇದನ್ನು ಪ್ರಾಣಿಗಳ ಬದುಕು ಎನ್ನಬಹುದೆ ಹೊರತು ಬುದ್ಧಿವಂತ ಮಾನವನ ಅರ್ಥಪೂರ್ಣ ಸಾರ್ಥಕ ಜೀವನ ಎನ್ನಲಾಗದು.ಒಬ್ಬರನ್ನು ಕಂಡರೆ ಒಬ್ಬರಿಗಾಗುವುದಿಲ್ಲ. ಹಾವು ಮುಂಗೂಸಿ ಆಡಿದಂತೆ ಆಡುತ್ತ ಹೊಂದಾಣಿಕೆಯನ್ನು ದುರ್ಲಭವಾಗಿಸಿಕೊಂಡು ನರಳುವ ಸಂದರ್ಭ ಬಂದಿದೆ. ಹಣವೊಂದಿದ್ದರೆ ಸಾಕು ನಾ ಏನೆಲ್ಲವನ್ನೂ ಕೊಳ್ಳಬಲ್ಲೆ ಎಂಬ ದುರಹಂಕಾರ ಬೇರೆ. ಪರಸ್ಪರ ಮುಂದುವರಿಯುವುದು ಪ್ರಗತಿ ಎಂಬ ನೀತಿಯನ್ನು ಗಾಳಿಗೆ ತೂರಿ ಭ್ರಮಾಲೋಕದಲ್ಲಿ ಓಡುತ್ತಿದ್ದೇವೆ ಕುಟುಂಬವೆಂದರೆ ಗಂಡ ಹೆಂಡತಿ ಮಕ್ಕಳು ಎನ್ನುವ ಹುಚ್ಚನ್ನು ತಲೆಯಲ್ಲಿ ತುಂಬಿಕೊಂಡು ಹಿರಿಯರ ಕಿವಿಮಾತುಗಳು ಕಿವಿಗೆ ಬೀಳದಷ್ಟು ಅಂತರವನ್ನು ಕಾಪಾಡಿಕೊಳ್ಳುತ್ತಿದ್ದೇವೆ. ವ್ಯಹಾರಿಕ ಸಂಬಂಧಗಳು ಮಾತ್ರ ಬೇಕಿವೆ ಅವುಗಳಿಗೆ ಹೆಚ್ಚೆಚ್ಚು ಒತ್ತು ಕೊಡುತ್ತಿದ್ದೇವೆ. .ಬದುಕಿನಲ್ಲಿ ಕೇವಲ ವ್ಯವಹಾರಿಕತೆ ಮಾತ್ರ ಮುಖ್ಯವಾಗಿರುವುದಿಲ್ಲ. ಅದು ಒಂದು ಭಾಗ ಮಾತ್ರ. ಕೊಟ್ಟು ತೆಗೆದುಕೊಳ್ಳುವ. ವ್ಯವಹಾರವೊಂದೇ ಬದುಕಲ್ಲ. ಇದು ಭಾವರಹಿತ ಬದುಕನ್ನು ದೂಕುತ್ತಿರುವವರಿಗೆ ಅನ್ಚಯಿಸುತ್ತದೆ.
ಭಾವನೆಗಳು ಸರಕುಗಳಲ್ಲ. ಅವುಗಳಿಂದ ಬಾಗುವ ಬಳಕುವ ಎಂಥ ಸಂಕಷ್ಟದಲ್ಲೂ ಎದ್ದು ನಿಲ್ಲಿಸುವ ಜೀವನ ಪ್ರೀತಿಯು ರೂಪುಗೊಳ್ಳುತ್ತದೆಂದು ಬೇರೆ ಹೇಳಬೇಕಿಲ್ಲ. ಜೀವನೋತ್ಸಾಹದ ಜೀವನ ಪ್ರೀತಿಯ ಹಿರಿಮೆ ಎಷ್ಟು ಹಿರಿದು ಎಂದು ವಿವರಿಸಬೇಕಿಲ್ಲ. ಭಾವನಾತ್ಮಕತೆ ಇಲ್ಲವಾಗುತ್ತಿದೆ. ಭಾವಗಳಿಗೆ ಒತ್ತು ಕೊಡದಿದ್ದರೆ ಬಲವನ್ನು ಕಳೆದುಕೊಂಡಂತೆ. ಬದುಕನ್ನು ಭಾವ ಬಂಡಿಯ ಮೇಲೆ ಸಾಗಿಸಿದರೆ ಅದಕ್ಕೆ ಬೇರೊಂದು ರುಚಿಯೇ ಬಂದಿತು. ಜೀವನದ ಕುರಿತು ಆಳವಾಗಿ ಅಧ್ಯಯನ ಚಿಂತನೆ ನಡೆಸಿದ ಮಹಾನ ತತ್ವಜ್ಞಾನಿಗಳು ವಿದೇಶಿ ವಿದ್ವಾಂಸರು ಒಂದೆಡೆ ಹೇಳಿದಂತೆ ‘ಯುರೋಪ್ ಖಂಡವು ಅಜ್ಞಾನದ ಕೂಪದಲ್ಲಿದ್ದಾಗಲೇ ಭಾರತ ದೇಶದಲ್ಲಿ ಜ್ಞಾನದ ಸೂರ್ಯನು ಪ್ರಖರವಾಗಿ ಬೆಳಗುತ್ತಿದ್ದ.! ಇಂಥ ಪ್ರಖ್ಯಾತ ಸಂಸ್ಕøತಿಯ ವಾರಸುದಾರರಾದ ನಾವು ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ಹಚ್ಚು ಹಸಿರಾದ ಬದುಕನ್ನು ಒಣಗಿಸಿಕೊಳ್ಳುತ್ತಿದ್ದೇವೆ. ಭೌತಿಕ ಸಿರಿವಂತಿಕೆಯ ಹಿಂದೆ ಬಿದ್ದಿದ್ದೇವೆ ಭೌತಿಕ ಸಿರಿವಂತಿಕೆ ಸಿರಿವಂತಿಕೆಯೇ ಅಲ್ಲ. ನಿವಾದ ಸಿರಿವಂತಿಕೆ ಹೃದಯ ಸಿರಿವಂತಿಕೆ ಭಾವ ಸಿರಿವಂತಿಕೆ. ಸೊಗಸಾದ ಭಾವಗಳ ಹೂವಿನ ಸುಗಂಧವನ್ನು ಅರಿಯದೇ ಮರುಳರಂತೆ ಆಡುತ್ತಿದ್ದೇವೆ..ಭಾವದ ಅನುಭಾವದ ಎತ್ತರ ಬಿತ್ತರಗಳನ್ನು ವರ್ಣಿಸಲು ಅಸಾಧ್ಯ. ಆಲದ ಮರದಂತೆ ನೂರಾರು ಸಾವಿರಾರು ವರುಷಗಳಿಂದ ಬಾಳಿ ಬಂದ ಭಾವ ಸಂಸ್ಕøತಿಯನ್ನು ಹೆಮ್ಮೆಯಿಂದ ಬೆಳೆಸೋಣ ಬೆಳೆಯೋಣ ಭಾವ ಪುಷ್ಪಗಳು ನಮ್ಮ ಎದೆಯ ಅಂಗಳದಲ್ಲಿ ನಿತ್ಯ ಅರಳಲಿ ಬದುಕು ಇನ್ನಷ್ಟು ಮತ್ತಷ್ಟು ಸುಂದರವಾಗಲಿ.
****************
Good article. Madam.