ಅಮ್ಮನ ದಿನಕ್ಕೊಂದು ಕವಿತೆ

ಅಮ್ಮನ ದಿನಕ್ಕೊಂದು ಕವಿತೆ

ವಿಜಯಲಕ್ಷ್ಮಿ ಕೊಟಗಿ

ಮುಸ್ಸಂಜೆ ಹೊತ್ತಿನ್ಯಾಗ ದೀಗಿ ಮುಡಿಸಿ ಒಲೆಯೊಳ್ಗ ಬೆಂಕಿ ಹೊತ್ಸಿ
ಕೈ ಚಾಚಾಳ ಅವ್ವ ಮೈ ಚಾಚಾಳ
ಹಡ್ದು ಬ್ಯಾನಿ ಅಪ್ಪನ ಗ್ಯಾನ
ಅದೆಲ್ಲಿ ಕುಡಿದು ಬಿದ್ದಾನೋ?
ಗಳಿಗಳಿಗೀ ನಿಟ್ಟುಸಿರಿಗೆ
ಬೂದ್ಯಾಗಿನ ಕೆಂಡ ನಿಗಿನಿಗಿ
ಆಕಿ ಮನಸಿನ ತುಂಬಾ ದಟ್ಟ ಹೊಗಿ,
ಬಡವ್ರಿಗೆ ಹೊಟ್ಟಿ ಯಾಕ ಕೊಟ್ಟಾನೋ ಶಿವ?
ಹಸ್ದು ತೆಕ್ಕಿ ಬಡ್ದು ಅಳಾಮಕ್ಕಳ್ನ ರಮ್ಸಿ
ಹೊಟ್ಟಿ ಸಂಕ್ಟಾನ ಹೊಟ್ಯಾಗ ಒತ್ತಿ
ಮಜಾಕಟಾ ತೋರಿಸ್ತೀನಂತ
ಸ್ವಾರಾಗ ನೀರು ತುಂಬಿ
ಚಂದ್ರಮನ ಬಿಂಬ ತೋರಿಸಿದ್ರ
ಯವ್ವಾ! ನೀರಿನ್ಯಾಗ ರೊಟ್ಟಿ ನಂದಿತಬೇ
ಅಂತ ಆಸೆಗಣ್ಣಿಲೇ ನೋಡಕತ್ಯಾವು
ಕರುಳಿಗೆ ಕಳ್ಳಿ ಬಡ್ದು
ದೊಡ್ಡ ದೊಡ್ಡ ಗುಳ್ಳಿಯಾಗೆವು
ಹಿರೇಮಗಳು ಮೈನೆರ್ತಾಳ
ಸಾಣದು ಮಲಿ ಜಗ್ಗತೈತಿ
ನೆಲ ಹಾಸಿ ನೆಲ ಹೊಚ್ಚಿ
ಮನ್ಸಿಗೆ ಮುಳ್ಳು ಬಡ್ದು ಸರವತ್ನಾಗ
ಅವ್ವ ಕತ್ತಲ್ದಾಗ ಕರಗಿಹೋಗ್ಯಾಳ
ಹಾವಿನ ಜತಿ ಆಟ ಆಡ್ಯಾಳ
ಗೂಳಿಗೂಡ ಕುಸ್ತಿ ಹಿಡದಾಳ
ಬೆಳಗಾಮುಂಜಾನಿ ಗೂಡು ಸೇರಿ
ನೆಲಕ್ಕೊರಗಿ ಬೆನ್ನು ಹಚ್ಚಿದರೆ
ಚೂರುಗಾಯ ನೋಡಿ ಮಗ್ಳು ಗಾಬರಾಗ್ಯಾಳ
ಉಡಿಯ್ಯಾಗಿನ ಮಂಡಾಳ ಗಬಗಬ
ಮುಕ್ಕೋ ಮಕ್ಕಳ್ನೋಡಿ ಕಣ್ಣೀರಿಟ್ಟಾಳ
ಸವರಾಡೆದ್ದು ಸೆರಗಿನ ಚುಂಗು ಬಿಚ್ಚಿದ್ರ ಪುಡಿಗಾಸು ಗರತಿತನ್ದ ಕಿಮ್ಮತ್ತು!
ನಕ್ಕೆ ನಕ್ಕಳು ಮಕ್ಕಳು ದಿಗಿಲು ಬಿದ್ದು
ಮಾರಿ ನೋಡಿದ್ವು
ಹೊರಗ ಉರಿದೇವ ಉಗುಳೋ ಬೆಂಕಿನ
ನುಂಗಿ ನಿಂತ ಭೂಮ್ತಾಯಂಗ
ನೋವು ನುಂಗಿದ ಅವ್ವ ತಣ್ಣಗ ಕಂಡ್ಲು.

*********************************

Leave a Reply

Back To Top