ಸಾಕು ಪ್ರಾಣಿಗಳು

ಮಕ್ಕಳ ಕಥೆ

ಸಾಕು ಪ್ರಾಣಿಗಳು

ಡಾ. ಗುರುಸಿದ್ಧಯ್ಯಾ ಸ್ವಾಮಿ


“ಅಪ್ಪ, ನಾನು ನಾಳೆಯಿಂದ ಶಾಲೆಗೆ ಹೋಗುವುದಿಲ್ಲ….” ಎಂದು ಅನಿಕೇತ ಒಂದು ಮೂಲೆಯಲ್ಲಿ ಹೋಗಿ ಕುಳಿತು ಬಿಟ್ಟ.
“ಯಾಕೆ ಮರಿ, ಏನಾಯಿತು?” ಎಂದು ಪ್ರಕಾಶ ಅವರು ಅನಿಕೇತನನ್ನು ತಮ್ಮ ಬಳಿ ಕರೆದುಕೊಂಡು ಒಂದು ಮುತ್ತು ಕೊಟ್ಟು ತಲೆ ನೇವರಿಸುತ್ತ ಕೇಳಿದರು.
“ಅಪ್ಪ, ಇಂದು ನಮ್ಮ ಶಿಕ್ಷಕರು ನಾನು ಸರಿಯಾಗಿ ಬರೆದ ಉತ್ತರಕ್ಕೆ ಸೊನ್ನೆ ಗುಣ ಕೊಟ್ಟಿದ್ದಾರೆ.”
“ಹೌದಾ…? ಯಾವ ಪ್ರಶ್ನೆ ಅದು?”
“ಸಾಕು ಪ್ರಾಣಿಗಳ ಹೆಸರು ಬರೆಯಿರಿ ಎಂಬ ಪ್ರಶ್ನೆ ಇತ್ತು.”
“ಸರಿ, ಅದಕ್ಕೆ ನೀ ಬರೆದ ಹೆಸರುಗಳು ಯಾವುವು?”
“ಅದಕ್ಕೆ ನಾನು, ಆಕಳು, ಎಮ್ಮೆ, ಬೆಕ್ಕು, ನಾಯಿ, ಹುಲಿ, ಹಾವು ಇತ್ಯಾದಿ ಹೆಸರುಗಳನ್ನು ಬರೆದಿದ್ದೆ.”
“ಓ ಹೌದಾ, ಸರಿ ನಾನು ನಾಳೆ ಶಾಲೆಗೆ ಬಂದು ನಿಮ್ಮ ಶಿಕ್ಷಕರ ಜೊತೆ ಮಾತನಾಡುವೆ.”
ಅಪ್ಪ ತನ್ನ ಪರವಾಗಿ ಮಾತನಾಡಿದ್ದಕ್ಕೆ ಅನಿಕೇತನಿಗೆ ಎಲ್ಲಿಲ್ಲದ ಖುಷಿ. ಸ್ವರ್ಗ ಮೂರೇ ಗೇಣು.


ಮರುದಿನ ಅನಿಕೇತನ ಜೊತೆ ಪ್ರಕಾಶ ಅವರೂ ಕೂಡ ಶಾಲೆಗೆ ಹೋದರು. ಪ್ರಕಾಶ ಆಮಟೆಯವರು ವರ್ಗಕೋಣೆಯಲ್ಲಿ ಬರುತ್ತಿರುವುದನ್ನು ನೋಡಿ ಶಿಕ್ಷಕರು ಎದ್ದು ನಿಂತು “ಬನ್ನಿ ಸರ್, ಬನ್ನಿ ಬನ್ನಿ” ಎಂದು ಸ್ವಾಗತಿಸಿದರು.
“ನಮಸ್ಕಾರ ಸರ್, ಹೇಗಿದಿರಿ?” ಎಂದು ಮುಗುಳ್ನಗೆ ಬೀರುತ್ತ ಪ್ರಕಾಶ ಅವರು ಶಿಕ್ಷಕರಿಗೆ ಕುಳಿತುಕೊಳ್ಳಲು ಹೇಳಿ ತಾವೂ ಅವರ ಪಕ್ಕದ ಚೇಅರನಲ್ಲಿ ಕುಳಿತರು.
“ಸರ್, ನಿಮ್ಮ ಒಪ್ಪಿಗೆ ಇದ್ದರೆ ನಿನ್ನೆ ನಡೆದ ಪರೀಕ್ಷೆಯ ಬಗ್ಗೆ ಸ್ವಲ್ಪ ಚರ್ಚೆ ಮಾಡಬಯಸುತ್ತೇನೆ.” ಎಂದರು ಪ್ರಕಾಶ.
“ಅಯ್ಯೋ, ದೊಡ್ಡ ಮಾತು. ನೀವು ತುಂಬ ದೊಡ್ಡವರು. ನಿಮ್ಮ ಅಭಿಪ್ರಾಯ ನೇರವಾಗಿ ಹೇಳಿ.” ಶಿಕ್ಷಕರು ಅಂದರು.
“ನಿನ್ನೆ ನಡೆದ ಪರೀಕ್ಷೆಯಲ್ಲಿ ಸಾಕು ಪ್ರಾಣಿಗಳ ಹೆಸರುಗಳನ್ನು ಬರೆಯುವ ಪ್ರಶ್ನೆಯ ಬಗ್ಗೆ ಸ್ವಲ್ಪ ಮಾತನಾಡುವೆ ಸರ್. ನಮ್ಮ ಆಶ್ರಮದಲ್ಲಿ ಹುಲಿ, ಹಾವು ಮುಂತಾದ ಅನೇಕ ಕಾಡು ಪ್ರಾಣಿಗಳನ್ನು ಸಾಕಿರುವ ವಿಷಯ ನಿಮಗೂ ಗೊತ್ತಿದೆ. ಅವು ಕಾಡುಪ್ರಾಣಿಗಳು ಎಂಬುದು ನಮಗೆ ಮತ್ತು ನಿಮಗೆ ಗೊತ್ತಿದೆ. ಆದರೆ ನಮ್ಮ ಆಶ್ರಮದಲ್ಲಿ ಸಾಕು ಪ್ರಾಣಿಗಳ ಜೊತೆ ಕೆಲವು ಕಾಡು ಪ್ರಾಣಿಗಳನ್ನೂ ಸಾಕಿದ್ದೇವೆ. ಹೀಗಾಗಿ ಅನಿಕೇತ ಸಾಕು ಪ್ರಾಣಿಗಳ ಪಟ್ಟಿಯಲ್ಲಿ ಅವುಗಳ ಹೆಸರುಗಳನ್ನು ಬರೆದಿದ್ದಾನೆ. ಇದರಲ್ಲಿ ಅವನ ತಪ್ಪು ಏನೂ ಇಲ್ಲ. ಅವನ ಉತ್ತರಕ್ಕೆ ನೀವು ಗುಣ ಕೊಟ್ಟಿಲ್ಲ. ನೀವು ನಿಮ್ಮ ಕರ್ತವ್ಯವನ್ನು ಸರಿಯಾಗಿಯೇ ಮಾಡಿರುವಿರಿ. ಆದರೆ ಇದೊಂದು ಸಲ ಅವನ ಅನುಭವ ವಿಶ್ವಕ್ಕೂ ಸ್ವಲ್ಪ ಗೌರವ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಮುಂದೆ ದೊಡ್ಡವನಾದ ಮೇಲೆ ಅವನು ಇವೆಲ್ಲವುಗಳ ಬಗ್ಗೆ ವಿವರವಾಗಿ ತಾನಾಗಿಯೇ ತಿಳಿದುಕೊಳ್ಳುತ್ತಾನೆ.
ನಿಮ್ಮ ಹೆಚ್ಚು ಸಮಯ ನಾನು ತೆಗೆದುಕೊಳ್ಳುವುದಿಲ್ಲ. ಬರುತ್ತೇನೆ, ನಮಸ್ಕಾರ” ಎಂದು ಪ್ರಕಾಶ ಹೊರಟೇ ಬಿಟ್ಟರು.


ಕೈ ಮುಗಿದು ಎದ್ದು ನಿಂತ ಶಿಕ್ಷಕರು ಪ್ರಕಾಶ ಅವರು ನಡೆದು ಹೋದ ಮಾರ್ಗವನ್ನೇ ರೆಪ್ಪೆ ಬಡಿಯದೆ ನೋಡುತ್ತಿದ್ದರು.

****************

















Leave a Reply

Back To Top