ವಿಧಿ

ಕವಿತೆ

ವಿಧಿ

ಅನಂತ ಕುಣಿಗಲ್

ವಿಧಿ ಎಂದರೇನು? ಎಂಬ ಪ್ರಶ್ನೆಗೆ
ಕೂರೋನಾ ಉತ್ತರಿಸಿತು ಮೆಲ್ಲಗೆ
ಸಾವು-ನೋವುಗಳ ಸಂತಾಪ
ಉಳಿದಷ್ಟೇ ಜೀವಗಳ ಉಸಿರಾಟ
ಎಚ್ಚರವಿದ್ದವರು ಬದುಕುಳಿಯಬಹುದು
ಮಿತಿಮೀರಿದರೆ ಸಾವಿನ ಟಿಕೇಟ್ ಖಚಿತ

ಹೀಗಾಗಿ ದಶಕಗಳೇ ಕಳೆದಿದ್ದವು
ಬೇರೊಂದು ಕ್ರಿಮಿಯ ಮುಂದಾಳತ್ವದಲ್ಲಿ
ಆಗಲೂ ಜನ ಸತ್ತಿದ್ದರು ನಿಶ್ಚಿಂತೆಯಿಂದ
ಈಗ, ಉಸಿರಾಟವನ್ನೇ ಕಳೆದುಕೊಂಡರು
ಮನೆ ಮಂದಿಯಲ್ಲ ಸುಡುವ ಬಾವಿಗೆ ಬಿದ್ದರು
ಈಜು ಕಲಿತಿದ್ದರೂ ಪ್ರಯೋಜನವಿಲ್ಲ
ಎಲ್ಲವನ್ನು ಮೊದಲೇ ಯೋಚಿಸಬೇಕಿತ್ತು

ಮಾತು ಬಂದರೂ
ಬಾಯಿ ಮುಚ್ಚಿಕೊಳ್ಳಬೇಕು
ಸಂಬಧವಿದ್ದರೂ ದೂರ ನಿಲ್ಲಬೇಕು
ಹಣ, ಜಾತಿ, ಧರ್ಮ, ದೇವರೆಲ್ಲಾ ಪ್ರೇಕ್ಷಕರು
ಅದಕ್ಕಾಗಿ ಅವರಿಗೆ ನಮ್ಮ ಚಪ್ಪಾಳೆಗಳು
ಜಾಗ್ರತೆ, ನಂಬಿಕೆ, ಭರವಸೆಗಳು ಬೇಕಾಗಿವೆ
ಭವಿಷ್ಯದ ದೇಶ ಕಟ್ಟುವಿಕೆಗಾಗಿ..

ತವರುಮನೆಯೇ ಸಾವಿನ ಗುಡಿಯಾಗಿದೆ
ದೇಶ ಉರಿಯುತ್ತಿರುವ ಮಸಣವಾಗಿದೆ
ನಮ್ಮೆಲ್ಲರ ಇರುವಿಕೆಯ ರುಜುವಿಗಾಗಿ
ಸಮಾನತೆಯಿಂದ ಹೋರಾಡಬೇಕಾಗಿದೆ
ದೂರ ನಿಂತು ಮಾತುಗಳನ್ನು ನುಂಗಿಕೊಳ್ಳಬೇಕಿದೆ
ನರಕವಾಗಿದ್ದ ನಾಲ್ಕು ಗೋಡೆಗಳೇ ಪರಿಚಿತವಾಗಿವೆ
ಈಗ ಗೋಡೆಗಳಿಗೂ ಮಾತು ಬಂದಿವೆ

ಎಲ್ಲಾ ಅಯೋಮಯವಾಗಿದೆ
ವಿಪರ್ಯಾಸದ ಸಂಗತಿಗಳು ಸಾವಿರಾರಿವೆ
ಮಾಧ್ಯಮಗಳಿಗೆ ದಿನವಿಡೀ ಒಂದೇ ಸುದ್ಧಿ
ಸತ್ತವರ ಲೆಕ್ಕ ಕೊಡುವುದೇ ನಾಯಕರ ಕೆಲಸ
ಜೀವ ಕಳೆಯುವುದೆಂದರೆ ಕೆಲವು ವೈದ್ಯರಿಗಿಷ್ಟ
ಹಸು ಕಾಯುವವರಿಗೂ ಕರುಣೆಯುಂಟು
ಆದರೆ, ಕೆಲವು ಲಾಠಿಧಾರಿಗಳಿಗೆ ಹೃದಯವೇ ಇಲ್ಲ
ಜನರಿಗೂ ಬುದ್ಧಿ ಇಲ್ಲ, ಆಡಳಿತವೂ ಮುಗಿಯಿತು
ಪ್ರಕೃತಿಯದ್ದೇ ವಿಜಯ ಭರಾಟೆ
ಎಚ್ಚರ ಎಚ್ಚರ ಎಚ್ಚರ!!

ಇದು ಮಸಣ ಸೇರಿದ ಕೊರೋನ ಪೀಡಿತ
ನವಯುವ ಸಂಸಾರಿಕನೊಬ್ಬನ ಸ್ವಗತ


********************

7 thoughts on “ವಿಧಿ

Leave a Reply

Back To Top