ರೈತ ಗಜಲ್
ಹೊಲದೊಳಗೆ ಉಳುವವನ ಬವಣೆ ಕಂಡವರಾರು
ಅವನ ದೇಹದಿಂದ ಸುರಿವ ಬೆವರ ಒರೆಸಿದವರಾರು
ಬೇಕು ಎಲ್ಲರಿಗೂ ಬಗೆಬಗೆಯ ಆಹಾರ ದವಸಧಾನ್ಯ
ದುಡಿದುಡಿದು ಸವೆದ ಎಲುಬುಗಳ ಎಣಿಸಿದವರಾರು
ಮಹಲುಗಳ ಮೃಷ್ಟಾನ್ನದಲಿ ಮಣ್ಣಿನ ಘಮಲಡಗಿದೆ
ಮಣ್ಣಿನ ಮಗನ ಬರಮಾಡಿ ಉಣಬಡಿಸಿದವರಾರು
ನಿಷ್ಠೆ ನೇಮದ ಯುಗಯುಗಾಂತರದ ಯೋಗಿ ಇವ
ಅನ್ನನೀಡುವ ಧಣಿಯ ದೇವರೆಂದು ಪೂಜಿಸಿದವರಾರು
ಬೆನ್ನುಮೂಳೆಯ ಹೊರತು ಬದುಕು ಬಲು ದುಸ್ತರ ಆಸೀ
ರೈತನಿಲ್ಲದಿರೆ ನಾವಿಲ್ಲವೆಂದು ಕೊರಗಿ ಮರುಗಿದವರಾರು
*****************************************
ಆಸೀಫಾ
ಮಹಲುಗಳ ಮೃಷ್ಟಾನ್ನದಲ್ಲಿ ಮಣ್ಣಿನ ಘಮಲಡಗಿದೆ…ಅರ್ಥಪೂರ್ಣ ಸಾಲುಗಳು ಮೇಡಂ
ರೈತನ ಬದುಕು ಬವಣೆ ದುಸ್ತರತೆಯ ಬಗ್ಗೆ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ ಮೇಡಂ.