ರೈತ ಗಜಲ್
ಬಿರಿದ ಭೂಮಿ ಉರಿಯುವ ನೇಸರ ಮರಗಳು ತಲೆಬಾಗಿ ನಿಂತಿವೆ
ಆಗೊಮ್ಮೆ ಈಗೊಮ್ಮೆ ಹಕ್ಕಿಗಳ ಇಂಚರ ಮೌನ ಮುರಿಯುತಿವೆ
ನೆತ್ತಿಯ ಮೇಲೆ ಕೆಂಡಕಾರುವ ಸೂರ್ಯ ಪಾದದಡಿ ಕಾದ ಬುವಿ
ಸವೆದ ದೇಹ ಕಳೆದುಹೋದ ಯೌವನದ ಕನಸುಗಳು ಕಾಡುತಿವೆ
ಕರಿಮುಗಿಲು ಕೂಡಲು ಬಾನಲಿ ಆಸೆಯ ಮಿಂಚು ಕಣ್ಣಲಿ ಮೂಡಿತು
ಬಾರದ ಮಳೆ ಬರದ ಛಾಯೆ ನೀರಿಗಾಗಿ ಜೀವಿಗಳು ಬಿಕ್ಕುತಿವೆ
ಎಡೆ ಬಿಡದೆ ಮುನಿಯುವ ಪ್ರಕೃತಿಯ ವಿಕೋಪ ರೈತನನು ಕಂಗೆಡಿಸಿತು
ಸರಿದವು ವರ್ಷಗಳು ಬ್ಯಾಂಕಿನ ಸಾಲದ ಶೂಲಗಳು ಇರಿಯುತಿವೆ
ಹಸಿವು ಸಂಕಟ ದಾಹ ಅನ್ನದ ಬೆಲೆ ಹಸಿದವನಿಗೆ ಗೊತ್ತು”ಪ್ರಭೆ”
ಎಲುಬಿನ ಹಂದರ ಹೊತ್ತ ಜೀವಿಗಳು ನೇಣಿಗೆ ಶರಣಾಗುತ್ತಿವೆ
*******************************************
ಪ್ರಭಾವತಿ ಎಸ್ ದೇಸಾಯಿ