ಅಕ್ಕನೆಂಬ ಹುರುಪು

ಕಥೆ

ಅಕ್ಕನೆಂಬ ಹುರುಪು

ಶೀಲಾ ಭಂಡಾರ್ಕರ್

Black and White Canvas Art - iCanvas

.

ಬೆಳಗಿನ ಜಾವ ಬಸ್ಸಿಳಿದು ಆಟೋ ಹತ್ತಿ ಬಂದು ಅಮ್ಮನ ಮನೆಯ ಹತ್ರ ಇಳಿಯುವಾಗ ಫಕ್ಕನೆ ದೃಷ್ಟಿ ಸಾವಿತ್ರಿ ಮಾಯಿಯ ಮನೆ ಮುಂದಿನ ತೋಟದಲ್ಲಿ ಹೂ ಕೊಯ್ಯುತ್ತಿರುವ ಕೆಂಪು ಸೀರೆ ಉಟ್ಟು ತಲೆ ಮೇಲೆ ಸೆರಗು ಹಾಕಿಕೊಂಡವರ ಮೇಲೆ ಹೋಯಿತು. ಹಾಗೆ ಮಡಿ ಮಾಡಿಸಿಕೊಳ್ಳುವುದು ಅಪರೂಪವಾದ ಈ ಕಾಲದಲ್ಲಿ ಅಂದರೆ ನಾನಿದು ಹೇಳುತ್ತಿರುವುದು ಇಪ್ಪತ್ತು ವರ್ಷಗಳ ಹಿಂದಿನ ಮಾತು, ಯಾರಿರಬಹುದು ಎಂದು ಯೋಚಿಸುತ್ತಾ ಮನೆಯೊಳಗೆ ಹೋದ ಕೂಡಲೇ ಪ್ರಪಂಚವೇ ಬದಲಾಯ್ತು. ಮಗಳು ಅಮ್ಮನ ಸೊಂಟ ಏರಿದಳು. ಅಮ್ಮ ಬಿಸಿ ಬಿಸಿ ಕೊಟ್ಟೆ ಕಡುಬು, ಕಾಯಿ ಚಟ್ನಿ ಮಾಡಿಟ್ಟಿದ್ದರು. ಬೇಗ ಸ್ನಾನ ಮಾಡಿ ಬಂದು ತಿಂದು ಅಮ್ಮನ ಜೊತೆ ಹರಟೆಗೆ ಕೂತೆ.

ಮಾತಿನ‌ ನಡುವೆ ಅಮ್ಮ ಪಕ್ಕದ ಮನೆ ಸಾವಿತ್ರಿ ಮಾಯಿಯ ಸೋದರತ್ತೆ ಬಂದಿದಾರೆ ಒಂದೆಂಟು ದಿನ ಇರುತ್ತಾರಂತೆ.

ತಲೆ ಮೇಲೆ ಸೆರಗಿನ ಮಡಿ ಹೆಂಗಸು ಕಣೆ. ಆದರೆ ಉತ್ಸಾಹಕ್ಕೇನೂ ಕಮ್ಮಿ ಇಲ್ಲ. ಅಡುಗೆ ಮಾಡಿದರೆ  ಅದೆಂಥಾ ರುಚಿ ಅಂತಿಯಾ. ಹಾಗಲಕಾಯಿಯಲ್ಲೇ ಸುಮಾರು ಹತ್ತು- ಹದಿನೆರಡು ಬಗೆ ಮಾಡುತ್ತಾರಂತೆ, ಸಂಜೆ ಹೊತ್ತು ಭಜನೆ ಅದೆಷ್ಟು ಚಂದ ಮಾಡುತ್ತಾರೆ ಗೊತ್ತಾ? ನೀನು ಬಂದಾಗಲೇ ಅವರಿದ್ದಿದ್ದು ಒಳ್ಳೆಯದಾಯಿತು ಅಂದರು. ಪ್ರಯಾಣದ ಆಯಾಸ, ಕಣ್ಣುಗಳಲ್ಲಿ ನಿದ್ದೆ ಎಳೆಯುತಿದ್ದುದರಿಂದ ಬೆಳಿಗ್ಗೆ ನೋಡಿದೆ ಅವರನ್ನು ಎಂದಷ್ಟೇ ಹೇಳಿದೆ.

ಮದ್ಯಾಹ್ನ ಊಟ ಮುಗಿಸಿ ಅಡ್ಡಾಗಿ ಎದ್ದೆ.

ಮಗಳು ಹೇಗೂ ಅಮ್ಮನನ್ನು ಅಂಟಿಕೊಂಡಿರುವುದರಿಂದ ನನಗೂ ಒಂದ್ಸಲ್ಪ ಮೈ ಹಗುರವಾಯಿತು ಎಂದು ಸಂಜೆ ಮನೋಹರ ಟೆಕ್ಸ್‌ಟೈಲ್ಸ್ ಅಲ್ಲಿ ಕಾಟನ್ ಸೀರೆ ಬಂದೆದೆಯೇನೊ ನೋಡಿಕೊಂಡು ಬರೋಣವೆಂದು ಹೊರಟೆ‌.

ಮನೆ ಮುಂದಿನ ಕಟ್ಟೆಯ ಮೇಲೆ ಸೋದರತ್ತೆಯ ಜೊತೆ ಸಾವಿತ್ರಿ ಮಾಯಿಯೂ ಕೂತಿದ್ದು ಕಂಡು ಹತ್ತಿರ ಹೋದೆ. ಬಂದ್ಯಾ? ಅಮ್ಮ ಹೇಳಿದ್ರು ನೀ ಬರ್ತಿ ಅಂತ ಎಂದು ಹೇಳಿ. ಗೋದಕ್ಕ, ಇವಳು ಇಂದಿರಕ್ಕನ ಮಗಳು ಎಂದರು.

ಮೈಸೂರಿನವಳಾ? ಗೋದಕ್ಕ ಕೇಳಿದಾಗ ಹೋ..ಆಗಲೇ ಎಲ್ಲಾ ವರದಿ ಆಗಿದೆ ಅಂದುಕೊಂಡೆ.

ಎಲ್ಲಿ ಹೊರಟೆ ಎಂದು ಸಾವಿತ್ರಿ ಮಾಯಿ ಕೇಳಿದರು. ಜವಳಿ ಅಂಗಡಿಗೆ ಹೋಗೋಣ ಅನಿಸಿತು. ಆದರೆ ನಾಳೆ ಹೋದರಾಯ್ತು ಬಿಡಿ ಎಂದು ನಾನೂ ಅಲ್ಲೇ ಜಗಲಿ ಮೇಲೆ ಕೂತುಕೊಂಡೆ.

ಅದೂ ಇದೂ ಮಾತನಾಡುತ್ತಾ ದೇವರ ದೀಪ ಹಚ್ಚೋ ವೇಳೆಯಾಯ್ತೆಂದು ಎದ್ದಾಗ ಭಜನೆ ಮಾಡುತ್ತೀರಾ? ನಾನೂ ಕೇಳುತ್ತೇನೆ ಎಂದು ಅವರ ಜೊತೆಗೆ ಒಳಗೆ ಹೋಗಿ ಕೂತೆ.

ಸೋದರತ್ತೆಗೆ ಅಕ್ಕ ಎಂದು ಸಂಭೋದಿಸುವುದು ನಮ್ಮಲ್ಲಿ ರೂಢಿ ಇರುವುದರಿಂದ ನಾನೂ ಅವರನ್ನು ಗೋದಕ್ಕ ಎಂದೇ ಕರೆದೆ. ಗೋದಾವರಿ ಇರಬಹುದು ಅವರ ಹೆಸರು.

ಗೋದಕ್ಕ ಭಜನಾರಂಭಿಯಿಂದ ಶುರು ಮಾಡಿ ಮೊದಲ್ ವಂದಿಪೆ, ಭಾಗ್ಯದ ಲಕ್ಷ್ಮಿ ಬಾರಮ್ಮಾ, ಹೂವ ತರುವರ ಮನೆಗೆ, ಹೂ ಬೇಕೇ ಪರಿಮಳದಾ ಒಂದಾದ ಮೇಲೊಂದು ಭಜನೆ ಸುಶ್ರಾವ್ಯವಾಗಿ ಹಾಡುತ್ತಿರುವಾಗ ಯಾವುದೋ ಲೋಕಕ್ಕೆ ಹೋದ ಅನುಭವವಾಯ್ತು. ನೀನೂ ಒಂದು ಹಾಡು ಎಂದಾಗಲೇ ಎಚ್ಚರವಾಯ್ತು. ಗಡಬಡಿಸಿ ರಾಮನಾಮ ಪಾಯಸಕ್ಕೆ ಹಾಡಿದೆ. ಚಂದ ಹಾಡ್ತಿ. ಈ ಧಾಟಿಯಲ್ಲಿ ಕೇಳಿರಲಿಲ್ಲ ಇಷ್ಟವಾಯ್ತು ಅಂದರು. ಇನ್ನೊಂದು ಧಾಟಿಯಲ್ಲೂ ಬರುತ್ತೆ ಎಂದು ಹಾಡಿ ತೋರಿಸಿದಾಗ ಅವರು ತಾನು ಹಾಡುವ ರೀತಿಯಲ್ಲಿ ಹಾಡಿ ನಂತರ ನಿನ್ನ ರಾಗವನ್ನು ನನಗೆ ಹೇಳಿಕೊಡು ನಾಳೆ ಕಲಿತುಕೊಳ್ಳಬೇಕು ನಾನು ಎಂದರು.

ನನಗೂ ನಿಮ್ಮ ಅಡುಗೆಗಳನ್ನು ಬರೆದುಕೊಳ್ಳಲಿದೆ ನಾಳೆ ಮದ್ಯಾಹ್ನ ಬರಲೇ? ಮಲಗುತ್ತೀರೇನೋ ಎಂದೆ. ಇಲ್ಲ ಊಟ ಮುಗಿಸಿ ಬಾ ನಾನು ಮಲಗಲ್ಲ ಅಂದರು.

ಮರುದಿನ ಮದ್ಯಾಹ್ನ ಊಟ ಆದ ಕೂಡಲೇ ಕೈಗೆ ಸಿಕ್ಕಿದ ಯಾವುದೋ ಹಳೆಯ ಡೈರಿ ತಗೊಂಡು ಸಾವಿತ್ರಿ ಮಾಯಿಯ ಮನೆ ಕಡೆ ನಡೆದೆ.

ಗೋದಕ್ಕನೂ ನನ್ನ ದಾರಿಯನ್ನೇ ಕಾಯುತಿದ್ದರು. ಮೊದಲು ಅವರಿಗೆ ಭಜನೆ  ಹಾಡಿ ತೋರಿಸಿದ ನಂತರ ಅವರು ಅದನ್ನು ಮತ್ತೆ ಮತ್ತೆ ಹಾಡಿ ಕೇಳಿ ತಿಳಿದುಕೊಳ್ಳುವ ರೀತಿಗೆ ಮನಸೋತು ಹೋಯಿತು. ಮಗುವಿನಂತಹ ಉತ್ಸಾಹ ಅವರಲ್ಲಿತ್ತು.

ವಯಸ್ಸು ಎಪ್ಪತ್ತು ವರುಷವೇನೋ ದಿನದ ಪ್ರತೀ ನಿಮಿಷವನ್ನೂ ಜೀವಿಸುತ್ತಿರುವ ಅವರ ಪರಿಗೆ ನಮಗೇ ನಾಚಿಕೆಯಾಗಬೇಕು.

ಅಡುಗೆ ವಿಧಾನಗಳನ್ನು ತಿಳಿಸಿ ನಾನು ಬರೆದುಕೊಳ್ಳುತ್ತೇನೆ. ಹಾಗಲಕಾಯಿದ್ದೇ ಹೇಳಿ ಮೊದಲಿಗೆ ಅಂದೆ. ಕೂಡಲೇ,  ಮೊದಲಿಗೆ ಯಾವುದಾದರು ಸಿಹಿ ತಿಂಡಿ ಬರೆಯಬೇಕಿತ್ತೇನೋ ಅನಿಸಿತು, ನಾನು ಅಂದುಕೊಂಡಿದ್ದು ಅವರಿಗೆ ಕೇಳಿಸಿತೋ ಎಂಬಂತೆ, ಹಾಗಲಕಾಯಿಯೆಂದು ಸಸಾರ ಮಾಡುವ ಹಾಗಿಲ್ಲ. ಮನಸಿಟ್ಟು ಮಾಡಿದರೆ ಯಾವ ಅಡುಗೆಯಾದರೂ ಚೆನ್ನವೇ ಎಂದರು.

ಸರಿ ಎಂದು ತಲೆ ಆಡಿಸಿದೆ. ಒಂದೊಂದಾಗಿ ಅಡುಗೆಗಳ ಬಗ್ಗೆ ಅವರು ರಸವತ್ತಾಗಿ ತಿಳಿಸುವಾಗ ಎಂಥಾ ವಿಷಯದೊಳಗೂ ಜೀವ ತುಂಬುವ ಕಲೆ ಇವರಿಗಿದೆಯಲ್ಲಾ ಎಂದುಕೊಂಡೆ. ಬರೆದುಕೊಂಡಷ್ಟು ಮುಗಿಯದು. ಹೇಳಿದಷ್ಟೂ ಅವರ ಬಳಿ ಮುಗಿಯದಷ್ಟು ಸರಕು ಇತ್ತು. ಅವರೂ ದಣಿಯಲಿಲ್ಲ.

ತಡೆಯದೇ ಹೇಳಿ ಬಿಟ್ಟೆ, ಗೋದಕ್ಕ ನೀವೊಂದು ಅದ್ಭುತ ವ್ಯಕ್ತಿತ್ವ. ನಿಮ್ಮ ಜೊತೆ ಇದ್ದರೆ ಜೀವಿಸುವ ಉತ್ಸಾಹ ಹೆಚ್ಚುತ್ತದೆ ಅಂದೆ.

“ನಾನು ಮೊದಲಿನಿಂದಲೂ ಹೀಗೆಯೇ. ಆದರೇನು ಮಾಡುವುದು ಹೋರಾಡಿ ಹಠ ಹಿಡಿದು ಬೇಡವೆನಿಸಿದ್ದನ್ನು ಬೇಡವೆಂದು ಸಾಧಿಸಿದರೂ.. ಆಮೇಲೆ ದಕ್ಕಿದ್ದೂ ಇಷ್ಟೇ. ಹಾಗೆಂದು ಇರುವ ಆಯುಷ್ಯವನ್ನಂತೂ ಕಳೆಯಲೇಬೇಕಲ್ಲಾ. ಹೀಗಾಯ್ತು, ಇನ್ನೊಂದಾಯ್ತು ಎಂದು ನಾವೂ ಕೊರಗಿ, ಉಳಿದವರಿಗೂ ನಮ್ಮ ರೋದನೆಯನ್ನು ಹಂಚುವ ಬದಲಿಗೆ ಮಾಡುವ ಕೆಲಸವನ್ನೇ ಉತ್ಸಾಹದಿಂದ ಮಾಡಬೇಕು. ಇದು ನನ್ನ ಸ್ವಭಾವ.”

ಅವರು ನಕ್ಕು ನನ್ನ ಮುಖ ನೋಡಿದಾಗ, ಏನು ಹಠ, ಯಾವ ಹೋರಾಟ ಮಾಡಿದ್ರಿ ಅಂದೆ ಕುತೂಹಲದಿಂದ.

ಅದೊಂದು ಕತೆ. ನಾಳೆ ಹೇಳುತ್ತೇನೆ ಅಂದರು.

ನನಗೂ ಮದ್ಯಾಹ್ನದ ಹೊತ್ತು ಬೇಸರ ನೀಗಿದ ಹಾಗೆ ಆಯ್ತು. ಗೋದಕ್ಕನ ಉಮೇದಿಗೆ ಸರಿ ಸಾಠಿ ಇಲ್ಲ. ಅದನ್ನೊಂದಿಷ್ಟು ನಾನೂ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಅಡುಗೆ ಮಾಡುವ ರೀತಿಯನ್ನೇ ಅಷ್ಟು ಚಂದವಾಗಿ ವಿವರಿಸುವಾಗ ಅವರ ಜೀವನದ ಕತೆ ಇನ್ನೆಷ್ಟು ಸುಂದರವಾಗಿ ಹೇಳಬಹುದು. ನಾಳೆಯ ನಿರೀಕ್ಷೆಯಲ್ಲೇ ಇದ್ದೆ. ಅಮ್ಮನ ಬಳಿಯೂ ಹೇಳಿದೆ. ಅದಕ್ಕವರು ನಿನಗೆ ಬರೆಯುವ ಹುಚ್ಚಿದೆಯಲ್ಲಾ, ಸರಕು ಸಿಕ್ಕಿತು ಬಿಡು. ಎಂದು ಖುಷಿಯಿಂದ ನಕ್ಕರು.

ಮಾರನೆಯ ದಿನ ಮತ್ತೆ ನನ್ನ ವಲಸರಿ ಸಾವಿತ್ರಿ ಮಾಯಿ ಮನೆ ಕಡೆ ನಡೆಯಿತು.

ಹೊರ ಜಗಲಿಯ ಮೇಲೆ ಕೂತು ಹತ್ತಿ ಹೊಸೆದು ಬತ್ತಿ ಮಾಡುತಿದ್ದ ಗೋದಕ್ಕ ಬಾಯಿ ತುಂಬಾ ನಕ್ಕರು. ಒಂದೇ ಅಳತೆ, ಒಂದೇ ಬಿಗುವಾಗಿ ಹೊಸೆದ ಬತ್ತಿಯಲ್ಲೂ ಎಷ್ಟು ಶಿಸ್ತು. ಅಬ್ಬಾ ಈ ಹೆಂಗಸಿನ ಬತ್ತದ ಉತ್ಸಾಹಕ್ಕೆ ಆಶ್ಚರ್ಯವಾಯಿತು ನನಗೆ.

ಬಾ ಕೂತ್ಕೊ ಎಂದು ಕರೆದು, ನಾನು ಹಳೇ ಕಾಲದವಳು, ನನ್ನ ಕತೆ ನಿನಗೆ ಹಿಡಿಸುತ್ತೋ ಇಲ್ವೊ. ನಿಜ ಹೇಳಬೇಕೆಂದರೆ ಖುಷಿಖುಷಿಯಾಗಿ ನಗುತ್ತಾ ನಗಿಸುತ್ತಾ ಇರುವುದರಲ್ಲಿ ಇರೋ ಸುಖ ರೋದನೆಯಲ್ಲೆಲ್ಲಿದೆ? ಆದರೂ ಒಮ್ಮೊಮ್ಮೆ ನಾವು ದಾಟಿ ಬಂದ ದಾರಿಯನ್ನೊಮ್ಮೆ ಹಿಂದೆ ತಿರುಗಿ ನೋಡಿದಾಗ ನೆನಪುಗಳು ಧಾವಿಸಿ ಬರುತ್ತವೆ. ನನ್ನದು ಹೆಚ್ಚಿನದಾಯ್ತು ಇನ್ನು ಉಳಿದಿರೋದು ಕಮ್ಮಿ. ಆ ದಿನಗಳು ಮತ್ತೆ ಬಾರದೆ ಹೀಗೆಯೇ ರಾಮಾಕೃಷ್ಣಾ ಎನ್ನುವಾಗಲೇ ಜೀವ ಹೋದರೆ ಇದೊಂದು ಅಧ್ಯಾಯ ಮುಗಿದಂತೆ.

ನಾನು ಹೇಳುತ್ತೇನೆಂದಿದ್ದು ನನ್ನಕ್ಕ ನರ್ಮದಕ್ಕನ ಕತೆ. ನೋಡಲು ಸುಂದರವಾಗಿದ್ದಳು. ಆದರೂ ನಮ್ಮ ಕಿತ್ತು ತಿನ್ನುವ ಬಡತನದ ದೆಸೆಯಿಂದ ಎರಡನೇ ಸಂಬಂಧಕ್ಕೆ ಮದುವೆ ಮಾಡಿ ಕೊಡಬೇಕಾಯಿತು.  ಪುರೋಹಿತರಾಗಿದ್ದರು ಭಾವ. ಮೊದಲ ಹೆಂಡತಿ ಚಿಕ್ಕ ವಯಸ್ಸಿನಲ್ಲೇ ಸತ್ತು ಹೋದಾಗ ಇಬ್ಬರು ಹೆಣ್ಣು ಮಕ್ಕಳಿದ್ದರು. ಇವರಿಗೋ ಪತ್ನಿ ಇಲ್ಲದಿದ್ದರೆ ದೇವಸ್ಥಾನದ ಪೌರೋಹಿತ್ಯಕ್ಕೆ ಪರ್ಯಾಯ ಸಿಗೋದಿಲ್ಲ ಎಂಬ ಕಾರಣಕ್ಕೆ ಮತ್ತೊಂದು ಮದುವೆಯಾಗುವ ಪ್ರಮೇಯವೇನೋ. ಅಂತೂ ಊಟಕ್ಕೂ ಗತಿ ಇಲ್ಲದವರ ಮನೆಯ ಹುಡುಗಿ ಬಂದರೆ ಎಲ್ಲವನ್ನೂ ಸಂಭಾಳಿಸುತ್ತಾಳೆಂದು ಅವರಾಗಿಯೇ ಹೇಳಿ ಕಳುಹಿಸಿ ಮದುವೆ ಆಯಿತು. ಅತ್ತೆ ಇದ್ದರು, ಇನ್ನೂ ಮದುವೆಯಾಗದ ಇಬ್ಬರು ನಾದಿನಿಯರು, ಈ ಇಬ್ಬರು ಮಕ್ಕಳು ಆಮೇಲೆ ಅವಳಿಗೂ ಎರಡು ಮಕ್ಕಳಾದವು. ಅತ್ತೆಯ ಸೇವೆಯ ಜೊತೆಗೆ ನಾದಿನಿಯರ ಮದುವೆ, ಬಾಣಂತನ, ನಾಲ್ಕು ಮಕ್ಕಳ ದೇಖರೇಖಿಯಲ್ಲಿ ನರ್ಮದಕ್ಕ ಹೈರಾಣಾಗುತಿದ್ದಳು.

ಆದರೂ ಬೇಸರವಿಲ್ಲದೆ ಮನೆಯನ್ನು ನಿಭಾಯಿಸಿ ಸಿಗುವ ಸಮಯದಲ್ಲೇ ಹೆಣ್ಣು ಮಕ್ಕಳಿಗೆ ಕೈಯಿಂದಲೇ ಲಂಗ ರವಿಕೆಗಳನ್ನು ಹೊಲಿಯುತಿದ್ದಳು. ಕಸೂತಿ ಹಾಕೋದು, ಹಾಡು ಹೇಳೋದು ಎಲ್ಲಾ ಮಾಡುತಿದ್ದಳು. ಅವಳಿಗೆ ಸಿಗಬೇಕಾದ ಪ್ರೀತಿ, ಕಾಳಜಿ ಸಿಗುತ್ತಿರಲಿಲ್ಲ. ಹಾಗೆ ನನಗೆ ಅನಿಸುತಿತ್ತು. ತವರಿಗೆ ಬರುವುದು ಬಹಳ ಅಪರೂಪವಾಗಿ ಹೋಯ್ತು.

ಅವಳು ಹೆತ್ತ ಮಗಳು ಸ್ವಲ್ಪ ಬುದ್ಧಿ ಮಾಂದ್ಯವೆಂದು ಬೆಳೆಯುತ್ತಾ ಗೊತ್ತಾಯಿತು. ಮೊದಲ ಹೆಂಡತಿಯ ಇಬ್ಬರು ಹೆಣ್ಣು ಮಕ್ಕಳು ಇವಳ ಆರೈಕೆಯಲ್ಲಿ ಸೊಂಪಾಗಿ ಬೆಳೆಯುತಿದ್ದರು. ಯಾವತ್ತೂ ನಾಲ್ವರಲ್ಲಿ ಬೇಧಭಾವ ಮಾಡಿದವಳೇ ಅಲ್ಲ. ಭಾವನಿಗೆ ಮದುವೆ ಎಂಬುದು ಪೌರೋಹಿತ್ಯಕ್ಕಾಗಿ ಮಾತ್ರ ಬೇಕಿತ್ತು. ಒಂದು ದಿನವಾದರೂ ಹೆಂಡತಿಯ ಬಳಿ ಕೂತು ಸುಖದುಃಖ ಮಾತನಾಡಿದವರೇ ಅಲ್ಲ. 

ರಾತ್ರಿ ಮಕ್ಕಳೆಲ್ಲಾ ಮಲಗಿದ ಮೇಲೆ ತನ್ನ ಕೆಲಸಗಳನೆಲ್ಲಾ ಮುಗಿಸಿ ಬಂದು ಚೌಕ ಮಹಲಿನ ಆ ಮನೆಯ ಜಗಲಿಯಲ್ಲಿದ್ದ ಆರಾಮ್ ಖುರ್ಚಿಯಲ್ಲಿ ಕೂತು ಎಲೆ ಅಡಿಕೆ ತಿನ್ನೋದು ಅವಳ ಅಭ್ಯಾಸವಾಗಿತ್ತು. ಅದು ಅವಳದೇ ಸಮಯವಾಗಿತ್ತು. ಅದೇನೋ ಅವಳಿಗೆ ತನ್ನೊಡನೆ ತಾನಿರಲು ಮೀಸಲಾಗಿತ್ತು.

ಆ ಸಮಯದಲ್ಲಿ ಗಂಡನೆಂಬ ವ್ಯಕ್ತಿ ಬೇರೊಂದು ಕೋಣೆಯಲ್ಲಿ ಗೊರಕೆ ಹೊಡೆಯುತ್ತಾ ಮಲಗಿರುತಿದ್ದ.

ಹೀಗಿರುವಾಗ ಒಂದು ದಿನ ಎಲ್ಲರೂ ಮಲಗಿದ್ದಾಗ ಎಂದಿನ ತನ್ನ ಅಭ್ಯಾಸದಂತೆ ಕಿಟಕಿಯ ಮೇಲಿದ್ದ ತಾಂಬೂಲದ ಪೆಟ್ಟಿಗೆಯನ್ನು ಎತ್ತಿಕೊಂಡು ಹೋಗಿ ಆರಾಮ್ ಕುರ್ಚಿಯಲ್ಲಿ ಕೂರಲು ಹೋದರೆ, ಮಂದ ಬುದ್ಧಿಯ ಮಗಳೋ , ಇನ್ಯಾರೋ ಕುರ್ಚಿಯ ಬಟ್ಟೆಯೊಳಗೆ ಸಿಕ್ಕಿಸುವ ಕೋಲುಗಳನ್ನು ಬಿಚ್ಚಿಟ್ಟು ಬಟ್ಟೆಯನ್ನು ಮಾಮೂಲಿನಂತೆ ಇಟ್ಟಿದ್ದರು. ಅದರ ಸುಳಿವಿಲ್ಲದ ನನ್ನಕ್ಕ ಕೂತೇ ಬಿಟ್ಟಳು. ಆ ಸರಿ ರಾತ್ರಿಯಲ್ಲಿ ಅವಳು ಬಿದ್ದಿದ್ದು ಯಾರಿಗೂ ತಿಳಿಯಲೇ ಇಲ್ಲ. ಹೇಗೋ ಕಷ್ಟ ಪಟ್ಟು ತಾನೇ ಎದ್ದು ಹೋಗಿ ಮಲಗಿದವಳಿಗೆ ಬಲಗೈ ಭಯಂಕರ ನೋವಿನಲ್ಲಿ ಸಿಡಿಯುತಿತ್ತು.

ಬೆಳಿಗ್ಗೆ ಎದ್ದಾಗ ಕೈ ಊದಿಕೊಂಡಿತ್ತು. ಯಾರಿಗೂ ಹೇಳಲು ಹೋಗದೆ ತನ್ನ ಪಾಡಿಗೆ ಕೆಲಸಗಳನ್ನು ಕಷ್ಟ ಪಟ್ಟು ಮಾಡುತಿದ್ದಳು.

ಮಕ್ಕಳು ನೋಡಿ ಅಪ್ಪನ ಬಳಿ ಹೇಳಿದಾಗ ತಾನೇ ಹೋಗಿ ಹೇಳಿ ಏನೋ ಲೇಪ ತಂದು ಕೊಟ್ಟು ಹಚ್ಚಿಕೋ ಎಂದರಂತೆ. ಲೇಪಕ್ಕೆ ಜಗ್ಗದ ಕೈ ನೋವು ಕೈ ಎತ್ತಲೂ ಆಗದಷ್ಟು ಹೆಚ್ಚಾಯ್ತು. ಒಳಗಡೆ ಮೂಳೆ ಮುರಿದಿರಬೇಕು ಎಂದು ಮನೆಗೆ ಬಂದವರು ಯಾರೋ ಹೇಳಿದ ಮೇಲೆ ಪಂಡಿತರ ಬಳಿ ಕರೆದುಕೊಂಡು ಹೋಗಿ ಪಟ್ಟಿ ಕಟ್ಟಿಸಿ ತಂದರು.

ಆಗಲೂ ಕೆಲಸಕ್ಕೆ ಬಿಡುವೆನ್ನುವುದಿಲ್ಲದೆ, ಅದು ಹೇಗೆ ಆ ನೋವಿನಲ್ಲಿ ಕೆಲಸ ಮಾಡುತಿದ್ದಳೋ ಆ ಅಕ್ಕ!

ಒಂದು ಸಲ ಪಟ್ಟಿ ಕಟ್ಟಿಸಿದ್ದಷ್ಟೇ. ಆ ನಂತರ ಮತ್ತೆ ವೈದ್ಯರ ಬಳಿ ಕರೆದೊಯ್ದರೆ ತಾನೆ! ಬಂದ ನೆಂಟರೆದಿರು ತನ್ನ ಕರ್ತವ್ಯವೆಂದು ಮಾಡಿದ್ದೇ ವಿನಃ ಹೆಂಡತಿಯ ಮೇಲಿನ ಪ್ರೀತಿಯಿಂದಲ್ಲ.

ವಿಷಯ ಹೇಗೋ ತಿಳಿದು ಅಪ್ಪ ನನ್ನನ್ನು ಕರೆದುಕೊಂಡು ಹೋಗಿ ಅವರ ಮನೆಯಲ್ಲಿ ಸ್ವಲ್ಪ ದಿನ ಅಕ್ಕನಿಗೆ ಸಹಾಯ ಮಾಡಲೆಂದು ಬಿಟ್ಟು ಬಂದರು. ನನಗೆ ಹದಿನಾರು ವಯಸ್ಸು ಆಗ. ಅಕ್ಕ ನನಗಿಂತ ಎಂಟ್ಹತ್ತು ವರ್ಷಕ್ಕೆ ದೊಡ್ಡವಳು.

ನಾನು ಹೋದ ಮೇಲೆ ಅಕ್ಕನಿಗೆ ಸ್ವಲ್ಪ ಸಹಾಯವಾಯಿತು ಆದರೂ ಕೈ ನೋವು ಭಯಂಕರವಿತ್ತು. ಆ ನೋವಿನಿಂದ ಊಟ ತಿಂಡಿಯನ್ನೂ ಸರಿಯಾಗಿ ಮಾಡಲು ಆಗುತ್ತಿರಲಿಲ್ಲ.

ಮತ್ತೊಮ್ಮೆ ವೈದ್ಯರ ಬಳಿ ಹೋಗೋಣವೆಂದು ಹೇಳಿ ನಾನೇ ಅಕ್ಕನನ್ನು ಬಲವಂತದಿಂದ ಕರೆದುಕೊಂಡು ಹೋದೆ. ಕಟ್ಟಿದ್ದ ಪಟ್ಟಿ ಬಿಚ್ಚಿದರೆ ಒಳಗಡೆ ಕೈ ಕಪ್ಪಾಗಿ ಕೊಳೆತೇ ಹೋಗಿತ್ತು. ಮೂಳೆ ಕೂಡುವುದಿರಲಿ, ನರಗಳಿಗೆ ಪೆಟ್ಟಾಗಿ ರಕ್ತ ಸಂಚಾರವಿಲ್ಲದೆ ಮಾಂಸ ಪೇಶಿಗಳೆಲ್ಲಾ ಸತ್ತು ಹೋಗಿದ್ದವು. ಇನ್ನೇನೂ ಉಪಾಯವಿಲ್ಲ ಕೈಯನ್ನೇ ಕತ್ತರಿಸಬೇಕು ಎಂದರು ಪಂಡಿತರು. ನಾವಿಬ್ಬರೂ ಅಳುತ್ತಾ ಬಂದು ಅವಳ ಅತ್ತೆಯ ಬಳಿ ಹೇಳಿದಾಗ ಅವರೂ ಕಣ್ಣೀರಿಟ್ಟರು.

ಮಗನನ್ನು ಕರೆದು ವಿಷಯ ಹೀಗಿದೆಯೆಂದು ಹೇಳಿ ಅತ್ತಾಗ ಇನ್ನೇನು ಮಾಡುವುದು ಬೇರೆ ಉಪಾಯವಿಲ್ಲದಿದ್ದರೆ ಕೈ ಕತ್ತರಿಸಲೇಬೇಕಲ್ಲಾ ಎಂದು ನಿರ್ಧರಿಸಿದಂತೆ ನುಡಿದರು. ಮಾರನೇ ದಿನವೇ ವೈದ್ಯರು ಮೊಣಕೈಯವರೆಗೆ ಕೈ ಕತ್ತರಿಸಿ ಲೇಪ ಹಚ್ಚಿ ಬಟ್ಟೆ ಕಟ್ಟಿ ಕಳಿಸಿದರು. ನೋವಿನ ಅಮಲಿನಲ್ಲಿ ಅಕ್ಕ ಏನೇನೋ ಬಡಬಡಿಸುತಿದ್ದಳು ಪಾಪ.. ಮನೆ ಕೆಲಸಗಳನ್ನು ಮಾಡಿ ಆ ಮಕ್ಕಳನ್ನು ಸುಧಾರಿಸಿಕೊಂಡು ಅವಳನ್ನು ಸಮಾಧಾನ ಪಡಿಸುವುದು ನನ್ನ ಪಾಲಿಗೆ ಬಂತು. 

ಗಂಡನೆಂಬವನು ಒಂದು ದಿನವಾದರೂ ಕೋಣೆಯೊಳಗೆ ಇಣುಕಿ ನೋಡಿದರೆ ಕೇಳು. ಮಕ್ಕಳೂ ಹತ್ತಿರ ಬರುತ್ತಿರಲಿಲ್ಲ. ತಾಯಿಗೆ ಹುಷಾರಿಲ್ಲ, ತೊಂದರೆ ಕೊಡಬೇಡಿ ಎಂದು ಅವರಿಗೆ ತಾಕೀತಾಗಿತ್ತು.

ಸುಮ್ಮನೆ ಮಲಗಿ ಮೇಲಿನ ಸೂರನ್ನು ದಿಟ್ಟಿಸಿ ಕಣ್ಣೀರುಗರೆಯುತಿದ್ದಳು ಅಕ್ಕಾ. ಅಷ್ಟಾದರೂ ಒಂದು ದಿನವೂ ಗಂಡನ ಬಗ್ಗೆ ದೂರು ಹೇಳಿದವಳಲ್ಲ.

ನಾನೇ ಒಮ್ಮೆ ಕೇಳಿದೆ.. ಭಾವ ನಿನ್ನ ಕೋಣೆಗೆ ಬರುವುದೇ ಇಲ್ಲವಲ್ಲ. ಏನಾಗಿದೆ ಅವರಿಗೆ?

ಸರಕ್ಕನೇ ನನ್ನೆಡೆಗೆ ನೋಡಿ ಏನಂದಳು ಗೊತ್ತಾ?

“ನೀನಿದಿಯಲ್ಲಾ ಹಾಗಾಗಿ ಅವರಿಗೆ ಸಂಕೋಚವಿರಬಹುದು‌. ಅದಕ್ಕೆ ಬರುತ್ತಿಲ್ಲ.”

ಮಾರನೇ ದಿನವೇ ನನ್ನಿಂದ ಅಪ್ಪನಿಗೆ ಪತ್ರ ಬರೆಯಿಸಿ ಕರೆಸಿದಳು.

ಅಪ್ಪ ಬಂದಾಗ ” ಎಷ್ಟು ದಿನವೆಂದು ಇವಳು ಇಲ್ಲಿರುವುದು. ಬೇಕೆಂದರೆ ಪತ್ರ ಬರೆಯುತ್ತೇನೆ. ಈಗ ಕರೆದುಕೊಂಡು ಹೋಗಿ” ಎಂದಳು.

ನಾನು ಅತ್ತು ನೀನು ನಮ್ಮ ಜೊತೆ ಬಾ ಮಕ್ಕಳು ಹೇಗೂ ಇರುತ್ತಾರೆ. ನಿನ್ನ ಈ ಸ್ಥಿತಿಯಲ್ಲಿ ಬಿಟ್ಟು ಹೋಗೋದು ಹೇಗೆ? ಎಂದು ಕರೆದೆ.

ಮನೆ ಬಿಟ್ಟು ಮಕ್ಕಳನ್ನು ಬಿಟ್ಟು ನಾನು ಎಲ್ಲೂ ಬರುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿ ಬಿಟ್ಟಳು.

ಬೇರೆ ಉಪಾಯವಿಲ್ಲದೆ, ಅಪ್ಪ ನನ್ನನ್ನು ಕರೆದುಕೊಂಡು ಬರುವಾಗ ಬಸ್ಸಿನಲ್ಲಿ ಏನಂದರು ಗೊತ್ತಾ ನಿನಗೆ?

ಅವಳನ್ನು ನೋಡಿಕೊಳ್ಳಲು, ಮಕ್ಕಳನ್ನು ನೋಡಿಕೊಳ್ಳಲು ಒಂದು ಜನವಂತೂ ಬೇಕೇಬೇಕು. ನೀನೇ ಯಾಕೆ ಅವರನ್ನು ಮದುವೆಯಾಗಬಾರದು. ಅಳಿಯಂದಿರ ಬಳಿ ನಾನು ಮಾತಾಡುತ್ತೇನೆ. ಅಂದಾಗ ನನಗಾದ ಆಘಾತಕ್ಕೆ ನನ್ನ ಬಾಯಿಯಿಂದ ಒಂದು ಮಾತೂ ಹೊರಡದಾಯ್ತು.

ಸುಮ್ಮನಿದ್ದರೆ ಅಪ್ಪ ಈ ಕೆಲಸವನ್ನು ಮಾಡಿ ಕೈ ತೊಳಕೊಳ್ಳುವವನೇ ಎಂದು ದೃಢವಾಯಿತು. ಅಮ್ಮ ಯಾವತ್ತೂ ಅಪ್ಪನಿಗೆ ಎದುರಾಡಿದವಳೇ ಅಲ್ಲ. ಅವಳ ಗಂಟಲಲ್ಲಿ ಧ್ವನಿಯಿತ್ತೇ ಎಂಬುದೂ ನಮಗೆ ಸಂಶಯವಿತ್ತು. ಅವಳ ಬಳಿ ಹೇಳಿ ಪ್ರಯೋಜನವಿಲ್ಲ. ಅಣ್ಣಂದಿರ ಹತ್ತಿರ ಹೇಳಿ ಅತ್ತೆ. ನನಗೆ ಮದುವೆಯಾಗದಿದ್ದರೂ ಬೇಡ. ಅವರನ್ನು ಮಾತ್ರ ನಾನು ಮದುವೆಯಾಗುವುದಿಲ್ಲ. ಬೇಕಾದರೆ ಅವಳನ್ನೂ ಅಲ್ಲಿಂದ ಬಿಡಿಸಿ ತಂದರೆ ನಾನೇ ಅವಳ ಸೇವೆ ಮಾಡಿಕೊಂಡು ಇರುತ್ತೇನೆ. ಅಪ್ಪನನ್ನು ನೀವು ಒಪ್ಪಿಸಿ ಎಂದು ಪರಿಪರಿಯಾಗಿ ಬೇಡಿಕೊಂಡೆ. ಎಂದು ಗೋದಕ್ಕ ಹೇಳುವಾಗ ಅವರ ಕಂಠ ಗದ್ಗದಿತವಾಯ್ತು.

ನನ್ನ ಕಣ್ಣುಗಳಿಂದ ಕಣ್ಣೀರು ತನ್ನಿಂತಾನೇ ಹರಿಯುತಿತ್ತು. ಸುತ್ತಲ ಯಾವುದೇ ಪರಿವೆಯಿಲ್ಲದೆ ನಾನು ಗೋದಕ್ಕನ ಕಷ್ಟಗಳನೆಲ್ಲಾ ಸ್ವತಃ ಅನುಭವಿಸಿದೆನೋ ಅನ್ನುವ ಮಟ್ಟಿಗೆ ಅವರ ಮಾತುಗಳಲ್ಲಿ ಮುಳುಗಿ ನೆನೆದು ಹೋಗಿದ್ದೆ.

ಗೋದಕ್ಕ ಮತ್ತೆ ಮಾತನಾಡಿದರು. ಊಟ ತಿಂಡಿ ಬಿಟ್ಟು ಕೊರಗಿ ಸೊರಗಿ ಒಂದು ದಿನ ಸತ್ತೇ ಹೋದಳು ನಮ್ಮಕ್ಕ. ಮುತ್ತೈದೆ ಸಾವೆಂದು ಜನ ಕೊಂಡಾಡಿದರು.

ಆ ಮನುಷ್ಯ ಮತ್ತೊಂದು ಮದುವೆಯಾದರೆಂದು ಸುದ್ದಿ ನಮಗೂ ಬಂತು. ಈ ಸಲ ಬಂದವಳು ಮಾತ್ರ ಮಕ್ಕಳಿಗೆ ಮಲತಾಯಿಯೇ ಆಗಿದ್ದಳಂತೆ.

ತುಂಬಾ ಹಿಂಸೆ ಕೊಡುತಿದ್ದಾಳೆ ಎಂದು ಯಾರೋ ಬಂದು ಹೇಳಿದ್ದರು. ನಮಗೆ ಅವರ ಮನೆಯ ನಂಟೇ ಬಿಟ್ಟು ಹೋಯಿತು‌.

ತೇವಗೊಂಡ ಕಣ್ಣಂಚನ್ನು ಸೆರಗಿನಿಂದ ಒರಸಿಕೊಳ್ಳುವಾಗ ಕೂದಲಿಲ್ಲದ ಅವರ ತಲೆ ಕಾಣಿಸಿತು.

“ಅಷ್ಟೆಲ್ಲಾ ಧೈರ್ಯದಿಂದ ಮಾತನಾಡಿದ ನೀವು ಇದನ್ನು ಯಾಕೆ ಒಪ್ಪಿಕೊಂಡಿರಿ?”

ತಡೆಯದೆ ಕೇಳಿಯೇ ಬಿಟ್ಟೆ.

ನನ್ನಜ್ಜಿ, ಅಪ್ಪನ ಅಮ್ಮ ಇದ್ದರು. ಅವರು ಮಡಿಯಾಗಿದ್ದರು. ಆಗ ಅದು ಸಂಪ್ರದಾಯದ ಭಾಗವಾಗಿತ್ತು. ಅದರಡಿಯಲ್ಲಿ ಅಜ್ಜಿ ನೆಮ್ಮದಿ ಕಂಡುಕೊಂಡಿದ್ದರು. ಹಾಗೆಂದು ಅವರೇ ಹೇಳುತಿದ್ದರು.

ಅಕ್ಕನ ಅಂತ್ಯವಾದ ಮೇಲೆ ನನಗೂ ಒಂದು ನೆಂಟಸ್ತಿಕೆ ಯಾರೋ ತೋರಿಸಿದರು. ಮದುವೆಯಾಯಿತು. ಅವರಿಗೆ ಹುಟ್ಟಿದಾರಭ್ಯ ಉಬ್ಬಸವಿತ್ತಂತೆ. ಹಾಗೆ ಹೀಗೆ ಹತ್ತು ವರ್ಷ ಸಂಸಾರ ಮಾಡಿದರೂ ಮಕ್ಕಳಾಗಲಿಲ್ಲ. ಕಾಯಿಲೆ ಉಲ್ಬಣಿಸಿ ಹೋಗಿಯೇ ಬಿಟ್ಟರು.

ನನಗೇನೂ ಹೇಳುವಂಥಾ ದುಃಖವಾಗಲಿಲ್ಲ. ಹತ್ತು ವರ್ಷದಲ್ಲಿ ಪ್ರೀತಿಯೂ ಇರಲಿಲ್ಲ, ಜಗಳವೂ ಆಡಿರಲಿಲ್ಲ. ಮಕ್ಕಳಂತೂ ಹುಟ್ಟಲಿಲ್ಲ, ಒಳ್ಳೆಯದೇ ಆಯ್ತು ಅನಿಸಿತ್ತು ನನಗೆ.

ಮೊದಲಿನಿಂದಲೂ ಸಾಂಸಾರಿಕ ವಿಷಯಗಳಲ್ಲಿ ಯಾವ ವಾಂಛೆಯೂ ಇರಲಿಲ್ಲ. ನನಗ್ಯಾರಿಂದಲೂ ತೊಂದರೆ ಆಗಬಾರದು ಎನ್ನುವುದಕ್ಕಷ್ಟೇ ನಾನೀ ರೂಪವನ್ನು ಧರಿಸಿದ್ದು. ಯಾರೂ ಯೋಚಿಸಿಯೂ ಇರದ ಕಾಲದಲ್ಲಿ ನಾನು ಹೀಗೆ ನಿರ್ಧರಿಸಿದ್ದು, ಎಷ್ಟೋ ಜನರ ಹುಬ್ಬೇರಿಸಿತ್ತು.

ಕೆಂಪು ಸೀರೆ, ಬಿಳಿ ರವಿಕೆ, ಬೋಳು ತಲೆ ನನ್ನನ್ನು ನಾನೇ ಶೃಂಗರಿಸಿಕೊಂಡೆ. ನನಗದು ಆರಾಮದಾಯಕವಾಯ್ತು.

ನನಗಿದ್ದ ಅಡುಗೆಯ ಅಭಿರುಚಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಉಳಿದವರಿಗೂ ಕೆಲಸ ಹಗುರವಾಯ್ತು.

ಯಾವತ್ತೂ ನನ್ನನ್ನು ಒಂದೇ ಕಡೆಯಲ್ಲಿ ಬಂಧಿಸಿಕೊಳ್ಳಲಿಲ್ಲ ನಾನು, ಅಣ್ಣ ತಮ್ಮಂದಿರ ಮನೆಗಳಲ್ಲಿ, ನೆಂಟರ ಮನೆಗಳಲ್ಲಿ ಮದುವೆ ಮುಂಜಿ ಸಮಾರಂಭಗಳಲ್ಲಿ ನನಗೆ ಹೋಗಬೇಕು ಅನಿಸಿದ ಕಡೆಗಳಲ್ಲಿ ಹೋಗುವವಳೇ ನಾನು. ಬಿಡುವಿನ ವೇಳೆಯಲ್ಲಿ ದೀಪದ ಬತ್ತಿಗಳನ್ನು, ಹೂಬತ್ತಿಗಳನ್ನು ಮಾಡುತ್ತೇನೆ. ಕೇಳಿದವರಿಗೆ ಕೊಡುತ್ತೇನೆ. ಅವರು ಕೊಟ್ಟಷ್ಟು ಇಟ್ಟು ಕೊಳ್ಳುತ್ತೇನೆ. ನನಗೆ ಸಾಕು. ಎಲ್ಲಿ ಹೋದರೂ ಒಂದೆರಡು ದಿನವಾದರೂ ನಮ್ಮಲ್ಲಿ ಇದ್ದು ಹೋಗು ಎಂದು ಕರೆಯುವವರೇ ಎಲ್ಲರೂ. ಇಂಥಾ ಜೀವನವನ್ನು ಆ ಭಗವಂತ ನನಗೆ ಕೊಟ್ಟಿದ್ದಾನೆ. ಕೊನೆಯವರೆಗೂ ಅಡುಗೆ ಮಾಡುವಂತಹ ಶಕ್ತಿ ದೇವರು ಕೊಡಲಿ ಎಂದು ಬೇಡುತ್ತೇನೆ.”

ನಾನು ತಟ್ಟನೆ ಅವರ ಕೈಗಳನ್ನು ಹಿಡಿದುಕೊಂಡು ಕೇಳಿದೆ.

” ನಮ್ಮ ಮನೆಗೆ ಬನ್ನಿ ಎರಡು ದಿನಕ್ಕಾದರೂ.”

************************

5 thoughts on “ಅಕ್ಕನೆಂಬ ಹುರುಪು

  1. must bejarui jalle …kitle chand kornu sangla Sheelakka tuve…vingada loka gelle vari jalle….pude janale avasta papa….

  2. ತುಂಬಾ ಸ್ವಾರಸ್ಯದಯಾಕ ಕತೆ ಶೀಲಕ್ಕಾ, ಇನ್ನೂ ಇರಬೇಕು, ಇನ್ನೂ ಓದುತ್ತಲೇ ಹೋಗಬೇಕು ಎಂದೆನೆಸಿತು.

  3. ಹೇಗೋ ಬದುಕುವುದಕ್ಕಿಂತ, ಹೀಗೆ ಬದುಕಬೇಕು. ಬಹಳ ಸಮಾಧಾನದ ಓದು

  4. ಶೀಲಾ ಭಂಡಾರ್ಕರ್ ಅವರೇ, ನಿಮ್ಮ ಕಥೆ.”ಅಕ್ಕನೆಂಬ ಹುರುಪು”, ಫಣಿಯಮ್ಮನ ನೆನಪು ಮತ್ತೆ ತೋಡಿ.ಕಾಡಿತು. ತುಂಬ ಚನ್ನಾಗಿದೆ, ಕಥಾವಸ್ತು, ನಿರೂಪಣೆ, ಸುಲಭವಾದ ಭಾಷೆ ಎಲ್ಲ ಒಟ್ಟಾಗಿ. ಧನ್ಯವಾದಗಳು.

  5. ತುಂಬಾ ಸೊಗಸಾಗಿ ಬರೆದಿದ್ದೀರಿ, ಶೀಲಾ, ಸೂಪರ್…

Leave a Reply

Back To Top