ಅಂಕಣ ಬರಹ
ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ
ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ
ಸರಣಿಬರಹ………..
ಅದ್ಯಾಯ-9
ಮಡ್ ವೊಲ್ಕೆನೊ, ಭೂಮಿಯ ಅಡಿಯಲ್ಲಿ ಕೆಲವು ರಾಸಾಯನಿಕಗಳು ಕೊಳೆತು ಉಂಟಾದ ಗ್ಯಾಸ್ ನಿಂದಾಗಿ ಭೂಮಿಯನ್ನು ಬಿರಿದು ಕೆಸರು ಮೇಲಕ್ಕೆ ಚಿಮ್ಮುತ್ತದೆ. ಭೂಮಿಯ ತಳದಿಂದ ಕಲ್ಲಿನ ಚೂರುಗಳು, ಮರಳುಗಲ್ಲುಗಳು, ಸಮುದ್ರದ ಕೆಸರು, ಕೆಂಪು ಮತ್ತು ಹಸಿರು ಬಣ್ಣದ ಕಲ್ಲುಗಳು ಚಿಮ್ಮಿ ಮೇಲೆ ಬಂದು ಹರಿಯುತ್ತವೆ.
ಬಿಸಿಯಾದ ಕೆಸರು ಹರಿದು ಬಂದು ನೋಡಲು ಸಿಮೆಂಟಿನಂತ ರಾಡಿಯಾಗಿ ನಿಂತಿತ್ತು.
ಕೆಸರಿನ ಬುದ್ಬುದಗಳು, ನೀರ್ಗುಳ್ಳೆಗಳು ಆ ಜಾಗದಿಂದ ಹೊರಗೆ ಚಿಮ್ಮುತ್ತವೆ.
ಅಂಡಮಾನ್ ದ್ವೀಪದಲ್ಲಿ ಒಟ್ಟು ಹನ್ನೊಂದು ಇಂತಹ ಮಣ್ಣಿನ ಜ್ವಾಲಾಮುಖಿಗಳಿವೆಯಂತೆ. ಅವುಗಳಲ್ಲಿ ಎಂಟು ಭರಟಾಂಗ್ ದ್ವೀಪದಲ್ಲೇ ಇವೆ. ಉಳಿದವು ಉತ್ತರ ಅಂಡಮಾನ್ ಪ್ರದೇಶದಲ್ಲಿವೆ.
ರಷ್ಯಾ, ಉಕ್ರೇನ್, ಇಟೆಲಿ, ರೊಮಾನಿಯಾ, ಚೈನಾ, ಇರಾನ್, ಪಾಕಿಸ್ತಾನಗಳಲ್ಲೂ ಇಂತಹ ಕೆಸರಿನ ಜ್ವಾಲಾಮುಖಿಗಳಿವೆಯಂತೆ.
ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳಿವೆ. ಮಧ್ಯ ಮಧ್ಯ ನಡೆದು ಹೋಗುವ ದಾರಿ, ನಡುನಡುವೆ ಮೆಟ್ಟಿಲುಗಳು. ಹೋಗುವ ಮತ್ತು ಬರುವ ದಾರಿ ಸ್ವಲ್ಪ ಪ್ರಯಾಸದಾಯಕವಾಗಿದ್ದರೂ ಅಪರೂಪದ, ಇಂಥದ್ದೊಂದು ಸೃಷ್ಟಿಯ ವೈಚಿತ್ರ್ಯವು ನೋಡಲು ಸಿಕ್ಕಿತು.
ಬಣ್ಣ ಹಸಿಯಾಗಿದೆ ಎಂದು ಬೋರ್ಡ್ ಹಾಕಿದ್ದರೂ ಒಮ್ಮೆ ಮುಟ್ಟಿ ನೋಡಿ ಪರೀಕ್ಷಿಸಬೇಕೆಂದು ಅನಿಸುವುದು ಸಹಜ. ಹಾಗೆಯೇ ಇಲ್ಲಿ ಬಿಸಿಯಾಗಿದೆ ಎಂದು ಹೇಳಿದ್ದರೂ, ಸಣ್ಣಗೆ ಹೊಗೆ ಬರುತ್ತಾ ಇದ್ದರೂ, ಮೆಲ್ಲ ಹರಿದು ಬರುತಿದ್ದ ಆ ರಾಡಿಯನ್ನು ಒಮ್ಮೆ ಬೆರಳಿನಿಂದ ಮುಟ್ಟಿದೆ. ಸುಡುವಂತಲ್ಲದಿದ್ದರೂ ಬಿಸಿ ಇತ್ತು.
ಅಷ್ಟೇ.. ಅಲ್ಲಿ ಹತ್ತಿ ಹೋಗಿ ಸುಧಾರಿಸಿಕೊಂಡು ಸ್ವಲ್ಪ ಹೊತ್ತು ಅಲ್ಲಿದ್ದು ವಾಪಸ್ ಕೆಳಗೆ ಬಂದೆವು. ಮತ್ತೆ ದೋಣಿ ಹತ್ತಿ ಭರಟಾಂಗ್ ಜೆಟ್ಟಿಗೆ ಬಂದು ಅಲ್ಲಿಂದ ಫೆರ್ರಿ ಕ್ರಾಸ್ ಮಾಡಿ ಇನ್ನೊಂದು ಭಾಗಕ್ಕೆ ಬಂದು ಅಲ್ಲಿ ಚಿಕ್ಕ ಮನೆಯಂತ ಹೋಟೆಲ್ ಒಂದರಲ್ಲಿ, ಬಹುಷಃ ಅದು ಒಂದೇ ಹೋಟೆಲ್ ಇರಬೇಕು ಅಲ್ಲಿ. ಊಟಕ್ಕೆಂದು ಕರೆತಂದರು.
ಅಲ್ಲಿಗೆ ಬರುವ ಪ್ರವಾಸಿಗರು ಅದೇ ಹೋಟೆಲ್ ಗೆ ಬರಬೇಕಿತ್ತು ಅನಿಸುತ್ತದೆ. ತುಂಬಾ ಜನ ತುಂಬಿದ್ದರು ಅಲ್ಲಿ. ಅಂತೂ ಇಂತೂ ಸ್ವಲ್ಪ ಕಾದ ಮೇಲೆ ಒಳ್ಳೆಯ ಊಟ ಸಿಕ್ಕಿತು. ಅನ್ನ, ಸಾಂಬಾರು, ಪಲ್ಯ, ಹಪ್ಪಳ, ಉಪ್ಪಿನಕಾಯಿ ನಮ್ಮೂರಿನ ಊಟದ ಹಾಗೇ ಇತ್ತು. ಸಹಜವಾಗಿ ಭಯಂಕರ ಹಸಿವೆಯೂ ಆಗಿತ್ತು. ಅಮೃತದಂತೆ ರುಚಿ ಅನಿಸಿತು ಎಲ್ಲರಿಗೂ.
ಅಲ್ಲಿಂದ ಹೊರಡುವಾಗ ಎಲ್ಲರೂ ಅಂದರೆ ನಮ್ಮ ಯುವಪೀಳಿಗೆ, ರಾಕೇಶ್ ಅವರನ್ನು ನೀವು ಆದಿವಾಸಿಗಳನ್ನು ತೋರಿಸಲೇ ಇಲ್ಲ ಎಂದು ಪೀಡಿಸುತಿದ್ದರು.
ಈಗ ಸಿಗಬಹುದು ನೋಡೋಣ, ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಹೊರಗೆ ಬರುತ್ತಾರೆ ಎಂದರು. ನಾವು ಬಂದ ಬಸ್ಸು ನಮಗಾಗಿ ಕಾದಿತ್ತು ಅಲ್ಲಿ.
ಫೋಟೊ ತೆಗೆಯಬಾರದೆಂದು ಎಚ್ಚರಿಸಿದ್ದರೂ ಯಾರೋ ಮಹಿಳೆಯೊಬ್ಬರು ಆದಿವಾಸಿ ಮಹಿಳೆಯನ್ನು ಕಂಡಕೂಡಲೇ ತಮ್ಮ ಫೋನ್ ಕೈಗೆ ತಗೊಂಡು ಕ್ಲಿಕ್ ಮಾಡುವಾಗ ಫ್ಲಾಶ್ ಬೆಳಕು ಅದು ಹೇಗೆ ಆ ಆದಿವಾಸಿ ಮಹಿಳೆಗೆ ತಿಳಿಯಿತೊ, ಬಸ್ಸು ನಿಲ್ಲಿಸಿ ಹತ್ತಿ ಬಂದು ಆ ಫೋಟೊ ತೆಗೆದ ಮಹಿಳೆಯನ್ನೇ ಹಿಗ್ಗಾ ಮುಗ್ಗಾ ಥಳಿಸಿ ಹಾಕಿದ್ದು ಉದಾಹರಣೆಯಾಗಿ ಹೇಳಿ ನಮ್ಮನ್ನೆಲ್ಲಾ ಹೆದರಿಸಿ ಇಟ್ಟರು ರಾಕೇಶ್ ಸರ್.
ತುಂಬಾ ನಿಧಾನವಾಗಿ ಚಲಿಸುತ್ತವೆ ಅಲ್ಲಿ ವಾಹನಗಳು, ಪ್ರಕೃತಿ ಸೌಂದರ್ಯದ ಜೊತೆಗೆ ಆದಿವಾಸಿಗಳ ದರ್ಶನ ಭಾಗ್ಯ ಸಿಗಬಹುದೆನ್ನುವ ಸಣ್ಣ ಆಸೆಯಿಂದ ಕೂಡ.
ಒಬ್ಬರನ್ನಾದರೂ ತೋರಿಸಿಯೇ ತೋರಿಸುತ್ತೇವೆ ಎಂಬ ಆಶ್ವಾಸನೆ ನೀಡಿದ್ದರು ನಮ್ಮ ಬಸ್ ಡ್ರೈವರ್. ಮುಂದೆ ಮುಂದೆ ಸಾಗುತ್ತಿರುವಾಗ ಅಲ್ಲಿ ನೋಡಿ ಅಂದಿದ್ದು ಕೇಳಿಸಿತು. ಅಲ್ಲಿ ಎಂದರೆ ಎಲ್ಲಿ ಎಂದು ನೋಡುವುದರೊಳಗೆ ಒಬ್ಬ ಆರು ಅಡಿಗಳಿಗಿಂತಲೂ ಎತ್ತರದ ಹದವಾದ ತೂಕದ ಕಟ್ಟು ಮಸ್ತಾದ ಕಪ್ಪು ಎಂದರೆ ಮಿರಿ ಮಿರಿ ಮಿಂಚುವ ಕಪ್ಪು ಬಣ್ಣದ ಆಕರ್ಷಕ ನಿಲುವಿನ ಆದಿವಾಸಿ ಯುವಕ ನಿಂತಿದ್ದ. ಮೈಮೇಲೆ ಬರ್ಮುಡಾ ಮಾತ್ರ ಧರಿಸಿದ್ದ. ಪಕ್ಕದಲ್ಲಿ ಅದೇ ನಿಲುವಿನ ಚಿಕ್ಕ ಗಾತ್ರ ಎನ್ನುವಂತಿದ್ದ ಒಂದು ಮಗುವಿತ್ತು.
ಆ ದೃಶ್ಯ ಈಗಲೂ ಕಣ್ಣ ಮುಂದಿದೆ. ಅವನು ಯಾವ ವಾಹನವನ್ನೂ ನೋಡುತ್ತಿರಲಿಲ್ಲ. ನಮ್ಮಂತೆಯೇ ನಮ್ಮ ಹಿಂದೆ ಮುಂದೆ ವಾಹನಗಳು ಆಮೆ ವೇಗದಲ್ಲಿ ಚಲಿಸುತ್ತಾ ಇದ್ದವು.
ಮತ್ತೆ ಮುಂದೆ ಹೋಗುತಿದ್ದಂತೆ ಒಬ್ಬಳು ಮಹಿಳೆ. ಅವಳು ಮಾತ್ರ ನೈಟಿ ಹಾಕಿಕೊಂಡಿದ್ದಳು. ಅಲ್ಲೊಂದು ಬಸ್ಸಿನವರು ಅವರ ಬಳಿ ಇದ್ದ ತಿನ್ನುವ ವಸ್ತುಗಳು, ಬಟ್ಟೆ, ಇನ್ನೂ ಏನೇನೋ ಹೊರಗೆ ಎಸೆಯುತಿದ್ದರು. ಆ ಹೆಂಗಸು ಬಗ್ಗಿ ಒಂದೊಂದನ್ನೂ ಹೆಕ್ಕುವುದರಲ್ಲೇ ಮಗ್ನಳಾಗಿದ್ದಳು. ಹಾಗೆಲ್ಲಾ ಏನೂ ಎಸೆಯಬೇಡಿ ಎಂದು ಮತ್ತೊಮ್ಮೆ ನಮ್ಮ ಮ್ಯಾನೇಜರ್ ನಮಗೆ ಹೇಳಿದರು. ಎಲ್ಲರೂ ಹೀಗೆ ಹೆಕ್ಕಿಕೊಳ್ಳುವುದಿಲ್ಲ, ಕೆಲವರು ಸಿಟ್ಟಾಗುತ್ತಾರೆ ಎಂದರು.
ಮುಂದೆ ನಾವು ಕಾದು ನಿಂತಿದ್ದ ಗೇಟ್ ದಾಟಿ ಬಂದು ಬಸ್ ನಿಲ್ಲಿಸಿ, ಚಾ, ಕಾಫಿ ಕುಡಿಯುವವರಿಗೆ, ಶೌಚಾಲಯಕ್ಕೆ ಹೋಗುವವರಿಗೆಂದು ಸ್ವಲ್ಪ ಬಿಡುವು ಕೊಟ್ಟರು.
ಇವತ್ತು ನಮಗೆ ಶಾಪಿಂಗ್ ಗೆ ಕರೆದುಕೊಂಡು ಹೋಗುತ್ತೇವೆಂದು ಹೇಳಿದ್ದರಲ್ಲಾ! ನಾವೂ ಬೇಗ ಹೋಗೋಣ ಎಂದು ಅವಸರ ಮಾಡುತಿದ್ದೆವು.
ಈಗ ಬರುವಾಗ ಪೋರ್ಟ್ ಬ್ಲೇರ್ ನ ಬೇರೊಂದು ದಿಕ್ಕಿನಿಂದ ಬಸ್ಸು ಬಂದಿದ್ದರಿಂದ ಆ ಊರಿನ ಸಿಟಿಯಂತಹ ಭಾಗ ನೋಡಲು ಸಿಕ್ಕಿತು. ಸಿಗ್ನಲ್, ವಾಹನಗಳ, ಜನರ ಸಂದಣಿಯಿತ್ತು ಅಲ್ಲಿ. ಸಿಂಡಿಕೇಟ್ ಬ್ಯಾಂಕ್ ನ ಶಾಖೆ ನೋಡಿದೆವು. ಜೀವ ವಿಮಾ ಕಛೇರಿಯೂ ಇತ್ತು. ನೋಡಲು ಗೋವಾದಂತದ್ದೇ ಊರು.
ಈಗ ನಮಗೆ ಬೇರೊಂದು ಭವ್ಯವಾದ ಹೋಟೆಲ್ ಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು.
ಬೇಗ ಬೇಗ ನಮ್ಮ ರೂಮುಗಳನ್ನು ನೋಡಿ ಖರೀದಿಗೆಂದು ಹೊರಟು ಬಂದರೆ..
ಆರು ಗಂಟೆಗೆ ಅಂಗಡಿಗಳು ಬಂದ್.
(ಮುಂದುವರೆಯುವುದು…)
**********************
–ಶೀಲಾ ಭಂಡಾರ್ಕರ್.
ಸೊಗಸಾದ ವಿವರಣೆ. ಉತ್ತಮ ಲೇಖನ.