ಅಂಕಣ ಬರಹ
ತೊರೆಯ ಹರಿವು
‘ಆದರ್ಶ ಗೃಹಿಣಿ’
ಎಂಬ ಮುಳ್ಳಿನ
ಚೌಕಟ್ಟಿನೊಳಗೆ.
ನನ್ನ ಗೆಳತಿ ವಂದನಾ ಬಹಳ ಜಾಣೆ. ಓದಿದವಳು, ತಿಳುವಳಿಕೆ ಇರುವವಳು. ಜವಾಬ್ದಾರಿ ನಿರ್ವಹಣೆಯಲ್ಲಿ ಹಾಗೂ ಯಾವುದೇ ಕೆಲಸಕ್ಕೆ ಮುಂದಾಗುವುದರಲ್ಲಿ ಎಂದಿಗೂ ಯೋಚಿಸಿ ಹಿಂದೆ ಉಳಿದವಳಲ್ಲ. ಆದರೆ ಇತ್ತೀಚೆಗೆ ಕಂಡಾಗ ಸ್ವಲ್ಪ ಮಂಕಾಗಿದ್ದಳು. ಆಕೆಯ ಮಂಕುತನಕ್ಕೆ ಕಾರಣ ತಿಳಿದಾಗ ನನಗೆ ಮೊದಲಿಗೆ ನಗೆ ಬಂದಿತು. ಆಮೇಲೆ ನಿಧಾನವಾಗಿ ಯೋಚಿಸಿದಾಗ ಆಕೆಯ ಸಮಸ್ಯೆ ನನ್ನನ್ನೂ ಒಳಗೊಂಡಂತೆ ಹಲವರನ್ನು ಬಾಧಿಸುತ್ತಿರುವುದು ನಿಜವಲ್ಲವೇ ಎಂದು ಸ್ವಲ್ಪ ಸಮಯದಲ್ಲೇ ಅರಿವಾಯ್ತು.
ವಂದನಾಳ ಸಮಸ್ಯೆ ಇಷ್ಟೇ, ಎಂಜಿನಿಯರಿಂಗ್ ಕಲಿತಿರುವ ಆಕೆ ‘ಆದರ್ಶ ಗೃಹಿಣಿ’ಯಂತೆ ಇಲ್ಲ ಎನ್ನುವುದು..!
ವಂದನಾ ಬೆಳಿಗ್ಗೆ ಐದು ಗಂಟೆಗೆ ಎದ್ದವಳೇ ನೈಟ್ ಸೂಟ್ ತೆಗೆದಿರಿಸಿ, ಟೀ-ಶರ್ಟ್ ; ಟ್ಯ್ರಾಕ್ ಪ್ಯಾಂಟ್, ಆರಾಮದಾಯಕ ಶೂ ಧರಿಸಿ ಮನೆ ಪಕ್ಕದ ಪಾರ್ಕಿನಲ್ಲಿ ಅರ್ಧಗಂಟೆ ವಾಕಿಂಗ್/ ಜಾಗಿಂಗ್ ಮಾಡಿ ಮನೆಗೆ ಬಂದು ಮತ್ತರ್ಧ ಗಂಟೆ ದೈಹಿಕ ವ್ಯಾಯಾಮ ಮಾಡುತ್ತಾಳೆ. ಇದಾದ ಮೇಲೆ ತನಗೆ ಬೇಕಾದ ಗ್ರೀನ್ ಟೀ ಕುಡಿದು, ಮನೆ ಮಂದಿಯ ಬೆಳಗ್ಗಿನ ಹಾಗೂ ಮಧ್ಯಾಹ್ನದ ತಿಂಡಿ- ಊಟದ ತಯಾರಿಗೆ ಬೇಕಾದ ಪರಿಕರಗಳನ್ನು ಸಿದ್ಧಮಾಡಿ ಅಡುಗೆ ಸಹಾಯಕರಾದ ಅಂಬಿಕಾಗೆ ಏನೇನು ಮಾಡಬೇಕೆಂದು ಹೇಳಿ, ಸ್ನಾನ ಮುಗಿಸಿ, ತನ್ನ ಕೆಲಸ, ಹವ್ಯಾಸದ ಓದು- ಬರಹ ಇತ್ಯಾದಿ ಮಾಡಿಕೊಳ್ಳುತ್ತಾಳೆ. ಹಾಗೆಯೇ ವಾರಂತ್ಯದ ಬಿಡುವಿನಲ್ಲಿ ತಾನು ಸಣ್ಣವಳಿದ್ದಾಗ ಅರ್ಧ ಕಲಿತು ಬಿಟ್ಟಿದ್ದ ಕಥಕ್ ನೃತ್ಯವನ್ನು ಮಗಳೊಡನೆ ಮುಂದುವರೆಸಿದ್ದಾಳೆ, ಕಾರ್ ಡ್ರೈವಿಂಗ್ ಕಲಿತಿದ್ದಾಳೆ. ಕಳೆದ ಬೇಸಿಗೆಯಲ್ಲಿ ಮಕ್ಕಳೊಡನೆ ಶಿಬಿರವೊಂದರಲ್ಲಿ ಭಾಗವಹಿಸಿ ಈಜುವುದನ್ನೂ ತಕ್ಕಮಟ್ಟಿಗೆ ಕಲಿತಿದ್ದಾಳೆ. ಹಾಗೆಂದು ಆಕೆ ತಾನು ಇಚ್ಛೆಪಟ್ಟು ಮಾಡುವ ಹಲವು ಹವ್ಯಾಸ-ಅಭ್ಯಾಸಗಳ ನಡುವಲ್ಲಿ ಮನೆಯ ಇತರೆ ಕೆಲಸಗಳನ್ನು ನಿರ್ಲಕ್ಷಿಸಿಲ್ಲ. ಮಕ್ಕಳ ಓದು- ಶಾಲಾ ಚಟುವಟಿಕೆ, ಮನೆಯ ಹೊರಗಿನ ಓಡಾಟ, ಸಂಬಂಧಿಕರ ಕಾರ್ಯಕ್ರಮಗಳಿಗೆ ಬೆನ್ನುತೋರಿಲ್ಲ.
ಇಷ್ಟೆಲ್ಲಕ್ಕೂ ಸಮಯ ಕೊಡಲು ವಂದನಾ ಮಾಡಿಕೊಂಡದ್ದು ಕೆಲವು ಹೊಂದಾಣಿಕೆಗಳನ್ನು. ‘ವರ್ಕ್ ಫ್ರಂ ಹೋಮ್’ ಅವಕಾಶ ಇರುವ ಕೆಲಸವನ್ನು ಆಯ್ದುಕೊಂಡಿದ್ದಾಳೆ. ಬೆಳಿಗ್ಗೆ ಮನೆಯ ಮುಂಬಾಗಿಲಿಗೆ ನೀರು ಹಾಕಿ ರಂಗೋಲಿ ಇಡಲು ಪಕ್ಕದ ಮನೆಗೆ ಬರುತ್ತಿದ್ದ ಕೆಲಸದ ಗೌರಮ್ಮನಿಗೆ ತಿಂಗಳಿಗಿಷ್ಟು ಸಂಬಳ ಎಂದು ಒಪ್ಪಿಸಿ ಅಲ್ಲಿ ಅರ್ಧಗಂಟೆ ಉಳಿಸಿಕೊಂಡಿದ್ದಾಳೆ, ತಿಂಡಿ-ಅಡುಗೆ ಮಾಡಲು ಅಂಬಿಕಾ ಎನ್ನುವ ಅಡುಗೆ ಸಹಾಯಕರ ಸಹಾಯ ತೆಗೆದುಕೊಂಡಿದ್ದಾಳೆ.
ಇದರ ನಡುವಲ್ಲೇ ಬೆಳಿಗ್ಗಿಂದ ಸಂಜೆವರೆಗೂ ಯಾವ ದುರಂತದ ದುರಿತ ಕಾಲದಲ್ಲೂ ಕೊರತೆಯಾಗದೆ ಧಾರಾಕಾರ ಪ್ರವಹಿಸುವ ಧಾರಾವಾಹಿಗಳನ್ನು ಆಕೆ ನೋಡುವುದೇ ಇಲ್ಲ. ಕಾಡುಹರಟೆಗಳಿಗೆ ಮನಸ್ಸು ಮಾಡುವುದಿಲ್ಲ. ಮೊಬೈಲು ಫೋನಿನೊಡನೆ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾಳೆ. ಒಟ್ಟಾರೆ ಎಲ್ಲರಿಗೂ ಸಿಗುವಂತೆ ತನಗೂ ಸಿಕ್ಕಿರುವ ದಿನ ೨೪ ಗಂಟೆ ಸಮಯವನ್ನು ತನಗೆ ಅನುಕೂಲ ಆಗುವಂತೆ ಮಾರ್ಪಡಿಸಿಕೊಂಡು ಸದುಪಯೋಗ ಮಾಡಿಕೊಂಡಿರುವ ಜಾಣೆ ಆಕೆ.
ಇಷ್ಟೆಲ್ಲಾ ಜಾಣೆಯಾಗಿರುವ ವಂದನಾ ಬಹುತೇಕ ಕಾರ್ಯಕ್ರಮಗಳಿಗೆ ಸೀರೆ ಉಡುವುದಿಲ್ಲ, ಕೈತುಂಬಾ ಬಳೆ ತೊಡುವುದಿಲ್ಲ, ಪೂಜೆಪುನಸ್ಕಾರ, ವ್ರತ-ತಪ ಇತ್ಯಾದಿ ಮಾಡುವುದಿಲ್ಲ, ಬೆಳಿಗ್ಗೆ ಮನೆ ಬಾಗಿಲಿಗೆ ನೀರಿಟ್ಟು ರಂಗೋಲಿ ಹಾಕುವುದಿಲ್ಲ, ಗಂಡ ಮಕ್ಕಳಿಗೆ ಬೇಕಾದುದನ್ನು ತಾನೇ ಕೈಯಾರ ಮಾಡಿ ಹಾಕುವುದಿಲ್ಲ, ಇಸ್ತ್ರಿಗೆ ಬಟ್ಟೆಗಳನ್ನು ಕೂಡ ಹೊರಗೆ ಕೊಡುತ್ತಾಳೆ… ಹೀಗೆಲ್ಲಾ ಅನಗತ್ಯ ವಿಚಾರಗಳನ್ನು ಮುಂದು ಮಾಡಿ ಆಗಾಗ್ಗೆ ಜರಿಯುವುದರಲ್ಲಿ, ಆಕೆ ‘ಆದರ್ಶ ಗೃಹಿಣಿ’ಯಲ್ಲ ಎಂದು ಸಾಬೀತು ಮಾಡುವುದಕ್ಕೆ ವಂದನಾಳ ಸುತ್ತಮುತ್ತಲಿನವರು ತಮ್ಮ ಸಮಯ ವ್ಯಯಿಸುತ್ತಾರೆ. ಇದು ವಂದನಾಳ ಮುಖ ಕಳೆಗುಂದಿರುವುದಕ್ಕೆ ಕಾರಣ. ಮನಸ್ಸು ಬಾಡಿರುವುದಕ್ಕೆ ಮೂಲ..
ನಿಜ! ಆದರ್ಶ ಪತಿ/ ಸತಿ, ಆದರ್ಶ ಶಿಕ್ಷಕ/ಕಿ, ಆದರ್ಶ ರಾಜಕಾರಣಿ, ಆದರ್ಶ ಮಗಳು/ಮಗ, ಸೊಸೆ/ಅಳಿಯ.. ಇರುವಂತೆ ‘ಆದರ್ಶ ಗೃಹಿಣಿ’ಯರೂ ಇರುತ್ತಾರೆ ಹಾಗೂ ಅವರ ಐಡೆಂಟಿಟಿ ಓಬೀರಾಯನ ಕಾಲದ ನಿಯಮಗಳ ಅನೂಚಾನ ಅನುಸರಣೆಯಾಗಿರುತ್ತದೆ. ಆದರೆ, ತನಗೆ ಅನುಕೂಲಕರವಾಗಿ ಬದಲಾವಣೆ ಮಾಡಿಕೊಂಡು ಬದುಕು ಚೆಂದ ಕಟ್ಟಿಕೊಂಡಿರುವ ವಂದನಾ ಹಾಗೆ ‘ಆದರ್ಶ ಗೃಹಿಣಿ’ಯಲ್ಲ ಎಂದು ಅವಕಾಶ ಸಿಕ್ಕಾಗೆಲ್ಲಾ ಬೊಂಬಡಿ ಭಜಾಯಿಸುತ್ತಾ ಆಕೆಯನ್ನು ಮಾನಸಿಕವಾಗಿ ನೋಯಿಸಲಾಗಿದೆ.
ಎಂದೋ ರೂಪಿತವಾದ ಸಿದ್ಧ ಮಾದರಿಯ ಆದರ್ಶದ ಚೌಕಟ್ಟಿನ ಒಳಗೆ ಇಂದಿನ ಜಾಯಮಾನದವರನ್ನು ಒಳಗು ಮಾಡಿ ನೋಡುವುದು ಹಾಗೆ ಆ ಚೌಕಟ್ಟಿನೊಳಗೆ ಅವರು ಸೇರದಿದ್ದರೆ ಅದನ್ನೇ ಎತ್ತಾಡುವುದು, ಹಂಗಿಸುವುದು ಮಾಡುವ ಜನ ನಮ್ಮ ಸುತ್ತೆಲ್ಲಾ ಇರುತ್ತಾರೆ. ಅವರಿಂದ ಯಾವುದೇ ದೈಹಿಕ ಹಲ್ಲೆ ನಡೆಯದಿದ್ದರೂ ಆಗುವ ಮಾನಸಿಕ ಹಿಂಸೆ ಕಡಿಮೆ ಏನಲ್ಲ. ಅನುಭವಿಸಿದವರಿಗೆ ವೇದ್ಯವದು.
‘ಆದರ್ಶ ಗೃಹಿಣಿ’ ಎಂದರೆ ನೆನಪಾಗುವುದು ಮುಂಜಾವಿಗೇ ಎದ್ದು ಮನೆಯ ಮುಂಬಾಗಿಲ ಕಸ ತೊಡೆದು, ನೀರು ಚಿಮುಕಿಸಿ, ರಂಗೋಲಿ ಇಟ್ಟು, ಅಡುಗೆ ಮನೆಯತ್ತ ಧಾವಿಸಿ ಕಾಫಿ- ಟೀ- ಹಾಲು ಕಾಯಿಸುತ್ತಿರುವಾಕೆಯೋ, ಮುಂದಿನ ಅಡುಗೆಗೆ ತಯಾರಿ ನಡೆಸುತ್ತಿರುವಾಕೆಯೋ, ಬಚ್ಚಲಿನ ನೀರೊಲೆಯ ಬಾಯಿಗೆ ಒಣಕಟ್ಟಿಗೆ ತುರುಕಿ ಬೆಂಕಿ ಹಚ್ಚಿ ಮನೆಮಂದಿಯ ಸ್ನಾನಕ್ಕೆಂದು ಬಿಸಿನೀರಿಗೆ ಅಣಿಮಾಡುತ್ತಿರುವಾಕೆಯೋ.. ಅಂತೂ ಯಾವುದೋ ಒಂದು ನಿರಂತರದ ಗಡಿಬಿಡಿಯಲ್ಲಿ ನಿರತರಾಗಿರುವ ನಗರದ ಅಥವಾ ಹಳ್ಳಿಯ ಹೆಂಗಸರ ಇಂತಹ ಚಿತ್ರಗಳೇ. ಸಾಂಪ್ರದಾಯಕ ದೃಷ್ಟಿಯಿಂದ ನೋಡಿದರೆ, ಎಲ್ಲರಿಗೂ ಮೊದಲೇ ಎದ್ದು, ಸ್ನಾನ ಮುಗಿಸಿ ದೇವರ ಮನೆಯಲ್ಲಿ ದೀಪ ಬೆಳಗಿ, ಮನೆಯನ್ನೆಲ್ಲಾ ಧೂಪ- ಗಂಧದ ಕಡ್ಡಿಯ ಘಮಲಿನಿಂದ ತುಂಬಿಸುವ ಹೆಣ್ಣುಮಕ್ಕಳೋ… ಗಂಡ, ಅತ್ತೆ-ಮಾವ, ಮಕ್ಕಳಿಗೆ ಬೆಳಗಿನ ತಯಾರಿಗೆ ನೆರವಾಗುವ ಹೆಣ್ಣುಮಕ್ಕಳೋ ಆಗಿರುವುದು ಅಸಹಜವೇನಲ್ಲ…!
ಅಪ್ಪಿತಪ್ಪಿಯೂ ನಮ್ಮ ಕಲ್ಪನೆಯ ಆದರ್ಶ ಗೃಹಣಿಯರು ಬೆಳಗ್ಗೆ ಎದ್ದು ಯೋಗ- ಜಿಮ್ ಗೆ ಹೋಗುವ, ವಾಕಿಂಗ್- ಜಾಗಿಂಗ್ ಮಾಡುವ, ಟ್ರ್ಯಾಕ್ ಪ್ಯಾಂಟ್, ಟೀ-ಶರ್ಟ್, ಸ್ಪೋರ್ಟ್ಸ್ ಶೂ ಧರಿಸಿ ಕಸರತ್ತು ಮಾಡಿ ಬೆವರು ಇಳಿಸುವ, ಮುತುವರ್ಜಿಯಿಂದ ಮನೆಮಂದಿಯ ಜೊತೆಗೆ ತಮ್ಮ ಆರೋಗ್ಯದ ಕಾಳಜಿಯನ್ನೂ ಮಾಡುವ ಆಧುನಿಕರು ಆಗಿರುವುದಿಲ್ಲ. ಇಂಥಾ ಆಧುನಿಕ ಹೆಣ್ಣುಗಳನ್ನು ಆದರ್ಶ ಗೃಹಿಣಿಯರ ಪದವಿಯಲ್ಲಿ ಕೂರಿಸಿ ನೋಡುವ ಚಿತ್ರ ೯೦ ದಶಕದ ಪೂರ್ವದಲ್ಲಿ ಜನಿಸಿದವರ ಕಣ್ಮುಂದೆ ಬರುವುದು ಕಷ್ಟ. ಈ ರೀತಿ ಯೋಚಿಸಲು ಮನಸ್ಸು ಸೂಕ್ತವಾಗಿ ಟ್ಯೂನ್ (ತಯಾರಿ) ಆಗಿರುವುದಿಲ್ಲ.
ಹಾಗಾದರೆ, ಶತಮಾನಗಳ ಏಕತಾನತೆಯೊಂದಿಗೆ ಬಂದಿರುವ ಇಂತಹ ರೂಢಿಯನ್ನು ಮನಸ್ಸಿನಿಂದ ಮರೆಮಾಡುವುದು ಹೇಗೆ? ಬಹುಶಃ ನಮ್ಮಂತಹ ೭೦,೮೦, ೯೦ ರ ದಶಕಗಳಲ್ಲಿ ಹುಟ್ಟಿದವರಿಗೆ ಇದು ಕಷ್ಟವಾಗಬಹುದು. ಏಕೆಂದರೆ ನಮ್ಮ ಅಜ್ಜಿ, ಅಮ್ಮ,ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ, ನಾದಿನಿ, ಅತ್ತಿಗೆ, ಸಹೋದರಿ, ನೆರೆ ಮನೆಯ ಹೆಂಗಸರು, ಅಷ್ಟೇ ಏಕೆ! ಆಗಿನ ಸಿನೆಮಾ – ನಾಟಕ, ಸಾಹಿತ್ಯದ ಕತೆ-ಕಾದಂಬರಿಗಳ ಸ್ತ್ರೀ ಪಾತ್ರಗಳು ಸಹ ಆದರ್ಶ ಗೃಹಿಣಿಯನ್ನು ಒಂದು ಚೌಕಟ್ಟಿನೊಳಗೆ ಚಿತ್ರಿಸಿ ಬಿಟ್ಟಿವೆ. ನಮ್ಮ ಭಾವಕೋಶದ ಮೇಲೆ ಆ ಪಾತ್ರದ ಛಾಪು ಅಂತೆ ಮೂಡಿದೆ. ಅದನ್ನು ನೋಡಿಕೊಂಡೇ ದೊಡ್ಡವರಾಗಿರುವ ನಮ್ಮ ಮೇಲೆ ಅದರಲ್ಲಿನ ಆದರ್ಶ ಗೃಹಿಣಿಯರು ಬೀರಿರುವ ಪ್ರಭಾವ ಮಸುಕಾಗಬಹುದಾದರೂ ಮಾಸುವುದಿಲ್ಲ.
ಇಷ್ಟರ ಮೇಲೆಯೂ ಮನೆಯನ್ನು, ಮನೆಯವರನ್ನು ಪಕ್ಕಕ್ಕಿರಿಸಿ ತುಸು ಸಮಯವಾದರೂ ತನ್ನ ವ್ಯಕ್ತಿತ್ವ ನಿರ್ಮಾಣಕ್ಕೆ ಮುಂದಾಗುವ, ತನಗೆ ಮೆಚ್ಚುಗೆಯಾಗುವ ಅಭಿರುಚಿಯುಳ್ಳ ಕೆಲಸ ಮಾಡುವ, ತನ್ನ ಆರೋಗ್ಯದ ಕಾಳಜಿಗೆ ಗಮನ ಹರಿಸುವ, ತನಗೆ ಆರಾಮೆನಿಸುವ ಸ್ನೇಹ-ಸಂಪರ್ಕ ಕಟ್ಟಿಕೊಳ್ಳುವ, ಸಾಮಾಜಿಕ ಎನಿಸುವ ಕೆಲಸ ಕಾರ್ಯಗಳಿಗೆ ತೆರೆದುಕೊಳ್ಳುವ ಹೆಣ್ಣುಮಕ್ಕಳು ‘ಆದರ್ಶಗೃಹಿಣಿ’ ಪಟ್ಟ ಬಯಸಬಾರದು ಎನ್ನುವ ಒಂದು ಗೌಪ್ಯ ಧೋರಣೆಯಿದೆ. ಸಮಯ ಸಿಕ್ಕಿದಾಗೆಲ್ಲಾ ಹಂಗಿಸಿ, ಜರೆಯುವ ಪಡೆಯೂ ಇರುತ್ತದೆ. ಆದರೂ ಬದಲಾವಣೆಯ ಹಾದಿಯಲ್ಲಿ ನಡೆಯುವವರಿಗೆ ಎದುರಾಗುವ ಇಂಥಾ ಹರ್ಡಲ್ಸ್ ಗಳನ್ನು ಸರ್ವೇ ಸಾಮಾನ್ಯವೆಂದು ಭಾವಿಸಿ, ನಿರ್ಲಕ್ಷಿಸಿ ಮುನ್ನಡೆಯಬೇಕು.
‘ಸ್ಟ್ರಗಲ್ ಫಾರ್ ಬರ್ತ್’, ‘ಸ್ಟ್ರಗಲ್ ಫಾರ್ ಎಗ್ಸಿಸ್ಟೆನ್ಸಿ’ಯ ಜೊತೆಯಲ್ಲಿ ಈಗ ಮಗಳು, ಸೊಸೆ, ಅಕ್ಕತಂಗಿ, ಅತ್ತಿಗೆ-ನಾದಿನಿ, ಹೆಂಡತಿ, ಅಮ್ಮನ ಪಾತ್ರಗಳನ್ನು ನಿರ್ವಹಿಸುತ್ತಿರುವ ಬಹಳ ಹೆಣ್ಣುಮಕ್ಕಳಿಗೆ ‘ಆದರ್ಶ ಗೃಹಿಣಿ’ಯ ಕಾಲ್ಪನಿಕ ಚೆಕ್ ಲಿಸ್ಟ್ ಗಳಲ್ಲಿನ ಮಾದರಿಗಳಿಗೆ ಒಗ್ಗಿಕೊಳ್ಳುವುದು ಬಹಳ ತ್ರಾಸದಾಯಕ.
ಆದರೆ ಹಾಗೆಂದು, ತಾನು ಇರುವಂತೆಯೇ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವ ನಿಭಾಯಿಸುತ್ತಿರುವ ವಂದನಾಳಂತಹ ಹಲವು ಲಕ್ಷ ಹೆಣ್ಣುಮಕ್ಕಳು ಯಾವ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ತಮ್ಮ ಮೇಲಿನ ವಿಶ್ವಾಸವನ್ನು ಹೆಚ್ಚು ಮಾಡಿಕೊಳ್ಳುತ್ತಲೇ ಇತರರ ಮನೋಭಾವವನ್ನು ಬದಲಿಸುವ ಕೆಲಸಕ್ಕೆ ಮುಂದಾಗಬೇಕು. ಇದು ನಿಜಕ್ಕೂ ವಿಶೇಷ ಪರಿಶ್ರಮ ಬಯಸುವ ಕೆಲಸವಲ್ಲ ಎನಿಸಿದರೂ ಅನವರತ ಚಟುವಟಿಕೆಯಲ್ಲಿ ತೊಡಗಿರುವ ಹೆಣ್ಣುಮಕ್ಕಳಿಗೆ ಇದು ಒಂದು ಹೆಚ್ಚುವರಿಯಾದ ಹೊರೆ.
ಇಂಥ ಹಲವು ಹೊರೆಗಳನ್ನು ಹೊತ್ತು, ಹರ್ಡಲ್ಸ್ ಗಳನ್ನು ವಿಶ್ವಾಸದಿಂದ ದಾಟಿ ಬದುಕನ್ನು ಸೂಕ್ತವಾಗಿ ನಿಭಾಯಿಸಿ ನಿರ್ವಹಿಸಿದರೆ, ಆಧುನಿಕ ಮನೋಭಾವದ ಎಷ್ಟೋ ಹೆಣ್ಣುಮಕ್ಕಳು ತಮಗಾಗುವ ಮಾನಸಿಕ ರೇಜಿಗೆಯಿಂದ ಹೊರಬರಬಹುದು. ಅಪ್ರಿಯವಾದ ಮುಳ್ಳಿನ ಚೌಕಟ್ಟಿಗೆ ತಮ್ಮನ್ನು ಕೂರಿಸಿ ಸದಾ ಚುಚ್ಚಿಸಿಕೊಂಡು ಬಾಧೆ ಪಡುವ ನೋವಿನಿಂದ ಮುಕ್ತರಾಗಬಹುದು. ವಂದನಾಳಂತೆ ಮಾನಸಿಕ ವೇದನೆ ಅನುಭವಿಸದೆ ನಿರಾಳವಾಗಿ ಬದುಕಬಹುದು. ಆದರ್ಶವೆಂಬ ಭಾರದ ಕಿರೀಟಕ್ಕಿಂತಲೂ, ಆರಾಮದಾಯಕವಾದ ಹಗೂರ ಕೂಲಿಂಗ್ ಗ್ಲಾಸ್ ಧರಿಸುವುದು ಒಳ್ಳೆಯದು.
*****************************
ವಸುಂಧರಾ ಕದಲೂರು
೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ಮೇಡಂ,ಇದು ವಂದನಾ ರವರ ಕಥೆ ಮಾತ್ರವಲ್ಲ,ಎಲ್ಲಾ ಉದ್ಯೋಗಸ್ಥ ಮಹಿಳೆಯರ,ಅದರಲ್ಲೂ ಏನಾದರೂ ತಮ್ಮದೇ ಹವ್ಯಾಸ ಗಳ ರೂಢಿಸಿಕೊಂಡು ಬದುಕ್ಕುತ್ತಿರುವ,ಹೆಣ್ಣುಮಕ್ಕಳ ಕಥೆ,ತುಂಬಾ ಚೆನ್ನಾಗಿ ಹೇಳಿದ್ದೀರಿ..
very nice related to all working women
ಉತ್ತಮ ಲೇಖನ ಪ್ರಸ್ತುತ ಕಾಲಘಟ್ಟಕೆ ಸೂಕ್ತ ವಾಗಿದೆ
ಹೆಣ್ಣೇ ಹೆಣ್ಣಿನ ಜೀವನದ ತೊಡ ಕಾದರೆ ಇದು ಬಾಳಿನ ವಿಪರ್ಯಾಸ ವೆ ಸರಿ. Bt nobody else should determine our happiness n I’m sure if we are in the right path the society or the called gossip mongers will also gradually accept the way we are..n if not also it should not bother us.
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
ಒಳ್ಳೆಯ ಬರಹ ವಸುಂಧರಾ