ಅಂಕಣ ಬರಹ
ನಮ್ಮದಾದುದು ಸಿಗುತ್ತದೆ ನಮ್ಮದಲ್ಲದ್ದು ಹೋಗುತ್ತದೆ
ಬದುಕೇ ಹೀಗೇ ..ಒಂದಡೆ ಪಾತ್ರೆಯಿಂದ ನೀರು ಸೋರುತ್ತಾ ಹೋದರೆ ಮತ್ತೊಂದೆಡೆ ನೀರು ತುಂಬಿಕೊಳ್ಳುತ್ತಾ ಹೋಗುತ್ತದೆ .ನೀರು ಸೋರಿಹೋಗುತ್ತಿದೆಯೆಂದು ಗೋಳಾಡುವುದೂ…ನೀರು ತುಂಬಿಕೊಳ್ಳುತ್ತಿದೆ ಎಂದು ಭ್ರಮಿಸುವುದೂ ಅವರವರ ಗ್ರಹಿಕೆಗೆ ,ಮನೋಭಾವಕ್ಕೆ ಬಿಟ್ಟದ್ದು. ಕಳೆದುಹೋದುದರ ಬಗ್ಗೆ ಕೊರಗುತ್ತಾ ಕುಳಿತರೆ ಈ ಕ್ಷಣ ಉಳಿದಿರುವುದನ್ನೂ ಕಳೆದುಕೊಳ್ಳಬೇಕಾದೀತೆಂಬ ಸತ್ಯ ನಮಗೆ ಅರ್ಥವಾಗುವ ಹೊತ್ತಿಗೆ ಕೆಲವೊಮ್ಮೆ ಬಹಳ ತಡವಾಗಿ ಹೋಗಿರುತ್ತದೆ.
ಸಾಲ ಪಡೆದವನು ಸಾಲ ಹಿಂದಿರುಗಿಸದಾದಾಗ , ಹಣ ,ಒಡವೆಗಳ ಕಳೆದುಕೊಂಡಾಗ ಪರಿತಪಿಸುತ್ತೇವೆ .ಆಪ್ತ ಜೀವಗಳ ಕಳೆದುಕೊಂಡಾಗಲೂ ಪರಿತಪಿಸುತ್ತೇವೆ.ನಿಜ ಕಳೆದುದು ಹಣವೋ ಒಡವೆಯೋ ಆದರೆ ಕೆಲವೊಮ್ಮೆ ಸಿಗುತ್ತದೆ.ಆದರೆ ಜೀವ , ಜೀವನಗಳು ಸಿಗುವುದಾದರೂ ಉಂಟೆ? ಅಯ್ಯೋ ಕಳೆದುಹೋಯಿತು ಎಂದು ಗೋಳಾಡಿ ಆರೋಗ್ಯ ಕೆಡಿಸಿಕೊಳ್ಳುವುದೂ , ಕೆಲವೊಮ್ಮೆ ಜೀವವನ್ನೇ ಕಳೆದುಕೊಳ್ಳುವುದು , ಜೀವ ತೆಗೆಯುವುದು ಎಲ್ಲವೂ ಈ ಜಗತ್ತಿನಲ್ಲಿದೆ. ಇವಾವುದೂ ಕಳೆದರೆ ಸಿಗಲಾರವು ಮತ್ತೆ.ಎಚ್ಚರವಿದ್ದೂ ಕೆಲವೊಮ್ಮೆ ಕೆಲವೊಂದನ್ನು ಕಳೆದುಕೊಂಡರೆ ಎಚ್ಚರತಪ್ಪಿ ಕೆಲವೊಮ್ನೆ ಕೆಲವೊಂದ ಕಳೆದುಕೊಳ್ಳುತ್ತೇವೆ.
ಕಳೆದುಕೊಂಡದ್ದು ಯಾವುದೂ ನಮ್ಮದಲ್ಲ ಎನ್ನುವ ಧೋರಣೆ ಬೆಳೆಸಿಕೊಂಡರೆ ನೋವಾಗುವುದಿಲ್ಲ. ಗೆಳತಿಯ ಮದುವೆಯಲ್ಲಿ ಮದುಮಗಳ ಹೊಸಾ ಚಪ್ಪಲಿಯನ್ನೇ ಯಾರೋ ಎಗರಿಸಿಬಿಟ್ಟಿದ್ದಾಗ ಇಷ್ಟಪಟ್ಟು ಅದನ್ನ ಹುಡುಕಿ ಹುಡುಕೀ ಕೊಂಡಿದ್ದ ಗೆಳತಿಯ ಮುಖ ಚಿಕ್ಕದಾದಾಗ ಅಲ್ಲಿದ್ದ ಹಿರಿಯರೊಬ್ಬರು ಚಪ್ಪಲಿ ಕಳೆದರೆ ಬೇಸರ ಮಾಡಿಕೊಳ್ಳಬಾರದು ಬದಲಾಗಿ ಪೀಡೆ ಕಳೆಯಿತೆಂದು ನೆಮ್ಮದಿಯಿಂದ ಇರಬೇಕು ಎಂದು ಹೇಳಿದ್ದರು. ಯಾವುದೇ ವಸ್ತು ಕಳೆದರೂ ಹೀಗೇ ಅಂದುಕೊಂಡರೆ ಬೇಸರಕ್ಕೆಲ್ಲಿ ಜಾಗವಿದೆ?
ಹಣ, ಒಡವೆ ಇತ್ಯಾದಿಗಳನ್ನ ಕಳೆದುಕೊಳ್ಳುವುದಕ್ಕೂ ಸ್ನೇಹ, ಬಾಂಧವ್ಯಗಳ ಕಳೆದುಕೊಳ್ಳುವುದಕ್ಕೂ ಬಹಳ ವ್ಯತ್ಯಾಸ ಇದೆ. ಹಣ ಹೋದರೆ ,ವಡವೆ ವಸ್ತು ಹೋದರೆ ಕಷ್ಟಪಟ್ಟು ಗಳಿಸಬಹುದು..ಅಥವಾ ಗಳಿಸಲಾಗದಿದ್ದರೂ ಹೋಗಲಿಬಿಡು ಎಂದು ಸಮಾಧಾನಿಸಿಕೊಳ್ಳಬಹುದು. ಆದರೆ ಸಹ ಜೀವಿಗಳ ಜೊತೆಗಿನ ಬಾಂದವ್ಯ, ವಿಶ್ವಾಸಗಳ ಕಳೆದುಕೊಂಡರೆ ಅದು ಬದುಕಿನ ಹಾದಿಯುದ್ದಕ್ಕೂ ಚುಚ್ಚುವ ಮುಳ್ಳೇ ಸರಿ. ಒಮ್ಮೆ ಕಳೆದುಕೊಂಡ ಇವುಗಳನ್ನ ಗಳಿಸಿಕೊಳ್ಳುವುದು ಬಹಳವೇ ಕಷ್ಟ. ಬದುಕಿನಲ್ಲಿ ಏನಿಲ್ಲದಿದ್ದರೂ ಬಾಳಬಹುದು ,ಆದರೆ ಬಾಂದವ್ಯಗಳಿರದ ಬದುಕು ಬದುಕಲ್ಲ!
ಈ ಬದುಕಿನಲ್ಲಿ ಗಳಿಸಿದ ಪ್ರತಿಯೊಂದನ್ನೂ ಕಾಲದ ಜೊತೆಜೊತೆಗೇ ಮುಂದೆ ಸಾಗುತ್ತ ಪ್ರತಿಯೊಬ್ಬರೂ ಕಳೆದುಕೊಳ್ಳಲೇಬೇಕಾಗುತ್ತದೆ. ಹುಟ್ಟಿನೊಂದಿಗೆ ಅಂಟಿಕೊಂಡ ನಂಟುಗಳ ಜೊತೆಜೊತೆಗೇ ಗಳಿಸಿದ ಸಮಸ್ತವೂ ಬದುಕಿನ ಸಂಕಲನಕ್ಕೆ ಬಂದರೆ ಎಲ್ಲೆಲ್ಲಿ ಯಾವ ಯಾವುದರ ಘಳಿಗೆ ತೀರುತ್ತದೋ ಅಲ್ಲಲ್ಲಿ ಅವುಗಳೆಲ್ಲಾ ಬದುಕಿನಿಂದ ಕಳೆದುಹೋಗಲಾರಂಭಿಸುತ್ತವೆ. ಬದುಕೇ ಒಂದು ಲೆಕ್ಕಾಚಾರವೆಂದುಕೊಂಡರೆ ಇಲ್ಲಿ ಗಳಿಸುದದನೆಲ್ಲಾ ಇಲ್ಲಿಯೇ ಕಳೆದುಕೊಂಡು ಸಾಗಬೇಕಿದೆ.ಅವರವರ ಘಳಿಗೆಗಳು ತೀರಿದಾಗ ಗಳಿಸಿದ ಯಾವುದನ್ನೂ ಜೊತೆಗೆ ಹೊತ್ತೊಯ್ಯದೆ ಕೊನೆಗೆ ಇದಕ್ಕೆಲ್ಲಾ ಕಾರಣವಾದ ಜಡದೇಹವನ್ನೂ ಇಲ್ಲಿಯೇ ಕಳೆದು ಹೋಗಿಬಿಡುತ್ತೇವಲ್ಲ..ಅದೇ ಬದುಕಿನ ಪರಮ ಸತ್ಯ..ಅದೇ ಸಾವಿನ ಪರಮ ಸತ್ಯವೂ ಹೌದು.
ಈ ಸತ್ಯವನು ಅರಿತವರು ಮಾತ್ರಾ ಜೀವನದಲ್ಲಿನ ಏಳುಬೀಳುಗಳನ್ನು ಸಮಾಧಾನಚಿತ್ತರಾಗಿ ಎದುರಿಸುತ್ತಾರೆ.ಕಳೆದು ಹೋದುದಕ್ಕಾಗಿ ಕೊರಗದೆ ಆ ಕಳೆದು ಹೋದುದರೊಂದಿಗಿನ ತಮ್ಮ ಬಾಂದವ್ಯದ ಮಧುರ ಕ್ಷಣಗಳನ್ನು ನೆನೆದು ಇಷ್ಟಾದರೂ ದಕ್ಕಿತಲ್ಲ ಎಂದು ಸಮಾಧಾನಪಟ್ಟುಕೊಳ್ಳುತ್ತಾರೆ. ಕಷ್ಟಪಟ್ಟು ದುಡಿದ ವಸ್ತು ಹಣ ಕೈ ತಪ್ಪಿ ಹೋದರೆ ವ್ಯಥೆಯಾಗುತ್ತದಾದರೂ ಬದುಕೆಂದರೆ ಬರಿದೆ ಹಣವಲ್ಲ ಬರಿದೆ ಆಸ್ತಿಯಲ್ಲ ಎಂಬುದನ್ನ ತಿಳಿದವನು ಒಂದೆರಡು ದಿನ ತನ್ನ ನಷ್ಟಕ್ಕಾಗಿ ಮರುಗಿ ಮೂರನೇ ದಿನ ಮತ್ತೆ ಬದುಕನ್ನೆದುರಿಸಲು ಸಜ್ಜಾಗುತ್ತಾನೆ.ವ್ಯಾಮೋಹಕ್ಕೆ ಬಿದ್ದವನು ಕೊರಗಿ ಕೊರಗಿ ಇಲ್ಲದ ರೋಗಗಳ ಒಡಲಿಗಾಹ್ವಾನಿಸಿ ನರಳುತ್ತಾ ಬದುಕು ಸವೆಸುತ್ತಾನೆ.
ಆಪ್ತರ ,ಬಂಧುಗಳ ಸಾವೂ ಹೀಗೇ..ಎಲ್ಲರೂ ಹೋಗುವುದು ಸತ್ಯವೆಂದು ತಿಳಿದಿದ್ದರೂ ಸಹ ಆ ಸಾವಿನ ಸಂದರ್ಭಗಳು , ಅದು ಕೊಡುವ ಆಘಾತಗಳಿಂದ ಮನಸ್ಸು ಬದುಕು ಎರಡೂ ತತ್ತರಿಸಿಹೋಗುವುದು ನಿಜವಾದರೂ ಪ್ರೀತಿ ಪಾತ್ರ ಹಿಂದೆಯೇ ಯಾರೂ ಸಾಯಲಾಗದು.ದುಃಖದ ಘಳಿಗೆಗಳು ಕಳೆದು ಮತ್ತೆ ಬದುಕಿನಲ್ಲಿ ಒಳ್ಳೆಯ ಘಳಿಗೆಗಳು ಬಂದೇ ಬರುತ್ತವೆ.
ಕಾಲಚಕ್ರದ ಈ ರೀತಿ ಅದೆಷ್ಟು ವಿಚಿತ್ರ! ಸುಖದ ತುತ್ತತುದಿಯಲ್ಲಿರುವವನನ್ನು ಪಾತಾಳಕ್ಕೂ ಎಸೆಯುತ್ತದೆ..ಪಾತಾಳದಲ್ಲಿರುವವನನ್ನು ಉತ್ತುಂಗಕ್ಕೂ ಕರೆದೊಯ್ಯುತ್ತದೆ. ಹಾಗಾಗಿ ಇಲ್ಲಿ ಬದುಕಿನಲ್ಲಿ ಸಿಕ್ಕಿದ್ದು , ಕಳೆದದ್ದು ದಕ್ಕಿದ್ದು ಎಲ್ಲವೂ ಕಾಲನಿಗೇ ಸೇರಿದ್ದು.ಯಾವುದೂ ನಮ್ಮ ಕೈಯಲ್ಲಿ ಇಲ್ಲ!
ಗಳಿಸಬಹುದಾದ ವಸ್ತುಗಳ ಕಳೆದುಕೊಂಡರೆ ಕೊರಗುವುದು ಸರಿಯಲ್ಲ..ಇಂದು ಕಳೆದುದ ನಾಳೆ ಗಳಿಸಬಹುದು. ಗಳಿಸಲಾಗದ್ದ ಕಳೆದುಕೊಂಡರೆ ಅದನ್ನೂ ಬದುಕಿನ ರೀತಿ ಎಂದೇ ಸ್ವೀಕರಿಸಿದರೆ ಕೊರಗೆಲ್ಲಿ?ಬದುಕಿಗಿಷ್ಟು ಬಂಧಗಳಿವೆ …ಆ ಬಂಧಗಳ ಕಳಚಿಕೊಳ್ಳದೇ ಇದ್ದಷ್ಟು ,ದಕ್ಕಿದಷ್ಟು ಉಳಿಸಿಕೊಳ್ಳವುದೇ ಜಾಣತನ.
ಎಣ್ಣೆಯೋ ಬತ್ತಿಯೋ ತೀರಿದರೆ ದೀಪವೂ ಆರುತ್ತದೆ. ಬೆಳಕು ಕಳೆದು ಕತ್ತಲಾವರಿಸುತ್ತದೆ.ಹಾಗೆಂದು ಸದಾ ಕತ್ತಲೆಯಲ್ಲಿಯೇ ಕುಳಿತಿರಲಾಗದಲ್ಲ! ದೀಪಕ್ಕೆ ಹೊಸ ಬತ್ತಿಯನ್ನೋ ಎಣ್ಣೆಯನ್ನೋ ಹಾಕಲೇ ಬೇಕು , ಹಣತೆ ಮತ್ತೆ ಉರಿದು ಬೆಳಕ ಚೆಲ್ಲಲೇ ಬೇಕು. ಕಳೆದದ್ದ ಮರೆಸಿ ಗಳಿಸಿದ್ದ ಮೆರೆಸುವುದೇ ಬೆಳಕಿನ ಕೆಲಸ ! ಮೌನವಾಗಿ ಉರಿವ ದೀಪ ಇದ್ದುದನ್ನು ಮಾತ್ರಾ ತೋರುತ್ತದೇ ಹೊರತು ಕೈ ತಪ್ಪಿ ಹೋದುದನಲ್ಲ.ಬದುಕೂ ದೀಪದಂತಾಗಲಿ…ಬದುಕಿನ ಸತ್ಯವ ಅರಿತುಕೊಂಡು ಎಣ್ಣೆ, ಬತ್ತಿ ತೀರುವವರೆಗೂ ಅಂಜದೆ ಅಳುಕದೆ ಬೆಳಕು ಚೆಲ್ಲುತ್ತಿರಲಿ.
************************************************
ದೇವಯಾನಿ
ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ , ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ , “ತುಂಡು ಭೂಮಿ ತುಣುಕು ಆಕಾಶ” ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ
ಗಹನವಾದ ವಿಚಾರವನ್ನು ಸರಳವಾಗಿ ಹೇಳಿದ್ದೀರಿ. ಹುಟ್ಟಿದ ಗಳಿಗೆಯಿಂದಲೇ ಕಳೆದುಕೊಳ್ಳುತ್ತ ಸಾಗುವ ಕಾಲ ಮತ್ತು ಅದರೊಂದಿಗೆ ಒಂದಾದ ಮೇಲೊಂದು ಕಳೆಯುತ್ತಲೇ ಹೋಗುವುದು ಬದುಕಿನ ವಾಸ್ತವ.ಈ ಕಳೆದುಕೊಳ್ಳುವುದರಲ್ಲಿ ಏನೇನಿರುತ್ತವೆ ಮತ್ತು ಅವು ಯಾವ ಕ್ರಮದಲ್ಲಿ ಬರುತ್ತವೆ ಎಂಬುದು ಮಾತ್ರ ನಿಗೂಢವೇ.ಈ ನಿಗೂಢತನವೇ ನಮ್ಮ ತಲ್ಲಣಕ್ಕೆ ಒಂದು ರೀತಿಯಲ್ಲಿ ಕಾರಣ.
ಕಳೆದುಕೊಂಡಂತೆಯೇ ನಮಗೆ ಅಷ್ಟಿಷ್ಟು ಕಾಲಾನುಕಾಲಕ್ಕೆ ದೊರಕುತ್ತಲೇ ಇರುತ್ತದೆ.ತಂದೆ-ತಾಯಿ,ಬಂಧು-ಬಳಗ, ಪತಿ/ಪತ್ನಿ-ಮಕ್ಕಳು,; ಉದ್ಯೋಗ, ಕೀರ್ತಿ…ಹೀಗೆ.
ಸುಖೇ ದುಃಖೇ ಸಮೇಕೃತ್ವಾ…ಅನ್ನುವ ಬುದ್ಧಿ ಮಾತನ್ನು ನಾವು ಬಹುತೇಕ ಜನ ಅರ್ಥ ಮಾಡಿಕೊಳ್ಳುವುದು ಕಡಿಮೆ.ಹಾಗಾಗಿಯೇ ಎಲ್ಲಾ ತಲ್ಲಣಗಳು…!
ಎಂದಿನಂತೆ ಸಮಾಧಾನ ಹೇಳುವ ಬರೆಹ.
ಅಭಿನಂದನೆ.