ಕವಿತೆ
ಜ್ಞಾನ ಬಿತ್ತಿದವ….ಬುದ್ದ
ಶಿವಲೀಲಾ
ಶುದ್ಧೋದನ ಮಗನಂತೆ ಇವನು
ಮಗ್ಗುಲು ಹೊರಳಿಸಿದಂತೆಲ್ಲ
ನಿದ್ರೆಯ ಕಂಬಳಿ ಕಿತ್ತೊಗೆದು
ಮೆಲ್ಲಗೆ ಸದ್ದಿಲ್ಲದಂತೆ ಎದ್ದೊದನಂತೆ
ಹಣೆಗೊಂದು ಭಾವ ಲೇಪಿಸಿಕೊಂಡು
ವೈಭೋಗವ ವಸ್ತ್ರ ಕಳಚಿ ಬೆತ್ತಲಾಗಿಸಿ
ಇರುಳಿಗೆಲ್ಲವ ಅರ್ಪಿಸಿ ಹೊಂಟವನು
ಬೀದಿ ಓಣಿಯಲಿ ದಿಟ್ಟಹೆಜ್ಜೆಯಿಟ್ಟವನು
ನಿಶ್ಯಬ್ದ ದಾರಿಗುಂಟ ನಿಶಾಚರಿಗಳ ಘೀಳು
ರಕ್ತ ಸಿಕ್ತ ಪಾದದಲಿ ಮುಕ್ತಿಯ ಹಂಬಲವು
ಹಪಹಪಿಸಿದರು ಜ್ಞಾನ ದಾಹ ತೀರಲೊಲ್ಲದು
ದೇಹ ದಂಡಿಸಿದಷ್ಟು ಬಳಲಿತು ಭಾವದೊಡಲು
ದಕ್ಕಿದುಡುಗೊರೆಯು ಮೋಕ್ಷವಾಗಲಿಲ್ಲ
ಮೋಕ್ಷದ ಬೆನ್ನ ಹತ್ತಿದವಗೆ ದಿಕ್ಷೆಯಾಗಲಿಲ್ಲ
ಆಸೆಯೇ ದುಃಖಕ್ಕೆ ಮೂಲವೆನ್ನುವಾಗೆಲ್ಲ
ಕಾಯಕಕೆ ಮರಣಮೃದಂಗದಾ ಅಮಲೆಲ್ಲ
ಮಿಂಚಿತೊಂದು ಬೆಳ್ಳಿರೇಖೆ ಕಣ್ಣಂಚಲ್ಲಿ
ಪೂರ್ಣ ಚಂದಿರನ ಬೆಳದಿಂಗಳಲ್ಲಿ
ದಿವ್ಯ ಮಂಗಳ ವಾದ್ಯ ಮೊಳಗಿದಂತೆಲ್ಲ
ಹುಣ್ಣಿಮೆ ಶಶಿಯಲ್ಲಿ ಲೀನವಾದಂತೆಲ್ಲ
ಭವ ಬಂಧನವ ಕಿತ್ತು ಬುದ್ದನಾದವ
ಭವದ ಸೌಖ್ಯಕ್ಕಾಗಿ ಎಲ್ಲ ತೊರೆದವ
ಶಾಂತಚಿತ್ತದಿಂದ ಪ್ರೀತಿ ಹರಿಸಿದವ
ತಾಳ್ಮೆಯ ಗೂಡಲ್ಲಿ ಜ್ಞಾನ ಬಿತ್ತಿದವ
***************************
Buddanigondu namanglu sogasada kavite…..
ಸೂಪರ್.ತುಂಬಾ ಚೆನ್ನಾಗಿ ಬರೆದಿರುವಿರಿ.
ತುಂಬಾ ಚೆನ್ನಾಗಿದೆ ವೈರಾಗ್ಯವ ಕಳಚಿ ಜ್ಞಾನ ಹುಡಕಿ ಬೆಳಕಾದ ಬುದ್ಧನ ಕುರಿತು ಚನ್ನಾಗಿ ಕವನ ಬರೆದಿದ್ದಿಯಾ ಗೆಳತಿ ಅಭಿನಂದನೆಗಳು
ವೈರಾಗ್ಯವ ಕಳಚಿ ಜ್ಞಾನ ಹುಡುಕಿದ ಶಾಂತಿದಾತನ ಕುರಿತು ಅದ್ಭುತವಾದ ಕವನ ಗೆಳತಿ ಅಭಿನಂದನೆಗಳು
ಬುದ್ಧನ ಕುರಿತು ಬರೆದ ಸಾಲುಗಳು ತುಂಬಾ ಚೆನ್ನಾಗಿದೆ .
ಜ್ಞಾನ ಬಿತ್ತಿದವ ಬುದ್ಧ ಸತ್ಯವಾದ ಮಾತು. ಕವಿತೆ ಇಷ್ಟವಾಯಿತು.
Amazing Dear
ಜ್ಞಾನ ಬಿತ್ತಿದ ಬುದ್ಧ ಸುಂದರವಾಗಿದೆ ಮೆಡಮ್ ಅಭಿನಂದನೆಗಳು