ಅಂಕಣ ಬರಹ

ಚಮ್ಮಾರ ಹೊಲಿದ ತೊಗಲು ಗೊಂಬೆ

 ಹೆಪ್ಪು ಹಾಕಿದ ಸಾಮರಸ್ಯದ ಹಾಲು, ರೂಪಾಂತರವಾಗಿ ಒಡೆದು ಮೊಸರಾಗಿ, ಕಡೆಯುವ ಕಡೆಗೋಲಿಗಾಗಿ ಮನಸ್ಸು ಮತ್ತು ಕಾಯ, ಕಾಯುತ್ತಿದ್ದವು. ರಂಗದ ಮಣ್ಣಿನ ವಾಸನೆ, ನಟನೆಯ ಸೆಳೆತ  ಆ ಶಾಲೆಯ ತೆರೆದ ವೇದಿಕೆಯೆದುರು ನನ್ನ ತಂದು ಕೂರಿಸಿದ್ದು ಹೌದು. ಆದರೆ ಎಲ್ಲವೂ ಮಸುಕು. ಏನೋ ಗೊಂದಲ,ಅಸ್ಪಷ್ಟತೆ.

 ನಾಟಕದ ಬಗ್ಗೆ ಅಭಿನಯಾಸಕ್ತಿ ಇತ್ತು. ಆದರೆ ಅದಕ್ಕೆ ಯಾವುದೇ ದಿಕ್ಕುದೆಸೆಯಿಲ್ಲ. ಸ್ಪಷ್ಟತೆಯಿಲ್ಲ. ಆಗಿನ್ನೂ ಆ ಆಸಕ್ತಿ ಸರಿಯಾದ ರೂಪು ಪಡೆದಿರಲಿಲ್ಲ. ಇಷ್ಟಕ್ಕೂ ಅಭಿನಯ, ರಂಗಭೂಮಿಯ  ನಿಜವಾದ ಚಿತ್ರಣವೇ ತಿಳಿಯದ ಅಮಾಯಕಿ ಕೂಸು ಕುಲಾವಿ ಹೊಲಿಯುವ ಕನಸು ಕಾಣುತ್ತಿದ್ದಳು .

ರಂಗಭೂಮಿ ಸಂಸ್ಥೆಯಿಂದ ನಡೆಯುತ್ತಿದ್ದ ನಾಟಕ ಸ್ಪರ್ಧೆಗಳಲ್ಲಿ ಗುರುಗಳಾದ ಹೊಸ್ಕೆರೆಯವರು ತೀರ್ಪುಗಾರರಾಗಿ ಹೋಗುತ್ತಿದ್ದರು. ಅದರ ವಿಮರ್ಶೆಯು ಮನೆಯಲ್ಲೂ ನಡೆಯುತ್ತಿತ್ತು. ಈ ಪರಿಮಳದ ಆಸೆಯಲ್ಲಿ ನಾಟಕ ನೋಡಲು ಓಡುತ್ತಿದ್ಧೆ. ನಾಟಕದ ಆಸೆ ಅಭಿನಯದ ಕುಲುಮೆಯ ಬಳಿ ಕರೆ ತಂದಿತ್ತು. ಅದರಾಚೆ ಏನೂ‌ ತಿಳಿದಿರಲಿಲ್ಲ

 ವೇದಿಕೆಯ ಕೆಳಗಡೆ ಹಳೆಯ ಉದ್ದನೆಯ ಬೆಂಚ್ ಎರಡು ಇರಿಸಿದ್ದರು. ಇದು ರಿಹರ್ಸಲ್ ನೋಡುವ ರಂಗಭೂಮಿಯ ಕಲಾವಿದರಿಗೆ ಹಾಗೂ ಅಭಿನಯಿಸುತ್ತಿರುವ ಕಲಾವಿದರಿಗೂ ವಿರಾಮದ ಸ್ಥಳ. ಆ ಸಮಯದಲ್ಲಿ ಉಡುಪಿ ರಂಗಭೂಮಿಗೆ ಸ್ವಂತ ಕಟ್ಟಡ,ಆಫೀಸ್,ತರಬೇತಿಗೆ ಸ್ಥಳವಿರಲಿಲ್ಲ. ರಂಗಭೂಮಿಯ ಹಿರಿಯ ಸದಸ್ಯರಾದ‌ ಮೇಟಿಯವರು ಉಪನ್ಯಾಸಕರಾಗಿದ್ದ ‘ಹೆಣ್ಮಕ್ಕಳ ಪದವಿಪೂರ್ವ ಕಾಲೇಜು’ ವಿನ ಹೊರಾಂಗಣದ ವೇದಿಕೆಯಲ್ಲಿ ಟ್ರಾಯಲ್. ಕ್ಲಾಸ್ ರೂಮಿನ ಎರಡು ಬೆಂಚ್ ಗಳನ್ನು ಕಲಾವಿದರು ಹೊತ್ತು ತಂದು ವೇದಿಕೆಯ ಮುಂದೆ ಇರಿಸುತ್ತಿದ್ದರು.

ನನಗೆ ಏನೆಂದರೆ ಏನೂ ತಿಳಿಯುತ್ತಿರಲಿಲ್ಲ. ಮುದುಡಿ ಕೂತಂತೆ ಕೂತಿದ್ದೆ. ಆಗಲೇ ಜುಬ್ಬ, ಕಾಶ್ಮೀರ ಟೋಪಿಯಂತಹ ಟೋಪಿ ಧರಿಸಿದ ತುಸು ಎತ್ತರದ, ದಪ್ಪ ಶರೀರದ ವಿಭಿನ್ನ ವ್ಯಕ್ತಿತ್ವ ಅನ್ನಿಸುವ ಹಿರಿಯರೊಬ್ಬರು ನಿಧಾನವಾಗಿ ಬಂದರು. ಕಲಾವಿದರು ಅವರನ್ನು ಗೌರವಪೂರ್ವಕವಾಗಿ ಮಾತನಾಡಿಸುತ್ತಿದ್ದರು. ಎಲ್ಲರೊಂದಿಗೆ ಸಹಜವಾಗಿ‌ ಮಾತನಾಡುತ್ತಾ, ಬೆನ್ನು ತಟ್ಟುತ್ತಾ ಬೆಂಚ್ನಲ್ಲಿ ಕೂತರು. ಕಲಾವಿದರೊಬ್ಬರು ನನ್ನನ್ನು ಅವರಿಗೆ ಪರಿಚಯಿಸಿದರು. ದೊಡ್ಡ ಕಣ್ಣುಗಳು ಶಾಂತತೆಯಿಂದ ನನ್ನ ದಿಟ್ಟಿಸಿದವು.

 ” ಹೆಸರೇನು?”

“ಅಭಿನಯ‌ ಮಾಡಿದ್ದೀರಾ”?

 “ಕಲಿಯುವುದು ಬಹಳಷ್ಟಿದೆ”

..ಇಂತಹ ಪುಟ್ಟ ಪುಟ್ಟ ಮಾತುಗಳನ್ನು ಆಲೋಚಿಸಿ ನುಡಿಯುತ್ತಿದ್ದರು. ಅವರು ರಂಗಭೂಮಿ ಸಂಸ್ಥೆಯ ಜನ್ಮಕ್ಕೆ ಮುಖ್ಯ ಕಾರಣೀಕರ್ತರಾಗಿ ಅದರ ಬೆಳವಣಿಗೆಗೆ ಗಾಣದೆತ್ತಿನಂತೆ ದುಡಿದ  ಆನಂದ ಗಾಣಿಗರು. ಉಡುಪಿಯ ರಂಗಭೂಮಿಗೆ ಪರ್ಯಾಯ ಹೆಸರು.

 ಮುಂದಿನ ದಿನಗಳಲ್ಲಿ ಬೆದರಿದ ಗುಬ್ಬಚ್ಚಿಯಂತಹ ನನ್ನಲ್ಲಿ ಮನೆಯ, ಮನಸ್ಸಿನ ಮಾತುಗಳನ್ನೂ ಆಡುವ ಆಪ್ತತೆ  ತೋರಿದವರು. ಮಗಳಾಗಿ ಬಿಟ್ಟಿದ್ದೆ!. ಆದರೆ ಆ ದಿನ ತಿಳಿಯದ ಅಂಜಿಕೆ,ಭಯ. ಆ ಭಯ ಗೌರವಪೂರ್ಣವಾಗಿ ಕೊನೆಯವರೆಗೂ ಹಾಗೇ ಉಳಿದಿದೆ.

 ರಂಗದ ಕನಸಿಗೆ ತೆರೆದುಕೊಳ್ಳುವುದೆಂದರೆ ನನ್ನ ಊಹೆಯಷ್ಟು ಸುಲಭವಾಗಿರಲಿಲ್ಲ. ಕಲೆಯ ಬಗ್ಗೆ ಆಸಕ್ತಿ, ಉತ್ಸಾಹ ಮಾತ್ರವೇ ಬದುಕಿನ ಪಥ ಚಿತ್ರಿಸುವ ಚಿತ್ತಾರವಾಗದು ಎಂಬ ಅರಿವು ನಿಧಾನವಾಗಿ ಆಗತೊಡಗಿತು. ಕಲೆಗಾಗಿ ನನ್ನ ನಾನು ತೆರೆದುಕೊಳ್ಳ ಬೇಕಿತ್ತು.

 ಚಮ್ಮಾರನ ಚಾಲಾಕಿ ಹೆಂಡತಿ ವೇದಿಕೆಯ ಮೇಲೆ ಚಿಗರೆಯಂತೆ ಚಿಗುರುತ್ತಿದ್ದಳು. ಪುಟ್ಟ ಹುಡುಗಿ. ಆ ಪಾತ್ರವೂ ಅವಳಿಗೆ ಹೊಂದುವಂತಹುದು. ಹದಿನೆಂಟರ ಹರೆಯದ ಹೆಣ್ಣು ಅರುವತ್ತರ ಮುದಿ ಚಮ್ಮಾರನ ಹೆಂಡತಿ. ಊರಿಗೆ ಊರೇ ಚಾಲಾಕಿ ಹೆಣ್ಣಿನ ಸುತ್ತ ತಿರುಗುತ್ತಿತ್ತು.

ಲಕ್ಷ್ಮೀ ನಾರಾಯಣ ಮೇಷ್ಟ್ರು ಚಮ್ಮಾರನ ಪಾತ್ರ ಮಾಡುತ್ತಿದ್ದರು. ಬಾಯಲ್ಲಿ ಬೀಡ ಹಾಕಿಕೊಂಡು ಸಾವಧಾನವಾಗಿ ಮಾತನಾಡುವ ಸಾತ್ವಿಕ ಮೇಷ್ಟ್ರು. ಇದೆಲ್ಲ ಆಗಿ ಎರಡು ದಶಕಗಳಷ್ಡು ಕಾಲ ಮುಂದೆ ಸರಿದಿದೆ. ಆದರೆ ಅವರ ಅಭಿನಯ, ಆ ನಡಿಗೆ, ಮಾತು ಇನ್ನೂ ಹಾಗೇ ಕಣ್ಣಿಗೆ ಕಟ್ಟಿದಂತಿದೆ.

ಚಂದ್ರಕಲಾ ಎಂಬ ಕಲಾವಿದೆ ಚಮ್ಮಾರನ ಹೆಂಡತಿ. ಪಟಪಟ ಮಾತನಾಡುವ ಕಡ್ಡಿ ಶರೀರ. ನಿಜದ ಹರಳು ಹರಳು ಕಲಾವಿದೆ.

‘ ಬಾಸುಮಾ ಕೊಡಗು ‘ ಅವರ ನಿರ್ದೇಶನ. ‌ನಾನು ದೃಶ್ಯಗಳು ಮೋಡದಿಂದ ಮಳೆಯಾಗಿ ಸುರಿವ ಪ್ರಕ್ರಿಯೆಯಲ್ಲಿ ನೆನೆ ನೆನದು  ಒದ್ದಾಡುತ್ತಿದ್ದೆ

ಸಂಜೆಗೆ ಒಂದಷ್ಟು ಕಲಾವಿದರು ಅಲ್ಲಿ ಸೇರುತ್ತಿದ್ದರು. ಮೊದಲಿಗೆ ವೇದಿಕೆಯ ಮೇಲೆ ವೃತ್ತಾಕಾರದಲ್ಲಿ ಕೂತು ಪ್ರಾರ್ಥನೆ. ನಿರ್ದೇಶಕರ ಸಲಹೆ, ನಂತರ ಟ್ರಾಯಲ್ ಆರಂಭ.

ನಡುವಿನಲ್ಲಿ ಒಂದು ಬಿಡುವು. ಆ ಸಮಯ ಉಪಾಹಾರ ಬರುತ್ತಿತ್ತು. ಆಗ ನಾಟಕದ ಬಗ್ಗೆ ಕಲಾವಿದರ ಬಗ್ಗೆ, ಹಾಸ್ಯ ನಗು ಎಲ್ಲವೂ ಕುಪ್ಪಳಿಸಿ ಕುಣಿಯುತ್ತಿತ್ತು. ರಿಹರ್ಸಲ್ ನೋಡುತ್ತಾ,

” ಇದು ಬಹಳ ಕಷ್ಟವೂ ಇದೆ”

 ಅನಿಸುತ್ತಿತ್ತು. ಆದರೆ ಮನ ಹಿಮ್ಮುಖವಾಗಲಿಲ್ಲ.

ನಾಟಕ ಅದಾಗಲೇ ಒಂದಷ್ಟು ಯಶಸ್ವೀ ಶೋಗಳನ್ನು ಕಂಡಿತ್ತು.ಮುಂದಿನ ಶೋ ನಿಗದಿಯಾಗಿತ್ತು. ಅದಕ್ಕಾಗಿಯೇ ರಿಹರ್ಸಲ್. ಆ ದಿನ ರಿಹರ್ಸಲ್ ಸಮಯದಲ್ಲಿ ಚಮ್ಮಾರನ ಪಾತ್ರದ ಕಲಾವಿದರಾದ ಮೇಷ್ಟ್ರು ಎದೆನೋವಿಗೆ ಒಳಗಾದರು. ಆದರೂ ನಾಟಕದ ಟ್ರಾಯಲ್ ನಿಲ್ಲಿಸದೆ ಮುಗಿಸಿದರು. ಮರುದಿನ ಶೋ ಇತ್ತು ಆ ನೋವಿನ ನಡುವೆಯೇ ನಾಟಕ ಮುಗಿಸಿ ಡಾಕ್ಟರ್ ಬಳಿ ಹೋದರು‌. ಕೂಡಲೇ ತೆರೆದ ಹೃದಯ ದ ಆಪರೇಷನ್ ಆಗಬೇಕಾಯಿತು.

ಮುಂದಿನ ಶೋ ಆದಾಗಲೇ‌ ದಿನ ನಿಗದಿ ಆಗಿತ್ತು. ಮುಖ್ಯ ಕಲಾವಿದ ಆಸ್ಪತ್ರೆಯಲ್ಲಿ. ಆಗ ನಾಟಕದಲ್ಲಿ ಚಮ್ಮಾರನ ಹೆಂಡತಿಯನ್ನು ಕದ್ದು ನೋಡುವ,ಊರ ಪುಂಡು ಹುಡುಗರ ಪಾತ್ರವನ್ನು ನಾಲ್ಕು ಜನ ಯುವ ಕಲಾವಿದರು ಮಾಡುತ್ತಿದ್ದರು. ಪುಟ್ಟ ಪಾತ್ರವದು. ಅದರಲ್ಲಿ ಒಬ್ಬರಾದ ರಾಘವೇಂದ್ರ ರಾವ್ ಎಂಬ ಕಲಾವಿದ ಥಟ್ಟೆಂದು ನಾಟಕದ ಮುಖ್ಯ ಪಾತ್ರಧಾರಿಯಾಗಬೇಕಾಯಿತು. ಅದೂ ಆ ಪಾತ್ರಕ್ಕೆ ಬೇಕಾಗಿದ್ದದ್ದು ವಯಸ್ಸಾದ ಕಲಾವಿದ. ಇವರೋ 30 ರ ಆಸುಪಾಸಿನ ಯುವಕ.

 ವ್ಯಕ್ತಿಯೊಬ್ಬ ಕಲಾವಿದನಾಗಿ

 ‘ ಮೆಟಾಮಾರ್ಫಿಸಿಸ್ ‘ ಆಗುವ ಮಹಾ ಅದ್ಬುತವೊಂದಕ್ಕೆ ಸಾಕ್ಷಿಯಾಗಿ ನಾನು ಒಳಗೊಳಗೇ ಮೊಳಕೆಯೊಡೆಯುತ್ತಿದ್ದೆ.

ಆ ಹಾವ ಭಾವ, ದೇಹದ ಚಲನೆ ಎಲ್ಲವೂ ಸಹಜವಾಗಿ ಮೂವತ್ತರಿಂದ ಅರುವತ್ತಕ್ಕೆ ಬದಲಾಗಬೇಕಿತ್ತು.

ಅಂದು ಆ ನಾಟಕದ ನಾಲ್ಕನೆಯ ಪ್ರಸ್ತುತಿ. ಪುತ್ತೂರಿನಲ್ಲಿತ್ತು.

” ಒಬ್ಬ ಕಲಾವಿದ ಅನಾರೋಗ್ಯಗೊಂಡು ಇನ್ನೊಬ್ಬ ಕಲಾವಿದ ಹುಟ್ಟಿದ!”

ಎಂದು, ನಾಟಕ ಮುಕ್ತಾಯಗೊಂಡಾಗ ಆನಂದ ಗಾಣಿಗರು ಅಂದಿದ್ದರು.

 ಮುಂದೆ ಬೆಂಗಳೂರಿನ ರವೀಂದ್ರ ಕಲಾಮಂಟಪದಲ್ಲಿ ಈ ನಾಟಕ ಪ್ರದರ್ಶನಗೊಂಡಿತ್ತು. ನಾಟಕದಲ್ಲಿ ಒಂದು ದೃಶ್ಯವಿದೆ. ಚಮ್ಮಾರ ಮನೆ ಬಿಟ್ಟು ಹೊರಡುವ ದೃಶ್ಯ. ಇಲ್ಲಿ ಐದು ನಿಮಿಷ ಕೇವಲ ಮೌನ, ಅಭಿನಯ. ಚಮ್ಮಾರ ನೋವಿನಲ್ಲಿ ಹೊರಡುತ್ತಾನೆ. ಹೊರಡುವ ಘಳಿಗೆ ತನ್ನ ಹೆಂಡತಿ ತನ್ನನ್ನು ಹಿಂದೆ ಕರೆಯುವಳೆಂದು  ಆಸೆಯಿಂದ ದಿಟ್ಟಿಸುತ್ತಾನೆ. ಆದರೆ ಆಕೆಗೆ ಅದರ ಗಮನವೇ ಇರುವುದಿಲ್ಲ. ಅವನು ನಿರಾಸೆ,ನೋವಿನಲ್ಲಿ ಹೊರಡುತ್ತಾನೆ.   ಈ ದೃಶ್ಯದ ಮುಕ್ತಾಯದಲ್ಲಿ ಸಭಾಂಗಣ ನಿಂತು ಕಲಾವಿದನ ಅಭಿನಯಕ್ಕೆ  ಚಪ್ಫಾಳೆ ಮಳೆ ಸುರಿಸಿತ್ತು.

ಪುತ್ತೂರಿನ ಪ್ರದರ್ಶನದಲ್ಲಿ  ನಾನೂ ಅಭಿನಯಕ್ಕೆ ಸೇರ್ಪಡೆ ಗೊಂಡಿದ್ದೆ. ನಾಟಕದಲ್ಲಿ ಊರಿನ ಶ್ರೀಮಂತ ವರ್ತಕನೊಬ್ಬ ಇರುತ್ತಾನೆ. ಅವನು ಚಮ್ಮಾರನಿಗೆ ಧನ ಸಹಾಯ ಮಾಡಿರುತ್ತಾನೆ. ಹೆಣ್ಣು ಚಪಲದ ಇವನಿಗೆ ಅದಾಗಲೇ ನಾಲ್ಕು ಮದುವೆಯಾಗಿತ್ತು. ಈಗ ಚಮ್ಮಾರನ ಹೆಂಡತಿಯ ಮೇಲೆ ಆತನಿಗೆ ಮೋಹ. ಚಮ್ಮಾರನ ಚಪ್ಪಲಿಯಂಗಡಿಯೆದುರು  ಬಂದು ಅವನ ಠಿಕಾಣಿ. ಅವನ ನಾಲ್ಕು ಜನ ಹೆಂಡತಿಯರಿಗೆ ಅವನನ್ನು ಎಳೆದೊಯ್ಯುವ ಕಾಯಕ. ಈ ನಾಲ್ಕು ಜನ ಹೆಂಡತಿಯರಲ್ಲಿ ಒಬ್ಬ ಕಲಾವಿದೆ ಬರಲು ಅಸಾಧ್ಯವಾದ್ದರಿಂದ ಆ ಪಾತ್ರ ನನಗೆ ಒಲಿಯಿತು. ಒಂದೆರಡು ವಾಕ್ಯಗಳು. ಅಷ್ಟೆ. ಆದರೆ ರಂಗ ಹತ್ತುವ ಖುಷಿ, ಸಣ್ಣದೇನಲ್ಲ. 

ನಾನು ಶ್ರೀಮಂತ ವರ್ತಕನ ನಾಲ್ಕನೆಯ ಹೆಂಡತಿಯಾಗಿ ರಂಗದ ಮೇಲಿದ್ದೆ.  ಹಚ್ಚುತ್ತಿದ್ದ  ರಂಗು  ನವ ಲೋಕದ ಪರಿಚಯಕ್ಕಾಗಿ ನನ್ನನ್ನು ಕರೆದೊಯ್ಯುತ್ತಿತ್ತು.

**************

ಪೂರ್ಣಿಮಾ ಸುರೇಶ್

ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

14 thoughts on “

    1. ಮೇಡಂ, ನೀವು ಓದಿದ್ದು ಬಹಳ ಖುಷಿ. ಧನ್ಯವಾದಗಳು

  1. ಸಿರಿ ನೆನಪಾದಳು. ಎಷ್ಟು ಆಪ್ತ ಬರೆಹ…

  2. ಪೂರ್ಣಿಮಾ ಅವರೇ ನೀವು ಹುಡುಕಿ ಹುಡುಕಿ ತಂದು ಪೋಣಿಸಿದ ಪದಗಳನ್ನು ಹೆಕ್ಕಿ ಹೆಕ್ಕಿ ಓದುವುದೇ ಒಂದು ಅನಂದನುಭವ

Leave a Reply

Back To Top