ಗಜಲ್
ಅಶೋಕ್ ಬಾಬು ಟೇಕಲ್
ಏ ಮನುಜ ನನ್ನನೇಕೆ ದೂಷಿಸುತ್ತಿರುವೆ ಇದು ನಿನ್ನ ಕರ್ಮಫಲ
ನೀನೇಕೆ ಭೂಮಂಡಲವನ್ನೇ ಭಕ್ಷಿಸುತ್ತಿರುವೆ ಇದು ನಿನ್ನ ಕರ್ಮಫಲ
ಹೇಗೆ ಅರ್ಥೈಸಲಿ , ಶಪಿಸಿದರೂ ರಕ್ಷಿಸಿದರೂ ಮನದ ತುಂಬಾ ವೇದನೆ
ಚರಾಚರಗಳ ಅಳಿವು ಉಳಿವಿಗೂ ಕಾರಣನಾಗುತ್ತಿರುವೆ ಇದು ನಿನ್ನ ಕರ್ಮಫಲ
ಕಾಲ ಮಿಂಚಿ ಹೋಗಿದೆ ದುಗುಡ ದೂರಾಗಲು ಇನ್ನಾದರೂ ನಿಸ್ವಾರ್ಥಿಯಾಗಬಾರದೇ
ಅಣು ಅಣುವಿನಲ್ಲೂ ಲಾಭ ನಷ್ಟದ ಲೆಕ್ಕ ಹುಡುಕುತ್ತಿರುವೆ ಇದು ನಿನ್ನ ಕರ್ಮಫಲ
ಮನುಷ್ಯತ್ವ ನೆಲೆಸಲಿ , ಆತ್ಮ ಸಾಕ್ಷಾತ್ಕಾರವೊಂದೇ ಸ್ವರ್ಗದ ಹಾದಿಗೆ ಕೈ ಮರ
ಕೋಟ್ಯಾನುಕೋಟಿ ಜೀವ ಜಂತುಗಳಿಗೆ ವಿಷ ಉಣಿಸುತ್ತಿರುವೆ ಇದು ನಿನ್ನ ಕರ್ಮಫಲ
ಅಧರ್ಮ ಪರಿಪಾಲಕನಾಗಿ ಅರಾಜಕತೆಗೆ ಸೂತ್ರಧಾರನಾಗುತ್ತಿರುವುದು ನ್ಯಾಯವೇ
ಧರ್ಮೋ ರಕ್ಷತಿ ರಕ್ಷಿತಃ ಎಂಬುದ ಮರೆತು ಮೆರೆಯುತ್ತಿರುವೆ ಇದು ನಿನ್ನ ಕರ್ಮಫಲ
ಅರಿಷಡ್ವರ್ಗಗಳಿಗೆ ಅಂಕುಶ ಹಾಕಿ ನೀ ವಿಶ್ವ ಮಾನವನಾಗು ಅಬಾಟೇ
ಪಂಚ ಭೂತಗಳ ಮುನಿಸಿನ ಕೈ ವಶವಾಗುತ್ತಿರುವೆ ಇದು ನಿನ್ನ ಕರ್ಮಫಲ
***************