ಗಜಲ್
ಅರುಣಾ ನರೇಂದ್ರ
ಇಲ್ಲಿ ಉಸಿರಿಗಾಗಿ ಒದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ
ಅಲ್ಲಿ ಬದುಕಿಗಾಗಿ ಹುಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ
ಚಂದ್ರಮನ ಮುಖ ನೋಡಿ ತಿಂಗಳ ಪೂರ್ತಿ ರೋಜಾ ಮಾಡಿರುವೆ
ಇವರು ನೋಟುಗಳ ಮುದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ
ಶಹರಿ ಹೊತ್ತಲ್ಲಿ ಸತ್ತವರು ನೆನಪಾಗಿ ಕಣ್ಣು ತುಂಬಿಕೊಳ್ಳುತ್ತವೆ
ಇಫ್ತಾರ್ ಮಾಡುತ್ತ ಮಿಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ
ಹಗಲೆನ್ನದೆ ಇರುಳೆನ್ನದೆ ನಮಾಜು ಮಾಡಿ ದುವಾ ಬೇಡಿದ್ದೇನೆ
ದೇಶದ ದಳ್ಳುರಿ ತಣ್ಣಗಾಗದೆ ತಡಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ
ಕೆಂಪಾದ ಮೆಹಂದಿಯ ರಂಗು ಕಣ್ಣ ಸುರುಮಾವನ್ನೇ ಇರಿಯುತ್ತಿದೆ
ಕಾಣದ ಕೈಗಳಿಗೆ ಜೀವಗಳನ್ನೇ ಜಕಾತ್ ನೀಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ
ಹಬ್ಬಕ್ಕೆ ಕೊಂಡ ಹೊಸ ಬಟ್ಟೆ ಕಫನ್ ಆಗುತ್ತದೆಂದು ನನಗೆ ಗೊತ್ತಿರಲಿಲ್ಲ
ಮುಳುಗಿದ ಚಾಂದ್ ಗಾಗಿ ಇಂತಜಾರ್ ಮಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ
ಕತ್ತಲಲ್ಲಿ ತಡವರಿಸುವ ಅರುಣಾ ಗೆ ಶಮೆಯ ಬೆಳಕು ಕಾಣುತ್ತಿದೆ
ಕೈಚೆಲ್ಲಿದ ಅಲ್ಲಾಹುವಿಗೆ ಇನ್ನೂ ಬೇಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ
********