ನೆಲಮೂಲ ಸಂಸ್ಕೃತಿಯ ಕಲಿಸಿದ ವರನಟ ಡಾ. ರಾಜಕುಮಾರ

ಲೇಖನ

ನೆಲಮೂಲ ಸಂಸ್ಕೃತಿಯ ಕಲಿಸಿದ

ವರನಟ ಡಾ. ರಾಜಕುಮಾರ

Dr Rajkumar Kannada language ambassador | Billion Voices Blog | Kannada  language, Cool photos, Photo album design

ಕನ್ನಡ ಚಲನಚಿತ್ರ ರಂಗದ ಮೇರು ವ್ಯಕ್ತಿತ್ವದ ನಟ, ರಸಿಕರ ರಾಜ, ನಟ ಸಾರ್ವಭೌಮ, ವರನಟ, ಅಭಿನಯ ಚಕ್ರವರ್ತಿ ಮೊದಲಾದ ಬಿರುದುಗಳಿಂದ ಸನ್ಮಾನಿತರಾದ ಡಾ. ರಾಜಕುಮಾರ ಅವರು ಕನ್ನಡ ನಾಡು ಕಂಡ ಪ್ರಸಿದ್ಧ, ಅಪ್ರತಿಮ ಕಲಾವಿದರಾಗಿದ್ದರು. ಮೊದಲು ಮುತ್ತುರಾಜ(ಮುತ್ತಣ್ಣ) ಹೆಸರು ಹೊಂದಿದ್ದ ಇವರು ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾಗಿದ್ದರು. ಗಾಯಕರಾಗಿಯೂ ಹೆಸರು ಮಾಡಿದ್ದಾರೆ. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಅಗ್ರಗಣ್ಯರು. ಗೌರವ ಡಾಕ್ಟರೇಟ್, ನಾಡೋಜ, ದಾದಾಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ ಹಾಗೂ ಪ್ರತಿಷ್ಠಿತ ಪದ್ಮಭೂಷಣ ಪದವಿಗಳು ಇವರಿಗೆ ಲಭಿಸಿವೆ. 

          ಡಾ. ರಾಜಕುಮಾರ ಅವರು ‘ಬೇಡರ ಕಣ್ಣಪ್ಪ’ ಚಿತ್ರದಿಂದ ಹಿಡಿದು ‘ಶಬ್ದವೇಧಿ’ಯವರೆಗೆ  ಒಟ್ಟು ೨೦೫ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಪತ್ತೇದಾರಿ ಮುಂತಾದ ವಿವಿಧ ಬಗೆಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಅಭಿನಯಿಸಿದ ಚಿತ್ರಗಳ ವೈಶಿಷ್ಟ್ಯವೆಂದರೆ ಸಂಸ್ಕೃತಿ. ಅವರು ಅಭಿನಯಿಸಿದ ಬಹುತೇಕ ಎಲ್ಲ ಚಿತ್ರಗಳು ಕನ್ನಡ ನಾಡಿನ ಜನರಿಗೆ ಒಳ್ಳೆಯ ಸಂಸ್ಕೃತಿಯ ಪಾಠಗಳನ್ನು ಕಲಿಸಲೆಂದೇ ನಿರ್ಮಿತವಾದಂತಿವೆ. 

          ಸಾವಿರಾರು ವರ್ಷಗಳಿಂದ ನಮ್ಮ ದೇಶದಲ್ಲಿ ಪೌರಾಣಿಕ ನಾಟಕಗಳ ಸಂಪ್ರದಾಯ ಇತ್ತು. ಸಿನಿಮಾಗಳು ಆರಂಭವಾದಾಗ ಅದೇ ಪೌರಾಣಿಕ ವಿಷಯಗಳು ಕಾಣಿಸಿಕೊಂಡವು. ಕಾಲ ಬದಲಾದಂತೆ ಜನರ ಅಭಿರುಚಿಗಳೂ ಬದಲಾಗತೊಡಗಿದವು. ಜನರ ಅಭಿರುಚಿಗೆ ತಕ್ಕಂತೆ ಸಿನಿಮಾದವರು ವಿಷಯಗಳನ್ನು ಆಯ್ದುಕೊಳ್ಳತೊಡಗಿದರು. ಅನಂತರದ ಕಾಲದಲ್ಲಿ ಸಾಮಾಜಿಕ ವಿಷಯ ಕುರಿತ ಚಿತ್ರಗಳು ಜನಪ್ರಿಯವಾಗತೊಡಗಿದವು. ನಮ್ಮ ದೇಶ ಕೃಷಿ ಪ್ರಧಾನವಾದ ದೇಶ. ಬಹುಸಂಖ್ಯ ಜನರು ಒಕ್ಕಲಿಗರು. ಚಿತ್ರ ನಿರ್ಮಾಪಕರು ಕೂಡ ಕೃಷಿ ಕಾಯಕದ ಸಾಮಾನ್ಯ ಜನರ ಸುಖ ದುಃಖಗಳ ವಿಷಯಾಧಾರಿತ ಚಿತ್ರಗಳನ್ನು ನಿರ್ಮಿಸತೊಡಗಿದರು. ಇಂತಹ ಚಿತ್ರಗಳಲ್ಲಿ ಅಭಿನಯಿಸಿ ಅತಿ ಹೆಚ್ಚು ಹೆಸರು ಮಾಡಿದ ಕಲಾವಿದ ಡಾ. ರಾಜಕುಮಾರ ಅವರು ಆಗಿದ್ದಾರೆ. 

Iconic and Path Breaking Movies of Dr. Rajkumar - Part II - Kanigas

           ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದರೂ ಇಂದಿನ ಯುವಕರು ಮಾತ್ರ ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ. ಸಾಕ್ಷರತೆ ಹೆಚ್ಚಿದಂತೆ ಸರಕಾರಿ ನೌಕರಿ ಎಂಬುದು ಮರೀಚಿಕೆಯಾಗುತ್ತಿದೆ. ನಮ್ಮ ದೇಶದಲ್ಲಿ ಇಂದು ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಖಾಸಗಿ ಉದ್ಯೋಗ ಯಾವುದೇ ದಿನ ನಡು ನೀರಿನಲ್ಲಿ ಕೈ ಬಿಡುವ ಸಾಧ್ಯತೆ ಇದೆ. ಇಂದಿನ ಮಟ್ಟಿಗೆ ಹೇಳುವುದಾದರೆ ಕೊರೊನಾ ಆತಂಕದಲ್ಲಿ ಜಗತ್ತಿನ ಎಲ್ಲ ಔದ್ಯೋಗಿಕ ಕ್ಷೇತ್ರಗಳು ಮರಣ ಶಯ್ಯೆಯಲ್ಲಿ ಇವೆ. ಒಕ್ಕಲುತನಕ್ಕೆ ಕೆಟ್ಟ ದಿನಗಳು ಬಂದಿರಬಹುದು,  ಆದರೆ  ಉಳಿದ ಉದ್ಯೋಗ ಧಂದೆಗಳಿಗೆ ಬಂದ ಕರಾಳ ದಿನಗಳು ಇದಕ್ಕೆ ಬರಲು ಎಂದಿಗೂ ಸಾಧ್ಯವಿಲ್ಲ. ಪ್ರತಿ ದಿನ ನನಗೆ ಅದು ಬೇಕು ಇದು ಬೇಕು ಎನ್ನುವವರು ಇಂದು ಅನ್ನ ಒಂದಿದ್ದರೆ ಸಾಕು, ಜೀವ ಉಳಿಸಿಕೊಳ್ಳಬಹುದು ಎನ್ನುವ ಪರಿಸ್ಥಿತಿ ಬಂದಿದೆ. ಅನ್ನಕ್ಕೆ ಪರ್ಯಾಯಗಳಿಲ್ಲ. ಅದಕ್ಕಾಗಿಯೇ ನಾವು ಇಂದು ಎಷ್ಟೇ ಉಚ್ಚ ಶಿಕ್ಷಣ ಪಡೆದವರಾಗಿದ್ದರೂ ಸರಿ, ನಮ್ಮಲ್ಲಿ ಕೆಲವರು ಒಕ್ಕಲುತನವನ್ನು ಕಲಿಯಲೇಬೇಕಾಗಿದೆ. 

Happy Birthday Dr Rajkumar: Best movies of the veteran that are a  must-watch | The Times of India

         ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚು ಇರುವುದರಿಂದ ನಮ್ಮ ದೇಶ ‘ಯುವಕರ ದೇಶ’ ಎಂದು ಸಂಪೂರ್ಣ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದೆ. ಯುವಕರು ಅತಿ ಹೆಚ್ಚು ಆಕರ್ಷಿತರಾಗುವುದು ಸಿನಿಮಾಗಳತ್ತ. ಇಂದು ಟಿವಿ ಆನ್ ಮಾಡಿದರೆ ಸಾಕು, ಢಿಶುಂ ಢಿಶುಂ ಎಂದು ಹೊಡೆದಾಡುವ ಸಿನಿಮಾಗಳದ್ದೇ ದರಬಾರು. ಯುವಕರು ಅನುಕರಣಪ್ರಿಯರಾಗಿರುತ್ತಾರೆ. ಹೊಡೆದಾಡುವ ಸಿನಿಮಾಗಳಿಂದಾಗಿ ಇಂದಿನ ಯುವ ಜನರ ವರ್ತನೆ ಹಳೆಯ ಕಾಲದ ಯುವಕರ ವರ್ತನೆಗಿಂತ ಸಂಪೂರ್ಣ ಭಿನ್ನವಾಗಿದೆ. ಇಂದಿನ ಸಿನಿಮಾಗಳದಾಗಿ ಯೌವನಾವಸ್ಥೆ ಎಂದರೆ ಕುಡಿದು ತೂರಾಡಿ ಮಜಾ ಮಾಡಲೇಬೇಕು, ಹುಡುಗಿಯರ ಹಿಂದೆ ಸುತ್ತಲೇಬೇಕು ಎನ್ನುವ ಪರಿಸ್ಥಿತಿ ಬಂದು ಬಿಟ್ಟಿದೆ. 

DR. RAJKUMAR BEST PHOTOS

            ಇದು ತುಂಬ ಅಪಾಯಕಾರಿ ಬೆಳವಣಿಗೆ. ಇಂದು ಯುವಕರು ದಾರಿ ತಪ್ಪುತ್ತಿದ್ದಾರೆ. ಈ‌ ಎಲ್ಲ ಯುವಕರನ್ನು ಸರಿ ದಾರಿಗೆ ತರುವ ಸಾಮೂಹಿಕ ಪ್ರಯತ್ನಗಳು ನಡೆಯುವುದು ಅತ್ಯಗತ್ಯ ಯುವಕರು ಇಂದು ಕೃಷಿಯತ್ತ ವಾಲುವಂತೆ ಮಾಡಬೇಕಾಗಿದೆ.  ಯುವಕರ ಅತಿ ಹೆಚ್ಚು ಜನಪ್ರಿಯ ವಿಷಯ ಸಿನಿಮಾ ಇರುವುದರಿಂದ ಸಿನಿಮಾ ನಿರ್ಮಾಪಕರ ಜವಾಬ್ದಾರಿ ಹೆಚ್ಚು ಇದೆ. ಯುವಕರಲ್ಲಿ ಕೃಷಿ ಕುರಿತ ಪ್ರೇರಣೆ ತುಂಬುವ ಕಾರ್ಯ ಈ ಸಿನಿಮಾಗಳು ಮಾಡಬೇಕಾಗಿದೆ. 

Dr Rajkumar Songs Download: Dr Rajkumar MP3 Hit Songs Online Free on  Gaana.com

         ಇಂದಿನ ನಿರ್ಮಾಪಕರು ಈ ಬಗ್ಗೆ ಹೆಚ್ಚು ಗಂಭೀರರಾದಂತೆ ಕಾಣುವುದಿಲ್ಲ. ಇಂಥ ವೇಳೆಯಲ್ಲಿ ಕಗ್ಗತ್ತಲ ಕಾಡಿನ ನಡುವೆ ಬೆಳಕಿನ ಆಶಾಕಿರಣಗಳಾಗಿ ಡಾ. ರಾಜಕುಮಾರ ಅವರ ಸಿನಿಮಾಗಳು ಕಂಡುಬರುತ್ತವೆ. ಮನುಷ್ಯನಿಗೆ ಮುಪ್ಪು ಬರುತ್ತದೆ, ಸಿನಿಮಾಗಳಿಗಲ್ಲ ಡಾ. ರಾಜಕುಮಾರ ಅವರ ಸಿನಿಮಾಗಳಿಗಂತೂ ಎಂದೂ ಇಲ್ಲ. ಅವು ಸದಾ ಹಸಿರು ಚಿತ್ರಗಳು. ಡಾ. ರಾಜಕುಮಾರ ಅವರು ಕೃಷಿ ಸಂಬಂಧಿತ ಸಿನಿಮಾಗಳಲ್ಲಿ ಅತ್ಯದ್ಭುತವಾಗಿ ನಟಿಸಿದ್ದಾರೆ. ಇಂತಹ ಚಿತ್ರಗಳಲ್ಲಿ ‘ಬಂಗಾರದ ಮನುಷ್ಯ’ ಒಂದು ದಾಖಲೆ ಮೈಲುಗಲ್ಲು. ಡಾ. ರಾಜಕುಮಾರ ಅವರ ಕೃಷಿ ಸಂಬಂಧಿತ ಸಿನಿಮಾಗಳನ್ನು ಇಂದಿನ ಯುವಕರು ನೋಡಿ ಕಲಿತುಕೊಳ್ಳುವುದು ಬಹಳಷ್ಟಿದೆ. ಯುವಕರು ತಾವಾಗಿಯೇ ನೋಡದಿದ್ದರೂ ಸಿನಿಮಾ ಗೃಹಗಳು ಇಂತಹ ಸಿನಿಮಾಗಳನ್ನು ತೋರಿಸುವ ಅವಶ್ಯಕತೆ ಇದೆ. ಸರಕಾರಿ ಮತ್ತು ಖಾಸಗಿ ಚಾನೆಲ್ ಗಳಲ್ಲಿ ಡಾ. ರಾಜಕುಮಾರ ಅವರ ಕೃಷಿ ಸಂಬಂಧಿತ ಸಿನಿಮಾಗಳನ್ನು ಪುನಃ ಪುನಃ ತೋರಿಸುವ ಅವಶ್ಯಕತೆ ಇದೆ.   

           ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ‘ಹಳ್ಳಿಗಳತ್ತ ನಡೆಯಿರಿ’ ಎಂದು ಕರೆಕೊಟ್ಟರು. ಆದರೆ ಇಂದಿನ ಸಿನಿಮಾಗಳು ಬಣ್ಣದ ಲೋಕವನ್ನು ಸೃಷ್ಟಿಸಿ ‘ಪಟ್ಟಣಗಳತ್ತ ನಡೆಯಿರಿ’ ಎಂದು ಅಘೋಷಿತವಾಗಿ ಕರೆ ಕೊಟ್ಟಿವೆ. ಕಾಲ ಎಲ್ಲರ ಕಾಲ ಎಳೆಯುತ್ತದೆ ಎಂಬುದು ಎಲ್ಲರಿಗೂ ಮತ್ತೊಮ್ಮೆ ಅರಿವಾಗಿದೆ. ಮುಂಬಯಿ- ಬೆಂಗಳೂರಿಗೆ ಓಡಿದ್ದ ಯುವಕರು ಇಂದು ಸದ್ದಿಲ್ಲದೆ ಬಂದು ಹಳ್ಳಿ ಸೇರುತ್ತಿದ್ದಾರೆ. ಪ್ರತಿಷ್ಠೆಯ ವಿಷಯವಾಗಿದ್ದ ವಿದೇಶ ಪಯಣ ಮುಂದಿನ ಪೀಳಿಗೆಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಅನಿವಾರ್ಯವಾಗಿಯಾದರೂ ಯುವಜನರು ನೇಗಿಲ ಯೋಗಿಗಳಾಗಬೇಕಾಗಿದೆ. 

            ಇಂದು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಉಪಯೋಗವಾಗುವ ಹೊಸ-ಹೊಸ ಯಂತ್ರಗಳು ಬಂದಿವೆ ಮತ್ತು ಬರುತ್ತಿವೆ. ಸರಕಾರ ಬ್ಯಾಂಕುಗಳ ಮುಖಾಂತರ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಆಧುನಿಕ ತಂತ್ರಜ್ಞಾನ ಬಳಸಿ ಒಕ್ಕಲುತನ ಮಾಡಿ ಲಕ್ಷಗಟ್ಟಲೆ ಲಾಭ ಗಳಿಸಿದವರೂ ಇದ್ದಾರೆ. ಯುವಕರಿಗೆ ಯೋಗ್ಯ ಮಾರ್ಗದರ್ಶನ ಒಂದನ್ನು ಬಿಟ್ಟರೆ ಯಾವ ಕೊರತೆಗಳೂ ಇಲ್ಲ. ಡಾ. ರಾಜಕುಮಾರ ಅವರ ಕೃಷಿ ಸಂಬಂಧಿತ ಸಿನಿಮಾಗಳು ಇಂದಿಗೂ ಯುವಕರನ್ನು ಕೃಷಿಕ್ಷೇತ್ರದತ್ತ ಆಕರ್ಷಿಸುವ ಶಕ್ತಿ ಹೊಂದಿವೆ. ಡಾ. ರಾಜಕುಮಾರ ಅವರ ಕೃಷಿ ಸಂಬಂಧಿತ ಸಿನಿಮಾಗಳು ಕೇವಲ ಇಂದು ಮಾತ್ರವಲ್ಲ ಎಂದೆಂದಿಗೂ ಅನುಕರಣೀಯವಾಗಿವೆ 

*****

ಡಾ. ಗುರುಸಿದ್ದಯ್ಯ ಸ್ವಾಮಿ

2 thoughts on “ನೆಲಮೂಲ ಸಂಸ್ಕೃತಿಯ ಕಲಿಸಿದ ವರನಟ ಡಾ. ರಾಜಕುಮಾರ

  1. ನಿಮ್ಮ ಲೇಖನ ಇಷ್ಟವಾಯಿತು.. ರಾಜ್ ಕುಮಾರ್ ನಮ್ಮ ಸಂಸ್ಕೃತಿಯ ಭಾಗ

Leave a Reply

Back To Top