ರೈತ ಗಜಲ್
ಕಾಲವೇ ಕಂಗಾಲಾಗಿ ಒಂಟಿ ಕಾಲಿನಲಿ ದಣಿದಿದೆ.
ಭೂಮಿಯೇ ಪ್ರೀತಿಯ ಏರುಪೇರಿನಲಿ ದಣಿದಿದೆ.
ಯಾವುದೂ ಈಗ ಸಮಯದ ನಿಯಮದೊಳಿಲ್ಲ
ಹೂ ಹೀಚು ಕಚ್ಚದೆ ಬಳ್ಳಿ ನೋವಿನಲಿ ದಣಿದಿದೆ.
ಸುಗ್ಗಿ ಕಾಲದಲಿ ಸುರಿವ ಮಳೆಗೆ ಹುಚ್ಚೇ! ಕಿಚ್ಚೇ!
ಬಿರು ಬಿಸಿಲಿಗೆ ದಣಿದ ಧರೆ ಒಡಲುರಿಯಲಿ ದಣಿದಿದೆ.
ಬಿರುದಿದೆ ಬೆನ್ನೆಲುಬೆಂಬೋ ,ಬಲು ದೊಡ್ಡ ಘನತೆ
ಉತ್ತಿ,ಬಿತ್ತುವ ಕಾಯ, ತಣಿಯದ ಹಸಿವಿನಲಿ ದಣಿದಿದೆ.
ಉಳ್ಳವರಿಗೆ ಅಳುವ ಕಂಗಳ ಹನಿಯು ಯಾವ ಲೆಕ್ಕ
ಆಳಾಗಿಯೂ ನಕ್ಕ ಜೀವ,ಆಳುವವರ ದರ್ಪದಲಿ ದಣಿದಿದೆ.
ನಿಷ್ಠೆ,ನಂಬಿಕೆ, ಪ್ರೀತಿ,ಮಮತೆಗಳೆಲ್ಲ ಕಪ್ಪ ಕೇಳುತ್ತಿವೆ
ದುಡಿದ ಕೈ ಈಗ ಹತಾಶೆಯ ಗಾಯದಲಿ ದಣಿದಿದೆ.
ಯಾರ ಮುನಿಸಿಗೆ ಯಾರ ಶಾಪ “ಮಾಧವ”
ನೇಗಿಲೀಗ ನಗುವ ಕಾಣದೆ ಮೂಲೆಯಲಿ ದಣಿದಿದೆ.
*****************************************
ಸ್ಮಿತಾ ರಾಘವೇಂದ್ರ
Very nice
ನೈಸ್