ಅಂಕಣ ಬರಹ
ಚಿತ್ತಜನ್ಯ
ಯಾರ ದುಃಖವೂ ನಮ್ಮದಲ್ಲ…
ಇತ್ತೀಚೆಗೆ ಒಂಥರಾ ಮನಸು ಮುದುಡುತ್ತಿರುತ್ತದೆ. ಕಾರಣ ಗೊತ್ತು. ಆದರೆ ನಮ್ಮ ಕೈಲಿರುವ ಯಾವುದಕ್ಕಾದರೂ ಪರಿಹಾರ ಕಂಡುಕೊಳ್ಳುವುದು ಸುಲಭ. ಆದರೆ ನಮ್ಮ ಕೈಲಿಲ್ಲದವಕ್ಕೆ ಪರಿಹಾರ ಎನ್ನುವುದೇ ಮರೀಚಿಕೆ. ಮನಸ್ಸನ್ನು ಸಂತೈಸಿಕೊಂಡಷ್ಟೂ ಮತ್ತೆ ಮತ್ತೆ ಕಲಕಿಬಿಡುವ ಘಟನೆಗಳು ಎದುರಾಗಿಬಿಡುತ್ತವೆ. ದಿನಾ ಪ್ರೀತಿಯಿಂದ ಮಾತನಾಡುತ್ತಿದ್ದವರೇ ಕಿಟಕಿ ಬಾಗಿಲು ಮುಚ್ಚಿಕೊಂಡು ಇದ್ದೂ ಇಲ್ಲದವರಂತಾಗಿಬಿಡುತ್ತಾರೆ. ಅವರ ಸಮಯವನ್ನ ಆಗಾಗ ಪಡೆದ ನಮಗೆ ಅವರೇನಾದರೋ ಎನ್ನುವ ಚಿಂತೆ. ಒಂದು ಸಣ್ಣ ಅಳು ಕೇಳಿಸಿಬಿಟ್ಟರೆ ನಮ್ಮ ಚಡಪಡಿಕೆ ಹದ್ದು ಮೀರುತ್ತದೆ. ಆದರೆ ನಾವು ಹೊಸಿಲು ದಾಟದವರಾಗುತ್ತೇವೆ… ಒಂದು ವೇಳೆ ದಾಟಿ ಅವರ ಅಂಗಳ ತಲುಪಿದರೂ ಅವರ ದುಃಖದಲ್ಲಿ ಪಾಲುಪಡೆಯುವುದು ಕಷ್ಟ ನಮಗೆ. ಅವರು ಹಂಚಿಕೊಳ್ಳುವಷ್ಟು ನಾವು ಅವರಿಗೆ ಹತ್ತಿರವಾಗಿಲ್ಲ!
ದೂರ ನಿಂತರೆ ದುಃಖವಿರಲಿ ಒಬ್ಬರ ಸಂತೋಷವೂ ನಮ್ಮದಾಗುವುದಿಲ್ಲ. ಇತರರ ಸಂತೋಷ ಕಂಡು ಕರುಬುತ್ತೇವೆ. ಮತ್ತೆ ಅವರ ಸಂತೋಷವನ್ನು ನಮ್ಮ ಸಂಭ್ರವಾಗಿಸಿಕೊಳ್ಳುವಲ್ಲಿ ನಾವು ಸೋಲುತ್ತೇವೆ. ಮತ್ತೊಬ್ಬರ ಸಂತೋಷವೇ ನಮ್ಮದಲ್ಲದ ಮೇಲೆ ಯಾರ ದುಃಖವೂ ನಮ್ಮದಲ್ಲ. ಯಾರೊಂದಿಗಾದರೂ ಸರಿ ಸಂತೋಷವನ್ನು ಹಂಚಿಕೊಂಡಷ್ಟು ಸುಲಭವಲ್ಲ ದುಃಖವನ್ನು ಹಂಚಿಕೊಳ್ಳುವುದು. ದುಃಖವನ್ನು ಹಂಚಿಕೊಳ್ಳಲಿಕ್ಕೆ ಸಂಬಂಧದ ಬಂಧ ಎರಡು ಬದಿಯಿಂದಲೂ ಬಿಗಿಯಾಗಿರಬೇಕಾಗುತ್ತದೆ. ಹಾಗೆ ಬಿಗಿಗೊಳ್ಳಲಿಕ್ಕೆ ಬೇಕಾದ ಮಾನವೀಕ ಅವಕಾಶವನ್ನೇ ನಾವು ನಿರಾಕರಿಸುತ್ತಿದ್ದೆವು ಇಲ್ಲಿಯವರೆಗೂ. ಈಗ!? ವಿಚಿತ್ರವೆಂದರೆ ಅದರ ಚಕ್ರವ್ಯೂಹದಿಂದ ಹೊರಬರಲಾಗದಾಗಿದ್ದೇವೆ. ಯಾವುದನ್ನು ನಿರಾಕರಿಸಿ ಮಿಥ್ಯ ಗರ್ವದಿಂದ ಬದುಕುತ್ತಿದ್ದೆವೋ, ಅದನ್ನೀಗ ಹಂಬಲಿಸಿದರೂ ಪಡೆಯಲಾಗದ ಕ್ರೂರ ವಿಧಿಯೊಂದಿಗೆ ಗರ್ವವನ್ನು ಪಣಕ್ಕಿಟ್ಟು ಕಸುವಿಲ್ಲದ ರಟ್ಟೆಗಳೊಂದಿಗೆ ಹೋರಾಡಬೇಕಾಗಿದೆ.
ಹಿಟ್ಲರನ ಕಾಲದಲ್ಲಿ ಗುಂಡಿನ ಶಬ್ದಕ್ಕೆ ಹೆದರಿದಷ್ಟೇ ಭಯದ ವಾತಾವರಣದಲ್ಲಿ ನಾವಿಂದು ಬದುಕುತ್ತಿದ್ದೇವೆ ಅನಿಸುತ್ತದೆ. ನಮ್ಮ ನಮ್ಮ ಅಡಗುದಾಣಗಳಲ್ಲಿ ನಾವು ಬಚ್ಚಿಟ್ಟುಕೊಳ್ಳುತ್ತಿದ್ದೇವೆ. ಒಬ್ಬರಿಗೊಬ್ಬರು ಎದಿರಾಗುವುದಿಲ್ಲ. ಕೈ ಕುಲುಕುವುದಿಲ್ಲ. ಸ್ನಿಗ್ಧ ನಗೆ ಬೀರುವುದಿಲ್ಲ. ಎಲ್ಲರ ಮುಖದಲ್ಲೂ ಆತಂಕದ ಎಳೆಗಳು ಅಚ್ಚೊತ್ತಿವೆ. ಆದರೆ ನಮ್ಮದು ಗಾಳಿಯೊಂದಿಗಿನ ಗುದ್ದಾಟ. ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಸಣ್ಣ ವಯಸ್ಸಿನ ವೈದ್ಯರೊಬ್ಬರು ಕೋರೋನಾ ಕಾಲದ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡರು ಎಂದು ಓದಿದಾಗ ವಿಚಿತ್ರ ನೋವಾಗಿತ್ತು. ಅದರ ತೀವ್ರತೆಯನ್ನು ಅಂದಾಜಿಸಲು ಸೋತಿದ್ದೆ. ಆದರೆ ನಮ್ಮ ಪರಿಸ್ಥಿತಿಯೂ ತೀವ್ರವಾಗುತ್ತಿದೆ. ನಾವು ವಾಸಿಸುತ್ತಿರುವ ಬೀದಿಯ ಮುಕ್ಕಾಲುವಾಸಿ ಮನೆಗಳಿಗೆ ಕೊರೋನಾ ಲಗ್ಗೆ ಇಟ್ಟಿದೆ. ಎಲ್ಲೇ ಸಣ್ಣ ಅಳು ಕೇಳಿಸಿದರೂ ಎದೆಬಡಿತ ಹೆಚ್ಚಾಗುತ್ತದೆ.
ನೆನ್ನೆ ಮಧ್ಯಾಹ್ನ ಸುಮ್ಮನೆ ಮನೆಯಲ್ಲಿ ಕೆಲಸ ಮಾಡುತ್ತಿದ್ದವಳಿಗೆ ಯಾರೋ ಒಂದಷ್ಟು ಜನ ಜೋರಾಗಿ ಅಳುತ್ತಿರುವ ಶಬ್ದ ಕೇಳತೊಡಗಿತು. ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಾ ಯಾವ ಮನೆಯಿಂದ ಶಬ್ದ ಬರುತ್ತಿದೆ ಎಂದು ಹುಡುಕುತ್ತಾ ಮನೆಯ ಸುತ್ತಮುತ್ತ ಅಲೆಯತೊಡಗಿದೆ. ಕೊನೆಗೆ ಹಿಂದಿನ ಮನೆಯಿಂದ ಮಕ್ಕಳು ಮತ್ತು ಮನೆ ಮಂದಿ ಅಳುತ್ತಿರುವ ಶಬ್ದ ಕೇಳಿಬರುತ್ತಿತ್ತು. ಹಿಂದಿಯೇ ನಾಲ್ಕಾರು ಜನ ಸೇರಿ ಆ ಮನೆಯ ಹೆಣ್ಣುಮಗಳೊಬ್ಬಳನ್ನು ಹೊತ್ತೊಯ್ಯುತ್ತಿದ್ದರು. ನನ್ನ ಎದೆಬಡಿತ ಇನ್ನೂ ಹೆಚ್ಚಾಯಿತು. ಕಣ್ಣಿಂದ ಒಂದಷ್ಟು ಹನಿಗಳು ಅನುಮತಿಯಿಲ್ಲದೇ ಅತಿಕ್ರಮವಾಗಿ ಉರುಳಿದವು. ಒಂದಷ್ಟು ಹೊತ್ತು ಕಳೆದೇ ಹೋಯಿತು ಶೂನ್ಯವಾಗಿ. ಯಾವ ರೀತಿಯ ಅನುಭೂತಿ ಇಲ್ಲದಂತೆ. ಅರಿವಾಗತೊಡಗಿದಾಗ ಮತ್ತೆ ಕಣ್ಣೀರು.
ನೆರೆ ಮನೆಯವರ ಪತಿಗೆ ಕೋರೋನಾ ಪಾಸಿಟೀವ್. ಅವರ ಹೆಂಡತಿಗೂ ಲಕ್ಷಣಗಳು ಗೋಚರಿಸುತ್ತಿವೆ. ಯಾಕೋ ಹೊಟ್ಟೆ ಚುಳ್ ಎನ್ನುತ್ತಲೇ ಇದೆ. ಏನಾದರೂ ಮಾಡಲೇ ಬೇಕೆನಿಸಿ ಬಟ್ಟೆ ಒಗೆಯಲು ಹೊರಟೆ. ಆ ನೆರೆ ಮನೆಯಾಕೆ ಆಸ್ಪತ್ರೆಯಿಂದ ಬರುತ್ತಿರುವುದು ಕಾಣಿಸಿತು. ಆಕೆ ಹಾಗೆ ಇಳಿದು ನಡೆದು ಒಳಹೋದಳು. ಮನಸಿನದೊಂದೇ ಪ್ರಾರ್ಥನೆ. ಆಕೆ ಬೇಗ ಗುಣವಾಗಲಿ ಎಂದು. ಈ ಬೀದಿ ಸೋಂಕಿನ ಜೊತೆಗೆ ಸಾವನ್ನೂ ಕಂಡಿದೆ. ಎಲ್ಲೇ ಒಂದು ಕೇಸ್ ಬಂದರೂ ಮನಸು ಕೆಟ್ಟದ್ದನ್ನು ನೆನೆದು ಅಳುತ್ತದೆ. ಯಾಕೋ ಅನುಮಾನ ಕಾಡುತ್ತದೆ. ಕೊರೋನ ಕಾಯಿಲೆಯಾಗಲ್ಲದೆ ಖಿನ್ನತೆಯ ರೂಪದಲ್ಲೂ ನಮ್ಮನ್ನು ಕೊಲ್ಲಲು ಸಂಚು ಹೂಡುತ್ತಿದೆಯೇನೋ ಎಂದು.
ಆದರೆ ಇಂತಹ ಅದೆಷ್ಟು ಯುದ್ಧಗಳನ್ನು ಕಂಡಿಲ್ಲ ನಾವು! ಇನ್ನು ಇದನ್ನೂ ಗೆಲ್ಲುತ್ತೇವೆ. ಧೈರ್ಯವಷ್ಟೇ ನಮ್ಮ ಆಯುಧವಾಗಬೇಕಿದೆ ನಮಗೀಗ. ಹೋದ ವರ್ಷದಿಂದ ಮನೇಲಿರೋದು ರೂಢಿಯಾಗಿಬಿಟ್ಟಿದೆ. ನನಗೆ ಮೊದಲಿಂದಲೂ ಮನೇರೋದಂದ್ರೆ ಇಷ್ಟ. ನನ್ನದೇ ಏಕಾಂತ ಸೃಷ್ಟಿಸಿಕೊಂಡು ನನ್ನ ಲೋಕದೊಳಗೆ ನಾನು ಮುಳುಗಿಬಿಡುತ್ತೇನೆ. ಸಂಗೀತವನ್ನು ಪುನರಾವರ್ತನೆ ಮಾಡಿಕೊಳ್ಳುತ್ತಿದ್ದೇನೆ. ಸ್ವಲ್ಪ ಹೊತ್ತು ಯೋಗ ಮಾಡುತ್ತೇನೆ. ಮಗಳ ಜೊತೆ ಕಾಲ ಕಳೆಯುತ್ತೇನೆ. ನ್ಯೂಸ್ ಚ್ಯಾನಲ್ ಗಳನ್ನು ಹೆಚ್ಚು ನೋಡುವುದಿಲ್ಲ. ಆರೋಗ್ಯವನ್ನು ಸ್ಥಿರವಾಗಿಟ್ಟುಕೊಳ್ಳಲಿಕ್ಕೆ ಬೇಕಾದಷ್ಟು ವಿಷಯಗಳನ್ನು ಅನುಸರಿಸುತ್ತೇನೆ. ಸಾಧ್ಯವಾದಷ್ಟು ಗೆಳೆಯರೊಂದಿಗೆ ಫೋನ್ ಮಾಡಿ ಮಾತನಾಡುತ್ತೇನೆ. ಒಂದಷ್ಟು ಕೆಲಸಗಳನ್ನು ಮುಂದಕ್ಕೆ ಹಾಕದೆ ಮಾಡುತ್ತೇನೆ. ನನ್ನನ್ನು ನಾನು ಕ್ರಿಯಾಶೀಲವಾಗಿಟ್ಟುಕೊಳ್ಳಲು ಬೇಕಾದುದನ್ನು ನಿತ್ಯ ಮಾಡುತ್ತೇನೆ. ಇದರಿಂದ ಎಂಥದೋ ನೆಮ್ಮದಿ ಸಿಗುತ್ತದೆ. ಮತ್ತದು ನಾಳೆಯ ಬಗ್ಗೆ ಭರವಸೆಯನ್ನೂ ತುಂಬುತ್ತದೆ.
ಎದುರು ಮನೆಗೆ ಪುಟ್ಟ ಕೂಸೊಂದರ ಆಗಮನವಾಗಿದೆ. ಮಾಸ್ಕ್ ಧರಿಸಿಕೊಂಡು ಹೋಗಿ ದೂರ ನಿಂತು ಮಗುವನ್ನೇ ನೋಡಿದೆ. ಯಾಕೋ ನಾವೆಲ್ಲ ಪಾಪಿಗಳು ಎನ್ನಿಸಿಬಿಟ್ಟಿತು. ಈ ಕಂದ ಅವಕಾಶ ಸಿಕ್ಕರೆ ಬಹುಶಃ ಮೊಂದೊಂದು ದಿನ ನಮ್ಮನ್ನೆಲ್ಲ ಗಲ್ಲಿಗೇರಿಸಬಹುದು ಎನಿಸಿತು. ಈ ಪ್ರಪಂಚ ನನಗೂ ಸೇರಿದೆ. ಆದರೆ ನಾನು ಬರುವ ಮುಂಚೆಯೇ ಅದನ್ನು ಹಾಳು ಮಾಡುವ ಅಧಿಕಾರವನ್ನು ನಿಮಗೆ ಕೊಟ್ಟವರಾರು ಎಂದು ಅದು ಕೇಳುವ ಪ್ರಶ್ನೆಗೆ ನಮ್ಮಲ್ಲಿ ಉತ್ತರವಾದರೂ ಎಲ್ಲಿದೆ…
ಹಿಂದೆ ಆಗಿದ್ದರೆ ಆ ಹಸುಗೂಸನ್ನು ಎತ್ತಿಕೊಂಡು ಮುದ್ದು ಮಾಡುತ್ತಿದ್ದೆ. ಆದರೆ ಈಗ ಮುಟ್ಟಲೂ ಭಯ. ದೂರವೇ ಕುಳಿತು ಅದರ ಅಮ್ಮನೊಂದಿಗೆ ಮಾತನಾಡಿದೆ. ಅದರ ಅಮ್ಮನಲ್ಲಿ ತನ್ನ ಕೂಸನ್ನು ಜೋಪಾನ ಮಾಡಿಕೊಳ್ಳುವ ಆತಂಕ. ನನಗೆ ತಿಳಿದಿದ್ದನ್ನೆಲ್ಲಾ ಹೇಳಿದೆ. ಮಗು ಬಿಗಿಯಾಗಿ ಕಣ್ಣು ಮುಚ್ಚಿ ತುಟಿ ಮುಚ್ಚಿ, ಮುಷ್ಟಿ ಬಿಗಿ ಹಿಡಿದು ಮಲಗಿತ್ತು. ಹಾಗೆ ನೋಡನೋಡುತ್ತಲೇ ನಿದ್ದೆಯಲ್ಲಿ ಸಣ್ಣಗೆ ನಕ್ಕಿತು. ನಾಳೆಯ ಬಗ್ಗೆ ಸಣ್ಣದೊಂದು ಕನಸು ಕಟ್ಟಲು ಈ ನಗುವೇ ಸಾಕು ಅನ್ನಿಸಿತು.
ಮತ್ತೆ ಏನೇನೋ ವಿಚಾರಗಳಿವೆ ಬರೆಯಲಿಕ್ಕೆ. ಆದರೆ ಬರೆಯ ಹೊರಟ ಕೂಡಲೇ ಅದು ಸುತ್ತಿ ಸುತ್ತಿ ಸುಳಿದು ಮತ್ತದೇ ದಾರಿಗೆ ಹೊರಳಿಬಿಡುವುದು ಪರಿಸ್ಥಿತಿಯ ನಾವು ತಳ್ಳಿ ಹಾಕಲಾಗದ ಪ್ರಭಾವವೇ ಇರಬಹುದು. ಅದನ್ನು ಮೀರಬೇಕಾದ ಸಾವಾಲೊಂದು ಮುಂದೆ ಕುಳಿತಿದೆ. ಅದನ್ನೀಗ ಮೀರಲೇಬೇಕಿದೆ…
******
ಆಶಾ ಜಗದೀಶ್
ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ