ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಸವ ಜಯಂತಿಯ ವಿಶೇಷ ಕವಿತೆ

ಜ್ಞಾನ ಜ್ಯೋತಿಗೆ ಶರಣು

ಪ್ರಭಾವತಿ ಎಸ್ ದೇಸಾಯಿ

ಹುಟ್ಟು ಸೂತಕದ ಕುರುಹು ತ್ಯಜಿಸಿದಾತ
ಅರಿವಿನ ಲಿಂಗವ ಕರದೊಳು ಕೊಟ್ಟಾತ
ನರಜನ್ಮಕೆ ಹರಜನ್ಮದ ಅರಿವು ಮೂಡಿಸಿದಾತ
ಭವ ಬಂಧನವ ಬಿಡಿಸಿದಾತಂಗೆ ಶರಣು

ಜ್ಞಾನದ ಬೀಜ ಬಿತ್ತಿ,ಅಜ್ಞಾನದ ಕಳೆ ಕಳೆದಾತ
ಲಿಂಗ ಭೇದವ ಅಳಿಸಿ ಸಮಾನತೆ ಹಕ್ಕು ನೀಡಿದಾತ
ಜಾತಿಯ ಅಳಿಸಿ ಜಾತ್ಯಾತೀತ ರಾಷ್ಟ್ರ ನಿಮಿ೯ಸಿದಾತ
ಶೋಷಣೆಯ ಧಿಕ್ಕರಿಸಿದಾತಂಗೆ ಶರಣು

ನೊಂದ ಹೃದಯಗಳ ಒಂದು ಗೂಡಿಸಿದಾತ
ಕಾಯಕದಿ ಆಥಿ೯ಕ ಸಮಾನತೆ ಸಾರಿದಾತ
ವೇದ ಉಪನಿಷತ್ತುಗಳ ಭಾಷ್ಯವ ತ್ಯಜಿದಾತ
ವಚನಾನುಭವಾಮೃತವ ಉಣಿಸಿದಾದಂಗೆ ಶರಣು

ದೇಹವೇ ದೇವಾಲಯ,ಶಿರವೇ ಹೊನ್ನಕಳಸವೆಂದಾತ
ದಯವೇ ಧರ್ಮದ ಮೂಲವೆಂದಾತ
ಗುರು ಲಿಂಗ ಜಂಗಮ ಗಳ ತ್ರಿಕೂಟ ನಿಮಿ೯ಸಿದಾತ
ದಾಸೋಹವೇ ಸಹ ಬಾಳ್ವೆ ಎಂದಾತಂಗೆ ಶರಣು

ಭವದ ವ್ಯವಹಾರಕೆ ದಂಡಾಧೀಶನಾದಾತ
ನುಡಿದಂತೆ ನಡೆದು ಕಾಯಕ ನಿಷ್ಠೆ ತೋರಿಸಿದಾತ
ಶರಣ ಸತಿ ಲಿಂಗಪತಿ ಎಂದು ಭವದಲಿ ಬಾಳಿದಾತ
ಭಕ್ತಿ ಭಂಡಾರಿಯಾದ ಅಣ್ಣ ಬಸವಂಗೆ ಶರಣು

ಕಲ್ಯಾಣದಲಿ ಅನುಭವ ಮಂಟಪ ಸ್ಥಾಪಿದಾತ
ಜಗಕೆ ಪ್ರಜಾ ಪ್ರಭುತ್ವದ ಕಲ್ಪನೆ ಹುಟ್ಟಿಸಿದಾತ
ಬಿಜ್ಜಳನ ಅಮಾತ್ಯ ಪದವಿಯ ತ್ಯಜಿಸಿದಾತ
ಭವದಲಿ ಜ್ಞಾನ ಜ್ಯೋತಿ ಬೆಳಗಿಸಿದಾತಂಗೆ ಶರಣು.

****************

About The Author

Leave a Reply

You cannot copy content of this page

Scroll to Top