ನಾ ಓದಿದ ಪುಸ್ತಕ

ಪುಸ್ತಕ ಸಂಗಾತಿ

ಕಾಣೆಯಾದ ನಗುವ ಚಂದಿರ

ಕಾವ್ಯ ಎಂದರೆ ಸರ್ವರಿಗೂ ಇಷ್ಟವೆ.ಜಾಣರನ್ನು ತಲೆದೂಗಿಸುವಂತೆ ಕಾವ್ಯ ಬರೆಯುವ ಶಕ್ತಿ ಎಲ್ಲರಿಗೂ ಬರುವುದಿಲ್ಲ.ಸಣ್ಣ ಸಣ್ಣ ಹನಿಗವನಗಳಲಿ ವಸ್ತುವನ್ನಾರಿಸಿಕೊಂಡು ಚಿಲುಮೆಯಂತೆ ಬರೆದವರು ನಮ್ಮೆದುರು ಇದ್ದಾರೆ.ಪ್ರಸ್ತುತ ಪಡಿಸುವ ರೀತಿಯು ತೇಜವಾಗಿರಬೇಕು.ಕಾವ್ಯಕ್ಕೆ ರೀತಿಯೇ ಜೀವಾಳ.ಕಸವನ್ನು ರಸವನ್ನಾಗಿಸುವ ಪ್ರತಿಭೆ ಕವಿಗಿದೆ.ಜೀವನದ ಸುಖ ದುಃಖಗಳನ್ನು ಹೃದಯಂಗಮವಾಗಿಸುವ ಭಾಷೆ ಕಾವ್ಯಕ್ಕಿದೆ

      ಕವಿಯು ಎಲ್ಲಿದ್ದರೂ  ಬರೆಯುತ್ತಾನೆ.ಬಡ ಜೀವಿಯಾಗಿದ್ದರೂ ಬರೆಯುತ್ತಲೇ ಬದುಕುತ್ತಾನೆ.ಕವಿಯು ಸರಸ್ವತಿಯ ಉಪಾಸಕ.ಶ್ರದ್ಧೆಯಿಂದ ಅಧ್ಯಯನದ ಅರ್ಚನೆ ಮಾಡಬೇಕು.ಸತತ ಪ್ರಯತ್ನವೆ ಸರಸ್ವತಿಯ ಗುಣಗಾನ ಎನ್ನಬಹುದು

ಅರಿವಿಗಾಗಿ ಹೃದಯವನು ತೆರೆದಿಡುವುದು.,ಸಮಾಜದ ಹಿಲಾಲು ತೊಳೆದು,ಬತ್ತಿ ಹೊಸೆದು,ಅಕ್ಷರಗಳ ದೀಪ ಬೆಳಗಿಸುವುದು.,ಮೃದು ಭಾವದ ಎಳೆ-ಎಳೆಯ ಚಿಗುರನು ಚೆಲುವಾಗಿಸುವುದು.,ವಿಷದ ಬೀಜಗಳಿಂದ ಮೊಳಕೆಯೊಡೆದ ಕಸವನ್ನು ಕಾವ್ಯದ ದನಿಯಿಂದ ತೋಯಿಸಿ ಕಳೆ ತೆಗೆಯುವುದು.,ಅನ್ಯಾಯ ಅಕ್ರಮಗಳಿಗೆ,ಈಟಿಯಾಗಿ ಮೀಟುವುದು ಇವುಗಳೆಲ್ಲಗಳ ಕಣ್ಣಾಗಿ ಸಾಹಿತ್ಯ ಕಣದಲಿ ಗಟ್ಟಿ ದನಿಯಾಗುವ ಕೂಗುವ ಪಾತ್ರವು ಕವಿಗಳದ್ದಾಗಿದೆಂದು ಅತ್ಯಂತ ಅಭಿಮಾನದಿಂದ ಹೇಳುವೆನು.ಕವಿಗೆ ಇಲ್ಲಿ ಯಾವ ಲಾಭವಿಲ್ಲ.ತನ್ನವರ ಉದ್ಧಾರವೂ ಇಲ್ಲ.,ತಾನಾಯಿತು.ತನ್ನ ಬರಹವಾಯಿತು.ತನ್ನ ಲೋಕವಾಯಿತು ಅಷ್ಟೆ,-ಎಂದು ಯಾರಾದರೂ ಹೇಳಿದರೆ,ಅದು ಉತ್ಪ್ರೇಕ್ಷೆಯ ಮಾತಾದೀತು.ರವಿಂದ್ರನಾಥ ಠಾಕೂರರು ಇಂಗ್ಲೀಷನ್ನು,ಇಂಗ್ಲೀಷರಿಗಿಂತ ಚೆನ್ನಾಗಿ ಬರೆಯಬಲ್ಲ ಶಕ್ತಿಯನ್ನು ಗಳಿಸಿದ್ದರು.ಅವರಿಗೆ ನೋಬೆಲ್ ಬಹುಮಾನ ಬಂತು.ಅವರ ಕಾವ್ಯಗಳು ಇಂಗ್ಲೀಷ ಸಾಹಿತ್ಯ ಚರಿತ್ರೆಯಲ್ಲಿ ಸ್ಥಾಯಿಯಾಗಿ ಸ್ಥಾನ ಪಡೆಯಿತು.ಕನ್ನಡದಲ್ಲಿಯೂ ಸಾಹಿತ್ಯ ದಿಗ್ಗಜರ ದಿಗ್ಗಜರು ಮೆರೆದರು. ಕುವೆಂಪು,ಬೇಂದ್ರೆ,ಅಯ್ಯಾಂಗಾರ್,ವಿ.ಕೃ.ಅನೇಕ ಹಿರಿಯ ಕವಿ-ಮಹಾಕವಿಗಳ ಸಾಹಿತ್ಯದ ಕಣಜವೆ ಇದೆ.ಇವರಂತೆ ನಾವಾಗದಿದ್ದರೂ,ಅವರ ಬರಹವನು ಅರಿತು ಅರಗಿಸಿಕೊಂಡರೆ

 ಸಾಕು.ಭಾಷೆ ಕರಗತವಾಗುತ್ತದೆ.ಓದಿ ಬರೆದರೆ ಸಾಕು ಕನ್ನಡದ ವಿದ್ವತ್ತು ಲಭಿಸುತ್ತದೆ.ಇದರ ಮುಖಾಂತರ ಕನ್ನಡ ತಾಯಿನುಡಿಯ ಸೇವೆ ಮಾಡಿದಂತಾಗುತ್ತದೆ.ಇದಕ್ಕಿಂತ ಮಹತ್ಕಾರ್ಯ ಯಾವುದಿದೆ?

    ನಾನಿವತ್ತು ಓದಿದ ಪುಸ್ತಕ  ಕಾಣೆಯಾದ ನಗುವ ಚಂದಿರ ಕವನ ಸಂಕಲನದ ಕುರಿತು ತಿಳಿದಷ್ಟು ಬರೆಯುತ್ತೇನೆ.ಯಾವುದೇ ಪುಸ್ತಕವಾಗಲಿ ಸಮಗ್ರವಾಗಿ ಓದಿದರೆ,ಆ ಕೃತಿಯ ಹಿರಿಮೆ-ಗರಿಮೆ ತಿಳಿಯಲು ಸಾಧ್ಯ.ಲೇಖಕರ ಕಾವ್ಯವನ್ನು ತಮ್ಮದಾಗಿಸಿಕೊಂಡ ಅನುಭವ ಮತ್ತು ಓದಿದ ನಂತರ ನಮ್ಮದಾಗಿ ಸ್ವೀಕರಿಸಿಕೊಂಡ ಅನುಭವ ಎರಡೂ ದೊರಕಿದಾಗ ಪುಸ್ತಕದ ತೂಕ ಕಾಣಸಿಗುವುದು.ಕವಿಯಾಗುವ ಮುಂಚೆ ಒಬ್ಬ ಒಳ್ಳೆಯ ಓದುಗನಾಗಬೇಕು.ಪುಸ್ತಕವು ನಮ್ಮ ಆಚಾರ ವಿಚಾರ,ಆಯಾ ಕಾಲದ ಆದರ್ಶ ಮಾರ್ಗದರ್ಶನಗಳಾಗುತ್ತವೆ.ಹೊಸ ಹೊಸ ಭಾವಗಳು,ನುಡಿಗಳು,ಶೈಲಿಯಲಿ ಬದಲಾವಣೆ ದಕ್ಕುವುದರ ಜೊತೆಗೆ ಪ್ರೇರಕ ಸುಶಕ್ತಿ ಸಿಗುವುದು.ಈ ಜಗತ್ತನ್ನು ಬಿಟ್ಟು ಪುಸ್ತಕಗಳು ಬದುಕಲಾರವು.ಪುಸ್ತಕಗಳಿಲ್ಲದೆ ಬರಹಗಾರರು ಬೆಳೆಯಲಾರರು.ಅಂತೆಯೆ ನವ್ವೇತರ ಕಾಲಮಾನದಲ್ಲಿ ನೆಲದ ಮೇಲೆ ಕಾಲೂರಿದ ನಕ್ಷತ್ರಗಳಂತೆ ಹೊಸತನ ಮುಡಿಸುವ, ಕಾಣಿಸುವ ಬರಹಗಾರರು,ಅಧ್ಯಯನಶೀಲರು ನಮ್ಮ ಸುತ್ತಲೂ ಪೂರ್ಣ ಚಂದಿರನಂತೆಬೆಳಗುತ್ತಿದ್ದಾರೆ ಎನ್ನಲು ಖುಷಿಯಾಗುತ್ತದೆ

ಈ ಭಾಗದ ಸೃಜನಶೀಲ ಬರಹಗಾರರಲ್ಲೊಬ್ಬರಾದ ಭರವಸೆಯ ಕವಿಮಿತ್ರ ರಮೇಶ ಬನ್ನಿಕೊಪ್ಪ ಇವರಲ್ಲಿ ಪ್ರತಿಭೆಯ ವಿಲಾಸವೆ ಅಡಗಿದೆ.ಬರಹ ಬಲಿತ ಮೇಲೆ,ಭಾವಗಳು ಹಿರಿದಾದ ಮೇಲೆ,ಇವರ ಲೇಖನಿಗೆ ಬಿಡುವಿಲ್ಲ.ಕಠಿಣತೆಯಿಲ್ಲ.ಅರ್ಥಕ್ಕೆ ನಿಲುಕದಷ್ಟು ಎತ್ತರವಿಲ್ಲ.ಬರೆದ ಕಾವ್ಯಗಳೆಲ್ಲವೂ ವಿಷಯ ವಸ್ತುವಿಗೆ ಚಿಂತನೆಗೊಳಪಡಿಸುವ ಸಂಗತಿಗಳಾವೆ.ಒಂದರಂತೆ ಇನ್ನೊಂದಿಲ್ಲ.ಕಾವ್ಯದ ಗುಣಗಳೇನು? ಹಿರಿಮೆಯೇನು? ಗರಿಮೆಯೇನು? ಲೋಕಾನುಭವದ ತಿಳುವಳಿಕೆಯೇನು?- ಎನ್ನುವ ಕವಿಯ ಕವಿತನ ಕಲಿಕೆತನ ಹಿರಿದಾಗಿದೆ.

        ನಾನಿಂದು ಕಾಣೆಯಾದ ನಗುವ ಚಂದಿರ ಪುಸ್ತಕವನು ಓದಿದೆ.ಕಲ್ಲ ಮೇಲಿನ ಪಾಚಿಯನು ಮೃದು ಹೆಜ್ಜೆಗಳಿಂದ ಸವರಿ ನಾಜೂಕಿನಲಿ ತೆಗೆದಂತೆ,ಹಿಡಿತ ವಿಹಿತದಲಿ  ಕೂಡಿದೆಂದು ಹೇಳಬಹುದು.

ಹಸಿದೊಡಲಿಗೆ ದುಡಿಯುವ ಕೈಗಳಿಗೆ ತುತ್ತು ಹಿಟ್ಟಾದರೆ ಸಾಕು

ಮೆಟ್ಟಿ ನಿಲ್ಲುತ್ತೇವೆ.

ನೀವೂ ಬದುಕುತ್ತೀರಿ

ಅನ್ನ ಕಸಿದು…..!

ದಾರಿಗುಂಟ ಮುಳ್ಳು ನೆಟ್ಟು

ನಾವೂ ಬದುಕುತ್ತೇವೆ

ನೋವುಗಳ ಮರೆತು

ನೆರಳ ಬಿತ್ತಿ”

ಸುತ್ತಲಿನ ಪರಸ್ಥಿತಿಗೆ ಕವಿಯ ಸೂಕ್ಷ್ಮ ಮನಸ್ಸು ತೋರಿದ ಸಹಜ ಬೇಗುದಿಯಿದು.ಸಾಮಾಜಿಕ ಕೇಡುಗಳಾದ ಅಸಮಾನತೆಯನ್ನು ಬಲವಾಗಿ ವಿರೋದಿಸಿದ್ದಾರೆ.ಅತೃಪ್ತಿಯ ಉರಿಯು ಜಾಗೃತಗೊಳಿಸಲು ಹತಾಶೆಯಿಂದ,ನೋವುಗಳ ಮರೆತು ಬದುಕಲು ಇನ್ನೇನೂ ಉಳಿದಿಲ್ಲವೆಂದು ರೋಷ-ನಿರಾಶೆಗಳ ದ್ವಂದ್ವವು,ಹೃದಯ ಕಲಕುವ ಮೂನ್ಸೂಚನೆಯಾಗಿದೆ.ಎದೆಯಲ್ಲಿ ಅಪರಿಮಿತ ನೋವು ತುಂಬಿದರೂ ನೆರಳಾಗಿರುತ್ತೇವೆ.,ದೈವವು ದುರಂತವಾದರೂ ಹೃದಯವಂತರಾಗಿ ಬದುಕುತ್ತೇವೆ ಎಂದು ತೀರಾ ಹತಾಶರಾಗಿ ಕವಿಯು ದುಃಖಿಸುತ್ತಾನೆ.ಜೀವನದ ಬೇರೆ ಬೇರೆ ಆಯಾಮಗಳಲ್ಲಿ ಚಿತ್ರಿಸಿದ ಸಾಲುಗಳು ಕವನ ಸಂಕಲನದ ಕೇಂದ್ರ ಬಿಂದುವಾಗಿವೆ.

ಬೇಟಾ……

ಅಮ್ಮಾಕು ಜರಾ ದವಾ ತಂಬಾss

ಕೆಮ್ಮು ಜೋರು ಐತಿ

ಮೈ ಪೈಸೆ ದೇತಾ ಹೂಂ

ತು ದುಖಾನ್ಗೆ ಬಂದು ಬಿಡು

ಬರುವದರೊಳಗೆ…….?

ಅತ್ತರಿನ ಪರಿಮಳಕೆ ಮೌನವಾಗಿದ್ದಾನೆ!”

ದುರಂತದ ಭಾವ.,ಬಂದದ್ದನ್ನು ಬಂದ ಹಾಗೆ ಬರೆದಿದ್ದಾರೆ.ಭಾವನೆಗೆ ನಿಲುಕಿದ್ದನ್ನು ನೇರವಾಗಿ ಓದುಗರ ಹೃದಯಕ್ಕೆ ತಾಗಿಸಿದ್ದಾರೆ.ಅಳಲು ತುಂಬಿದ ಮಾತುಗಳಲ್ಲಿ ತಂದೆಯು,ಮಗನಿಗೆ ಕೆಲಸದ ಸೂಚನೆ ನೀಡುತ್ತಾನೆ.ಮರಳಿ ಬರುವುದರೊಳಗೆ ಅಬ್ಬ ಶಾಂತವಾಗಿದ್ದಾನೆ.ಅತ್ತರಿನ ಪರಿಮಳವಿನ್ನೂ ಮಾಸಿಲ್ಲ ಹಾಗೇ ಇದೆ.ಬದುಕು ಯಾವ ಬಗೆಯದಾಗಿದೆ.ತಿರುಳಿಲ್ಲದ್ದು,ಒಂದೆಜ್ಜೆ ಮುಂದೆ ಹೋಗಬೇಕು ಎನ್ನುವ ತವಕದಲ್ಲೇ ಬದುಕು ಮುಗಿದು ಹೋಗುತ್ತದೆ.(ಕರೋನಾದ ದೈತ್ಯ ನಾಲಿಗೆಗೆ ಆಹುತಿಯಾದಂತೆ)ಮಾಯೆ ಯಾರನ್ನು ಬಿಟ್ಟೀತು-? ಎಂದು ಅಚಿತ್ರಣದ ಹಿಂದಿರುವ ಚಿತ್ರಣವನ್ನು ಕಾವ್ಯರೂಪದಲ್ಲಿ ಉಸಿರು ನಿಲ್ಲುವ ವಿಷಮತೆಯನ್ನು ಕವಿಗಳು ತಮ್ಮ ಉಸಿರಾಟದ ಏರಿಳಿತದಂತೆಯೇ ನಿಟ್ಟುಸಿರು ಬಿಟ್ಟಿದ್ದಾರೆ.

ಆಕಾಶದೂರಿನ ರಾಜ್ಯಕ್ಕೆ

ಇವನೊಬ್ಬನೆ ರಾಜನೆಂಬ

ಗರ್ವದ ಗಮ್ಮತ್ತು ತುಂಬಿದೆಯೋ

ಹಾಲ ಬೆಳದಿಂಗಳು ಚೆಲ್ಲಿ

ಪ್ರಕೃತಿಯೊಡಲಿಗೆ ತುಂಬು ಬಸುರಿಯ ಪಟ್ಟ ಕಟ್ಟಬೇಕಾದವನು

ಸೆಡವು ಮಾಡುತ್ತಿದ್ದಾನೆ”

ಕವಿಯ ಸಂವೇದನೆ ನಿಸರ್ಗಕೂ ವಿರುದ್ಧವೆ.,ಪೃಕೃತಿಯನು ಬಣ್ಣಿಸಬೇಕೆಂದೇನೂ ಇಲ್ಲ.ಭಾವನೆಯ ಪ್ರವಾಹ ನಿರಾಳವಾಗಿಸುವ ಭಾವುಕತೆಯಾಗಿದೆ.

ವಯಸ್ಸಿನ ತಂಗೀನ

ಮನಿಯಾಗಿಟಗಳದು ಚಲೋ ಅಲ್ಲ ತಮ್ಮ

ಸಂಜೀಕ ಬರತೀನಿ

ಹತ್ತು ಸಾವಿರ ಇಸಕಂಡು ಸಾವಕಾರರ ಹತ್ರ

ಮದುವೆಗೆ ಆಕೈತಿ….

ಇನ್ನೂ ಸಂಜಿಯಾಗಿರಲಿಲ್ಲ

ಹೆದ್ದಾರಿಯಲಿ ಕುರಿ ದಾಟಿಸುವಾಗ

ಲಾರಿಯ ಆರ್ಭಟಕೆ….!

ಹತ್ತಾರು ಕುರಿಗಳ ಜೊತೆಗೆ ಅಣ್ಣನೂ…….?

ರಕ್ತದ ಮಡುವಿನಲಿ ಹತ್ತಾರು ಸಾವು

ಮತ್ತೆ ಪಂಚೆಯಲಿದ್ದ ಹತ್ತು ಸಾವಿರ”

ಕವಿಯು ತಾನು ಕೇಳಿದ ಸತ್ಯವನೆ ಮೂಡಿಸಲಿ.ವಿಷಮ ಭಾರವನು ಮೂಕವಾಗಿ ಪ್ರಕಟಿಸುತ್ತಾನೆ.ಗಾಢ ನಿದ್ರೆಯಲ್ಲಿದ್ದವರಿಗೂ ತಟ್ಟನೆಚ್ಚರವಾಗಿ ರೋದಿಸುತ್ತಾರೆ.ಹೀಗೆ ಕವಿಯ ಅನುಭವ,ತೀವ್ರವಾದ ವಿಚಾರಗಳಿಗೆ ಬೆಲೆ ಕಟ್ಟಲಾಗದು. ” ಹೆಜ್ಜೆ ಮೂಡದ ಹಾದಿ” ನೆಲ ತಬ್ಬಿದ ಮುಗಿಲು”  *ಈ ಎರಡು ಸಂಕಲನದಲಿ ಸಂವೇದನೆಯ ವ್ಯಾಪ್ತಿ ಇದ್ದರೆ

ಕಾಣೆಯಾದ ನಗುವ ಚಂದಿರ  ಪುಸ್ತಕವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.ಕಾವ್ಯದ ಮಾತುಗಳು ಒಂದೇ ಸಾಲಿನಲಿ ಮಿಂಚಿ ಮಾಯವಾಗುವುದಿಲ್ಲ.ಗಹನವಾದ ಆಲೋಚನೆಗಳು ಸುಳಿದಾಡುತ್ತವೆ.ಈ ಸಂಕಲನವನು ಈ ಮುಂಚೆ ವಿಮರ್ಶೆ ಮಾಡಿದವರ ನುಡಿಗಳನು ಹೊರತುಪಡಿಸಿ ಅವಲೋಕನದ ನುಡಿ ಬರೆದಿರುವೆನು.ಓದುಗರು ಈ ಪುಸ್ತಕವನು ಕೊಂಡು ಹೋದಲಿ.ನನಗೂ ಸಾಹಿತ್ಯ ವ್ಯಾಸಂಗವಾದಂತಾಯಿತು.ವಿಷಯ ವಸ್ತುಗಳ ಆಯ್ಕೆ ಮಾಡಲು ವಿವೇಚನೆ ಸಿಕ್ಕಂತಾಯಿತು ಎಂದು ರಮೇಶ ಬನ್ನಿಕೊಪ್ಪರವರಿಗೆ ಶುಭ ಕೋರುತ್ತಾ,ಅವರ ಸಾಹಿತ್ಯದ ಮಾರ್ಗವು ಉಜ್ವಲವಾಗಲಿ.ಉಲುಸಾಗಿ ಬೆಳೆದು ಹಸಿರಾಗಿ ತೋರಲಿ ಎಂದು ಬಯಸುವೆ.

◆◆◆◆◆◆◆◆◆◆

ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

2 thoughts on “ನಾ ಓದಿದ ಪುಸ್ತಕ

  1. ಸುಂದರ ವಿರ್ಮಶೆ ಸಹೋದರ..ಕವಿಯ ಭಾವವನು ಎಳೆಎಳೆಯಾಗಿ ಪ್ರಸ್ತುತ ಪಡಿಸಿರುವಿ.ಹಾಗೂ ನಮಗೆ ಸಾಹಿತ್ಯದ ಔತಣಕೂಟ ಏರ್ಪಡಿಸಿದಂಗಾತು.ಅಭಿನಂದನೆಗಳು

  2. ಸುಂದರ ಅವಲೋಕನ,ಕವಿಯ ಅಂತರಾಳದ ಪ್ರತಿಧ್ವನಿ.ಸರ್

Leave a Reply

Back To Top