ಅವ್ವ

ಕವಿತೆ

ಅವ್ವ

ಕೆ.ಶಶಿಕಾಂತ.

ಅಪ್ಪನಿಂದ ಹೊರಲಾಗದ
ಜೀವಭಾರವನ್ನು
ಹೊತ್ತು ಹೆತ್ತು ತುತ್ತನಿತ್ತು
ಪೊರೆದು ಸಲಹಿ
ರಾಜರಾಣಿ ಬಾಳನಿತ್ತ
ಜ್ಯೋತಿರೂಪಿ ಅವ್ವ…

ದೇವನಿಂದಲೂ
ಹೊರಲಾಗದ ಬದುಕಿನ
ಭಾರವ ಹೊತ್ತು ಪೊರೆದ
ಸಗ್ಗಕಿಂತ ಮಿಗಿಲಾದ
ನೆಲವು ನನ್ನ ಅವ್ವ…

ಆಕೆ ಹೆತ್ತ ಮಕ್ಕಳನೆಲ್ಲ ಆಳಿ
ಸಗ್ಗದ ದೇವತೆಗಳೂ ನಾವೇ ಆಗಿ
ಕುಗ್ಗನಳಿದ ಹಿಗ್ಗಿನ ಕುಲಕೆ
ಬಲವು ನನ್ನ ಅವ್ವ….

ರಾಜರಾಣಿಯಾದ ಮೇಲೆ
ದೇವತೆಗಳೆಂದು ಪೂಜೆಗೊಂಡ ಮೇಲೆ
ಎಲ್ಲಿ ಹೋದಳೆಂದು ಕಾಣಿ
ನಮ್ಮ ಈ ಅವ್ವ….

ಅವಳ ಸಿರಿಯನುಂಡ ನಾವು ಎಲ್ಲ
ಮನೆಯ ನೆರಳೂ ಇಲ್ಲವೆನಲು
ಬಾಳ ಕರುಳೇ ಉರುಳೆನಿಸಿದಾಗ
ಎಲ್ಲಿ ಹೋದಳೆಂದು ಕಾಣೆ
ನಮ್ಮ ಈ ಅವ್ವ…..

ನೆಲದ ಸಿರಿಯ ಕಸಿಯುವಾಗ
ಜೀವ ಕುಲವ ಹೊಸೆಯುವಾಗ
ಪೂಜೆಗೆಂದು ಗುಡಿಯನರಸುವಾಗ
ಎಲ್ಲಿ ಹೋದಳೆಂದು ಕಾಣೆ
ನಮ್ಮ ಈ ಅವ್ವ…..

ಇಂದು ತಿಳಿದೆ ನಾನು ಹುಟ್ಟಿದಂದು
ಅವಳ ದಿನವೂ ಇಂದೇ ಎಂದು
ಊರ ಮಂದಿ ಕೂಗು ಕೇಳಿ
ಮತ್ತೇ ಹುಡುಕಿ ಬಂದೆ….

ಎಲ್ಲಾ ಮನೆಯ ಗೋಡೆಯಲ್ಲಿ
ಜೋತು ಬಿದ್ದ ಅವಳ ನಗುವ ಚಿತ್ರ
ನರಳಿದಂತೆ ಆಗುತಿತ್ತು
ದೂರದ ದನಿಯಂತೆ.

ದನಿಯನರಸಿ ದಾರಿ ಹಿಡಿದು
ನಡದೇ ನಡದೇ
ನೆರಳಿಲ್ಲದೆ ಬಸವಳಿದು,
ಕೊನೆಗೂ ಬಂತು ದನಿಯ ಠಾವು
ದುಡುಕಿ ನೋಡಿದೆ.

ಮುಗಿಲ ಮುತ್ತಿ ನಿಂತ ಮರ,
ಅದರ ತುಂಬ ಹಕ್ಕಿ ಕರುಳ ಹಾಡು
ಅದರಡಿಯಲೊಂದು ಭಿತ್ತಿ ಗೂಡು
ತುಂಬಿಹುದವಳ ಜಗದ ಪಾಡು
ಮಾಗಿದ ಹಣ್ಣಿನ ಕಾಯ ತುಂಬ
ಸುತ್ತಿಕೊಂಡ ಬೆಳಕ ಸೀರೆ
ನೂರು ನೋವ ಕೊನೆಗೆ
ಎಂದೂ ತಾಕದಂತಿರೆ.

ಮುಂದೆ ನಿಂತು ಕಂಡೆನವಳ
ನಗುವ ಚೆಲ್ಲುವ ನದಿಯಂಥವಳ
ಆತ್ಮಸಾಕ್ಷಿ ಕೊಚ್ಚಿಹೋಯ್ತು
ಅವಳ ಪ್ರೀತಿಗೆ….
ಕ್ಷಮೆಯು ಏಕೆ?
ಅವಳ ಜಗವ ಕೊಳಕು ಗೈದ
ಇಂಥ ಪಾಪಿಗೆ.
-***************

Leave a Reply

Back To Top