ಕವಿತೆ
ಹೊಸ್ತಿಲಿನ ಹೊರಗೆ ಮತ್ತು ಒಳಗೆ
ವಿಶ್ವನಾಥ ಎನ್. ನೇರಳಕಟ್ಟೆ
ಮನೆ ಹೊಸ್ತಿಲು ದಾಟಿ
ವೇದಿಕೆ ಮೇಲೆ ಮೈಕ್ ಮುಂದೆ
ನಿಂತ ಅವನು ವಟಗುಟ್ಟುತ್ತಾನೆ-
‘ಯತ್ರ ನಾರ್ಯಸ್ತು ಪೂಜ್ಯಂತೇ
ರಮಂತೇ ತತ್ರ ದೇವತಾ’
ಬಾಯಿ ಪಾಠವನ್ನು ಭಟ್ಟಿ ಇಳಿಸಿದ
ಹೆಮ್ಮೆಯಿಂದ ಆಕಾಶಕ್ಕೇರುತ್ತಾನೆ
ದುಪ್ಪಟ್ಟು ಚಪ್ಪಾಳೆಗಳನ್ನು ಜೇಬಿಗಿಳಿಸಿಕೊಂಡು
ವೇದಿಕೆ ಇಳಿಯುತ್ತಾನೆ ಮತ್ತು
ಮೆಟ್ಟಿಲು ಜಾರುತ್ತಾನೆ
ಕ್ಷಣಮೊದಲು ಅವನಾಡಿದ್ದ ಮಾತುಗಳು
ಮನೆಯ ಹೊಸ್ತಿಲಲ್ಲಿಯೇ ನೇಣುಹಾಕಿಕೊಳ್ಳುತ್ತವೆ
ಪಕ್ಕದ ಮನೆಯ ವಿಧವೆಯನ್ನು ಕಂಡ ಕಣ್ಗಳು
ಬಟ್ಟೆ ಕಳಚಿಕೊಂಡ ದುಶ್ಯಾಸನರಾಗುತ್ತವೆ
ಲಿಮಿಟ್ಟು ಇಲ್ಲದ ಮನಸ್ಸು
ಬಟ್ಟೆಯೊಳಗಣ ಬಿಸಿಲೋಕಕ್ಕೂ ಲಗ್ಗೆಯಿಡುತ್ತದೆ
ಹಲವು ಬಾರಿ
ಬೇಲಿ ಹಾರುವ ಗೂಳಿಯಾಗುತ್ತಾನೆ
‘ರಸಿಕತನ’ವೆಂಬ ಅಗ್ಗದ ಮುಖವಾಡವನ್ನು
ಮತ್ತೂ ಬಿಗಿಯಾಗಿ ಕಟ್ಟಿಕೊಳ್ಳುತ್ತಾನೆ
ಮತ್ತೆ ಹೊಸ್ತಿಲು ದಾಟಿ
ಮತ್ತೆ ಮೈಕ್ ಮುಂದೆ ನಿಂತಾಗ
ಮತ್ತದೇ ಅವನು; ಮತ್ತದೇ ಮಾತು-
‘ಯತ್ರ ನಾರ್ಯಸ್ತು………………
…………………….. ದೇವತಾ’
ಮತ್ತದೇ ಚಪ್ಪಾಳೆಗಳು
ಅವನ ಜೇಬು ಸೇರಿಕೊಳ್ಳುತ್ತವೆ