ಗುರು ಬಸವ

ಬಸವ ಜಯಂತಿಯ ವಿಶೇಷ ಕವಿತೆ

ಗುರು ಬಸವ

ಕೆ.ಶಶಿಕಾಂತ

ಪೀಠ-ಪಟ್ಟವೇರಲಿಲ್ಲ,
ಬಿರುದು-ಬಾವಲಿಗೆಳಸಲಿಲ್ಲ
ಸಗ್ಗದ ದೇವತೆಯಂತೂ ಅಲ್ಲ
ಪೂಜೆ-ಪರಾಕು ಬೇಕೇ ಇಲ್ಲ
ಜಗದ ಸೇವೆಗೊಲಿದು ಬಂದ
ಭಕ್ತನೀತ ಬಸವ….

ಭುವಿಯ ಮೇಲೆ ಗುರುಗಳಿಲ್ಲ
ದೀವತೆಗಳಂತೂ ಸಾಧ್ಯವಿಲ್ಲ
ಎಲ್ಲ ಎಲ್ಲ ನಾವೇ ಎಲ್ಲ
ಎನುವ ಡೊಂಬರ
ನುಡಿಯನಳಿದು
ನೆಲದ ಮೇಲೆ ಭಕ್ತರಿಲ್ಲ
ಜಗವು ಜಂಗಮವಾಗಿಹುದಲ್ಲ
ಇದ್ದರಹುದು ನಾನೇ ಒಬ್ಬ
ಭಕ್ತನೆಂದ ಭೃತ್ಯನೀತ ಬಸವ…

ಜಗದ ಕುರುಹನರಿಯದೆಯೂ
ಜಗದ ಗುರು ತಾನೇ ಎಂದು
ಒರಲಿ ಒರಲಿ ತಮಟೆ ಹೊಡೆವ
ಕೂಗುಮಾರಿ ಕೂಟದಿ
ಗೊಡ್ಡುತನದ ಗಡ್ಡ ಬಿಸುಟು
ದೊಡ್ಡತನದ ಹಮ್ಮು ಹೊಸೆದು
ಕಿರಿಯ ತಾನು, ಹಿರಿಯರೆಲ್ಲರೆಂದು
ನಮಿಪ ಶಿವ ಭಕ್ತ ಪ್ರೇಮಿ ಬಸವ.

ಹೆಣ್ಣು,ಹೊನ್ನು,ಮಣ್ಣಿಗೆಳಸಿ
ಹಿರಿಯ ದೈವ ತಾವೇ ಎನಿಸಿ
ಗರುವದಿಂದ ಅಳಿದು ಹೋದ
ಹಿರಿಯನಲ್ಲ ಬಸವ.

ಮೂರನಳಿದು,ಆರು ತಿಳಿದು
ಅಂಗವಳಿದು ಲಿಂಗವಾಗಿ
ಎಲ್ಲರೊಳು ಜಂಗಮವ ಕಾಣ್ವ
ಸಂಗನ ನಿಲುವು ಬಸವ
ಸಕಲ ಜೀವದ ಕುಶಲ ಬಯಸಿ
ಅನ್ಯವನವನಳಿದು ತನ್ನತನಕೆ ಎಳಸಿ
ಇಹದ ಸುಖಕೆ ದಾಸೋಹಿಯಾದ
ಜಗದ ಗುರು ಬಸವ.

ದೇವಗಿಂತ ಭಕ್ತ ಮಿಗಿಲು
ಪದವಿಗಿಂತ ಸೇವೆ ಮಿಗಿಲು
ಓದಿ ಜಾಣನಾಗೋ ಬದಲು
ಅರಿದು ಶರಣನಾಗುವದೇ ಮೇಲು
ಎಂದು ಅರುಹಿ ಜಗವ ಪೊರೆದ
ಆದಿ ಗುರುವು ಬಸವ
ನಮಗೆ ಜಗದ ಗುರು ಬಸವ

**************

One thought on “ಗುರು ಬಸವ

Leave a Reply

Back To Top