ಕವಿತೆ
ಗೀತಕಾರಂಜಿ
ವಿದ್ಯಾಶ್ರೀ ಅಡೂರ್
ಗೀತೆ ಮೂಡಿ ಮನದೇ
ರಾಗ ತಾಳ ಹಾಕಿ ಕುಣಿಯುತಿಹುದು
ನವಿಲಿನಂತೆ….
ಕಾರ್ಮುಗಿಲು ಬಿಡದೆ ಮಳೆಯ
ಸುರಿಸಿದಂತೆ….
ಹೊಕ್ಕಿ ಮನದಿ ವಿವಿಧ ಭಾವ
ಸಿಕ್ಕಿದೆಲ್ಲ ನಲಿವು ನೋವ
ಅಕ್ಕಪಕ್ಕ ಸುಳಿವ ಸಾವ
ಕಂಡು ಹೃದಯ ನಲುಗಿ
ಬೆದರಿದಂತೆ….
ಮೊಂಡು ಹಠವ ಮಾಡಿ ನಮ್ಮ
ಒಲಿಸಿದಂತೆ…..
ಜರುಗಿ ಮನದ ಒಳಗೆ ಜಾತ್ರೆ
ತುಂಬುತಿಹುದು ಹಿಡಿದ ಪಾತ್ರೆ
ಕವಿತೆಯೊಂದು ನಿತ್ಯ ಯಾತ್ರೆ
ಬರಡು ನೆಲದಿ ಹಸಿರ
ಹರಡಿದಂತೆ…
ಕೆಸರಲ್ಲೂನೂ ಕಮಲ ತಾನೇ
ಅರಳಿದಂತೆ…
ಬಿಸಿಲ ಬೇಗೆಯಲ್ಲಿ ಬೆವರ
ಮಾಗಿ ಚಳಿಯಲ್ಲೂನು ಪದರ
ಸೋನೆ ಮಳೆಯು ಕೂಡ ಮಧುರ
ನೀಗುತಿಹುದು ಮನದ ಬರಡ
ಕಾರಂಜಿಯಂತೆ…
ಒಂಟಿ ಮನದ ಜತೆಗೆ ಜಗವೇ
ನಡೆಯುವಂತೆ….
******************************
Meaningful poetry