ಅಂಕಣ ಬರಹ

ರಂಗ ರಂಗೋಲಿ

ತೆರೆ ತೆರೆ ತೆರೆದಾ ಬಣ್ಣದ ಪರದೆ

ಬಿಳಿ ಕ್ಯಾನ್ವಾಸ್ ಮೇಲೆ ಕಲಾವಿದ ಬಣ್ಣಗಳನ್ನು ಎರಚಿದಂತೆ,ಚೆಲ್ಲಿದಂತೆ ಕಾಣಿಸುತ್ತದೆ. ಅದೇನೋ ಗೆರೆ ಗೀಚಿ ಎಳೆದಂತೆ. ಗಮನಿಸುವ‌ ನಯನಗಳಿಗೆ, ಅದರಾಚಿಗಿನ ಅರಿವಿಗೆ, ಅಸ್ಪಷ್ಟ ಸಂದೇಶ. ನಿಧಾನವಾಗಿ ಬಣ್ಣಗಳು ತಮ್ಮ ತಮ್ಮ ನಿರ್ಧಿಷ್ಟ ಜಾಗದಲ್ಲಿ ಹೊಂದಿಕೊಂಡು ರೂಪುಪಡೆದಂತೆ. ಗೀಚಿದ ಗೋಜಲು ಗೆರೆಗಳು ಸ್ಪಷ್ಟತೆಯನ್ನು ಪಡಕೊಳ್ಳುತ್ತ ಕಲಾಕೃತಿಯೊಂದು ಮೈದಳೆಯುತ್ತದೆ. ಅಚ್ಚರಿ ಕುಸುರಿ ಸಾಕ್ಷಾತ್ಕರಿಸಿದಂತೆ.

ರಂಗದ ಎದುರು ಶಾಲೆಯ ಬೆಂಚ್ ಮೇಲೆ ಕೂತ ನನ್ನ ಸ್ಥಿತಿ ಅಮಾಯಕನ ನೋಟದಂತಿತ್ತು. ಚಮ್ಮಾರನ ಚಾಲಾಕಿ ಹೆಂಡತಿ ನಾಟಕದಲ್ಲಿ ಬಣ್ಣ ಹಚ್ಚಿದ್ದೇನೋ ಸತ್ಯ. ಯಾವ ತಿಳುವಳಿಕೆ ಪಡೆದೆ? ಒಂದೆರಡು ಷೋನಲ್ಲಿ ನಟಿಸಿದ್ದೆ. ಅದು ಯಾವುದೋ ಹುಮ್ಮಸ್ಸಿಗೆ ದೊರಕಿದ ಕಿರು ಶಮನಕಾರಿ ಮುಲಾಮ್.

 ಆದರೆ ಒಳಗಣ್ಣು ತೆರೆದು ಎಲ್ಲವನ್ನೂ ಗಮನಿಸುತ್ತಿರಲಿಲ್ಲ. ಹೇಳಿಕೊಟ್ಟದ್ದನ್ನು ರಿಕ್ರಿಯೇಟ್ ಮಾಡಿ ನಟಿಸಿದ್ದೆ. ಆಗಲೇ ರಂಗಭೂಮಿಯ ಮುಂದಿನ ನಾಟಕಕ್ಕೆ ಸಿದ್ದತೆ ಗಳು ಆರಂಭಗೊಂಡಿತ್ತು. 

ಹಿರಿಯ ಕಲಾವಿದರೂ ಹಾಗೂ ಆಡಳಿತ ಮಂಡಳಿಯವರು, ನಿರ್ದೇಶಕರೂ ಚರ್ಚಿಸಿ “ಹ್ಯಾಮ್ಲೆಟ್” ನಾಟಕದ ಕನ್ನಡ ರೂಪಾಂತರ ‘ಹೇಮಂತ’ವನ್ನು ಎತ್ತಿಕೊಂಡಿದ್ದರು. ಶಿವರಾಮ ಕಾರಂತರು ಅಚ್ಚಿಗಿಳಿಸಿದ ಕನ್ನಡ ರೂಪಾಂತರದ ನಾಟಕ.

 ‘ಬಾಸುಮ’ ಅವರ ನಿರ್ದೇಶನ.

 ಅದೇ ಪದವಿಪೂರ್ವ ಕಾಲೇಜಿನ ಹೊರಾವರಣದ ವೇದಿಕೆಯಲ್ಲಿ ಒಂದಷ್ಟು ಕಲಾವಿದರು ಸೇರಿದ್ದರು. ನಾನೂ ಅಳುಕುತ್ತಲೇ ವೇದಿಕೆ ಏರಿದ್ದೆ. ‘ಬಾಸುಮ’ರವರು ಎಲ್ಲರನ್ನೂ ಕುಳ್ಳಿರಿಸಿ ನಾಟಕದ ಓದಿಗಿಂತ ಮುನ್ನ ice breaking excise ಕೆಲವು ಮಾಡಿಸಿದ್ದರು.

ಒಬ್ಬೊಬ್ಬರಿಗೂ ಇಷ್ಟದ ಹಾಡಿನ ಒಂದು ಚರಣ ಹಾಡುವಂತೆ ಆದೇಶ. ನನಗೆ ಥಟ್ಟನೆ ನೆನಪಾಗಿದ್ದು

 ” ಮೆಲ್ಲುಸಿರೇ ಸವಿ ಗಾನ.. “

ಎಂಬ ಹಾಡು. ಆಗಿನ್ನೂ ಕಥೆ, ಕವನ, ನಾಟಕ, ಇವುಗಳಲ್ಲಿ  ಭಾವ ಮತ್ತು ಕಾಯ ಕಂಡರೂ ಅದರೊಳಗಿನ ಆತ್ಮ  ಸ್ಪರ್ಶಿಸುವಷ್ಟು ಪ್ರಜ್ಞೆ ತೆರೆದಿರಲಿಲ್ಲವೋ, ಅಮಾಯಕತೆಯೋ  ನನ್ನಲ್ಲಿದ್ದಿರಬೇಕು.

ಹಾಡು ಹಾಡಿದ ನಂತರ ಒಂದು ನಿಮಿಷ ಕಣ್ಮುಚ್ಚಿರಬೇಕು. ಒಂದು ನಿಮಿಷ ಆದ ಕೂಡಲೇ ಕೈಯೆತ್ತಿ ಎಂಬ ನಿರ್ದೇಶನ. ನಾನು ಕಣ್ಮುಚ್ಚಿ

‘ ಒಂದು, ಎರಡು, ಮೂರು…. ಅರುವತ್ತು’ 

ಎಂದು ಮುಗಿಸಿ ಕೈಯೆತ್ತಿದೆ. ಕೆಲವರು ಬೇಗ ಕೆಲವರು ಒಂದಷ್ಟು ಸಮಯ ಹೆಚ್ಚು ತಗೊಂಡರು. ನಿಜವೆಂದರೆ ಕಣ್ಣು ಮುಚ್ಚಿದ ನನ್ನ ಮನಸ್ಸು ಅಂಕೆಗಳನ್ನು ಎಣಿಸುತ್ತಿದ್ದರೂ ಆತಂಕ. ಕಣ್ಣು ಬಿಡುವಂತಿಲ್ಲ, ಎದುರು ಮೇಷ್ಟ್ರು. ಅದೂ 16-17 ಕಲಾವಿದರಲ್ಲಿ ಕೇವಲ ಮೂರು ಜನ ಮಹಿಳೆಯರು.  ನನ್ನ ಒಳ ಲೆಕ್ಕಾಚಾರ ಏರುಪೇರಾಗುದೆಯೇ? ಎಲ್ಲರೂ ಕಣ್ಣು ತೆರೆದಿದ್ದರೇ..? ಕೇವಲ ಸಾಂದ್ರ ಮೌನವೊಂದು ಸುತ್ತಲೂ ಆವರಿಸಿದಂತೆ. ಮನಸ್ಸನ್ನು ಸಮಾಧಾನ ಪಡಿಸುತ್ತಲೇ ಒಂದು ನಿಮಿಷ ಮುಗಿಸಿ

‘ ಭೇಷ್’ ಅನಿಸಿಕೊಂಡಿದ್ದೆ. ಎಂತದೋ ಖುಷಿ. ಸಣ್ಣಸಣ್ಣ ವಿಷಯಗಳೂ ಎಂತಹ ಅನೂಹ್ಯ ಸಂತಸ ಉಡಿಗೆ ತುಂಬ ಬಹುದು ಅನಿಸುತ್ತದೆ.

ನಾಟಕದ ಪಾತ್ರದೊಳಗಿನ ಅಭಿವ್ಯಕ್ತಿಯಲ್ಲಿ, ಕಾಲಗಣನೆ ಅತ್ಯಂತ ಮಹತ್ವದ್ದು. ಭಾವನಾತ್ಮಕ ಸನ್ನಿವೇಶದಲ್ಲಿ ಮುಳುಗಿದಾಗಲೂ ಅಂತರಂಗದಲ್ಲೊಂದು ಗಡಿಯಾರದ ಗಂಟೆ, ಢಣ್ ಢಣ್ ಅಂತ ಸದಾ ಆಂದೋಳಿಸಬೇಕು. ನಾಟಕದ ಒಟ್ಟೂ ದೃಶ್ಯಗಳು ಅವುಗಳವುಗಳ ಸಮಯದ ಪೊಟ್ಟಣಗಳೊಳಗೆ ತುಂಬಿ, ರಂಗ ಪ್ರದರ್ಶನ ಹದ ಬರಬೇಕು.

ನಂತರ ಹೇಮಂತ ನಾಟಕದ ಓದು. ಸುಮ್ಮನೆ ಓದುವುದು. ನನ್ನಜ್ಜಿ ರಾಮಾಯಣ, ಮಹಾಭಾರತದ ಕಥೆ ಓದಿದ್ದೂ ಓದಿಸಿದ್ದೂ ನೆನಪಾಯಿತು. ಆದರೆ ಇಲ್ಲಿ ಏನೋ ಹೊಸದು, ಅಪರಿಚಿತತೆ, ಸ್ವರದಲ್ಲಿ ಅಂಜಿಕೆಯ ಕ್ಷೀಣ ನಡುಕ. ಆಗಿನ ನನ್ನ ಸ್ವಭಾವವೂ ಹಾಗೇ ಇತ್ತು. ಯಾರಾದರೂ ಕಣ್ಣು ದೊಡ್ಡಮಾಡಿ ದಿಟ್ಟಿಸಿದರೆ ನನ್ನ ಕಣ್ಣು ತುಂಬಿಕೊಳ್ಳುತ್ತಿತ್ತು.

‘ಬಾಸುಮ’  ಅವರು ಓದುವ ರೀತಿ, ಪದಗಳಿಗೆ ಜೀವ ತುಂಬಿ ಮಾತಾಗಿಸುವ ಪರಿಗಳನ್ನು ತಿಳಿಸುತ್ತಿದ್ದರು. ನನ್ನಲ್ಲಿ ವಿಪರೀತ ಆಸಕ್ತಿ, ಪ್ರೀತಿ ಇತ್ತು. ಆದರೆ ತಿಳುವಳಿಕೆ, ಏಕಾಗ್ರತೆ ಕಡಿಮೆ.

   ಈ ನಾಟಕದಲ್ಲಿ ಚಮ್ಮಾರನ ಚಾಲಾಕಿ ಹೆಂಡತಿ ಪಾತ್ರದ ಚಂದ್ರಕಲಾ ಮಾತ್ರವಲ್ಲದೆ ನನ್ನಂತೆ ಹೊಸದಾಗಿ ಜೋಡಣೆಯಾದ ಸುಜಾತಾ ಶೆಟ್ಟಿ ಎಂಬವರೂ ಇದ್ದರು. ಅವರು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದವರು. ಬಲುಬೇಗ ನಾವಿಬ್ಬರೂ ಆತ್ಮೀಯರಾದೆವು. ಇದಕ್ಕೆ ಕಾರಣ, ರಂಗಕ್ಕೆ ನಾವಿಬ್ಬರೂ ಅಂಬೆಗಾಲಿನ ಶಿಶುಗಳಾಗಿದ್ದುದೂ ಇರಬಹುದು.

ನಾಟಕದಲ್ಲಿ ಸುಜಾತಾ ಅವರು, ರಾಣಿಯ ಪಾತ್ರಕ್ಕೆ ( ಕೌಮುದಿ) ಆಯ್ಕೆಯಾದರು. ಅವರ ಜೊತೆ ಹಿರಿಯ ಕಲಾವಿದರಾದ ಎಮ್.ಎಸ್.ಭಟ್, ಅವರದ್ದು ರಾಜನ ( ಕಲಿವೀರ) ಪಾತ್ರ.  ಕೌಮುದಿ, ಹೇಮಂತನ ತಾಯಿ ಹಾಗೂ ಕಲಿವೀರ ಹೇಮಂತನ ಚಿಕ್ಕಪ್ಪ. ಪ್ರತಿಭಾನ್ವಿತ ಕಲಾವಿದರಾದ ರಾಜಗೋಪಾಲ ಶೇಟ್ ಮಂತ್ರಿ. ಅವರ ಮಗಳು ಉಷಾ ( ಹೇಮಂತನ ಪ್ರೇಯಸಿ) ನಾನಾಗಿದ್ದೆ.

ಸಂತೋಷ್ ಎಂಬುವವರದ್ದು ನನ್ನಣ್ಣನ ( ವಿಲಯಕೇತು) ಪಾತ್ರ. ನಿಜದ ಬದುಕಿನಲ್ಲಿ ಬಾಲ್ಯದಿಂದಲೂ ಕಂಡ ಸ್ನೇಹಿತ, ಸಹೋದರ. ಹೇಮಂತ ಪಾತ್ರದಲ್ಲಿ ಪ್ರದೀಪ್ ಚಂದ್ರ , ಆತನ ಗೆಳೆಯನ ಪಾತ್ರದಲ್ಲಿ ಚಮ್ಮಾರ ಪಾತ್ರ ಮಾಡಿ ಗೆದ್ದ ರಾಘವೇಂದ್ರ. ಹೊಸದಾಗಿ ರಾಜೇಶ್, ಪ್ರವೀಣ್, ಬಾಲಚಂದ್ರ, ರವಿರಾಜ್, ನಂದಕುಮಾರ್, ಮೇಟಿ, ಚಂದ್ರಕಲಾ..ಅದೆಷ್ಟು ಕಲಾವಿದರು.

ಈಗ ಇವರಲ್ಲಿ ಹೆಚ್ಚಿನವರೆಲ್ಲ  ರಂಗದಲ್ಲಿ  ಕೆಲಸಗಳನ್ನು, ಹೊಸಹೊಸ ಪ್ರಯೋಗಗಳನ್ನು ನಡೆಸಿ ಹೆಜ್ಜೆ ಗುರುತು ಮೂಡಿಸಿದ್ದಾರೆ. ಅಂದು ಹಾಗೆ ಸುಂದರ ತಂಡವೊಂದು ನಿರ್ಮಾಣಗೊಂಡಿತ್ತು.

ರಿಹರ್ಸಲ್ 6.30 ಕ್ಕೆ ಆರಂಭಗೊಳ್ಳುತ್ತಿತ್ತು. ನನಗೆ ಅದುವರೆಗೆ ಶಾಲೆಯ ಹಂತದಲ್ಲಿ ಮಾಡಿದ ನಾಟಕ,ಅಭಿನಯದ ಬಡ್ತಿಯಿದು ಅನಿಸಲಿಲ್ಲ. ಹೊಸದಾಗಿ ನಟನೆಯ ಅಕ್ಷರಾಭ್ಯಾಸ ಆಗುತ್ತಿತ್ತು. ‘ಬಾಸುಮ’ ಸರ್ ಹೇಳಿದಂತೆ‌ ನಟಿಸುತ್ತಿದ್ದೆ. ರಂಗದಲ್ಲಿ ನಾನು ಗೊಂಬೆ, ಸರ್ ಸೂತ್ರಧಾರ. ಈ ಪಾತ್ರಕ್ಕಾಗಿ ವಿಶೇಷವಾದ ಪಿಂಕ್ ಬಣ್ಣದ ಉದ್ದನೆಯ ಲಂಗ, ಬ್ಲೌಸ್ ಹೊಲಿಸಲಾಯಿತು.

ಅಣ್ಣನ ವಾತ್ಸಲ್ಯ, ಪ್ರಿಯತಮನ ಪ್ರೀತಿಗಾಗಿ ಚಡಪಡಿಕೆ, ಕಾಯುವಿಕೆ. ಸಿಗಲಾರದಾದಾಗ ದುರಂತ ಅಂತ್ಯ ಕಾಣುವ ಪಾತ್ರ.

 ಇದರಲ್ಲಿ ನನ್ನ ಕೈಯಲ್ಲಿ ಉದ್ದದ ಹೂಮಾಲೆ ಇತ್ತು. ಅದನ್ನು ಹಿಡಿದುಕೊಂಡು ನರ್ತಿಸುವ ಒಂದು ಸನ್ನಿವೇಶ. ನನಗೆ  ಲಯಬದ್ದವಾಗಿ ಹೆಜ್ಜೆ ಹಾಕಿ ನರ್ತಿಸಲು ಬರುತ್ತಿರಲಿಲ್ಲ. ಇದಕ್ಕೆ ಮುಕ್ಕಾಲಂಶ ನನ್ನ ಸಂಕೋಚ ಸ್ವಭಾವ ಕಾರಣವಾಗಿತ್ತು. ಒಮ್ಮೆ ರಂಗದ ಮೇಲೆ ನಮ್ಮನ್ನು ಒಪ್ಪಿಸಿಕೊಂಡ ನಂತರ ಅವನು( ಅವಳು) ಕೇವಲ ಕಲಾವಿದ. ಉಳಿದೆಲ್ಲವೂ ಆಚೆಗೆ ಉಳಿದು ಬಿಡಬೇಕು. ಆದರೆ ನನಗದು ಸಾಧ್ಯವಾಗುತ್ತಿರಲಿಲ್ಲ. ನಾನು ನನ್ನ ಸ್ವಭಾವಗತ ನಾಚಿಕೆ, ಸಂಕೋಚಗಳಿಂದ ದೇಹ ಎಳೆದಿಟ್ಟಂತಾಗಿ ಮುಕ್ತವಾಗಿ ಪಾತ್ರದಲ್ಲಿ ಲೀನವಾಗಲು ಕಷ್ಟವಾಗುತ್ತಿತ್ತು. ಜೊತೆಗೆ ಇದು ನನ್ನ  ಸೋಲು  ಎಂಬ ಭಾವ ಆವರಿಸಿ ಒಳಗೊಳಗೇ ಮತ್ತಷ್ಟು ಕುಗ್ಗುತ್ತಿದ್ದೆ. ಈ ಸೋಲಿನ ನಿರ್ವಹಣೆಯ ಕಲೆ ಕಲಿಯಲು ಬಹಳ ಕಾಲ ಬೇಕಾಯಿತು.

ಆಗೆಲ್ಲ ನಾನು ಆಫೀಸಿನ ಕೆಲಸ ಮುಗಿಸಿ ನೇರ ಟ್ರಾಯಲ್ ಗೆ ಹೋಗುತ್ತಿದ್ದೆ. ಹೊಟ್ಟೆಗೂ ಹಸಿವು ಮನಸ್ಸಿಗೂ. ನಾಟಕ ವೇದಿಕೆಯ ಮೇಲೆ ಆಗುತ್ತಿದ್ದರೆ ಆ ಕಾಲೇಜಿನ ಕಾಂಪೌಂಡಿನ ಹೊರಗೆ ಪುಟ್ಟದೊಂದು ಕ್ಯಾಂಟೀನ್ ಇತ್ತು. ಆಗ ಕಲಾವಿದರಾದ ಬ್ಯಾಂಕ್ ಉದ್ಯಮಿ ನಂದಕುಮಾರರವರು ವೇದಿಕೆಯ ಕೆಳಗೆ ಕೂತ ಕಲಾವಿದರನ್ನು ಕರೆದುಕೊಂಡು ಅಲ್ಲಿಗೆ ಹೋಗುತ್ತಿದ್ದರು. ಇದು ನಿರ್ದೇಶಕರಿಗೆ ಹಾಗೂ ವೇದಿಕೆಯ ಮೇಲಿದ್ದ ಕಲಾವಿದರಿಗೆ ತಿಳಿದಿರಲೇ ಇಲ್ಲ. ಅಲ್ಲಿ ಬಿಸಿಬಿಸಿ ದೋಸೆ ಗಬಗಬ ತಿಂದು ಒಬ್ಬೊಬ್ಬರಾಗಿ ಒಳಬಂದು ಗಂಭೀರವಾಗಿ ನಾಟಕ ನೋಡುತ್ತಾ ಕುಳಿತುಕೊಳ್ಳುತ್ತಿದ್ದೆವು.  ಬಂಗಾರದ ದಿನಗಳವು. ಈಗಲೂ ಅವರು ಎದುರು ಬಂದಾಗ ಆ ಬಿಸಿದೋಸೆಯ ಪರಿಮಳವೇ ಆವರಿಸಿದಂತೆ. ನೆನಪುಗಳ ಮಾತು ಸೊಗಸು.

” ಹೇಮಂತ” ನಾಟಕ ಹಲವಾರು ಪ್ರದರ್ಶನಗಳನ್ನು ಕಂಡಿತ್ತು. ಹೇಮಂತ, ಕಲಿವೀರ, ಕೌಮುದಿ,  ಹರೀಶ, ವಿಲಯಕೇತು, ಉಷಾ ಇತ್ಯಾದಿ  ದೇಸೀ ಹೆಸರುಗಳೊಂದಿಗೆ ಹ್ಯಾಮ್ಲೆಟ್ ನಾಟಕವು ಇಲ್ಲಿನ ಮಣ್ಣಿನ ಸಾರ ಹೀರಿ ಸುಗಂಧ ಸೂಸಿತ್ತು.

ಹೇಮಂತದ ಕೊನೆಯ ದೃಶ್ಯದಲ್ಲಿ ಯುದ್ದದ ಸನ್ನಿವೇಶ ಇದೆ. ಇದಕ್ಕಾಗಿ ನಿರ್ದೇಶಕರು ವಿಶೇಷವಾದ ಯೋಜನೆ ಹೊಂದಿದ್ದರು. ಕತ್ತಿವರಸೆಯಲ್ಲಿ ಪ್ರಾವೀಣ್ಯತೆ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದ್ದ ಗೋವರ್ಧನ್ ಬಂಗೇರ ಎಂಬುವವರು ‘ಹೇಮಂತ’ ಪಾತ್ರದ ಪ್ರದೀಪಚಂದ್ರ ಹಾಗೂ ‘ವಿಲಯಕೇತು’ ಪಾತ್ರದ ಸಂತೋಷ್ ಅವರಿಗೆ ತರಬೇತು ನೀಡುತ್ತಿದ್ದರು.  ಸರಿಯಾದ ಅಂತರದಲ್ಲಿ ನಿಂತು ಖಡ್ಗ ಬೀಸುವುದು, ಗಣಿತದ ಜ್ಯೋಮೆಟ್ರೀ ಥರದ ಕರಾರುವಾಕ್ಕಾದ ನಡಿಗೆಗಳು ಮತ್ತು ವಿಧವಿಧದ ವರಸೆಗಳನ್ನು ಕಲಿಸಿ ಕೊಟ್ಟಿದ್ದರು. ಇಬ್ಬರೂ ಕಲಾವಿದರೂ ಟ್ರಾಯಲ್ ನಡೆಸಿ ತಯಾರಾಗಿದ್ದರು. ಅಂದು ಬೆಂಗಳೂರಿನ ಷೋ ಇದ್ದಂತೆ ನೆನಪು.  ಕಲಾವಿದರಿಬ್ಬರೂ ಪಾತ್ರದ ತನ್ಮಯತೆಯಲ್ಲಿದ್ದರು. ಯುದ್ದ ನಡೆಯುತ್ತಿದೆ. ಇಬ್ಬರಲ್ಲಿ ಒಬ್ಬರ ಹೆಜ್ಜೆ ಲೆಕ್ಕಾಚಾರಕ್ಕಿಂತ ತುಸು ಮುಂದೆ ಬಂದಿದೆ. ಬೀಸಿದ ಖಡ್ಗ ಹೇಮಂತನ ಭುಜಕ್ಕೆ ತಗುಲಿದೆ. ಆದರೆ ಅದು ಹರಿತವಾದ ಖಡ್ಗವಾಗಿರಲಿಲ್ಲ. ಆದ್ದರಿಂದ ದೊಡ್ಡ ಅನಾಹುತ ತಪ್ಪಿತ್ತು.

ಕಲಾವಿದರು ರಂಗದ ಮೇಲೆ ತನ್ಮಯತೆಯಿಂದ ಪರಕಾಯ ಪ್ರವೇಶ ಪಡೆದಂತೆ ಅಭಿನಯಿಸಿದರೂ ವಾಸ್ತವದ ಪ್ರಜ್ಞೆ, ಕ್ಷಣ ಕ್ಷಣಕ್ಕೂ ಇರಬೇಕೆನ್ನುವುದೂ ಅತ್ಯಗತ್ಯ ಸತ್ಯ.

ಹಲವಾರು ಸಂತಸದ, ಹಾಸ್ಯ ಪ್ರಸಂಗಗಳೂ ನಾಟಕದ ಸಮಯದಲ್ಲಿ ನಡೆದಿದ್ದವು.

ಮೈಸೂರಿನ ರಂಗಾಯಣದಲ್ಲಿ ನಡೆದ ಪ್ರಸ್ತುತಿ ಸಮಯದ ಒಂದು ಸಂಗತಿ ಅರೆ ಮಾಸಿದಂತಿದ್ದರೂ ಆ ಚಿತ್ರ‌ ನೆನಪಿದೆ. ಆ ದಿನದ ಪ್ರದರ್ಶನಕ್ಕೆ ಒಬ್ಬ ನಟ ಗೈರಾಗಿದ್ದರು. ಆ ಪಾತ್ರಕ್ಕೆ ಇನ್ನೊಬ್ಬ ನಟ ತಯಾರಾದರು. ನಾಟಕ ಬಲು ಸುಂದರವಾಗಿ ನಡೆಯುತ್ತಿತ್ತು. ರಾಜ ಕಲಿವೀರನ ಬಳಿ ಬಂದು

” ಸಿಂಹಳ ರಾಜ್ಯದ ಸೈನಿಕರು ಧಾಳಿ ಇಟ್ಟಿದ್ದಾರೆ..”

 ಎಂದೇನೋ ಹೇಳಬೇಕು. ಆದರೆ ಅವರಿಗೆ ಆ ಹೆಸರು ಮರೆತು ಹೋಯಿತು.

” ಮಹಾರಾಜರೇ…..”

ಎನ್ನುತ್ತ ರಾಜನ‌ ಮುಖ ನೋಡುತ್ತ ನಿಂತರು.

” ಹೇಳು, ಏನು ಸುದ್ದಿ”

 ” ದಂಗೆ. ದಂಗೆ ಎದ್ದಿದ್ದಾರೆ”

 “ಹೌದೇ, ಯಾರು? “

ನಟನಿಗೆ ಮಾತು ಮರೆತು ಹೋಯಿತು. ಪೆಚ್ಚಾಗಿ ರಾಜನ ಮುಖ ನೋಡಿದರು. ರಾಜನ ಪಾತ್ರಧಾರಿ ಹಿರಿಯ ಕಲಾವಿದರು. ಆದರೆ ಇದು ಸಾಮಾಜಿಕ ನಾಟಕವಲ್ಲ. ಪರಿಸ್ಥಿತಿ ಸಂಭಾಳಿಸುವಂತೆ ಇವರ ಮಾತು ಅವರೇ ನುಡಿದರು.

” ಯಾರು? ಸಿಂಹಳದ ದೊರೆಯೇ”

” yeaaa..yeaaa..”

ಎಂಬ ಉತ್ತರ ಥಟ್ಟನೆ ನಟನ ಬಾಯಿಯಲ್ಲಿ ಹೋಯಿತು. ಅರೆಕ್ಷಣ ತಬ್ಬಿಬ್ಬು. ಸಾವರಿಸಿಕೊಂಡ ರಾಜ ಮಾತು ಮುಂದುವರಿಸಿದ.

ಈ ಶೋ ಮುಗಿದ ಅದೆಷ್ಟೋ ಸಮಯ ಆ ಕಲಾವಿದರನ್ನು

” yaa”

ಎಂದು ತಮಾಷೆ ಮಾಡುವುದಿತ್ತು.

ರಂಗದ ಮೇಲಿನ ಕೆಮಿಸ್ಟ್ರಿಗೆ, ರಂಗದ ಕೆಳಗಿನ ಕಲಾವಿದರ ಅನ್ಯೋನ್ಯತೆ, ಕಾಳಜಿ, , ಹಾಸ್ಯ ಲಾಸ್ಯಗಳು ಅತ್ಯಂತ ಅಗತ್ಯ ಜೀವತಂತುಗಳು ಎಂಬುದನ್ನು ನಾನು ನಿಧಾನವಾಗಿ, ಪಾರಿವಾಳ ಒಂದೊಂದೇ ಕಾಳುಗಳನ್ನು ಹೆಕ್ಕಿ ನುಂಗುವಂತೆ, ಕಲಿಯುತ್ತಲೇ ಇದ್ದೆ.

***********************

ಫೋಟೊ ಆಲ್ಬಂ

ಪೂರ್ಣಿಮಾ ಸುರೇಶ್

“ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾಅಂತುವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

4 thoughts on “

  1. ಅನುಭವ ಮತ್ತು ನೆನಪು ಎಂದೆಂದೆಗೂ ಸೊಬಗೆ..ಓದಿದ ಖುಷಿ ಗೆಳತಿ

Leave a Reply

Back To Top