ಕಾವ್ಯಯಾನ
ಕಾಮಿ೯ಕ
ಪ್ರತಿಮಾ ಕೋಮಾರ ಈರಾಪುರ
ಒಳಹೊಕ್ಕ ಕಣ್ಣು ಸುಕ್ಕಾದ ಚಮ೯
ಕುಂದಿದ ದೇಹದಲಿ ಕಾಯಕದ ಗತ್ತು
ಚಳಿ,ಮಳೆ ,ಬಿಸಿಲು ಬೇಗೆಯಿಲ್ಲದ
ಇವಗೆ ದುಡಿಮೆಯೊಂದೇ ಸ್ವತ್ತು
ಕಟ್ಟಡ ,ಕೈಗಾರಿಕೆ,ಕಾಖಾ೯ನೆ
ರಸ್ತೆ ನಿಮಾ೯ಣ ಎಲ್ಲದಕ್ಕೂ ಇವನೆ
ಹೊಲ ,ಗದ್ದೆ, ತೋಟಗಳಲ್ಲಿ
ಇವನಿಲ್ಲದಿರೆ ಬರೀ ಸೊನ್ನೆ
ದಿನಪೂತಿ೯ ದುಡಿದು ಕೊನೆಯಲ್ಲಿ
ಉಳಿಯುವುದು ತುಸುವು ಜೇಬಲ್ಲಿ
ಸೇರುವುದು ಮಿಕ್ಕ ಹಣ ಮನೆಗೆ
ಹೆಂಡತಿ ಮಕ್ಕಳ ಗಂಜಿಪಾಲಿಗೆ
ಬೈಗುಳ,ಕಿರುಕುಳ,ದಬ್ಬಾಳಿಕೆ ಏನಿರಲಿ
ಮೌನಕ್ಕೆ ಶರಣಾಗಿ ಹೃದಯ ಕಲ್ಲಾಗಿವುದು
ಆಸೆ ಕನಸುಗಳೆಲ್ಲ ಆಳದಲ್ಲೇ ಉಳಿದು
ಬೆವರ ಹನಿ ಮಾತ್ರ ಸೋರುತಿಹುದು
ಹೊಗಳುವಿಕೆ ಸಾಕು ಇದೇ ಒಂದು ದಿನ
ಮಾನವೀಯತೆ ಚಿಮ್ಮಲಿ ಅನುಕ್ಷಣ
ಕಾಮಿ೯ಕನ ಕರಾಳತೆ ದೂರ ಸರಿಯಲಿ
ಹೂತ ಕನಸು ಗರಿಬಿಚ್ಚಿ ಕುಣಿಯಲಿ
********************************