ಕವಿತೆ
ಈಗವಳು ಮಲಗಿದ್ದಾಳೆ
ಚೈತ್ರಾ ಶಿವಯೋಗಿಮಠ
ಈಗ ತಣ್ಣಗೆ ಮಣ್ಣಲ್ಲಿ
ಮಲಗಿದ್ದಾಳವಳು!
ಹೂವಿನ ಪಕಳೆಗಳನ್ನು
ಉದುರಿಸಿದಂತೆ ಮಾತುಗಳು
ಗಿಡಕ್ಕೆ ಎಲ್ಲಿ ನೋವಾಗುವುದೋ
ಎಂದು ಅಳುಕುತ್ತಾ
ಹೂ ಕೊಯ್ಯುವ ನಡೆಯವಳು
ಈಗ ತಣ್ಣಗೆ ಮಣ್ಣಲ್ಲಿ ಮಲಗಿದ್ದಾಳೆ
ಸಮವಲ್ಲದ ಬೆರಳುಗಳನ್ನೂ
ಸಮವಾಗಿ ಕಾಣುವವಳು
ಮರಿಗಳಿಗೂ ಹೆದರಿ, ತನ್ನ
ಜೋಡೆತ್ತಿನದೂ ಮರ್ಜಿ ಕಾಯುವವಳು
ಈಗ ತಣ್ಣಗೆ ಮಣ್ಣಲ್ಲಿ ಮಲಗಿದ್ದಾಳೆ
ಮನೆಯ ಅಟ್ಟದಲ್ಲಿ ಧಾರಾಳ
ಮರಿ ಹಾಕಿ ತುಂಬಿ ಬರುವ
ಎದೆ ಹಾಲೂಡಿಸುವ ಮಾರ್ಜಾಲವ
ಕಂಡು ಹಾರಿ ಹೋದ ಮರಿಗಳ
ನೆನೆದು ಹಂಬಲಿಸುವವಳು
ಈಗ ತಣ್ಣಗೆ ಮಣ್ಣಲ್ಲಿ ಮಲಗಿದ್ದಾಳೆ
ಒಲೆಯ ಮೇಲೆ ಉಕ್ಕುವ ಹಾಲಿನಂತೆ
ಉಕ್ಕಿ ಬರುವ ಪ್ರತಿ ಭಾವವನ್ನೂ
ಸೀರೆ ಸೆರಗ ಚುಂಗಿನಲ್ಲೇ ಹಿಂಗಿಸುವವಳು,
ಕಿವಿ, ಕರುಳುಗಳನ್ನು ಕೊಯ್ದರೂ
ಮತ್ತೆ ಜೋಡಿಸಿ, ಜೀವ ಬಿಗಿ ಹಿಡಿದವಳು
ಒಂದು ಯುಗದ ಅಂತ್ಯದಂತೆ
ಈಗ ತಣ್ಣಗೆ ಮಣ್ಣಲ್ಲಿ ಮಲಗಿದ್ದಾಳೆ
************************************
ಅದ್ಭುತ ಕವಿತೆ….
ಭೂಮಿ ತಾಯಿ..ಅವ್ವ ….
ಮನಮಿಡಿದ ಸಾಲುಗಳು
ಚೆನ್ನಾಗಿದೆ ಮೇಡಂ
ಚನ್ನಾಗಿದೆ..