ಗಜಲ್
ಅಭಿಜ್ಞಾ ಪಿ ಎಮ್ ಗೌಡ
ಬದುಕು ಮಾಯೆಯ ಮಾಟ ಜಗದ
ನೋವಿನ ನೋಟ ಮರುಗುತಿದೆ ನೋಡಿ|
ಬೆಳಕು ಕಾಣದೆ ದುಃಖ ದುಮ್ಮಾನದ
ಹೊರೆಯ ಹೊತ್ತು ಜರುಗುತಿದೆ ನೋಡಿ||
ಹಗ್ಗದ ಮೇಲಿನ ಕಸರತ್ತು ಜೀವಕೆ ಆಪತ್ತು
ತಿಳಿದು ಕೂಡ ಬಾಳಬಂಡಿ ಎಳೆಯುತಿದೆ|
ಕುಗ್ಗದೆ ಜಗ್ಗದೆ ನಿಸ್ವಾರ್ಥ ಹಾದಿಯಲಿ
ದುಡಿದು ದಣಿದು ಕರಗುತಿದೆ ನೋಡಿ||
ಬಾಲಕಿ ದಿಟ್ಟತನಕೆ ಅಂತಃಕರಣ ಭಾವ
ಸೋತು ಬೆರಗಾಗಿ ಧನ್ಯತೆ ಮೆರೆದಿದೆ|
ಚಾಲಾಕು ಹುಡುಗಿ ಸೂಕ್ಷ್ಮ ನಡೆಯಲಿ
ಗುರಿಯ ತಲುಪಲು ಹೆಣಗುತಿದೆ ನೋಡಿ||
ಗೋಚರಿಸೊ ಎಡರು ತೊಡರು ಹೆಜ್ಜೆಗಳಲಿ
ಅನೂಹ್ಯ ನಿಲುಕದ ಗ್ರಹಚಾರ ಬಿಂಬಿಸಿದೆ|
ಶೋಚನಿಯ ಸ್ಥಿತಿ ಬೀದಿಗಳ ಪ್ರದರ್ಶನದಿ
ಎದ್ದು ಕಾಣಿಸುತ ಮಿನುಗುತಿದೆ ನೋಡಿ||
ಕ್ಷಣಕ್ಷಣವು ತೊಯ್ದಾಟ ಗಾಳಿಯ ತಳ್ಳಾಟ
ಭಯದ ಕರಿನೆರಳ ರಸ್ತೆಯಿರಲು ಅಭಿ|
ಮಣಭಾರ ತಲೆಯಲ್ಲಿ ತೋಲನ ತಪ್ಪದೆ
ಪಾದಗಳ ಇಟ್ಟು ಸೊರಗುತಿದೆ ನೋಡಿ||
******
ತುಂಬಾ ಚನ್ನಾಗಿದೆ ಮೇಡಂ